- ಪ್ರಾಜೆಕ್ಟ್ ಟೈಗರ್ ಇಂದಿರಾ ಗಾಂಧಿ ಆರಂಭಿಸಿದ ಯೋಜನೆ
- ನಂದಿನಿ ಸಂಸ್ಥೆ ಉಳಿಸುವಂತೆ ಶಶಿ ತರೂರ್ ಮನವಿ
ಜನರು ರಾಜ್ಯದಲ್ಲಿರುವ 40% ಕಮಿಷನ್ ಸರ್ಕಾರದಿಂದ ಬೇಸತ್ತಿದ್ದು, ಕಾಂಗ್ರೆಸ್ ಸರ್ಕಾರ ಜನರ ಹಿತ ಕಾಯಲು 100% ಬದ್ಧತೆ ನೀಡಲಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
“ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ವಿಶ್ವವಿಖ್ಯಾತ ಬೆಂಗಳೂರು ನಗರದ ಸ್ಥಾನ ಈಗ ಕುಸಿದಿದೆ. ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೀಗೆ ಅನೇಕ ಸಮಸ್ಯೆಗಳು ರಾಜ್ಯ ಹಾಗೂ ಬೆಂಗಳೂರು ನಗರವನ್ನು ಕಾಡುತ್ತಿವೆ. ಸರ್ಕಾರದ ಆಡಳಿತದಲ್ಲಿ ಬದ್ಧತೆ ಇಲ್ಲವಾಗಿದೆ. ದಕ್ಷ ಆಡಳಿತ ನೀಡಲು ಕಾಂಗ್ರೆಸ್ ಸರ್ಕಾರ ಸಮರ್ಥವಾಗಿದೆ” ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಆಗುವರೇ ಎಂಬ ಕೇಳಿದ ಪ್ರಶ್ನೆಗೆ, “ಖರ್ಗೆ ನಮ್ಮ ಅಧ್ಯಕ್ಷರು. ನಾವೆಲ್ಲರೂ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಪಕ್ಷದಲ್ಲಿ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಮಾಡುವ ಸಂಪ್ರದಾಯವಿಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ಈ ವಿಚಾರ ಚರ್ಚೆ ಮಾಡೋಣ” ಎಂದಿದ್ದಾರೆ.
ಅಮುಲ್ ವಿವಾದದ ಕುರಿತು ಮಾತನಾಡಿ, “ನಾವೆಲ್ಲರೂ ಪ್ರೀತಿಯಿಂದ ಬೆಳೆಸಿರುವ ನಂದಿನಿಯನ್ನು ಕಾಪಾಡಿಕೊಳ್ಳಬೇಕು. ರಾಜ್ಯದ ಜನರು ನಂದಿನಿ ವಿಚಾರದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯವನ್ನು ಎಲ್ಲರೂ ಆಲಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಎಂ ವಿ ಕೃಷ್ಣಪ್ಪ ಅವರು ಬೆಂಗಳೂರು ಡೇರಿ ಸ್ಥಾಪಿಸಿದ್ದು, ಕರ್ನಾಟಕ ಬಿಜೆಪಿ ಆಡಳಿತದಲ್ಲಿ ಸಾಕಷ್ಟು ಕರ್ನಾಟಕದ ಬ್ರ್ಯಾಂಡ್‌ಗಳನ್ನು ಕಳೆದುಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್‌ಗಳನ್ನು ವಿಲೀನದ ಹೆಸರಲ್ಲಿ ನಾಶ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಫಾರಿ ವೇಳೆ ಮೋದಿಗೆ ಕಾಣದ ಹುಲಿ; ಮಾರುತ್ತಾರೆ ಎನ್ನುವ ಭಯಕ್ಕೆ ಅವಿತಿವೆ ಎಂದ ಸಿದ್ದರಾಮಯ್ಯ
“ಅಮಿತ್ ಶಾ ಅವರು ಸಹಕಾರ ಇಲಾಖೆ ಸಚಿವರಾಗಿರುವುದೇ ಸಹಕಾರ ಕ್ಷೇತ್ರದಲ್ಲಿ ಈ ರೀತಿ ಗೊಂದಲ ಸೃಷ್ಟಿಸಲು. ಬಿಜೆಪಿ ಆಡಳಿತದಲ್ಲಿ ನಂದಿನಿ ಹಾಗೂ ಕೆಎಂಎಫ್ ಅಪಾಯಕ್ಕೆ ಸಿಲುಕಿದ್ದು, ಕರ್ನಾಟಕದಲ್ಲಿ ಪ್ರತಿಯೊಬ್ಬರೂ ನಂದಿನಿ ರಕ್ಷಣೆಗೆ ಮುಂದಾಗಬೇಕು” ಎಂದು ಒತ್ತಾಯಿಸಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಶಾಸಕರ ಸೇರ್ಪಡೆ ವಿಚಾರವಾಗಿ ಮಾತನಾಡಿದ ಶಶಿ ತರೂರ್, “ಐವರು ಶಾಸಕರು, ಇಬ್ಬರು ಎಂಎಲ್‌ಸಿ, 11 ಮಂದಿ ಮಾಜಿ ಶಾಸಕರು, ನಾಲ್ವರು ಮಾಜಿ ಎಂಎಲ್ ಸಿ, ಒಬ್ಬ ಮಾಜಿ ಸಂಸದರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಬೇರೆ ಪಕ್ಷದ ನಾಯಕರು ಕೂಡ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಗೆಲವು ಸಾಧಿಸಲಿದೆ ಎಂದು ನಂಬಿರುವುದಕ್ಕೆ ಈ ಬೆಳವಣಿಗೆಯೇ ಸಾಕ್ಷಿ” ಎಂದಿದ್ದಾರೆ.
ಮೋದಿ ಅವರ ಬಂಡಿಪುರ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿ, “ಮೋದಿ ಅವರು ಹುಲಿ ಸಂರಕ್ಷಣೆ ವಿಚಾರವಾಗಿ ಬಂಡೀಪುರ ಪ್ರವಾಸ ಮಾಡುತ್ತಿದ್ದು, ಮೋದಿ ಅವರು ಕನ್ನಡಿಗರ ಹಿತಾಸಕ್ತಿಯ ಬಗ್ಗೆಯೂ ಆಲೋಚನೆ ಮಾಡಿದರೆ ಉತ್ತಮ” ಎಂದು ಹೇಳಿದ್ದಾರೆ.
“ಪ್ರಾಜೆಕ್ಟ್ ಟೈಗರ್ ಕಾರ್ಯಕ್ರಮವನ್ನು ಇಂದಿರಾ ಗಾಂಧಿ ಅವರು ಆರಂಭಿಸಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಹುಲಿ ಸಂರಕ್ಷಣೆ ಹಾಗೂ ಹುಲಿಗಳ ಸಂಖ್ಯೆ ಹೆಚ್ಚಳಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬೇರೆ ಸರ್ಕಾರಗಳು ಕೂಡ ಇದಕ್ಕೆ ಕೈಜೋಡಿಸಿವೆ” ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆಶಿ ಕುರಿತಾಗಿ ಮಾತನಾಡಿದ ಅವರು, “ಅವರಿಬ್ಬರೂ ಒಟ್ಟಾಗಿ ಈ ಚುನಾವಣೆ ಎದುರಿಸುತ್ತಿರುವುದಾಗಿ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಸತ್ಯ ಏನೆಂದರೆ, ಎಲ್ಲ ಪಕ್ಷದಲ್ಲೂ ನಾಯಕರ ಸಾಮರ್ಥ್ಯಗಳು ಹಾಗೂ ಆಕಾಂಕ್ಷೆಗಳ ಮಧ್ಯೆ ಸ್ಪರ್ಧೆ ಸಹಜ” ಎಂದು ತಿಳಿಸಿದ್ದಾರೆ.