ಶಿವಪ್ರಸಾದ್ ಅವರು ನಮ್ಮನ್ನಗಲಿದ್ದಾರೆ. ಆದರೆ ಅವರು ಬಿಟ್ಟುಹೋಗಿರುವ ಶೂನ್ಯ ಕೇವಲ ಚಿತ್ರಕಲಾ ರಂಗಕ್ಕೆ ಮಾತ್ರ ಸೀಮಿತವಾದದ್ದಲ್ಲ. ರೈತ-ದಲಿತ ಹೋರಾಟಗಳ ಬೀದಿಯಿಂದ ಹಿಡಿದು, ವಾಸ್ತುಶಿಲ್ಪದ ತಾಂತ್ರಿಕತೆಯವರೆಗೆ, ವೈಚಾರಿಕತೆಯಿಂದ ಹಿಡಿದು ಅಂತರಂಗದ ತತ್ವಚಿಂತನೆಯವರೆಗೆ ಹಲವು ಕ್ಷೇತ್ರಗಳಲ್ಲಿ ತಾವಿದ್ದಷ್ಟೂ ದಿನ ಗಾಢವಾಗಿ ತೊಡಗಿಸಿಕೊಂಡಿದ್ದ ಜೀವ ಅದು.
ಶಿವಪ್ರಸಾದ್ ಅವರಿಗೆ ಹನ್ನೆರಡನೇ ವಯಸ್ಸಿನಲ್ಲೇ ಕಲಾವಿದನಾಗಬೇಕೆಂಬ ಹಂಬಲವಿತ್ತು. ಶಾಲಾ ದಿನಗಳಲ್ಲಿ ಬಿಡಿಸಿದ ಚಿತ್ರಗಳು, ಕಲಾವಿದರ ಜೀವನಚರಿತ್ರೆಗಳ ಓದು ಕಲೆಯ ಬಗೆಗಿನ ಆಸಕ್ತಿಯನ್ನು ಗಟ್ಟಿಗೊಳಿಸಿತ್ತು. ಪೋಷಕರ ಒತ್ತಾಯಕ್ಕೆ ಮಣಿದು ಎಂಜಿನಿಯರಿಂಗ್ ಸೇರಿದ್ದರೂ ಅಲ್ಲಿನ ಜಡತ್ವಕ್ಕೆ ಅವರ ಮನಸ್ಸು ಒಗ್ಗಲಿಲ್ಲ. ಕೊನೆಗೆ ಕಲೆಯ ಹುಡುಕಾಟದಲ್ಲಿ ಮುಂಬೈನ ಸರ್ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್ ಸೇರಿದರು. ಮುಂಬೈ ನಗರವೇ ಅವರಿಗೆ ಒಂದು ದೊಡ್ಡ ಪಾಠಶಾಲೆಯಾಯಿತು. ಟಾಟಾ-ಬಿರ್ಲಾಗಳ ಅತಿಯಾದ ಶ್ರೀಮಂತಿಕೆ ಮತ್ತು ಕೊಳೆಗೇರಿಗಳ ತೀವ್ರ ಬಡತನದ ಮುಂಬೈ ನಗರ ಅವರ ಒಳನೋಟವನ್ನು ವಿಸ್ತರಿಸಿತು. ಅಕ್ಬರ್ ಪದಮ್ಸೀ, ವಿ.ಎಸ್. ಗಾಯ್ತೊಂಡೆಯಂತಹ ಶ್ರೇಷ್ಠ ಕಲಾವಿದರ ಒಡನಾಟದಲ್ಲಿ ಕಲಾದೃಷ್ಟಿ ರೂಪಿತವಾಯಿತು.
ಡಿಪ್ಲೊಮಾ ಮುಗಿದ ಮೇಲೆ ಶಿವಪ್ರಸಾದ್ ಬೆಂಗಳೂರಿಗೆ ಬಂದರಾದರೂ ನಗರದಲ್ಲಿ ಉಳಿಯದೆ ಹಾಸನ ಸಮೀಪವಿರುವ ತಮ್ಮ ಹಳ್ಳಿಯಲ್ಲಿದ್ದ ತಂದೆಯವರ ತೋಟಕ್ಕೆ ನೆಲೆ ಬದಲಿಸಿದರು. ಮುಂಬೈನಲ್ಲಿದ್ದಾಗ ಅಲ್ಲಿನ ಪ್ರಭಾವದಿಂದ ಅಬ್‌ಸ್ಟ್ರಾಕ್ಟ್ (ಅಮೂರ್ತ) ಚಿತ್ರಗಳನ್ನು ಬಿಡಿಸುತ್ತಿದ್ದ ಅವರಿಗೆ ಹಳ್ಳಿಯ ಪರಿಸರ ಹೊಸ ದೃಷ್ಟಿಕೋನ ನೀಡಿತು. ತಮ್ಮ ಅಬ್‌ಸ್ಟ್ರಾಕ್ಟ್ ಚಿತ್ರಗಳಿಗೆ ಗ್ರಾಮೀಣರ ಪ್ರತಿಕ್ರಿಯೆಗಳನ್ನು ಕಂಡು, “ನನ್ನ ಸುತ್ತಲಿರುವ ಜನರನ್ನು ತಲುಪಲು ಸಾಧ್ಯವಾಗದಿದ್ದರೆ ನಾನು ಚಿತ್ರ ಬಿಡಿಸಿ ಏನು ಪ್ರಯೋಜನ?” ಎಂದು ಪ್ರಶ್ನಿಸಿಕೊಂಡರು. ಈ ಆತ್ಮಾವಲೋಕನ ಕಲಾ ಶೈಲಿಯಲ್ಲಿ ಬದಲಾವಣೆ ತಂದಿತು. ಮೊದಮೊದಲು ದೊಡ್ಡ ಕ್ಯಾನ್ವಾಸ್‌ಗಳಲ್ಲಿ ಅವರು ಬಿಡಿಸಿದ ಪುರುಷ ನಗ್ನಚಿತ್ರಗಳು ಕಲಾ ಲೋಕದಲ್ಲಿ ಅವರಿಗೆ ದೊಡ್ಡ ಖ್ಯಾತಿಯನ್ನು ತಂದಿದ್ದವು. ನಂತರ ತಾವು ಕ್ಯಾಮೆರಾದಲ್ಲಿ ಸೆರೆಹಿಡಿದ ಹಳ್ಳಿಯ ಜನರ ಮತ್ತು ಪರಿಸರದ ಚಿತ್ರಗಳನ್ನು ಕ್ಯಾನ್ವಾಸ್ ಮೇಲೆ ತರಲು ಆರಂಭಿಸಿದರು. ಆದರೆ, ಇವರ ಕೃತಿಗಳು ತಾವೇ ತೆಗೆದ ಛಾಯಾಚಿತ್ರಗಳ ಯಾಂತ್ರಿಕ ನಕಲಾಗಿರುತ್ತಿರಲಿಲ್ಲ, ಆ ಛಾಯಾಗ್ರಹಣದ ವಾಸ್ತವಿಕ ಮಾಹಿತಿಯನ್ನು ಸಂಪೂರ್ಣವಾಗಿ ಮೀರಿ, ಹೊಸದೊಂದು ತಾತ್ವಿಕ ಕಲಾಭಿವ್ಯಕ್ತಿಯಾಗಿ ರೂಪಾಂತರಗೊಳ್ಳುತ್ತಿದ್ದವು.

ಆರಂಭದಲ್ಲಿ ಅವರ ಕಲೆಯ ಮೇಲೆ ಸಮಾಜವಾದಿ ಚಿಂತನೆಗಳ ಪ್ರಭಾವವಿತ್ತು. ಗಾಂಧೀಜಿ, ರಾಮ್ ಮನೋಹರ್ ಲೋಹಿಯಾ ಅವರ ವಿಚಾರಗಳಿಗೆ ಆಕರ್ಷಿತರಾಗಿದ್ದ ಅವರು, ರೈತ ಸಂಘದ ನಾಯಕ ಪ್ರೊ. ನಂಜುಂಡಸ್ವಾಮಿ ಅವರೊಂದಿಗೆ ನಿಕಟ ಒಡನಾಟ ಹೊಂದಿದ್ದರು. ಈ ಸಾಮಾಜಿಕ ಚಳವಳಿಗಳು ಅವರ ಕೃತಿಗಳಲ್ಲಿ ಜನರ ಕಷ್ಟ-ಸುಖ ಹಾಗೂ ಬದುಕಿನ ಹೋರಾಟಗಳನ್ನು ಬಿಂಬಿಸಲು ಕಾರಣವಾಯಿತು. ಆರ್ಥಿಕ ಪ್ರಗತಿಯೊಂದಿಗೆ ಭ್ರಷ್ಟಾಚಾರ ಮತ್ತು ಬಡತನ ಒಟ್ಟೊಟ್ಟಿಗೇ ಇರುವ ಸಮಾಜದ ವಿರೋಧಾಭಾಸಗಳನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಪ್ರೊ. ನಂಜುಂಡಸ್ವಾಮಿ ಅವರೊಂದಿಗೆ ಇಡೀ ರಾಜ್ಯ ಪ್ರವಾಸ ಮಾಡಿ ರೈತ ನಾಯಕರ ವಿಚಾರಗಳನ್ನು ಪ್ರಚಾರ ಮಾಡಿದರು. ಶಿವಪ್ರಸಾದ್ ರೈತರ ಕಷ್ಟಗಳನ್ನು ಹತ್ತಿರದಿಂದ ಎದುರಿಸಿದ್ದರು. ಮಾರುಕಟ್ಟೆ ವೆಚ್ಚಕ್ಕಿಂತ ಕಡಿಮೆ ಬೆಲೆ ಸಿಗುವ ತಳಮಳ, ಬ್ಯಾಂಕುಗಳು ಸಾಲದ ನೆಪದಲ್ಲಿ ಕಾನೂನುಬಾಹಿರವಾಗಿ ಜಮೀನು-ಉಪಕರಣ ಜಪ್ತಿ ಮಾಡುವ ಶೋಷಣೆಗಳನ್ನು ಕಂಡಿದ್ದರು. 1980ರ ದಶಕದ ಆರಂಭದ ತುರ್ತುಪರಿಸ್ಥಿತಿಯ ನಂತರದ ರೈತ ಚಳವಳಿಯಲ್ಲಿ ಐದು ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯರಾಗಿದ್ದರು. ಬ್ಯಾಂಕುಗಳು ಜಪ್ತಿ ಮಾಡಿದ್ದ ರೈತರ ಉಪಕರಣಗಳನ್ನು ಮರಳಿ ಕೊಡಿಸಲು ಗೋದಾಮುಗಳ ಬೀಗ ಒಡೆದು ಮರುಜಪ್ತಿ ಹೋರಾಟ ನಡೆಸಿದರು. ಈ ಕಾರಣಕ್ಕಾಗಿ ಹಲವು ಬಾರಿ ಬಂಧನಕ್ಕೊಳಗಾಗಿ ಒಮ್ಮೆ 25 ದಿನಕ್ಕೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದರು. ನಂತರದ ದಿನಗಳಲ್ಲಿ ಸರ್ಕಾರ ಇವರ ಮೇಲಿದ್ದ ಪ್ರಕರಣಗಳನ್ನು ವಜಾಗೊಳಿಸಿತು.
ಇದನ್ನು ಓದಿದ್ದೀರಾ?: ಕೆ.ಟಿ. ಶಿವಪ್ರಸಾದ್ ಹೇಳಿದ ‘ಮಾಯಾಕನ್ನಡಿ’ ಕತೆ
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೃತಿಗಳ ಓದಿನಿಂದ ಪ್ರಭಾವಿತರಾಗಿ ದಲಿತ ಸಂಘರ್ಷ ಸಮಿತಿ ಸೇರಿ ಕ್ಷೇತ್ರ ಕಾರ್ಯಕರ್ತರಾಗಿ ಕೆಲಸ ಮುಂದುವರಿಸಿದರು. ಮೈಸೂರು ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಕೇಂದ್ರದ ಪೀಠದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಮೈಸೂರಿನ ಮಾನವ ಕಳ್ಳಸಾಗಣೆ ನಿರ್ಮೂಲನಾ ಸಂಸ್ಥೆ ‘ಒಡನಾಡಿ’ಯ ಟ್ರಸ್ಟಿಯಾಗಿ ಲೈಂಗಿಕ ವೃತ್ತಿನಿರತ ಮಹಿಳೆಯರ ಪುನರ್ವಸತಿ, ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದರು. ಸಮಾಜದ ಈ ಎಲ್ಲ ನೋವು, ಶೋಷಣೆಗಳನ್ನು ಕಲಾಕೃತಿಗಳಲ್ಲಿ ಬಿಂಬಿಸಿದರು. ಹಿಂದೂ ಧರ್ಮದ ಜಾತಿ ಪದ್ಧತಿಯ ಮಿತಿಗಳನ್ನು ನಿರಾಕರಿಸಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಕಲೆಯ ಮೂಲಕ ಬೌದ್ಧ ದರ್ಶನದ ಸೌಂದರ್ಯಶಾಸ್ತ್ರವನ್ನು ವಿಸ್ತರಿಸುವ ಉದ್ದೇಶದಿಂದ ಸ್ನೇಹಿತರೊಂದಿಗೆ ಸೇರಿ ‘ಪೂರ್ಣಚಂದ್ರ ಬೋಧಿ’ ಸಂಸ್ಥೆ ಪ್ರಾರಂಭಿಸಿದರು. ಈ ಸಂಸ್ಥೆಯಿಂದ ಕುಪ್ಪಳ್ಳಿಯಲ್ಲಿ ಎರಡು ದಿನಗಳ ಕಮ್ಮಟವನ್ನು ಆಯೋಜಿಸಿದ್ದರು.
ಚಳವಳಿಯ ಸಿದ್ಧಾಂತಗಳು ತಮ್ಮ ಕಲೆಯನ್ನು ನಿಯಂತ್ರಿಸದಂತೆ ಶಿವಪ್ರಸಾದ್ ಪ್ರಜ್ಞಾಪೂರ್ವಕವಾಗಿ ದೂರವುಳಿದಿದ್ದರು. ಸಿದ್ಧಾಂತದ ಮಿತಿಗೆ ಒಳಪಟ್ಟರೆ ಕಲೆಗೊಂದು ಚೌಕಟ್ಟು ಬೀಳುತ್ತದೆ ಎಂಬುದು ಅವರ ನಿಲುವಾಗಿತ್ತು. ದೇಶದ ಸ್ಥಿತಿಗತಿಗಳನ್ನು ವಿಶ್ಲೇಷಿಸುವ, ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯ ಕರ್ತವ್ಯಪ್ರಜ್ಞೆಯೇ ಅವರ ಕಲೆಯ ವಿಶಿಷ್ಟತೆಯನ್ನು ರೂಪಿಸಿತ್ತು. ಕೃತಿಯಲ್ಲಿ ಕೇವಲ ಸಿದ್ಧಾಂತಗಳನ್ನು ಹೇಳಿದರೆ ಅದು ಬರಡು ಘೋಷಣೆಯಾಗುತ್ತದೆಯೇ ಹೊರತು ಕಲೆಯಾಗುವುದಿಲ್ಲ. ಒಂದು ಕರಪತ್ರಕ್ಕೂ ಮತ್ತು ಶ್ರೇಷ್ಠ ಸಾಹಿತ್ಯ ಕೃತಿಗೂ ಇರುವಷ್ಟೇ ಅಂತರ, ಪ್ರಚಾರ ಸಾಮಗ್ರಿಗೂ ಹಾಗೂ ನೈಜ ಕಲಾಕೃತಿಗೂ ಇರುತ್ತದೆ ಎಂಬುದು ಅವರ ದೃಢ ನಂಬಿಕೆಯಾಗಿತ್ತು. ಶಿವಪ್ರಸಾದ್ ತಮ್ಮ ಕಾಲಕ್ಕಿಂತ ಮುಂಚೂಣಿಯಲ್ಲಿದ್ದ ಅತ್ಯಂತ ನುರಿತ ಕಲಾವಿದರಾಗಿದ್ದರು. ಇವರ ಕಲಾಕೃತಿಗಳು ದೇಶದ ಪ್ರಮುಖ ಗ್ಯಾಲರಿಗಳಲ್ಲಿ ಪ್ರದರ್ಶನಗೊಂಡು, ಕಲಾ ಸಂಗ್ರಾಹಕರಿಂದ ಭಾರಿ ಬೆಲೆಗೆ ಕೊಳ್ಳಲ್ಪಡುತ್ತಿದ್ದವು. ಆದರೆ, ಒಂದು ಹಂತದ ನಂತರ ಅವರು ಈ ಗ್ಯಾಲರಿಗಳ ವಾಣಿಜ್ಯ ಜಾಲದಿಂದಲೂ ದೂರ ಸರಿದರು.
ಚಿತ್ರಕಲೆಯ ಜೊತೆಗೆ ವಾಸ್ತುಶಿಲ್ಪದಲ್ಲೂ ತೊಡಗಿಸಿಕೊಂಡಿದ್ದ ಶಿವಪ್ರಸಾದ್ ಅವರಿಗೆ ಸ್ನೇಹಿತ ಪೂರ್ಣಚಂದ್ರ ತೇಜಸ್ವಿ ಅವರ ಮನೆ ವಿನ್ಯಾಸಗೊಳಿಸುವ ಮೂಲಕ ಈ ಕ್ಷೇತ್ರ ಪರಿಚಯವಾಯಿತು. ನಂತರ ಅನೇಕ ವಾಸ್ತುಶಿಲ್ಪವಿನ್ಯಾಸಗಳನ್ನು ಮಾಡಿದರು, ಒಂದು ಹಂತದಲ್ಲಿ ಆರ್ಥಿಕವಾಗಿ ಇದು ಅವರ ಜೀವನೋಪಾಯಕ್ಕೆ ನೆರವಾಗಿತ್ತು. ನನ್ನ ಮನೆಯ ವಿನ್ಯಾಸವನ್ನೂ ಅವರೇ ಮಾಡಿಕೊಟ್ಟಿದ್ದರು. ಕಲೆಯ ಮೇಲಿನ ನಿಷ್ಠೆಯಿಂದಾಗಿ ಯಾವುದೇ ಸಂಭಾವನೆ ಪಡೆಯದೆ, ಕಟ್ಟಡ ಮುಗಿಯುವವರೆಗೂ ಪ್ರತಿವಾರ ಹಾಸನದಿಂದ ಬೆಂಗಳೂರಿಗೆ ಪ್ರಯಾಣಿಸಿ ತಾವೇ ಖುದ್ದಾಗಿ ಮಾರ್ಗದರ್ಶನ ಮಾಡುತ್ತಿದ್ದರು. ವಾಸ್ತುಶಿಲ್ಪದ ಒಡನಾಟ ಅವರ ಚಿತ್ರಗಳಲ್ಲಿ ಸ್ಥಳ (space) ಮತ್ತು ಆಕಾರದ (form) ಪ್ರಯೋಗಗಳಿಗೆ ಹೊಸ ದೃಶ್ಯ ಆಯಾಮಗಳನ್ನು ಒದಗಿಸಿತು. ಕುಪ್ಪಳಿಯ ಕುವೆಂಪು ಸ್ಮಾರಕ (ಸಮಾಧಿ) ವಿನ್ಯಾಸಗೊಳಿಸುವಾಗ ಕುವೆಂಪು ಅವರದ್ದೇ ಮುನ್ನುಡಿಯ ಸಾಲುಗಳಿಂದ ಪ್ರೇರಿತರಾಗಿ “ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ… ಯಾವುದೂ ಸಂಪೂರ್ಣವಲ್ಲ, ಯಾವುದೂ ಅಪೂರ್ಣವಲ್ಲ” ಎಂಬ ದರ್ಶನಕ್ಕೆ ಮುಖಾಮುಖಿಯಾಗಿಸುವಂತೆ ಗ್ರಾನೈಟ್ ಬ್ಲಾಕ್‌ಗಳನ್ನು ಸಂಪೂರ್ಣವಾಗಿ ನುಣುಪುಗೊಳಿಸದೆ ಅರೆಬರೆಯಾಗಿ ಉಳಿಸಿಕೊಂಡೇ ಆ ಸ್ಮಾರಕವನ್ನು ರೂಪಿಸಿದರು. ಮುಗಿದಿರುವುದೂ ಅಲ್ಲ, ಮುಗಿಯದೆ ಇರುವುದೂ ಅಲ್ಲದ ಆ ಸ್ಥಿತಿ ಜಗತ್ತಿನ ಅಪೂರ್ಣತೆಯನ್ನೇ ಬಿಂಬಿಸುವಂತಿತ್ತು.
ತಮ್ಮ ಚಿತ್ರಗಳು ಅತಿಯಾಗಿ ನೈಜವಾಗುತ್ತಿವೆ (realistic) ಎನಿಸಿದಾಗ ಶಿವಪ್ರಸಾದ್, ಜಗತ್ತಿನ ಅಪೂರ್ಣತೆಯನ್ನು ಬಿಂಬಿಸಲು ಇಂಪಾಸ್ಟೋ (Impasto) ಶೈಲಿಗೆ ಕೈಹಾಕಿದರು. ಜಾನಪದ ತೊಗಲುಗೊಂಬೆಗಳೊಂದಿಗೆ ಸೂಪರ್‌ಮ್ಯಾನ್, ಸ್ಪೈಡರ್‌ಮ್ಯಾನ್‌ನಂತಹ ಪಾಪ್ ಸಂಸ್ಕೃತಿಯ ಪಾತ್ರಗಳನ್ನು ಜೋಡಿಸುತ್ತಾ, ದ್ವಿಮಿತೀಯ ಸಹಜತೆ ಹಾಗೂ ತ್ರಿಮಿತೀಯ ಭ್ರಮೆಯ ನಡುವೆ ತಮ್ಮದೇ ಆದ ಮಧ್ಯಮ ಮಾರ್ಗ ಕಂಡುಕೊಂಡರು. ಬುದ್ಧನ ತತ್ವಗಳಿಂದ ಪ್ರಭಾವಿತರಾಗಿದ್ದ ಅವರು, ಕಲೆ ವಿಶ್ಲೇಷಣೆಗಿಂತ ಹೆಚ್ಚಾಗಿ ಅನುಭವಕ್ಕೆ ನಿಲ್ಲುವಂಥದ್ದು ಎಂದು ನಂಬಿದ್ದರು. ಈ ದರ್ಶನಕ್ಕೆ ಪೂರಕವಾಗಿ, ರೆನೆ ಮ್ಯಾಗ್ರಿಟ್ ಮತ್ತು ಡೇವಿಡ್ ಸಾಲೆ (David Salle) ಅವರ ಶೈಲಿಗಳಿಂದ ಪ್ರೇರಿತರಾಗಿ ಕಾಲ, ದೇಶ ಮತ್ತು ಬದುಕಿನ ವಿರೋಧಾಭಾಸಗಳನ್ನೇ ಕೃತಿಗಳಾಗಿಸಿದರು. ಕಣ್ಣನ್ನು ಅಂತರಂಗದ ಕನ್ನಡಿ ಎನ್ನುವ ಜಗತ್ತಿನಲ್ಲಿ, ಇವರ ಚಿತ್ರಗಳು ಆ ಅಂತರಂಗದ ಬದಲು ಮುಕ್ತ ಆಕಾಶವನ್ನೋ ಅಥವಾ ಒಂದೇ ಸಮತಲದ ಕತ್ತಲೆ-ಬೆಳಕನ್ನೋ ಮುಖಾಮುಖಿಯಾಗಿಸುತ್ತಾ ವೀಕ್ಷಕನ ದೃಶ್ಯ ಸ್ಥಿರತೆಯನ್ನೇ ಅಲ್ಲಾಡಿಸುತ್ತಿದ್ದವು. ಈ ಕೃತಿಗಳು ಕೇವಲ ದೃಶ್ಯ ಪ್ರಯೋಗಗಳಾಗಿರಲಿಲ್ಲ, ಬದುಕಿನ ದುಃಖ-ಸಂಕಟ ಹಾಗೂ ಸಂಭ್ರಮಗಳ ನಡುವಿನ ಅಸಂಖ್ಯಾತ ಮಾನವೀಯ ಅನುಭವಗಳನ್ನು ತಾವಿದ್ದ ಸ್ಥಿತಿಯಲ್ಲೇ ಕಲೆಯಾಗಿಸುವ ಆಳವಾದ ಹಂಬಲವಾಗಿದ್ದವು.
ಶಿವಪ್ರಸಾದ್ ಅವರ ಚಿಂತನೆಗಳ ಮೇಲೆ ಅಲ್ಲಮಪ್ರಭುವಿನ ವಚನಗಳ ಗಾಢ ಪ್ರಭಾವವಿತ್ತು. ಅಲ್ಲಮನ “ನಾನೆಂಬುದು ಪ್ರಮಾಣ, ನೀನೆಂಬುದು ಪ್ರಮಾಣ… ಗುಹೇಶ್ವರನೆಂಬುದಾ ಪ್ರಮಾಣ” ಎಂಬ ನಿಲುವಿನಂತೆ, ಮನುಷ್ಯನ ಅಹಂ ಹಾಗೂ ಅಸ್ತಿತ್ವದ ಎಲ್ಲ ಪ್ರಮಾಣಗಳನ್ನು ನಿರಾಕರಿಸುವ ದರ್ಶನವನ್ನು ಅವರು ಪ್ರೀತಿಸುತ್ತಿದ್ದರು. ಈ ಕಾರಣಕ್ಕಾಗಿಯೇ ನಾಗಾರ್ಜುನನ “ನೋಟ ತನ್ನನ್ನು ತಾನು ನೋಡಿಕೊಳ್ಳದ್ದು; ಏನನ್ನು ನೋಡಿತು?” ಎಂಬ ತಾತ್ವಿಕ ಪ್ರಶ್ನೆ ಅವರ ಕೃತಿಗಳ ದೃಶ್ಯ ಭಾಷೆಯಾಗಿ ರೂಪಾಂತರಗೊಳ್ಳುತ್ತಿತ್ತು.
ಶಿವಪ್ರಸಾದ್ ಅವರ ಕಲ್ಪನೆಯಲ್ಲಿ ಗ್ರಾಮೀಣ ಭಾಗದ ಎತ್ತಿನ ಗಾಡಿಗಳ ಎರಡು ಪಾರ್ಶ್ವಗಳನ್ನು ಕಲಾಭಿವ್ಯಕ್ತಿಗೆ ಬಳಸಿಕೊಂಡರೆ, ಕಲೆಯು ಹೆದ್ದಾರಿಗಳಲ್ಲಿ ಸಾಗುವವರ ಹಾಗೂ ಹಳ್ಳಿಗರ ಮನಸ್ಸಿನಾಳಕ್ಕೆ ಅಪ್ರಜ್ಞಾಪೂರ್ವಕವಾಗಿ ಇಳಿಯಬಲ್ಲದು ಎಂಬುದು ಅವರ ಆಲೋಚನೆಯಾಗಿತ್ತು. ಇದಕ್ಕೆ ಲಲಿತಕಲಾ ಅಕಾಡೆಮಿಯ ಸಹಯೋಗ ದೊರೆತು ಮಂಡ್ಯದ ಕಿಲಾರದಲ್ಲಿ ‘ಜನಪದ ಶ್ರುತಿ ಆಧುನಿಕ ಕೃತಿ’ ಎಂಬ ಹತ್ತು ದಿನಗಳ ಅಪರೂಪದ ಕಲಾ ಶಿಬಿರ ಏರ್ಪಟ್ಟಿತು. ಹಿರಿಯ-ಕಿರಿಯ ಕಲಾವಿದರ ಜೊತೆಗೂಡಿ ಶಿವಪ್ರಸಾದ್ ಕೂಡ ಆ ಗಾಡಿಗಳ ಮೇಲೆ ತಮ್ಮ ಪ್ರಸಿದ್ಧ ‘ಮೈಲಾರಲಿಂಗ’ ಚಿತ್ರಗಳಿಗೆ ಕಲಾತ್ಮಕ ರೂಪ ನೀಡಿದ್ದರು. ಗ್ಯಾಲರಿಗಳ ನಾಲ್ಕು ಗೋಡೆಗಳಿಂದ ಹೊರಬಂದು ಹಳ್ಳಿಯ ಬೀದಿಗಳಲ್ಲಿ ಜಾನಪದ ವಾದ್ಯಗಳೊಂದಿಗೆ ಸಾಗಿದ ಆ ಕಲಾ ಯಾತ್ರೆ, ಏಕಕಾಲಕ್ಕೆ ಅಸಂಖ್ಯಾತ ಜನಸಾಮಾನ್ಯರನ್ನು ತಲುಪಿದ ಸಾಂಸ್ಕೃತಿಕ ಸಂಭ್ರಮವಾಗಿ ಜನಮನದಲ್ಲಿ ಉಳಿಯಿತು.
ಬೆಂಗಳೂರಿನಲ್ಲಿ 2003ರಲ್ಲಿ ನಡೆದ ‘ಖೋಜ್’ ಅಂತಾರಾಷ್ಟ್ರೀಯ ಕಲಾ ಕಾರ್ಯಾಗಾರದಲ್ಲಿ ಶಿವಪ್ರಸಾದ್ ಸಿದ್ಧಪಡಿಸಿದ ‘Confession’ ಸ್ಥಾಪನಾ ಕಲೆಯು (Installation) ಕಹಿ ನೆನಪುಗಳಿಂದ ಮುಕ್ತಿಪಡೆಯುವ ವಿಶಿಷ್ಟ ಪ್ರಯೋಗವಾಗಿತ್ತು. ಗ್ಯಾಲರಿಯ ಮಧ್ಯದಲ್ಲಿದ್ದ ಆ ಬಾಗಿಲಿಗೆ ವೀಕ್ಷಕರು ತಂತಮ್ಮ ನೋವಿನ ನೆನಪುಗಳ ಸಂಕೇತವಾಗಿ ಬೀಗ ಹಾಕಿ, ಅದರ ಕೀಲಿಕೈಯನ್ನು ಎಲ್ಲಾದರೂ ದೂರ ಎಸೆದುಬಿಡಬೇಕಿತ್ತು. ಮೊದಲ ಎರಡು ದಿನಗಳಲ್ಲಿ ವೀಕ್ಷಕರು ಮುನ್ನೂರ ಐವತ್ತಕ್ಕೂ ಹೆಚ್ಚು ಜನರ ಭಾವನೆಗಳು ಆ ಬಾಗಿಲಿನ ಮೇಲೆ ಬೀಗದ ರೂಪದಲ್ಲಿ ಅಚ್ಚಾಗಿದ್ದವು. ಜನರು ಬೀಗ ಹಾಕಿದಂತೆಲ್ಲಾ ಸಂಖ್ಯೆ ಹೆಚ್ಚುತ್ತಾ ಅದರ ದೃಶ್ಯ ರೂಪವೇ ಬದಲಾಗುತ್ತಿತ್ತು, ಆರಂಭದಲ್ಲಿ ನಕಾರಾತ್ಮಕತೆಯ ಸಂಕೇತವಾಗಿದ್ದ ಆ ಮರದ ಚೌಕಟ್ಟು, ಕೊನೆಗೆ ಸಕಾರಾತ್ಮಕ ಶಕ್ತಿಯನ್ನು ಹೊರಹೊಮ್ಮಿಸುವ ಅಪರೂಪದ ಶಿಲ್ಪವಾಗಿ (Sculpture) ರೂಪಾಂತರಗೊಂಡಿತು. ಎಂದಿಗೂ ಮುಗಿಯದ ಈ ನಿರಂತರ ಪ್ರಕ್ರಿಯೆಯ ಮೂಲಕ ಆ ಕೃತಿಯು ನೆನಪು ಮತ್ತು ಮರೆವಿನ ನಡುವಿನ ಜಟಾಪಟಿಯನ್ನು ತಣ್ಣಗೇ ಬಿಂಬಿಸುವಂತಿತ್ತು.
ವಿಜ್ಞಾನ ಮತ್ತು ತತ್ವಶಾಸ್ತ್ರದ (Philosophy) ನಿರಂತರ ಅನ್ವೇಷಣೆ ಶಿವಪ್ರಸಾದ್ ಅವರ ಬದುಕಿನ ದಾರ್ಶನಿಕ ಆಯಾಮವಾಗಿತ್ತು. ಅನೇಕ ವೈಜ್ಞಾನಿಕ ಒಳನೋಟಗಳ ಜೊತೆಗೆ ವಿಜ್ಞಾನ ಕಾದಂಬರಿಗಳು (Science Fiction) ಮತ್ತು ಸಿನಿಮಾಗಳ ದೃಶ್ಯ ಸಾಧ್ಯತೆಗಳನ್ನೂ ಹಂಚಿಕೊಳ್ಳುತ್ತಿದ್ದ ಅವರು, ತತ್ವಶಾಸ್ತ್ರವನ್ನು ಜ್ಞಾನದ ಶೋಧನೆಗೆ ಇರುವ ಒಂದು ಜೀವಂತ ಮಾರ್ಗವಾಗಿ ಸರಳವಾಗಿ ದಾಟಿಸುತ್ತಿದ್ದರು. ವಿಜ್ಞಾನದ ತಾರ್ಕಿಕತೆ, ತತ್ವಶಾಸ್ತ್ರದ ಆಳ ಹಾಗೂ ಸಮಕಾಲೀನ ಬದುಕಿನ ಕಟು ವಾಸ್ತವಗಳಿಗೆ ತುಡಿಯುತ್ತಿದ್ದ ಅವರ ಸಂವೇದನಾಶೀಲತೆಯೇ ಅವರನ್ನು ಒಬ್ಬ ವಿಶಿಷ್ಟ ಕಲಾವಿದನಾಗಿ ರೂಪಿಸಿತ್ತು.

ಶಿವಪ್ರಸಾದ್ ಅವರಿಗೆ ಛಾಯಾಗ್ರಹಣದಲ್ಲೂ ಒಳ್ಳೆಯ ಹಿಡಿತವಿತ್ತು. ಕೈಯಲ್ಲೊಂದು ಕ್ಯಾಮೆರಾ ಹಿಡಿದು ಊರೂರು ಅಲೆಯುತ್ತಿದ್ದ ಅವರು, ಅಲ್ಲಿನ ಬದುಕಿನ ಕ್ಷಣಗಳನ್ನು ಚಿತ್ರಗಳಾಗಿಸುತ್ತಿದ್ದರು; ಮುಂದೆ ತಮ್ಮ ಪೇಂಟಿಂಗ್‌ಗಳಿಗೆ ಇವೇ ಮುಖ್ಯ ರೆಫರೆನ್ಸ್ ಆಗಿ ಬಳಕೆಯಾಗುತ್ತಿದ್ದವು. ಆದರೆ, ಅವರು ಫೋಟೋದಲ್ಲಿ ಇದ್ದದ್ದನ್ನು ಇದ್ದ ಹಾಗೆ ಕ್ಯಾನ್ವಾಸ್ ಮೇಲೆ ನಕಲು ಮಾಡುತ್ತಿರಲಿಲ್ಲ. ಆರಂಭದಲ್ಲಿ ದೃಶ್ಯಗಳನ್ನು ದಾಖಲಿಸಿಕೊಳ್ಳಲು ಬಳಸುತ್ತಿದ್ದ ಇದೇ ಕ್ಯಾಮೆರಾ ನೋಟ, ಆಮೇಲೆ ಅವರ ಕೈಯಲ್ಲಿ ಎರಡು ಬೇರೆ ಬೇರೆ ದೃಶ್ಯಗಳನ್ನು ಮುಖಾಮುಖಿಯಾಗಿಸುವ (Juxtapose) ವಿಶಿಷ್ಟ ಶೈಲಿಯಾಗಿ ಬದಲಾಯಿತು. ತದ್ವಿರುದ್ಧ ಧ್ರುವಗಳನ್ನು ಎದುರುಬದುರು ನಿಲ್ಲಿಸುವ ‘ಆಂಟಿಪೋಡೀಸ್’ (Antipodes) ಮಾದರಿಯಲ್ಲಿ, ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಚಿತ್ರಗಳನ್ನು ಒಂದೇ ಚೌಕಟ್ಟಿನೊಳಗೆ ಉಲ್ಟಾ-ಪಲ್ಟಾ ಮಾಡಿ (ತಲೆಕೆಳಗಾಗಿಸಿ) ಪಕ್ಕಪಕ್ಕದಲ್ಲಿ ಇಟ್ಟು ಹೊಸದೊಂದು ವಿಭಿನ್ನ ದೃಶ್ಯವನ್ನೇ ಅವರು ಕಟ್ಟುತ್ತಿದ್ದರು. ಈ ವಿಧಾನ ಅವರ ಚಿತ್ರಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಮೂಡಿಬರುತ್ತಿತ್ತೆಂದರೆ, ಅದು ನೋಡುವವನಲ್ಲಿ ಹೊಸದೊಂದು ಆಲೋಚನೆಯನ್ನು ಹುಟ್ಟುಹಾಕುತ್ತಿತ್ತು.
ಶಿವಪ್ರಸಾದ್ ಅವರ ಅಂತರಂಗ ಎಷ್ಟು ತೀವ್ರವಾಗಿತ್ತೋ, ಅವರ ಸ್ನೇಹಲೋಕ ಅಷ್ಟೇ ಹಸನಾಗಿತ್ತು. ಸ್ನೇಹಿತರೊಂದಿಗೆ ಗಂಟೆಗಟ್ಟಲೆ ಹರಟೆಗೆ ಕುಳಿತರೆ ಅವರೊಳಗಿನ ಅದ್ಭುತ ಹಾಸ್ಯಪ್ರಜ್ಞೆ ಹೊರಬರುತ್ತಿತ್ತು. ಅದೇ ಹರಟೆಯ ನಡುವೆ ಕೆಲವೊಮ್ಮೆ ತೀರಾ ಭಾವುಕ ಸಂಗತಿಗಳು ಬಂದಾಗ, ಅವರ ಕಣ್ಣುಗಳು ಅಷ್ಟೇ ಸಹಜವಾಗಿ ನೀರಾಗುತ್ತಿದ್ದವು. ಕಲೆಯ ಹೊರತಾಗಿಯೂ ಅವರಿಗೆ ಎಲ್ಲ ರಂಗಗಳ ಪರಿಣಿತರ ಪರಿಚಯವಿತ್ತು. ಸಾಹಿತಿಗಳೊಂದಿಗಿನ ಆಪ್ತ ಒಡನಾಟ, ಜಾಗತಿಕ ಸಿನಿಮಾ (World Cinema) ರಂಗದ ಇತಿಹಾಸ-ಬೆಳವಣಿಗೆಗಳ ನಿರಂತರ ಅರಿವು ಮತ್ತು ಸಂಗೀತವನ್ನು ಆಸ್ವಾದಿಸುವುದು ಇವೆಲ್ಲವೂ ಅವರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದ್ದವು. ಈ ವೈವಿಧ್ಯಮಯ ಆಸಕ್ತಿಗಳೇ ಅವರ ಕಲ್ಪನಾ ಶಕ್ತಿಗೆ ನಿರಂತರವಾಗಿ ಹೊಸ ರೆಕ್ಕೆಗಳನ್ನು ನೀಡುತ್ತಿದ್ದವು.
ಅವರನ್ನು ಹತ್ತಿರದಿಂದ ಬಲ್ಲವರಿಗೆ ಅವರ ವ್ಯಕ್ತಿತ್ವದ ವಿರೋಧಾಭಾಸಗಳು ಪರಿಚಯವಿರುತ್ತವೆ. ಹೊರನೋಟದ ತೀವ್ರ ಸಿಟ್ಟಿನ ಹಿಂದೆ, ಸದಾ ಆಂತರಿಕ ಧ್ಯಾನದಲ್ಲಿದ್ದಂತಹ ಒಂದು ಪ್ರಶಾಂತತೆಯಿತ್ತು. ಈ ಕೋಪ ವೈಯಕ್ತಿಕ ದ್ವೇಷದಿಂದ ಹುಟ್ಟಿದ್ದಲ್ಲ, ಜಗತ್ತಿನ ಅಸಂಬದ್ಧತೆ, ಕಲೆಯ ಬಗೆಗಿನ ಅಸಡ್ಡೆ, ವ್ಯವಸ್ಥೆಯ ಲೋಪಗಳು ಮತ್ತು ಸೋಗಲಾಡಿತನದ ವಿರುದ್ಧದ ಪ್ರತಿರೋಧವಾಗಿತ್ತು. ಕ್ಷಣಾರ್ಧದಲ್ಲಿ ಕೆಂಡದಂತೆ ಸಿಡಿಯುತ್ತಿದ್ದ ಅವರು, ಆ ಸಿಟ್ಟು ತಂದ ಹಾನಿಯನ್ನು ಸರಿಪಡಿಸಲು ವರ್ಷಗಳನ್ನೇ ತೆಗೆದುಕೊಳ್ಳುತ್ತಿದ್ದರು, ಇದರಿಂದಾಗಿ ಅನೇಕ ಸ್ನೇಹಿತರನ್ನೂ ಕಳೆದುಕೊಂಡಿದ್ದರು.
ಅವರ ನೈತಿಕ ಬದ್ಧತೆ ಹಾಗೂ ತಾತ್ವಿಕ ಕೋಪಕ್ಕೆ ವೆಂಕಟಪ್ಪ ಪ್ರಶಸ್ತಿಯನ್ನು ನಿರಾಕರಿಸಿದ ಘಟನೆಯೇ ಸಾಕ್ಷಿ. ದೃಶ್ಯಕಲಾ ರಂಗದ ಅತ್ಯುನ್ನತ ಗೌರವವಾದ ಈ ಪ್ರಶಸ್ತಿಯನ್ನು ಪಡೆದ ಸಾಧಕರು, ಅದರ ಮುಂದಿನ ವರ್ಷದ ಆಯ್ಕೆ ಸಮಿತಿಯ ಅಧ್ಯಕ್ಷರಾಗುವುದು ನಿಯಮವಾಗಿತ್ತು. ಆದರೆ, ಶಿವಪ್ರಸಾದ್ ಅವರಿಗೆ ಪ್ರಶಸ್ತಿ ಬಂದ ಮರು ವರ್ಷ ಈ ನಿಯಮವನ್ನು ಉಲ್ಲಂಘಿಸಿ ಬೇರೆಯವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ವ್ಯವಸ್ಥೆಯ ಈ ತಾರತಮ್ಯದ ವಿರುದ್ಧ ತೀವ್ರವಾಗಿ ಸಿಡಿದೆದ್ದ ಅವರು, ಕಲಾ ರಂಗದ ಘನತೆಯನ್ನು ಎತ್ತಿಹಿಡಿಯಲು ತಮಗೆ ಬಂದಿದ್ದ ಪ್ರತಿಷ್ಠಿತ ಪ್ರಶಸ್ತಿ ಪತ್ರ ಮತ್ತು ಮೂರು ಲಕ್ಷ ರೂಪಾಯಿ ನಗದು ಎರಡನ್ನೂ ಸರ್ಕಾರಕ್ಕೆ ಮರಳಿ ನೀಡಿದ್ದರು.
ಇದನ್ನು ಓದಿದ್ದೀರಾ?: ಕೆ.ಟಿ. ಶಿವಪ್ರಸಾದ್ ಎಂಬ ಕಲಾವಿದನೊಡನೆ ಕಲರವ
ಇತ್ತೀಚಿನ ದಿನಗಳಲ್ಲಿ ಅವರಿಗೆ ನೆನಪಿನ ಶಕ್ತಿ ಕ್ಷೀಣಿಸುತ್ತಾ ಬಂದಿತ್ತು. ಜೀವನವು ನೆನಪುಗಳಿಂದಲೇ ರೂಪಿತವಾಗಿದೆ ಎಂಬ ಸತ್ಯದ ಅರಿವಾಗುವುದೇ ನಮ್ಮ ಕಣ್ಣೆದುರಿನವರು ಆ ನೆನಪನ್ನು ಹಂತ ಹಂತವಾಗಿ ಕಳೆದುಕೊಳ್ಳಲು ಆರಂಭಿಸಿದಾಗ. ನೆನಪಿಲ್ಲದ ಬದುಕು ಶೂನ್ಯ. ಒಂದು ಜೀವಿತಾವಧಿಯಲ್ಲೇ ಕಾಲವು ಹೇಗೆ ‘ತಿಳಿದಿರುವ ಜಗತ್ತನ್ನು’ ‘ಕಳೆದುಹೋದ ಜಗತ್ತನ್ನಾಗಿ’ ಬದಲಿಸಬಲ್ಲದು ಎಂಬುದಕ್ಕೆ ಅವರ ಸ್ಥಿತಿ ಸಾಕ್ಷಿಯಾಗಿತ್ತು. ನಮ್ಮ ನೆನಪೇ ನಮ್ಮ ಸ್ಥಿರತೆ, ತರ್ಕ, ಭಾವನೆ ಮತ್ತು ಕೃತ್ಯಗಳ ಮೂಲ. ಅಭಿವ್ಯಕ್ತಿಸಲು ಸಾಧ್ಯವಾಗದ ಬುದ್ಧಿವಂತಿಕೆಗೆ ಬೆಲೆ ಇಲ್ಲದಂತೆ, ನೆನಪಿಲ್ಲದ ಬದುಕೂ ಅಷ್ಟೆ.

ಇಂದು ಶಿವಪ್ರಸಾದ್ ಅವರು ನಮ್ಮನ್ನಗಲಿದ್ದಾರೆ. ಆದರೆ ಅವರು ಬಿಟ್ಟುಹೋಗಿರುವ ಶೂನ್ಯ ಕೇವಲ ಚಿತ್ರಕಲಾ ರಂಗಕ್ಕೆ ಮಾತ್ರ ಸೀಮಿತವಾದದ್ದಲ್ಲ. ರೈತ-ದಲಿತ ಹೋರಾಟಗಳ ಬೀದಿಯಿಂದ ಹಿಡಿದು, ವಾಸ್ತುಶಿಲ್ಪದ ತಾಂತ್ರಿಕತೆಯವರೆಗೆ, ವೈಚಾರಿಕತೆಯಿಂದ ಹಿಡಿದು ಅಂತರಂಗದ ತತ್ವಚಿಂತನೆಯವರೆಗೆ ಹಲವು ಕ್ಷೇತ್ರಗಳಲ್ಲಿ ತಾವಿದ್ದಷ್ಟೂ ದಿನ ಗಾಢವಾಗಿ ತೊಡಗಿಸಿಕೊಂಡಿದ್ದ ಜೀವ ಅದು. ಕಲೆ ಮತ್ತು ಸಮಾಜದ ನಡುವಿನ ಕೊಂಡಿಯಾಗಿದ್ದ ಅವರ ಬಹುಮುಖಿ ವ್ಯಕ್ತಿತ್ವದ ಅನುಪಸ್ಥಿತಿ, ಇಂದಿನ ಸಾಂಸ್ಕೃತಿಕ ಲೋಕಕ್ಕೆ ಅತ್ಯಂತ ದೊಡ್ಡ ನಷ್ಟ. ಅವರು ದೈಹಿಕವಾಗಿ ದೂರವಾಗಿದ್ದರೂ, ತಾವು ಸೃಷ್ಟಿಸಿದ ವಿಶಿಷ್ಟ ದೃಶ್ಯಗಳ ಮೂಲಕ ಮತ್ತು ನಮ್ಮೊಳಗಿನ ನೆನಪುಗಳ ಮೂಲಕ ಸದಾ ಜೀವಂತವಾಗಿರುತ್ತಾರೆ.

ಬಾಬು ಈಶ್ವರ್ ಪ್ರಸಾದ್
ಲೇಖಕರು, ಚಿತ್ರನಿರ್ದೇಶಕರು, ದೃಶ್ಯ ಕಲಾವಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ BFA ಹಾಗೂ ಮಹಾರಾಜಾ ಸಾಯೋಜಿರಾವ್ ವಿಶ್ವವಿದ್ಯಾಲಯ, ವಡೋದರದ ಫೈನ್ ಆರ್ಟ್ಸ್ ಫ್ಯಾಕಲ್ಟಿಯಿಂದ MA ಪದವಿಯನ್ನು ಪಡೆದಿರುತ್ತಾರೆ. 1993ರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ಮಾಡಿರುತ್ತಾರೆ. ಚಿತ್ರಕಲೆಯ ಹೊರತಾಗಿಯೂ, ಇವರಿಗೆ ಶಿಲ್ಪ, ಧ್ವನಿ ವಿನ್ಯಾಸ, ಫೋಟೋಗ್ರಫಿ ಮತ್ತು ವಿಶೇಷವಾಗಿ ವೀಡಿಯೊ ಮತ್ತು ಚಲನಚಿತ್ರಗಳಂತಹ ಇತರ ಮಾಧ್ಯಮಗಳನ್ನು ಅನ್ವೇಷಿಸುವಲ್ಲಿ ಆಳವಾದ ಆಸಕ್ತಿ ಇದೆ. ಇವರು 'ಗಾಳಿಬೀಜ' ಹಾಗೂ 'ಹರಿವ ನದಿಗೆ ಮೈಯೆಲ್ಲಾ ಕಾಲು' ಎಂಬ ಎರಡು ಚಿತ್ರಗಳನ್ನು ಹಾಗೂ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿರುತ್ತಾರೆ.



