ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ; ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಮುಖ್ಯಮಂತ್ರಿ ಸ್ಥಾನವನ್ನು ತಿರಸ್ಕರಿಸಿದರು. ಜೀವನಪೂರ್ತಿ ಯಾವುದೇ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ.
ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಅಭಿಪ್ರಾಯವನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವ ಹಕ್ಕಿದೆ. ಈ ಹಕ್ಕನ್ನು ಕಸಿದುಕೊಳ್ಳುವುದು ಅನ್ಯಾಯ. ಅಭಿವ್ಯಕ್ತಿ ಸ್ವಾತಂತ್ರ್ಯವೇ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಎಂದು ಪೆರಿಯಾರ್ ಹೇಳಿದ್ದರು. ಇಂದು ಸೆಪ್ಟೆಂಬರ್ 17, ತಮಿಳುನಾಡು ಮಾತ್ರವಲ್ಲ,ಇಡೀ ದೇಶದ ಸಾಮಾಜಿಕ ನ್ಯಾಯದ ಇತಿಹಾಸದಲ್ಲಿ ಮರೆಯಲಾಗದ ದಿನ. ಇ ವಿ ರಾಮಸಾಮಿ ಪೆರಿಯಾರ್ ಅವರ 147ನೇ ಜಯಂತಿ. ಬಿಳಿ ಗಡ್ಡ, ಕನ್ನಡಕ, ಕಪ್ಪು ಶಾಲು ಹೊತ್ತ ಈ ಮನುಷ್ಯನನ್ನು ತಮಿಳರು ಪ್ರೀತಿಯಿಂದ ‘ತಂದೆ’ ಎಂದರು. ‘ಪೆರಿಯಾರ್’ ಅಂದರೆ ದೊಡ್ಡವರು ಎಂದು ಕರೆದರು. ಅವರು ರಾಜಕಾರಣಿಯಾಗಿರಲಿಲ್ಲ, ದೇವರ ಮನುಷ್ಯನೂ ಆಗಿರಲಿಲ್ಲ. ಅವರು ಪ್ರಶ್ನೆ ಕೇಳಿದ ಮನುಷ್ಯ.
ಯಾರು ಈ ಪೆರಿಯಾರ್?
1879ರ ಈರೋಡ್‌ನಲ್ಲಿ ಶ್ರೀಮಂತ ಬಲಿಜ ನಾಯ್ಡು ಕುಟುಂಬದಲ್ಲಿ ಹುಟ್ಟಿದ ರಾಮಸಾಮಿ, ಚಿಕ್ಕಂದಿನಿಂದಲೂ ದೇವರು, ಜಾತಿ, ಪುರೋಹಿತಶಾಹಿಯನ್ನು ಪ್ರಶ್ನಿಸುತ್ತಿದ್ದರು. ಒಮ್ಮೆ ಕಾಶಿಗೆ ಹೋದಾಗ, ಬ್ರಾಹ್ಮಣರ ಹೋಟೆಲ್‌ನಲ್ಲಿ ತಮಗೆ ಊಟ ನಿರಾಕರಿಸಿದ್ದು, ಅವರ ಜೀವನವನ್ನೇ ಬದಲಿಸಿತು. ಹಸಿವಿನಿಂದ ಬೀದಿಯಲ್ಲಿ ಬಿದ್ದಿದ್ದಾಗ, ಬ್ರಾಹ್ಮಣೇತರರಿಗೆ ಅನ್ನ ನೀಡದ ಧರ್ಮ ಯಾವ ಧರ್ಮ? ಎಂದು ಅವರು ಯೋಚಿಸಿದರು. ಮೊದಲು ಗಾಂಧೀಜಿಯವರ ಕಾಂಗ್ರೆಸ್‌ಗೆ ಸೇರಿದರು. ವೈಕಂ ಸತ್ಯಾಗ್ರಹದಲ್ಲಿ ಕೇರಳದ ಅಸ್ಪೃಶ್ಯರಿಗೆ ದೇವಸ್ಥಾನದ ರಸ್ತೆಯಲ್ಲಿ ನಡೆಯುವ ಹಕ್ಕಿಗಾಗಿ ಹೋರಾಡಿ ‘ವೈಕಂ ವೀರರ್’ ಆದರು. ಆದರೆ ಕಾಂಗ್ರೆಸ್ ಒಳಗಿನ ಜಾತಿವಾದ, ಬ್ರಾಹ್ಮಣ ಪ್ರಾಬಲ್ಯ ಕಂಡು
1925ರಲ್ಲಿ ಹೊರಬಂದರು. ಅಲ್ಲಿಂದ ಅವರ ನಿಜವಾದ ಹೋರಾಟ ಶುರುವಾಯಿತು.
ಆತ್ಮಗೌರವ ಚಳುವಳಿ ಎನ್ನುವುದು ಕೇವಲ ಚಳುವಳಿಯಲ್ಲ, ಬದುಕುವ ವಿಧಾನ. 1925ರಲ್ಲಿ ಅವರು ಹುಟ್ಟುಹಾಕಿದ ‘ಸುಯಮರಿಯಾದೈ ಇಯಕ್ಕಂ’ ಆತ್ಮಗೌರವ ಚಳುವಳಿಯೇ ದ್ರಾವಿಡ ಚಳುವಳಿಯ ತಾಯಿ.
ಅದರ ಮೂರು ಮುಖ್ಯ ಅಸ್ತ್ರಗಳೇ
ಜಾತಿ ನಿರ್ಮೂಲನೆ: ಜಾತಿ ದೇವರಿಂದ ಬಂದಿಲ್ಲ, ಅದು ಮನುಷ್ಯನ ಸ್ವಾರ್ಥದಿಂದ ಹುಟ್ಟಿದ್ದು. ಜಾತಿ ಇರುವವರೆಗೆ ಸಮಾನತೆ ಇಲ್ಲ ಎಂದರು. ತಮ್ಮ ಹೆಸರಿನ ಹಿಂದಿನ ‘ನಾಯ್ಕರ್’ ಜಾತಿ ಸೂಚಕವನ್ನು ಮೊದಲು ಕಿತ್ತೊಗೆದರು.
ಮೂಢನಂಬಿಕೆ ವಿರೋಧ: ದೇವರು, ಪುರಾಣ, ಕರ್ಮಕಾಂಡಗಳು ಮನುಷ್ಯನನ್ನು ಗುಲಾಮನನ್ನಾಗಿ ಮಾಡುತ್ತವೆ ಎಂದರು. ದೇವಸ್ಥಾನದ ಹುಂಡಿಗೆ ಹಣ ಹಾಕುವ ಬದಲು ಶಾಲೆಗೆ ಹಾಕಿ ಎಂದರು.
ಮಹಿಳಾ ವಿಮೋಚನೆ: 1930ರಲ್ಲೇ ಅವರು ಹೇಳಿದ್ದು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಕೊಡಿ, ವಿಧವಾ ವಿವಾಹವನ್ನು ಬೆಂಬಲಿಸಿ, ಗರ್ಭನಿರೋಧಕದ ಬಗ್ಗೆ ಮಾತನಾಡಿ, ಜಾತಿ ಮೀರಿ ಮದುವೆಯಾಗಿ ಎಂದಿದ್ದರು. ಇಂದು ನಾವು ‘ಫೆಮಿನಿಸಂ’ ಎಂದು ಕರೆಯುವುದನ್ನು ಅವರು ನೂರು ವರ್ಷಗಳ ಹಿಂದೆಯೇ ಬೀದಿಯಲ್ಲಿ ಕೂಗಿದ್ದರು. ಅವರು ನಡೆಸಿದ ‘ಸ್ವಾಭಿಮಾನದ ಮದುವೆ’ಯಲ್ಲಿ ಮಂತ್ರ ಇಲ್ಲ, ತಾಳಿ ಇಲ್ಲ, ಪುರೋಹಿತ ಇಲ್ಲ. ಕೇವಲ ಸಮಾನತೆಯ ಪ್ರಮಾಣವಷ್ಟೇ ಇರುತ್ತಿತ್ತು.
ಇಂದಿಗೂ ಏಕೆ ಪ್ರಸ್ತುತ?
ತಮಿಳುನಾಡಿನ ಪೆರಿಯಾರ್‌ಗೂ ನಮಗೂ ಏನು ಸಂಬಂಧ ಇದೆ ಎಂದುಕೊಳ್ಳಬಹುದು. ಆದರೆ ನಮ್ಮ ರಾಜ್ಯದಲ್ಲೂ ಹಳ್ಳಿಗಳಲ್ಲಿ ಇಂದಿಗೂ ದಲಿತರಿಗೆ ದೇವಸ್ಥಾನ ಪ್ರವೇಶವಿಲ್ಲ, ಹೊಟೇಲ್‌ನಲ್ಲಿ ಎರಡು ಲೋಟ ಪದ್ಧತಿ ಇದೆ, ಜಾತಿ ಹೆಸರಿನಲ್ಲಿ ಮದುವೆ ತಪ್ಪುತ್ತಿದೆ. ಆಗ ಪೆರಿಯಾರ್ ನೆನಪಾಗಬೇಕು.
ಪೆರಿಯಾರ್ ನಮಗೆ ಹೇಳಿದ್ದು ಮೂರು ಪಾಠ:
ಪ್ರಶ್ನೆ ಕೇಳುವ ಧೈರ್ಯ : “ಅಭಿಪ್ರಾಯವನ್ನು ಸ್ವತಂತ್ರವಾಗಿ ವ್ಯಕ್ತಪಡಿಸುವ ಹಕ್ಕಿದೆ” ಎಂದು ಹೇಳಿದ್ದರು. ಇಂದು ವಾಟ್ಸ್ಯಾಪ್ ಯೂನಿವರ್ಸಿಟಿಯಲ್ಲಿ ಬರುವ ಸುಳ್ಳು ಸುದ್ದಿಯನ್ನು ನಂಬುವ ಮೊದಲು, ಯಾರೋ ಹೇಳಿದರು ಎಂದು ಜಾತಿ ದ್ವೇಷ ಮಾಡುವ ಮೊದಲು ನಮ್ಮ ಬದುಕನ್ನು ನಿಯಂತ್ರಿಸುವ ಜಾತಿಯನ್ನು ಏಕೆ ಪ್ರಶ್ನಿಸಬಾರದು ಎಂದು ಪ್ರಶ್ನೆ ಕೇಳಬೇಕು.
ಶಿಕ್ಷಣವೇ ಅಸ್ತ್ರ ಎಂದು ಪೆರಿಯಾರ್ ಹೇಳುತ್ತಿದ್ದರು “ಕತ್ತಿಯನ್ನು ಕೊಟ್ಟರೆ ಒಬ್ಬನನ್ನು ಕೊಲ್ಲಬಹುದು, ಶಿಕ್ಷಣ ಕೊಟ್ಟರೆ ಒಂದು ತಲೆಮಾರನ್ನೇ ಎಬ್ಬಿಸಬಹುದು”. ಮೀಸಲಾತಿಯನ್ನು ಅವರು ಭಿಕ್ಷೆ ಎಂದು ನೋಡಲಿಲ್ಲ, ಅದು ನಮ್ಮ ನ್ಯಾಯಯುತ ಪಾಲು ಎಂದರು. ನಮ್ಮ ಮಕ್ಕಳನ್ನು ಇಂಗ್ಲಿಷ್ ಶಿಕ್ಷಣದಿಂದ ವಂಚಿಸಬೇಡಿ ಎಂದು ಅವರು ಗರ್ಜಿಸಿದರು. ಇಂದು ಖಾಸಗಿ ಶಾಲೆಗಳಿಗೆ ಲಕ್ಷ ಕಟ್ಟುವ ನಾವು, ಸರ್ಕಾರಿ ಶಾಲೆಯನ್ನು ಕಡೆಗಣಿಸುತ್ತಿದ್ದೇವೆ.
ಆತ್ಮಗೌರವವೇ ದೊಡ್ಡದು ಯಾರೋ ನಮಗೆ ದಾನ ಮಾಡುವುದಲ್ಲ, ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಭಾವನೆ. ಪೆರಿಯಾರ್ ಕಪ್ಪು ಅಂಗಿ ಏಕೆ ಹಾಕುತ್ತಿದ್ದರು ಗೊತ್ತಾ? ದ್ರಾವಿಡರ ಬದುಕು ಶೋಕದಲ್ಲಿದೆ, ಅವಮಾನದಲ್ಲಿದೆ ಎಂದು ಸಂಕೇತಿಸಲು. ಇಂದು ನಾವು ಟಿಕ್‌ಟಾಕ್, ರೀಲ್ಸ್‌ನಲ್ಲಿ ಲೈಕ್‌ಗಾಗಿ ಬದುಕುತ್ತಿದ್ದೇವೆ. ಆದರೆ ನಿಜವಾದ ಲೈಕ್ ಎಂದರೆ ನಮ್ಮನ್ನು ನಾವೇ ಗೌರವಿಸಿಕೊಳ್ಳುವುದು.
ಪೆರಿಯಾರ್ ಮತ್ತು ಅಂಬೇಡ್ಕರ್ ಇಬ್ಬರೂ ಸಮಾಜದ ಎರಡು ಕಣ್ಣುಗಳು. ಗಾಂಧಿ-ಅಂಬೇಡ್ಕರ್ ಭಿನ್ನಾಭಿಪ್ರಾಯದ ಬಗ್ಗೆ ಕೇಳಿದ್ದೀವಿ.
ಪೆರಿಯಾರ್ ಮತ್ತು ಅಂಬೇಡ್ಕರ್ ಅಣ್ಣತಮ್ಮಂದಿರಂತೆ. 1940ರಲ್ಲಿ ಇಬ್ಬರೂ ಭೇಟಿಯಾಗಿ, ಹಿಂದೂ ಧರ್ಮದ ಜಾತಿ ವ್ಯವಸ್ಥೆಯ ವಿರುದ್ಧ ಜಂಟಿ ಹೋರಾಟಕ್ಕೆ ಚಿಂತಿಸಿದ್ದರು. ಅಂಬೇಡ್ಕರ್ ಸಂವಿಧಾನದ ಮೂಲಕ ಕಾನೂನಿನ ಸಮಾನತೆ ತಂದರೆ, ಪೆರಿಯಾರ್ ಜನರ ಮನಸ್ಸಿನಲ್ಲಿ ಸಾಮಾಜಿಕ ಸಮಾನತೆಯ ಬೀಜ ಬಿತ್ತಿದರು. ಒಬ್ಬರು ಉತ್ತರದಲ್ಲಿ ಹೋರಾಡಿದರೆ, ಇನ್ನೊಬ್ಬರು ದಕ್ಷಿಣದಲ್ಲಿ ಹೋರಾಡಿದರು.
ಇದನ್ನೂ ಓದಿದ್ದೀರಾ? ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ ಪ್ಯಾಟ್ರಿಷಿಯೊ ಗುಜ್ಮಾನ್
ಪೆರಿಯಾರ್ ದೇವರನ್ನು ವಿರೋಧಿಸಿದ್ದು ದೇವರ ಮೇಲಿನ ದ್ವೇಷಕ್ಕಲ್ಲ. ಬದಲಿಗೆ ದೇವರ ಹೆಸರಿನಲ್ಲಿ ನಡೆಯುವ ಮೋಸ, ಶೋಷಣೆಯ ವಿರುದ್ಧ. ಅವರು ಜೀವನಪೂರ್ತಿ ಯಾವ ಅಧಿಕಾರದ ಕುರ್ಚಿಯನ್ನೂ ಏರಲಿಲ್ಲ. ಮುಖ್ಯಮಂತ್ರಿ ಸ್ಥಾನವನ್ನೂ ತಿರಸ್ಕರಿಸಿದರು. ಇಂದು ಅವರ ಜಯಂತಿಯಂದು ನಾವು ಹೂಮಾಲೆ ಹಾಕಿ, ಫ್ಲೆಕ್ಸ್ ಹಾಕಿದರೆ ಸಾಲದು. ನಮ್ಮ ಮನೆಯಲ್ಲಿ ಒಂದು ಜಾತಿ ಮೀರಿದ ಮದುವೆಯನ್ನು ಒಪ್ಪಿಕೊಳ್ಳೋಣ. ನಮ್ಮ ಹೊಲದಲ್ಲಿ ಕೆಲಸ ಮಾಡುವವರನ್ನು ಹೆಸರು ಹಿಡಿದು ಕರೆಯದೆ, ಅಣ್ಣ-ಅಕ್ಕ ಎಂದು ಕರೆಯೋಣ. ನಮ್ಮ ಮಕ್ಕಳಿಗೆ ಜಾತಿ ಪುರಾಣ ಕಥೆಗಳ ಬದಲು ವಿಜ್ಞಾನ, ಸಮಾನತೆಯ ಕಥೆ ಹೇಳೋಣ.




