ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 20 ಸರ್ಕಾರಿ ಶಾಲೆಗಳಲ್ಲಿ ಇದುವರೆಗೂ ಒಬ್ಬ ವಿದ್ಯಾರ್ಥಿಯೂ ದಾಖಲಾಗಿಲ್ಲ , ಈ ಕಳವಳಕಾರಿ ಬೆಳವಣಿಗೆ ಸರ್ಕಾರಿ ಶಾಲೆಗಳ ಭವಿಷ್ಯ ಮತ್ತು ಕನ್ನಡ ಮಾಧ್ಯಮ ಶಿಕ್ಷಣದ ಅಸ್ಮಿತೆಯ ಚರ್ಚೆಗೆ ಕಾರಣವಾಗಿದೆ. ಜೂನ್ ಅಂತ್ಯದವರೆಗೆ ಮುಂದುವರೆಯಲಿರುವ ಪ್ರವೇಶ ಪ್ರಕ್ರಿಯೆಯ ಅಂತಿಮ ಚಿತ್ರಣ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಶೂನ್ಯ ಪ್ರವೇಶ ದಾಖಲಿಸಿರುವ ಶಾಲೆಗಳ ಪೈಕಿ ಸುಳ್ಯದಲ್ಲಿ 7 ಶಾಲೆಗಳು, ಮಂಗಳೂರು ಉತ್ತರ ವಲಯದಲ್ಲಿ 4 ಹಾಗೂ ಮಂಗಳೂರು ದಕ್ಷಿಣ ವಲಯದಲ್ಲಿ 3 ಶಾಲೆಗಳು ಪ್ರವೇಶವಿಲ್ಲದೆ ಉಳಿದಿವೆ. ಮೂಡುಬಿದಿರೆ ಮತ್ತು ಪುತ್ತೂರು ವಲಯಗಳಲ್ಲಿ ತಲಾ 2 ಶಾಲೆಗಳಲ್ಲಿ ವಿದ್ಯಾರ್ಥಿಗಳು ಸೇರ್ಪಡೆಯಾಗಿಲ್ಲ. ಜಿಲ್ಲೆಯ ಇತರ ವಲಯಗಳೊಂದಿಗೆ ಹೋಲಿಸಿದರೆ ಬೆಳ್ತಂಗಡಿ ಮಾತ್ರ ಈ ಸಮಸ್ಯೆಯಿಂದ ಹೊರತಾಗಿದ್ದು, ಅಲ್ಲಿ ಯಾವುದೇ ಸರ್ಕಾರಿ ಶಾಲೆಯಲ್ಲಿ ಶೂನ್ಯ ಪ್ರವೇಶದ ಪ್ರಕರಣ ದಾಖಲಾಗಿಲ್ಲ.

ಸಮಗ್ರ ಶಿಕ್ಷಣ ಕರ್ನಾಟಕದ ಉಪ ಯೋಜನಾ ಸಂಯೋಜಕಿ ಸುಮಂಗಲಾ ಎಸ್. ನಾಯಕ್ ಈ ಕುರಿತು ಪ್ರತಿಕ್ರಿಯಿಸಿ, “ಜೂನ್ 30ರ ನಂತರ ಅಂತಿಮ ಶೂನ್ಯ ಪ್ರವೇಶ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಪ್ರವೇಶ ಪ್ರಕ್ರಿಯೆ ಮುಕ್ತಾಯವಾದ ಬಳಿಕವೂ ವಿದ್ಯಾರ್ಥಿಗಳಿಲ್ಲದೆ ಉಳಿಯುವ ಶಾಲೆಗಳ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ” ಎಂದಿದ್ದಾರೆ.
“ಕೆಲ ಸಂದರ್ಭಗಳಲ್ಲಿ ಅಂತಹ ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಸಾಧ್ಯತೆಯಿದ್ದು, ಕಳೆದ ವರ್ಷ ಸುಳ್ಯದ ಒಂದು ಶಾಲೆಯಲ್ಲಿ ಯಾವುದೇ ಪ್ರವೇಶ ದಾಖಲಾಗಿರಲಿಲ್ಲ. ಆದರೆ ಈ ವರ್ಷ ಕೆಲವು ವಿದ್ಯಾರ್ಥಿಗಳು ಸೇರ್ಪಡೆಯಾದ ಹಿನ್ನೆಲೆಯಲ್ಲಿ ಶಾಲೆ ಮತ್ತೆ ಚಟುವಟಿಕೆಗೆ ಮರಳಿದೆ” ಎಂಬ ಉದಾಹರಣೆಯನ್ನೂ ಅಧಿಕಾರಿಗಳು ನೀಡಿದ್ದಾರೆ.
ಆದರೆ ಈ ಬೆಳವಣಿಗೆಯನ್ನು ಕೇವಲ ಒಂದು ಶೈಕ್ಷಣಿಕ ವರ್ಷದ ಪ್ರವೇಶಾತಿಗೆ ಎದುರಾದ ಸಮಸ್ಯೆಯಾಗಿ ನೋಡುವಂತಿಲ್ಲ. ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಹಾಗೂ ಕನ್ನಡ ಮಾಧ್ಯಮ ಶಾಲೆಗಳ ಪ್ರವೇಶ ಪ್ರಮಾಣದಲ್ಲಿ ನಿರಂತರ ಕುಸಿತ ಕಂಡುಬರುತ್ತಿದ್ದು, ವಿಶೇಷವಾಗಿ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳು ಅಸ್ತಿತ್ವದ ಹೋರಾಟ ನಡೆಸುವಂತಾಗಿದೆ. ಖಾಸಗಿ ಇಂಗ್ಲಿಷ್ ಮಾಧ್ಯಮ ಶಿಕ್ಷಣದತ್ತ ಪೋಷಕರ ಹೆಚ್ಚುತ್ತಿರುವ ಒಲವು, ಮತ್ತು ಸಿಬಿಎಸ್‌ಇ ಪಠ್ಯಕ್ರಮದ ಮೇಲಿನ ವಿಶ್ವಾಸದಿಂದ ಅನೇಕ ಪೋಷಕರು ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳನ್ನೇ ಆಯ್ಕೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಜನಸಂಖ್ಯೆಯ ಹಂಚಿಕೆ ಹಾಗೂ ಸಾಮಾಜಿಕ ಪರಿಸ್ಥಿತಿಗಳ ಬದಲಾವಣೆಯೂ ಶಾಲೆಗಳ ಪ್ರವೇಶದ ಮೇಲೆ ಪರಿಣಾಮ ಬೀರಿದೆ. ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳತ್ತ ವಲಸೆ, ಮಕ್ಕಳ ಸಂಖ್ಯೆಯಲ್ಲಿನ ಕುಸಿತ ಹಾಗೂ ಜೀವನಶೈಲಿಯ ಬದಲಾವಣೆಗಳು ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಗೆ ಕಾರಣವಾಗಿವೆ. ಇನ್ನೊಂದೆಡೆ, ಕೆಲವು ಶಾಲೆಗಳಲ್ಲಿ ಮೂಲಸೌಕರ್ಯ ಮತ್ತು ಶಿಕ್ಷಕರ ಕೊರತೆಯೂ ಪೋಷಕರ ನಿರ್ಧಾರವನ್ನು ಪ್ರಭಾವಿಸುತ್ತಿದೆ.
ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುದಾನಿತ ಮತ್ತು ಅನುದಾನರಹಿತ ಸೇರಿ ಸುಮಾರು 90 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಶೂನ್ಯ ಪ್ರವೇಶ ಅಥವಾ ಅತಿ ಕಡಿಮೆ ವಿದ್ಯಾರ್ಥಿ ಸಂಖ್ಯೆಯ ಕಾರಣದಿಂದ ಮುಚ್ಚಲ್ಪಟ್ಟಿವೆ. ಇದು ಕೇವಲ ಶಾಲೆಗಳ ಸಂಖ್ಯೆಯ ಕುಸಿತವಲ್ಲ; ಗ್ರಾಮೀಣ ಶಿಕ್ಷಣ ವ್ಯವಸ್ಥೆಯಲ್ಲಿನ ಆಳವಾದ ಬದಲಾವಣೆಯ ಪ್ರತಿಬಿಂಬವಾಗಿದೆ.
ಶಾಲೆಗಳು ಮುಚ್ಚಿದಾಗ ಅದರ ಪರಿಣಾಮ ಕೇವಲ ಶಿಕ್ಷಣ ಸಂಸ್ಥೆಗಳ ಮಟ್ಟಕ್ಕೆ ಸೀಮಿತವಾಗುವುದಿಲ್ಲ. ದೂರದ ಪ್ರದೇಶಗಳ ಮಕ್ಕಳಿಗೆ ಹೆಚ್ಚಿನ ದೂರ ಪ್ರಯಾಣಿಸಿ ಶಿಕ್ಷಣ ಪಡೆಯಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿಯನ್ನೂ ಸೃಷ್ಟಿಸಬಹುದು. ಹೀಗಾಗಿ ಸರ್ಕಾರಿ ಶಾಲೆಗಳ ಉಳಿವು ಕೇವಲ ಶಿಕ್ಷಣ ಇಲಾಖೆಯ ಹೊಣೆಗಾರಿಕೆಯಲ್ಲ, ಅದು ಸಮಾಜದ ಸಮಗ್ರ ಜವಾಬ್ದಾರಿಯಾಗಿದೆ.
ಈ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ವಿವೇಕಾನಂದ ಸಾಲಿನ್ಸ್, “ಕರ್ನಾಟಕದಲ್ಲಿ ಸುಮಾರು 38 ಸಾವಿರ ಸರ್ಕಾರಿ ಶಾಲೆಗಳಿವೆ. ರಾಜ್ಯದ ಒಟ್ಟು ಬಜೆಟ್ ಸುಮಾರು ₹3.80 ಲಕ್ಷ ಕೋಟಿ ಇದ್ದರೂ, ಶಿಕ್ಷಣ ಕ್ಷೇತ್ರಕ್ಕೆ ಕೇವಲ ₹3,600 ಕೋಟಿ ಮಾತ್ರ ಮೀಸಲಿಡಲಾಗಿದೆ. ಇದು ಶಾಲೆಗಳ ಅಭಿವೃದ್ಧಿಗೆ ಸಾಲುವುದಿಲ್ಲ. ಶಿಕ್ಷಣ ಕ್ಷೇತ್ರಕ್ಕೆ ಕನಿಷ್ಠ ₹67 ಸಾವಿರ ಕೋಟಿ ಬಜೆಟ್ ಮೀಸಲಿಡಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಪ್ರಸ್ತುತ ನೀಡಿರುವ ಅನುದಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳುವುದು ಅಸಾಧ್ಯ, ಸರ್ಕಾರವು ಶಿಕ್ಷಣ ಕ್ಷೇತ್ರದ ಬಗ್ಗೆ ಅಗತ್ಯ ಕಾಳಜಿ ವಹಿಸುತ್ತಿಲ್ಲ” ಎಂದು ಆರೋಪಿಸಿದರು.
“ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಅಲ್ಲಿನ ಶಿಕ್ಷಣ ವ್ಯವಸ್ಥೆ ದೇಶದಲ್ಲಿ 27ನೇ ಸ್ಥಾನದಲ್ಲಿತ್ತು. ಆದರೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಮತ್ತು ಬಂಡವಾಳ ದೊರೆತ ಪರಿಣಾಮ ಇಂದು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ” ಎಂದು ತಿಳಿಸಿದರು.
“ದಕ್ಷಿಣ ಕನ್ನಡ ಜಿಲ್ಲೆಯನ್ನು ಶಿಕ್ಷಣ ಹಬ್ ಎಂದು ಕರೆಯಲಾಗುತ್ತದೆ. ಉತ್ತರ ಕರ್ನಾಟಕದ ಅನೇಕ ಶ್ರೀಮಂತ ಕುಟುಂಬಗಳು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸದೇ ಕರಾವಳಿಯ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಿಸುತ್ತಿವೆ. ಉತ್ತಮ ಗುಣಮಟ್ಟದ ಶಿಕ್ಷಣ ಇಲ್ಲಿ ದೊರೆಯುತ್ತದೆ ಎಂಬ ನಂಬಿಕೆ ಪೋಷಕರಲ್ಲಿದೆ. ಶಿಕ್ಷಣ ಕ್ಷೇತ್ರವು ಇಂದು ಸ್ಪರ್ಧಾತ್ಮಕವಾಗಿದ್ದು, ಸರ್ಕಾರಿ ಶಾಲೆಗಳು ಆ ಮಟ್ಟದ ಶಿಕ್ಷಣ ನೀಡಲು ವಿಫಲವಾಗುತ್ತಿವೆ. ಇದರಿಂದ ಪೋಷಕರು ಸಾಲ ಮಾಡಿಯಾದರೂ ಸರಿ, ತಮ್ಮ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಕೊಡಲು ಮುಂದಾಗುತ್ತಿದ್ದಾರೆ” ಎಂದು ಅಭಿಪ್ರಾಯಿಸಿದರು.
“ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಬದಲಾವಣೆ ತರಬೇಕಾದರೆ ಹೆಚ್ಚಿನ ಬಜೆಟ್ ಹಂಚಿಕೆ ಅಗತ್ಯ. ₹67 ಸಾವಿರ ಕೋಟಿ ಅನುದಾನ ಮೀಸಲಿಟ್ಟು, ಸರ್ಕಾರಿ ಶಾಲೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಮಾರ್ಟ್ ಕ್ಲಾಸ್‌ಗಳು, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಮಾದರಿಯ ಗುಣಮಟ್ಟದ ಪಠ್ಯಕ್ರಮ ಮತ್ತು ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲವಾದರೆ ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಬಡವರ ಮಕ್ಕಳು ಸ್ಪರ್ಧಾತ್ಮಕ ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿದವರಾಗಿಯೇ ಉಳಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕು” ಎಂದು ಹೇಳಿದರು.
“ಮೀಸಲಾತಿ ಕುರಿತ ಚರ್ಚೆಗಳು ಪದೇಪದೆ ಕೇಳಿಬರುತ್ತವೆ. ಆದರೆ ಶ್ರೀಮಂತರ ಮತ್ತು ಬಡವರ ಮಕ್ಕಳು ಒಂದೇ ಶಾಲೆಯಲ್ಲಿ ಕಲಿಯುವಂತಹ ಪರಿಸ್ಥಿತಿ ನಿರ್ಮಾಣವಾದರೆ ಶಿಕ್ಷಣದಲ್ಲಿ ಹಾಗೂ ಆರ್ಥಿಕತೆಯಲ್ಲಿ ಸಮಾನತೆ ಸಾಧಿಸಲು ಸಾಧ್ಯವಾಗುತ್ತದೆ. ಒಂದೇ ರೀತಿಯ ಶಿಕ್ಷಣ ಮತ್ತು ಅವಕಾಶಗಳು ದೊರೆತರೆ ವಿದ್ಯಾರ್ಥಿಗಳ ನಡುವೆ ಆರೋಗ್ಯಕರ ಸ್ಪರ್ಧಾತ್ಮಕತೆ ಬೆಳೆಯುತ್ತದೆ. ಇಲ್ಲವಾದರೆ ಸಮಾಜದಲ್ಲಿ ಮತ್ತೆ ಜಮೀನ್ದಾರಿ ಮನೋಭಾವ ಬಲಗೊಳ್ಳುವ ಅಪಾಯವಿದೆ” ಎಂದು ಅವರು ಎಚ್ಚರಿಸಿದರು.
“ಜಾಗತಿಕ ಶಿಕ್ಷಣ ಗುಣಮಟ್ಟದ ಸೂಚ್ಯಂಕಗಳನ್ನು ಗಮನಿಸಿದರೆ ಭಾರತವು ಇನ್ನೂ ಹಿಂದುಳಿದ ಸ್ಥಾನದಲ್ಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಫಿನ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದ್ದು, ಚೀನಾ ಸೇರಿದಂತೆ ಅನೇಕ ದೇಶಗಳಿಗೆ ಹೋಲಿಸಿದರೆ ಭಾರತ ಸಾಕಷ್ಟು ಹಿಂದೆ ಇದೆ. ನಮ್ಮ ದೇಶದಲ್ಲಿ ಶಿಕ್ಷಣಕ್ಕೆ ಅಗತ್ಯ ಪ್ರಾಮುಖ್ಯತೆ ನೀಡಲಾಗುತ್ತಿಲ್ಲ. ಸರ್ಕಾರಗಳು ಶಿಕ್ಷಣವನ್ನೇ ಮೊದಲ ಆದ್ಯತೆಯಾಗಿ ಪರಿಗಣಿಸಬೇಕು,” ಎಂದು ಮಾಧ್ಯಮದ ಮೂಲಕ ಆಗ್ರಹಿಸಿದರು.

ಈ ಕುರಿತು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಳವಳ ವ್ಯಕ್ತಪಡಿಸಿದ್ದು, “ದಕ್ಷಿಣ ಕನ್ನಡ ಜಿಲ್ಲೆಯ 20 ಸರ್ಕಾರಿ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಲ್ಲಿ ಇದುವರೆಗೆ ಒಂದೇ ಒಂದು ವಿದ್ಯಾರ್ಥಿಯೂ ದಾಖಲಾತಿಯಾಗದಿರುವುದು ಆತಂಕಕಾರಿ ಬೆಳವಣಿಗೆ. ಸರ್ಕಾರಿ ಶಾಲೆಗಳ ಮೇಲಿನ ಜನರ ವಿಶ್ವಾಸ ಕುಸಿತ, ಮೂಲಸೌಕರ್ಯಗಳ ಕೊರತೆ, ಶಿಕ್ಷಕರ ಅಭಾವ ಹಾಗೂ ಖಾಸಗಿ ಶಾಲೆಗಳತ್ತ ಹೆಚ್ಚುತ್ತಿರುವ ಒಲವು ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು, ಖಾಲಿ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಡಿಜಿಟಲ್ ಶಿಕ್ಷಣ ಸೇರಿದಂತೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು” ಎಂದು ಆಗ್ರಹಿಸಿದರು.
“ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ವಿಶೇಷ ಅಭಿಯಾನ ನಡೆಸುವುದರ ಜೊತೆಗೆ, ಕಡಿಮೆ ದಾಖಲಾತಿ ಹೊಂದಿರುವ ಶಾಲೆಗಳ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು. ಶಾಲೆಗಳನ್ನು ಮುಚ್ಚುವ ಬದಲು ಅವುಗಳನ್ನು ಬಲಪಡಿಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸಲು ಸರ್ಕಾರ ಆದ್ಯತೆ ನೀಡಬೇಕು” ಎಂದು ಮಾಧ್ಯಮದ ಮೂಲಕ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಜೂನ್ ಅಂತ್ಯದ ಬಳಿಕ ಪ್ರಕಟವಾಗಲಿರುವ ಅಂತಿಮ ಪ್ರವೇಶ ಅಂಕಿ-ಅಂಶಗಳು ಪರಿಸ್ಥಿತಿಯ ನಿಜವಾದ ಚಿತ್ರಣ ನೀಡಲಿವೆ. ಆದರೆ ಈಗಾಗಲೇ ಹೊರಬಿದ್ದಿರುವ ಮಾಹಿತಿಯೇ ದಕ್ಷಿಣ ಕನ್ನಡದಲ್ಲಿ ಸರ್ಕಾರಿ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಭವಿಷ್ಯದ ಕುರಿತು ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟ, ವಿಶ್ವಾಸ ಮತ್ತು ಆಧುನಿಕ ಸೌಲಭ್ಯಗಳ ಮೂಲಕ ಸರ್ಕಾರಿ ಶಾಲೆಗಳನ್ನು ಮತ್ತೊಮ್ಮೆ ಪೋಷಕರ ಮೊದಲ ಆಯ್ಕೆಯನ್ನಾಗಿ ರೂಪಿಸುವ ಸವಾಲು ಸರ್ಕಾರ ಮತ್ತು ಸಮಾಜದ ಮುಂದಿದೆ.

ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




