ಪಹಲ್ಗಾಮೋತ್ತರ ಪ್ರವಾಸೋದ್ಯಮ; ಕಾಶ್ಮೀರಿಗಳ ಬದುಕು ತತ್ತರ

Date:

‘ಭಾರತದ ಸ್ವಿಟ್ಜರ್ಲೆಂಡ್’ ಎಂದೇ ಕರೆಸಿಕೊಳ್ಳುವ ಕಾಶ್ಮೀರದ ಹೃದಯ ಭಾಗವಾದ ಪಹಲ್ಗಾಮ್ ಹಿಮಶ್ರೇಣಿಯ ಪ್ರವಾಸಿ ಸ್ಥಳದಲ್ಲಿ ಉಗ್ರ ಕೃತ್ಯ ನಡೆದು ತಿಂಗಳು ಉರುಳಿದೆ. ಪ್ರವಾಸೋದ್ಯಮವನ್ನೇ ಆರ್ಥಿಕ ಮೂಲವನ್ನಾಗಿಸಿಕೊಂಡಿರುವ ಪ್ರದೇಶದಲ್ಲಿ ಇಂದು ಪ್ರವಾಸಿಗರು ಹೆಜ್ಜೆ ಇಡಲೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸದಾ ಹಸಿರಿನಿಂದ ತುಂಬಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದ ಬೈಸರನ್‌ ಹುಲ್ಲುಗಾವಲು ನಿಸ್ತೇಜವಾಗಿ ನಿಂತಿದೆ. ಉಗ್ರರ ಗುಂಡಿಗೆ ಬಲಿಯಾದ ಬಹುತೇಕರು ದೇಶದ ವಿವಿಧ ಭಾಗಗಳಿಂದ ತೆರಳಿದ್ದ ಅಮಾಯಕ ಪ್ರವಾಸಿಗಳು. ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ನಡೆಸಿದ ಈ ಕುಕೃತ್ಯ ಅಲ್ಲಿನ ಸ್ಥಳೀಯ ಪ್ರವಾಸೋದ್ಯಮ ಹಾಗೂ ಆರ್ಥಿಕತೆಯನ್ನು ತೀವ್ರ ಕುಸಿತದ ದಡಕ್ಕೆ ಒಯ್ದಿದೆ.

- Advertisement -

ಏಪ್ರಿಲ್ 22ರ ಉಗ್ರ ದಾಳಿಯ ಮೊದಲು, ಪಹಲ್ಗಾಮ್‌ಗೆ ಪ್ರತಿದಿನವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಈ ಪ್ರವಾಸಿಗರ ಮೂಲಕ ಅಲ್ಲಿನ ನೂರಾರು ಸ್ಥಳೀಯರಿಗೆ ಕೆಲಸ ದೊರೆಯುತ್ತಿತ್ತು. ಟ್ಯಾಕ್ಸಿ ಚಾಲಕರು, ಕುದುರೆ ಓಡಿಸುವ ಪೋನಿವಾಲಾಗಳು, ಪ್ರವಾಸಿ ಮಾರ್ಗದರ್ಶಿಗಳು, ಛಾಯಾಗ್ರಾಹಕರು, ಹೋಟೆಲ್ ಮಾಲಿಕರು, ಬಟ್ಟೆ-ಶಾಲು ಮಾರುವವರು ಮತ್ತು ಬೀದಿ ಆಹಾರ ಮಾರಾಟಗಾರರು.. ಹೀಗೆ ಎಲ್ಲಾ ಸ್ಥಳೀಯ ಕಾಶ್ಮೀರಿಗಳ ಬದುಕು ಪ್ರವಾಸೋದ್ಯಮದ ಮೇಲೆಯೇ ಅವಲಂಬಿತವಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...
WhatsApp Image 2025 05 25 at 6.23.57 PM
ಪಹಲ್ಗಾಮ್‌ ಉಗ್ರ ದಾಳಿಯ ನಂತರ ನಿರ್ಜನವಾದ ಕಾಶ್ಮೀರಿ ಬೀದಿಗಳು

ಆದರೆ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಅಲ್ಲಿ ತಂಗಿದ್ದ ಹೆಚ್ಚಿನ ಪ್ರವಾಸಿಗರು ಭಯದಿಂದ ಪಹಲ್ಗಾಮ್‌ ಬಿಟ್ಟು ಓಡಿದರು. ಪರಿಣಾಮ, ಆ ಊರಿನಲ್ಲಿ ಸುಮಾರು 10,000ಕ್ಕೂ ಹೆಚ್ಚು ಮಂದಿ ತಮ್ಮ ಉದ್ಯೋಗವನ್ನೇ ಕಳೆದುಕೊಂಡರು.

“1990ರ ದಶಕದ ಹಿಂಸಾತ್ಮಕ ದಿನಗಳಲ್ಲೂ ಪಹಲ್ಗಾಮ್ ಸುರಕ್ಷಿತವಾಗಿತ್ತು. ಆದರೆ ಈಗ ಮುಗ್ಧ ಪ್ರವಾಸಿಗರನ್ನು ಗುರಿಯಾಗಿಸಿರುವುದು ನಮಗೆ ಆಘಾತವಾಗಿದೆ. ಸ್ಥಳೀಯರೊಬ್ಬರನ್ನು ಹೊಡೆದಿದ್ದರೆ ನಾವು ಸಹಿಸಿ ತಾಳಬಹುದಿತ್ತು. ಆದರೆ, ಪ್ರವಾಸಿಗರನ್ನು ಕೊಲ್ಲುವುದು ನಿಜಕ್ಕೂ ಕ್ಷಮಿಸಲಾಗದು. ಪಹಲ್ಗಾಮ್ ಮೇಲಿಂದ ಈ ಕಲೆಯನ್ನು ಬೇಗನೆ ತೊಳೆಯಲು ಆಗುವುದಿಲ್ಲ” ಎಂದು ಸ್ಥಳೀಯ ಸಾರಿಗೆ ಸಂಘದ ಅಧ್ಯಕ್ಷ ಗುಲಾಮ್ ನಬಿ ನೋವು ಹಂಚಿಕೊಂಡಿರುವುದು ವರದಿಯಾಗಿದೆ.

ಕಾಶ್ಮೀರ ಮತ್ತು ಪ್ರವಾಸೋದ್ಯಮ

“ಕಾಶ್ಮೀರದ ಪ್ರವಾಸೋದ್ಯಮವು ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಗೆ ಹೆಚ್ಚು ಕೊಡುಗೆ ನೀಡುತ್ತದೆ. ಕೇವಲ ಹೋಟೆಲ್ ಉದ್ಯಮವೇ ವಾರ್ಷಿಕ ₹2,700 ಕೋಟಿ ಕೊಡುಗೆ ನೀಡಿದರೆ, ಸಂಪೂರ್ಣ ಪ್ರವಾಸೋದ್ಯಮ ವಲಯವು ಕೇಂದ್ರಾಡಳಿತ ಪ್ರದೇಶದ ಒಟ್ಟು ಆರ್ಥಿಕತೆಗೆ ₹10,000 ಕೋಟಿಯಷ್ಟು ಕೊಡುಗೆ ನೀಡುತ್ತದೆ. ಇದು ಒಟ್ಟು GSDPಯ ಶೇ. 5ರಷ್ಟಿದ್ದು, ₹2.65 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ” ಎಂದು ಶ್ರೀನಗರದ ತಜ್ಞರೊಬ್ಬರು ಹೇಳಿರುವುದಾಗಿ ಲೈವ್‌ ಮಿಂಟ್ ಉಲ್ಲೇಖಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮದಲ್ಲಿ ಉತ್ತಮ ಬೆಳವಣಿಗೆಯಿತ್ತು. 2024ರಲ್ಲಿ 30 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಕಾಶ್ಮೀರಕ್ಕೆ ಬಂದಿದ್ದರು. ಇದು ಹಿಂದಿನ ವರ್ಷಗಳಿಗಿಂತ ಹೆಚ್ಚಿನದು ಮತ್ತು ಸ್ಥಳೀಯ ಆರ್ಥಿಕತೆಗೆ ಶೇ.7ರಷ್ಟು ಉತ್ತೇಜನ ನೀಡಿತ್ತು. ಈ ಬೆಳವಣಿಗೆಯಿಂದ ಹೋಟೆಲ್, ಸಾರಿಗೆ ಕ್ಷೇತ್ರಗಳಲ್ಲಿ ಹೂಡಿಕೆಗಳು ಹೆಚ್ಚಾದವು, ಸಾವಿರಾರು ಜನರಿಗೆ ಉದ್ಯೋಗವೂ ಸಿಕ್ಕಿತ್ತು.

ಆದರೆ, 2025ರ ಏಪ್ರಿಲ್‌ ನಂತರ ಈ ಬೆಳವಣಿಗೆಯೆಲ್ಲವೂ ಹಿಮ್ಮುಖವಾಗಿದೆ. ದುರಂತದಿಂದ ಪ್ರವಾಸಿಗರಲ್ಲಿ ಭಯ ಉಂಟಾಗಿ ಅವರು ತಮ್ಮ ಕಾಶ್ಮೀರ ಪ್ರವಾಸ ಯೋಜನೆಗಳನ್ನೇ ರದ್ದುಗೊಳಿಸುತ್ತಿದ್ದಾರೆ. ಸಮೀಕ್ಷೆಗಳ ಪ್ರಕಾರ ಶೇಕಡಾ 60ರಷ್ಟು ಜನರು ತಮ್ಮ ಪ್ರವಾಸ ಮುಂದೂಡಿದ್ದಾರೆ ಅಥವಾ ರದ್ದುಗೊಳಿಸಿದ್ದಾರೆ. ಇದರಿಂದ ಸ್ಥಳೀಯ ವ್ಯಾಪಾರಗಳು ಮತ್ತು ಸಾವಿರಾರು ಜನರ ಜೀವನೋಪಾಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರಿದೆ.

ನೆಲಕಚ್ಚಿದ ಸ್ಥಳೀಯ ಉದ್ಯಮಗಳು

ಸ್ಥಳೀಯವಾಗಿ ನೆಲೆ ಕಂಡುಕೊಂಡಿದ್ದ ಟ್ಯಾಕ್ಸಿ ಚಾಲಕರು, ಕುದುರೆ ಮಾಲಿಕರು ಹಾಗೂ ಹೋಟೆಲ್‌ ಮಾಲಿಕರ ಸದ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ಅವರಿಂದಲೇ ಕೇಳಿ ʼದ ವೀಕ್‌ʼ ವರದಿ ಮಾಡಿದೆ.

WhatsApp Image 2025 05 25 at 6.22.57 PM

ಪಹಲ್ಗಾಮ್‌ನಲ್ಲಿ ಸುಮಾರು 1,200 ಟ್ಯಾಕ್ಸಿ ಚಾಲಕರು ಕೆಲಸ ಮಾಡುತ್ತಿದ್ದರು. ಇವರಲ್ಲಿ ಹಲವರು ತಮ್ಮ ಜೀವಿತದ ಉಳಿತಾಯವನ್ನು ಕಾರು ಖರೀದಿಗೆ ಹೂಡಿದ್ದರು, ಕೆಲವರು ಸಾಲ ಪಡೆದು ಗಾಡಿ ಕೊಂಡಿದ್ದರು. ದಾಳಿಯ ದಿನ ಪ್ರವಾಸಿಗರು ತುರ್ತು ಪರಿಸ್ಥಿತಿಯಲ್ಲಿ ಸ್ಥಳದಿಂದ ಓಡುತ್ತಿದ್ದಾಗ, ಈ ಚಾಲಕರು ಉಚಿತವಾಗಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದರು. ಕೆಲವು ಹೋಟೆಲ್‌ಗಳು ತಮ್ಮ ಗ್ರಾಹಕರಿಗೆ ಬಿಲ್ ಮನ್ನಾ ಮಾಡಿದ್ದವು.

ದಾಳಿಯಿಂದ ಕುದುರೆ ಮಾಲಿಕರ ಮೇಲೂ ದೊಡ್ಡ ಹೊರೆ ಬಿದ್ದಂತಾಗಿದೆ. ಪಹಲ್ಗಾಮ್‌ನ ಒಂಬತ್ತು ಹಳ್ಳಿಗಳಲ್ಲಿ ಸುಮಾರು 3,000 ಕುದುರೆಗಳು ಪ್ರವಾಸಿಗರಿಗೆ ಸೇವೆ ನೀಡುತ್ತಿವೆ. ಲಾರಿಪೋರಾದ ಅಬ್ದುಲ್ ರೆಹಮಾನ್ ರೈನಾ, “ನಾವು ದಿನಕ್ಕೆ ₹1,000 ಗಳಿಸುತ್ತಿದ್ದೆವು. ಅದರ ಮೂಲಕ ನಮ್ಮ ಮಕ್ಕಳ ವಿದ್ಯಾಭ್ಯಾಸ ನಡೆಯುತ್ತಿತ್ತು. ಆದರೆ ಈಗ ಉದ್ಯೋಗವೇ ಇಲ್ಲ. ಕುದುರೆಗಳಿಗೆ ಪಶುಸಂಗೋಪನಾ ಇಲಾಖೆಯ ವಿಮೆ ಇದ್ದರೂ, ಭಯೋತ್ಪಾದಕರಿಂದ ಆಗಿರುವ ನಷ್ಟವನ್ನು ಅದು ತುಂಬಲು ಸಾಧ್ಯವಿಲ್ಲ. ನಾವು ಭೂಹೀನರು. ವಿದ್ಯೆಯೂ ಇಲ್ಲ, ಪ್ರವಾಸೋದ್ಯಮವೇ ನಮ್ಮ ಬದುಕಾಗಿತ್ತು. ಈಗ ಎಲ್ಲವೂ ದುಸ್ತರವಾಗಿದೆ” ಎಂದು ಹೇಳಿರುವುದಾಗಿ ‘ದ ವೀಕ್‌’ ವರದಿ ಹೇಳುತ್ತದೆ.

“ಅವರಿಗಿಂತ ನಾವೇ ಸತ್ತಿದ್ದರೆ ಚಿಂತೆಯಿರಲಿಲ್ಲ. ಆದರೆ ಪ್ರವಾಸಿಗರು ಗುರಿಯಾಗಿರುವುದು ನಮ್ಮೆಲ್ಲರ ಮೇಲೆ ಕಳಂಕ ತಂದಿದೆ. ಗಳಿಕೆಯ ನಷ್ಟಕ್ಕಿಂತ ಇದು ದೊಡ್ಡ ನೋವುಂಟು ಮಾಡಿದೆ” ಎನ್ನುತ್ತಾರೆ ಸ್ಥಳೀಯ ಕುದುರೆ ಮಾಲೀಕರ ಸಂಘದ ಅಧ್ಯಕ್ಷ ಮುಹಮ್ಮದ್ ಅಬ್ದುಲ್ಲಾ.

ಹೋಟೆಲ್ ಮಾಲೀಕರ ಪರಿಸ್ಥಿತಿಯೂ ಭಯಾನಕವಾಗಿದೆ. “ಎಲ್ಲಾ ಪ್ರವಾಸಿಗರು ಹೋಗಿದ್ದಾರೆ. ವ್ಯಾಪಾರ ಶೇಕಡಾ 90ರಷ್ಟು ಕುಸಿತವಾಗಿದೆ” ಎಂದು ಹೋಟೆಲ್ ವ್ಯವಸ್ಥಾಪಕ ತಾಹಿರ್ ಹೇಳುತ್ತಾರೆ. ಇನ್ನೊಬ್ಬ ಹೋಟೆಲ್ ವ್ಯವಸ್ಥಾಪಕ ರಯೀಸ್ ಅಹ್ಮದ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ ಜಾವಿದ್ ಬಶೀರ್ ಬುರ್ಜಾ, “ಈ ಘಟನೆಯಿಂದ ನಾವು ಸಂಪೂರ್ಣವಾಗಿ ಧ್ವಂಸಗೊಂಡಿದ್ದೇವೆ. ಈ ಮಟ್ಟದ ಅಪಾಯ ಕಾಶ್ಮೀರದಲ್ಲಿ ಹಿಂದೆಂದೂ ಇರಲೇ ಇಲ್ಲ” ಎಂದು ಹೇಳಿದ್ದಾರೆ.

ಸುಮಾರು 30 ಲಕ್ಷ ಕಾಶ್ಮೀರಿಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದಾರೆ. ಮೂರು ಲಕ್ಷ ಜನರು ಹೋಟೆಲ್‌ಗಳು ಮತ್ತು ಇತರ ಪ್ರವಾಸೋದ್ಯಮ ಸಂಬಂಧಿತ ವ್ಯವಹಾರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

WhatsApp Image 2025 05 25 at 6.27.07 PM

ಪಹಲ್ಗಾಮ್‌ನಲ್ಲಿ ಸುಮಾರು 2,500 ಹೋಟೆಲ್‌ಗಳು ಮತ್ತು ಅತಿಥಿಗೃಹಗಳಿವೆ, ಜೊತೆಗೆ ಸುಮಾರು 200 ರೆಸ್ಟೋರೆಂಟ್‌ಗಳಿವೆ. “ಈಗ ಯಾವುದೇ ಹೋಟೆಲ್‌ನಲ್ಲಿ ಪ್ರವಾಸಿಗರಿಲ್ಲ” ಎಂದು ಹೋಟೆಲ್‌ನ ಉಸ್ತುವಾರಿಯೊಬ್ಬರು ಹೇಳಿರುವುದಾಗಿ ಮಿಂಟ್‌ ವರದಿ ಮಾಡಿದೆ.

ಪ್ರವಾಸಿಗರು ಕಣಿವೆಗೆ ಭೇಟಿ ನೀಡುವಂತೆ ಮನವಿ ಮಾಡುವಂತೆ ಜಮ್ಮು ಮತ್ತು ಕಾಶ್ಮೀರ ಹೊಟೇಲಿಯರ್ಸ್ ಕ್ಲಬ್‌ನ ಅಧ್ಯಕ್ಷ ಮುಷ್ತಾಕ್ ಛಾಯಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ವಿನಂತಿಸಿದ್ದಾರೆ. ಆದರೆ ಪಹಲ್ಗಾಮ್‌ನಿಂದ ಪ್ರವಾಸ ಕೈಗೊಂಡ ನಂತರ, ಮಾರಕ ಭಯೋತ್ಪಾದಕ ದಾಳಿ ಮತ್ತು ನಂತರದ ಘಟನೆಗಳ ನಂತರ, ಆ ಪ್ರದೇಶ ಚೇತರಿಸಿಕೊಳ್ಳಲು ಹೆಚ್ಚು ಸಮಯವೇ ಹಿಡಿದೀತು.

ಸ್ಥಳೀಯ ವ್ಯಾಪಾರಸ್ಥರು ಏನನ್ನುತ್ತಾರೆ?

ಪ್ರವಾಸಿಗರನ್ನೇ ನಂಬಿಕೊಂಡು ಪಹಲ್ಗಾಮ್‌ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿದ್ದ ಸಣ್ಣ-ಪುಟ್ಟ ವ್ಯಾಪಾರಸ್ಥರು ಹಾಗೂ ಪ್ರವಾಸೋದ್ಯಮ ಯೋಜಕರು ಈ ಬಗ್ಗೆ ಏನೆನ್ನುತ್ತಾರೆ ಎಂಬುದರ ಕುರಿತು ‘ಅಲ್‌ಜಜೀರಾ’ ವರದಿ ಮಾಡಿದೆ.

“ಉಗ್ರರಿಂದ ದಾಳಿ ನಡೆಯುವಾಗ ನಾನು ಅಲ್ಲೇ ಇದ್ದೆ. ಅದು ನನಗೆ ಮತ್ತು ಅಲ್ಲಿದ್ದ ಎಲ್ಲರಿಗೂ ದೊಡ್ಡ ಆಘಾತವಾಯಿತು. ನಾನು ಕಾಶ್ಮೀರದಲ್ಲಿ ಸಾಹಸ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುತ್ತಿರುವ ವಾಸ್ತುಶಿಲ್ಪಿ ಮತ್ತು ಪ್ರವಾಸೋದ್ಯಮ ಯೋಜಕನಾಗಿ ಕೆಲಸ ಮಾಡುತ್ತೇನೆ. ಈ ಘಟನೆ ನನ್ನ ಕೆಲಸದ ಮೇಲೆ ನೇರ ಪರಿಣಾಮ ಬೀರಿದೆ. ದಾಳಿಯ ನಂತರ ಸರ್ಕಾರವು ಎಲ್ಲ ಚಾರಣ ಚಟುವಟಿಕೆಗಳನ್ನು ನಿಲ್ಲಿಸಿತು ಹಾಗೂ 48 ಪ್ರವಾಸಿ ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿತು. ಈ ನಿರ್ಧಾರದಿಂದ ತಿಂಗಳುಗಟ್ಟಲೆ ಮಾಡಿದ್ದ ನನ್ನ ಯೋಜನೆಗಳು, ಸ್ಥಳೀಯರೊಂದಿಗೆ ಸಹಕಾರ, ನಿಗದಿತ ಯಾತ್ರೆಗಳೆಲ್ಲಾ ಹಠಾತ್ತನೆ ನಿಂತುಬಿಟ್ಟವು. ಹಣದ ನಷ್ಟವಾಯಿತು. ಮಾರ್ಗದರ್ಶಕರು, ಪೋರ್ಟರ್‌ಗಳು ಮತ್ತು ಇತರ ಸಿಬ್ಬಂದಿ ಕೆಲಸವಿಲ್ಲದೆ ಬಿಟ್ಟರು. ಅವರ ಜೀವನ ನಿರ್ವಹಣೆ ಸಂಪೂರ್ಣವಾಗಿ ಪ್ರವಾಸೋದ್ಯಮದ ಮೇಲೆಯೇ ಆಧಾರಿತವಾಗಿತ್ತು…”

“ಇದೇ ನನ್ನ ಜೀವನೋಪಾಯವಾದ್ದರಿಂದ ಇಡೀ ಪರಿಸ್ಥಿತಿ ನನಗೆ ತುಂಬಾ ಒತ್ತಡ ತರುವಂತಾಗಿದೆ. ಆದರೆ, ಈ ಸ್ಥಿತಿ ಮತ್ತೆ ಸುಧಾರಿಸುತ್ತದೆ. ಪ್ರವಾಸಿಗರು ಮತ್ತೆ ಬರುತ್ತಾರೆ ಮತ್ತು ಈ ವಲಯ ಪುನಃ ಚೈತನ್ಯಗೊಳ್ಳುತ್ತದೆ ಎಂದು ನಾನೂ ನಂಬಿಕೆಯಿಂದ ಕಾಯುತ್ತಿದ್ದೇನೆ” ಎನ್ನುತ್ತಾರೆ 35 ವರ್ಷದ ಆಶಿಕ್‌ ನಬಿ.

“ಪಹಲ್ಗಾಮ್‌ನಲ್ಲಿ ನಡೆದದ್ದು ಎಂದಿಗೂ ನಡೆಯಬಾರದಿತ್ತು. ಆ ರೀತಿಯ ಘಟನೆಗಳು ಕೇವಲ ಭೀತಿಯನ್ನು ಸೃಷ್ಟಿಸುವುದಿಲ್ಲ, ಅವು ನಮ್ಮ ಜೀವನೋಪಾಯದ ಏಕೈಕ ಮೂಲವನ್ನು ನಾಶಮಾಡುತ್ತವೆ. ಆ ದಿನದಿಂದ, ಪ್ರವಾಸಿಗರ ಸಂಖ್ಯೆ ತುಂಬಾ ಕುಸಿದಿದೆ, ನಾನು ಈ ದಿನಗಳನ್ನು ಒಂದೇ ಒಂದು ಸವಾರಿ ಇಲ್ಲದೆ ಕಳೆದಿದ್ದೇನೆ. ಯಾರಾದರೂ ನನಗೆ ಕರೆ ಮಾಡಬಹುದೆಂದು ಆಶಿಸುತ್ತಾ, ಟ್ಯಾಕ್ಸಿ ಸ್ಟ್ಯಾಂಡ್‌ಗಳ ಬಳಿ ಅಥವಾ ಮನೆಯಲ್ಲಿ ಕಾಯುತ್ತಾ ನಾನು ಸುಮ್ಮನೆ ಕುಳಿತಿದ್ದೇನೆ. ಆದರೆ ಫೋನ್ ಇನ್ನೂ ರಿಂಗಣಿಸಿಲ್ಲ. ಈ ವರ್ಷವನ್ನು ಸ್ವಲ್ಪ ಹೆಚ್ಚು ಭರವಸೆಯೊಂದಿಗೆ ಆರಂಭಿಸಿದ್ದೆ. ಬುಕಿಂಗ್‌ಗಳು ಹೆಚ್ಚಾಗುತ್ತಿದ್ದವು. ವರ್ಷಗಳ ನಂತರ ಉತ್ತಮ ಋತುವನ್ನು ನೋಡಬಹುದು ಎಂದು ಭಾವಿಸಿದ್ದೆ. ಆದರೆ ಈಗ ಎಲ್ಲವೂ ಕುಸಿದಿದೆ. ಇದು ಹೀಗೆ ಮುಂದುವರಿದರೆ, ನನ್ನಂತಹ ಸರ್ಕಾರಿ ಉದ್ಯೋಗವಿಲ್ಲದ, ಭೂಮಿ ಇಲ್ಲದ, ವ್ಯವಹಾರವಿಲ್ಲದ ಜನರು ಹಣವಿಲ್ಲದೆ ಉಳಿಯುತ್ತಾರೆ ಎಂದು ನಾನು ಹೆದರುತ್ತೇನೆ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ಪ್ರವಾಸಿ ಟ್ಯಾಕ್ಸಿ ಚಾಲಕ ರಮೀಜ್ ಅಹ್ಮದ್

WhatsApp Image 2025 05 25 at 6.28.12 PM

ಪಾನಿಪುರಿ ಮಾರಾಟಗಾರ, ಬಿಹಾರದ ವಲಸೆ ಕಾರ್ಮಿಕ ಅಜ್ಮಲ್ ಹೀಗೆನ್ನುತ್ತಾರೆ: “ನನ್ನ ಸಹೋದರಿ ತನ್ನ ಪತಿ ಮತ್ತು ಮಕ್ಕಳೊಂದಿಗೆ ಒಂದು ದಶಕದಿಂದಲೂ ಕಾಶ್ಮೀರದಲ್ಲಿ ವಾಸಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ, ಅವಳು ನನ್ನನ್ನೂ ಇಲ್ಲಿಗೆ ಕರೆತಂದಳು. ಯಾವುದೇ ಹಾನಿಯನ್ನು ಎದುರಿಸುವ ಬಗ್ಗೆ ಅವಳು ಎಂದಿಗೂ ಮಾತನಾಡಿದವಳಲ್ಲ. ವಾಸ್ತವವಾಗಿ, ಅವಳು ಯಾವಾಗಲೂ ಸ್ಥಳೀಯರ ಬಗ್ಗೆ ಮತ್ತು ಅವರ ಕಾಳಜಿಯ ಬಗ್ಗೆ ಹೊಗಳುತ್ತಿದ್ದಳು. ಅದೇ ನನಗೆ ಇಲ್ಲಿಗೆ ಬಂದು ಜೀವನವನ್ನು ಕಟ್ಟಿಕೊಳ್ಳಲು ಪ್ರೇರೇಪಿಸಿತು. ದಾಳಿಯ ನಂತರ ನಿಧಾನವಾಗಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಪ್ರವಾಸಿಗರು ಭಯ ಮರೆತು ಇಲ್ಲಿಗೆ ಭೇಟಿ ನೀಡುತ್ತಾರೆ.”

ಪ್ರವಾಸೋದ್ಯಮಕ್ಕೆ ಪುನರ್‌ ಚೈತನ್ಯ ನೀಡಲು ಅಭಿಯಾನಗಳು

ಕಾಶ್ಮೀರ ಮೂಲದ ಪ್ರವಾಸೋದ್ಯಮ ಸಂಘಟನೆಗಳು ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ಹಲವು ಕ್ರಮಗಳನ್ನು ಕೈಗೊಂಡಿವೆ. ದಾಲ್ ಸರೋವರದಿಂದ ಪಹಲ್ಗಾಮ್‌ವರೆಗೆ “ರೋಡ್ ಶೋ ಟು ಪಹಲ್ಗಾಮ್” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮತ್ತೊಂದೆಡೆ, ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (TAAI) ʼಚಲೋ ಕಾಶ್ಮೀರʼ ಎಂಬ ಅಭಿಯಾನವನ್ನು ಆರಂಭಿಸಿದೆ.

ದಾಳಿಯ ಕೆಲವು ದಿನಗಳ ನಂತರ ಪಟ್ಟಣಕ್ಕೆ ಭೇಟಿ ನೀಡಿದ ಬಾಲಿವುಡ್ ನಟ ಅತುಲ್ ಕುಲಕರ್ಣಿ ಕೂಡ ಪ್ರವಾಸಿಗರನ್ನು ಪಹಲ್ಗಾಮ್‌ಗೆ ಬರುವಂತೆ ಪ್ರೇರೇಪಿಸಲು ಪ್ರಯತ್ನಿಸಿದ್ದಾರೆ. “ಉಗ್ರಗಾಮಿಗಳಿಗೆ ನಾವು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಮೂಲಕ ಪ್ರತಿಕ್ರಿಯಿಸಬೇಕು. ಬುಕಿಂಗ್ ರದ್ದು ಮಾಡಬೇಡಿ, ನಿಮ್ಮ ಇತರ ಯೋಜನೆಗಳನ್ನು ರದ್ದುಗೊಳಿಸಿ ಇಲ್ಲಿಗೆ ಬನ್ನಿ” ಎಂದು ಕರೆ ನೀಡಿದ್ದಾರೆ.

ಟ್ರಾವೆಲ್ ಅಸೋಸಿಯೇಷನ್ ಫೆಡರೇಶನ್ ಆಫ್ ಇಂಡಿಯಾ (TAFI) ಸದಸ್ಯ ಅನಿಲ್ ಪಂಜಾಬಿ ಅವರು, “ಪ್ರವಾಸಿಗರು ಬಹಳಷ್ಟು ಪ್ರಶ್ನೆಗಳು ಕೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರವೇ ಭದ್ರತೆ ಹಾಗೂ ಸುರಕ್ಷತೆಯನ್ನು ಖಚಿತಪಡಿಸಬೇಕು. ನಾವು ಮತ್ತೆ ಪ್ರವಾಸೋದ್ಯಮ ಚುರುಕುಗೊಳಿಸಲು ಸಿದ್ಧರಾಗಿದ್ದೇವೆ. ಆದರೆ, ಸರ್ಕಾರದ ಮಾರ್ಗಸೂಚಿಗಳ ಅಗತ್ಯವಿದೆ. ಜನರು ವಿಮಾನದಲ್ಲಿ ಹೋಗಿ ಶವಪೆಟ್ಟಿಗೆಯಲ್ಲಿ ಮರಳಬಾರದು. ಸರ್ಕಾರವೇ ಸುರಕ್ಷತೆಯ ಭರವಸೆ ನೀಡಬೇಕು” ಎಂದು ಮನವಿ ಮಾಡಿದ್ದಾರೆ.

“ಹಲವಾರು ಪ್ರವಾಸೋದ್ಯಮ ಸಂಸ್ಥೆಗಳು ದೇಶದ ಪ್ರವಾಸಿಗರಲ್ಲಿ ವಿಶ್ವಾಸ ಮೂಡಿಸಿ ಮತ್ತೆ ಕಾಶ್ಮೀರಕ್ಕೆ ಆಕರ್ಷಿಸಲು ಶ್ರಮಿಸುತ್ತಿದ್ದಾರೆ. ಇದು ಅಲ್ಲಿನ ಪ್ರವಾಸೋದ್ಯಮವನ್ನು ಮತ್ತೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಜನರು ಪಹಲ್ಗಾಮ್ ದಾಳಿಯ ಬಳಿಕ ಭಯಭೀತರಾಗಿದ್ದಾರೆ. ಆ ಭಯವನ್ನು ನಿವಾರಿಸಿ, ಪ್ರವಾಸಿಗರಲ್ಲಿ ಆತ್ಮವಿಶ್ವಾಸ ಮೂಡಿಸುವುದು ನಮ್ಮ ಉದ್ದೇಶ. ಅದು ನಿಧಾನವಾದರೂ ಸಾಧ್ಯವಾಗುತ್ತದೆ ಎಂದು ನಂಬಿರುವುದಾಗಿ ಪಶ್ಚಿಮ ಬಂಗಾಳದ ಪ್ರವಾಸ ಏಜೆಂಟ್ ಕಲ್ಯಾಣ್ ದಾಸ್ ಹೇಳಿಕೊಳ್ಳುತ್ತಾರೆ” ಎಂದು ‘ಬಿಬಿಸಿ’ ವರದಿ ಹೇಳುತ್ತದೆ.

ಒಟ್ಟಾರೆಯಾಗಿ ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನು ಮತ್ತೆ ಚಿಗುರಿಸಲು ಸ್ಥಳೀಯರು ಪ್ರಯತ್ನಿಸುತ್ತಿದ್ದಾರೆ. ಆದರೆ ಸರ್ಕಾರದಿಂದ ಭದ್ರತೆ ಮತ್ತು ವಿಶ್ವಾಸದ ಸ್ಪಷ್ಟ ಸಂದೇಶವಿಲ್ಲದೆ ಈ ಬದಲಾವಣೆಯು ಕಷ್ಟ ಸಾಧ್ಯವಾಗಬಹುದು ಎಂಬುದು ಹಲವರ ಅಭಿಪ್ರಾಯ.

WhatsApp Image 2025 05 25 at 6.29.34 PM

ಸ್ಥಳೀಯ ಕಾಶ್ಮೀರಿಗಳು ನೀಡಿದ ಭರವಸೆ ಮರೆಯುವಂಥದ್ದಲ್ಲ

ಭೀಕರ ಘಟನೆಯ ಗಾಯಗಳು ಇದ್ದೇ ಇವೆ. ಆದರೆ ಸ್ಥಳೀಯ ಕಾಶ್ಮೀರಿಗಳ ದೃಷ್ಟಿಯಿಂದ ಯೋಚಿಸುವ ಅಗತ್ಯವಿದೆ. ದಾಳಿಯ ದಿನದಲ್ಲಿ ಪ್ರವಾಸಿಗರಿಗೆ ಮೊದಲಾಗಿ ಸಹಾಯಕ್ಕೆ ಧಾವಿಸಿದವರೇ ಸ್ಥಳೀಯರು. ಶವಗಳನ್ನು ಎತ್ತಿದವರು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದವರು ಎಲ್ಲರೂ ಸ್ಥಳೀಯರು ಎಂಬುದು ಗಮನಾರ್ಹ.

“ನಮ್ಮನ್ನು ಭಯದಿಂದ ವಿಮುಕ್ತಗೊಳಿಸಿ; ಬನ್ನಿ, ನಮ್ಮ ನಾಡನ್ನು ನೋಡಿ, ಪ್ರವಾಸೋದ್ಯಮವೇ ಶಾಂತಿಯನ್ನು ಮರಳಿ ತರುವ ದಾರಿಯಾಗಲಿ” ಎನ್ನುತ್ತಿರುವ ಪ್ರತಿ ಕಾಶ್ಮೀರಿಯ ಮನವಿಯನ್ನು ಆಲಿಸುವುದೆಂದರೆ ಆರ್ಥಿಕ ಚಟುವಟಿಕೆಯ ಪುನಾರಂಭಕ್ಕೆ ನೀಡುವ ಪ್ರೋತ್ಸಾಹವಷ್ಟೇ ಆಗುವುದಿಲ್ಲ, ಒಂದು ಪ್ರದೇಶದ ಜನರಿಗೆ ಜೀವ ನೀಡುವ ಕಾರ್ಯವೂ ಆಗುತ್ತದೆ.

ಈ ದುರಂತದಿಂದ ಉಗಮಿಸಿರುವ ಭಯವನ್ನು ತೊಡೆದು ಹಾಕುವುದು ದೇಶದ ಸರ್ವರ ಹೊಣೆಗಾರಿಕೆಯಾಗಿದೆ. ಸರ್ಕಾರ, ಸ್ಥಳೀಯ ಆಡಳಿತ ಹಾಗೂ ನಾಗರಿಕ ಸಮಾಜವು ಸಹಕಾರದಿಂದ ದುಡಿದು, ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸುವ ಕಾರ್ಯತತ್ಪರತೆ ತೋರಬೇಕು. ʼಈ ದಾಳಿಯು ಕೇವಲ ನೋವಿನ ನೆನಪಾಗಿ ಉಳಿಯದೆ, ಭದ್ರತಾ ಜಾಗೃತಿಯ ಹೊಸ ಅಧ್ಯಾಯವನ್ನೂ ಆರಂಭಿಸಬೇಕಾದ ಸಮಯವಿದುʼ ಎಂಬ ಪಾಠವನ್ನೂ ನೀಡಿರುವುದು ಸ್ಪಷ್ಟವಾಗಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರೀಮಿಯಂ ಲೇಖನ | ಸಂಗೀತದಲ್ಲಿ ಅಪಸ್ವರ ನುಡಿಸುತ್ತಿರುವ ಹವಾಮಾನ ಬದಲಾವಣೆ!

ಹವಾಮಾನ ಬದಲಾವಣೆಯು ಕೇವಲ ಕೃಷಿ ಅಥವಾ ಪರಿಸರದ ಸಮಸ್ಯೆಯಲ್ಲ. ಅದರ ಪರಿಣಾಮ...

ಪ್ರೀಮಿಯಂ ಲೇಖನ | ಎಐ ಡೇಟಾ ಸೆಂಟರ್‌ಗಳ ವಿಸ್ತರಣೆ ಮತ್ತು ಪರಿಸರ ಸವಾಲು

2025ರಲ್ಲಿ ಅಮೆರಿಕದಲ್ಲಿ ಸ್ಥಳೀಯ ವಿರೋಧದ ಕಾರಣ ಸುಮಾರು 152 ಬಿಲಿಯನ್ ಡಾಲರ್...

ಪ್ರೀಮಿಯಂ ಲೇಖನ | ಅಮೆರಿಕೆಯ ಭಾರತೀಯರ ತ್ರಿಶಂಕು ಸ್ಥಿತಿ: ʼಮೌನಂ ಸರ್ವತ್ರ ಸಾಧನಂʼ- ಉಳಿವಿನ ತಂತ್ರ

ಅಮೆರಿಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ, ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ...

ಸರ್ಕಾರಕ್ಕೆ 3 ವರ್ಷ | ಗ್ಯಾರಂಟಿ ಯೋಜನೆಗಳು ಮತ್ತು ಅದರಾಚೆಗೆ ಮಹಿಳಾ ಸಬಲೀಕರಣಕ್ಕೆ ಆಗಬೇಕಿರುವುದು ಏನು?

ಕರ್ನಾಟಕದ ಮಹಿಳೆಯರು ಇಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದರೆ, ಮುಂದಿನ ದಶಕದಲ್ಲಿ ಅವರು...