ಮಳೆಗಾಲ | ಹೇಳಿಕೆಯಲ್ಲಷ್ಟೇ ಸನ್ನದ್ಧ ಬಿಬಿಎಂಪಿ; ನಗರ ಜೀವನ ಅಸ್ತವ್ಯಸ್ತ

Date:

ಆಗಸ್ಟ್‌ 31ರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮತ್ತೆ ರಾಜಧಾನಿ ಬೆಂಗಳೂರು ನಲುಗಿಹೋಗಿದೆ. ಮಾಗಡಿ ರಸ್ತೆ, ಮೈಸೂರು ರಸ್ತೆ, ಹೊರ ವರ್ತುಲ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ, ಹಳೆ ವಿಮಾನ ನಿಲ್ದಾಣ ರಸ್ತೆ, ಕೋರಮಂಗಲ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡಿವೆ.

ಸಿಲಿಕಾನ್ ಸಿಟಿ, ಹೈಟೆಕ್ ಸಿಟಿ, ಐಟಿಬಿಟಿ ಸಿಟಿ, ಕಲ್ಯಾಣನಗರಿ, ಉದ್ಯಾನನಗರಿ, ಕೆರೆಗಳ ನಗರ ಎಂದೆಲ್ಲ ಕರೆಯಿಸಿಕ್ಕೊಳ್ಳುವ ರಾಜಧಾನಿ ಬೆಂಗಳೂರು ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿದೆ. ಆದರೆ, ಮಳೆಗಾಲದಲ್ಲಿ ಜನರು ವಾಸಿಸುವುದು ಕಷ್ಟಕರವಾಗಿದೆ. ಮಳೆ ಬಂತೆಂದರೆ ನಗರದ 198 ಪ್ರದೇಶಗಳಲ್ಲಿ ಪ್ರವಾಹ ಉಂಟಾಗುತ್ತದೆ. ಮನೆಗಳಿಗೆ ಮಳೆ ನೀರು ಜತೆಗೆ ಚರಂಡಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ, ಅಪಾರ ಪ್ರಮಾಣದ ಹಾನಿ ಉಂಟಾಗುತ್ತದೆ.

ಕಳೆದ ವರ್ಷ (2022) ಬೆಂಗಳೂರಿನ ರೇನ್‌ ಬೋ ಡ್ರೈವ್, ಸರ್ಜಾಪುರ ರಸ್ತೆ, ಯಮಲೂರು, ಸಾಯಿಲೇಔಟ್‌ ಸೇರಿದಂತೆ ನಗರದ ಹಲವಾರು ಭಾಗಗಳಲ್ಲಿ ಮಳೆ ನೀರು ನಿಂತು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ರಸ್ತೆಗಳಲ್ಲಿ ವಾಹನ ಸಂಚರಿಸಲು ಸಾಧ್ಯವಾಗದೆ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಗೆ ನೀರು ನುಗ್ಗಿ ರಸ್ತೆ ತಂಬಾ ಮೊಣಕಾಲವರೆಗೂ ನೀರು ತುಂಬಿತ್ತು. ಜನರನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ಟ್ರ್ಯಾಕ್ಟರ್ ಮೂಲಕ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿತ್ತು. ಇಷ್ಟೆಲ್ಲಾ ಘಟನೆ ನಡೆದ ಬಳಿಕವೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಬಾರಿಯ ಮಳೆಗಾಲವನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಹೇಳಿತ್ತು.

ಮೇ 21ರಂದು ನಗರದಲ್ಲಿ ಭಾರೀ ಮಳೆ ಸುರಿದ ಸಂದರ್ಭದಲ್ಲಿ ಕೆ.ಆರ್‌.ವೃತ್ತದ ಅಂಡರ್‌ಪಾಸ್‌ನಲ್ಲಿ ನೀರು ನಿಂತು, ಕಾರು ಮುಳುಗಿ ಭಾನುರೇಖಾ ಎಂಬ ಖಾಸಗಿ ಕಂಪನಿ ಉದ್ಯೋಗಿ ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ನಗರದಲ್ಲಿರುವ ಅಂಡರ್‌ಪಾಸ್‌ಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ತಿಳಿಸಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸದ್ಯದ ಪರಿಸ್ಥಿತಿ ಅಂದರೆ, ಆಗಸ್ಟ್‌ 31ರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮತ್ತೆ ರಾಜಧಾನಿ ಬೆಂಗಳೂರು ನಲುಗಿಹೋಗಿದೆ. ಮಾಗಡಿ ರಸ್ತೆ, ಮೈಸೂರು ರಸ್ತೆ, ಹೊರ ವರ್ತುಲ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ, ಹಳೆ ವಿಮಾನ ನಿಲ್ದಾಣ ರಸ್ತೆ, ಕೋರಮಂಗಲ ಸೇರಿದಂತೆ ಹಲವು ರಸ್ತೆಗಳು ಜಲಾವೃತಗೊಂಡಿವೆ.

ನಗರದ ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ, ಪದ್ಮನಾಭನಗರ, ಹೆಬ್ಬಾಳ, ಸಂಪಂಗಿರಾಮನಗರ, ಗೋರಗುಂಟೆಪಾಳ್ಯ, ಆರ್ ಎಂವಿ ಲೇಔಟ್, ಸಹಕಾರ ನಗರ, ‌ಶಾಂತಿನಗರ, ಬೊಮ್ಮಸಂದ್ರ, ಯಲಹಂಕ, ಭದ್ರಪ್ಪ ಲೇಔಟ್, ಚಾಮರಾಜಪೇಟೆ, ಕಾಮಾಕ್ಷಿಪಾಳ್ಯ ಹಾಗೂ ಶಿವಾಜಿನಗರದ ಚಿನ್ನಪ್ಪ ಗಾರ್ಡನ್‌ ಸೇರಿದಂತೆ ಅನೇಕ ಕಡೆ ಮನೆಗಳಿಗೆ ಮಳೆ ನೀರು ಜತೆಗೆ ಚರಂಡಿ ನೀರು ನುಗ್ಗಿದೆ.

ಶೇಷಾದ್ರಿಪುರಂ ಅಂಡರ್ ಪಾಸ್‌,  ಭದ್ರಪ್ಪ ಲೇಔಟ್ ರೈಲ್ವೇ ಅಂಡರ್ ಪಾಸ್‌ ಸೇರಿದಂತೆ ಬಹುತೇಕ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಬಲಿಗಾಗಿ ಕಾದಿದ್ದವು.

ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿ ಸಮಸ್ಯೆ, ರಸ್ತೆ ದಿಬ್ಬು ಸಮಸ್ಯೆ, ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ನಿಂತಿದ್ದರಿಂದ ಜನರು ಸಾವನ್ನಪ್ಪಿದ್ದಾರೆ. ಜತೆಗೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಇಷ್ಟಾದರೂ ಬಿಬಿಎಂಪಿ ಮಳೆಗಾಲಕ್ಕೆ ಪೂರ್ಣ ಪ್ರಮಾಣದ ಸಿದ್ಧತೆ ನಡೆಸದೆ, ಬರೀ ಪತ್ರಿಕೆಗಳಿಗೆ ಹೇಳಿಕೆ ನೀಡುವ ಮೂಲಕ ಕಾಲಹರಣ ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಬೆಂಗಳೂರು

ಇನ್ನೂ ಮಗಿಯದ ರಾಜಕಾಲುವೆ ಒತ್ತುವರಿ ತೆರವು

ಮಳೆಗಾಲದ ಸಮಯದಲ್ಲಿ ಬೆಂಗಳೂರು ಅಕ್ಷರಶಃ ನಲುಗಿಹೋಗುತ್ತಿದೆ. ನೀರು ಸರಿಯಾಗಿ ಹರಿದು ಹೋಗದೆ ರಸ್ತೆಯ ತುಂಬ ನೀರು ನಿಲ್ಲುತ್ತಿದೆ. ಜತೆಗೆ ಮನೆಗಳಿಗೆ ನೀರು ನುಗ್ಗುತ್ತಿದೆ. ಇದಕ್ಕೆ ಮುಖ್ಯ ಕಾರಣ ರಾಜಕಾಲುವೆ, ಚರಂಡಿ ಹಾಗೂ ಕೆರೆಗಳ ಒತ್ತುವರಿ. ಪ್ರತಿ ಮೂರು ತಿಂಗಳಿಗೊಮ್ಮೆ ರಾಜಾ ಕಾಲುವೆ ಹೂಳೆತ್ತಲು ಕ್ರಮ ವಹಿಸಬೇಕು. ವರ್ಷದಲ್ಲಿ ನಾಲ್ಕು ಬಾರಿ ಹೂಳೆತ್ತಬೇಕು ಎಂದು ನಿಯಮಗಳು ಹೇಳುತ್ತವೆ. ಆದರೂ ಸಕಾಲಕ್ಕೆ ಹೂಳೆತ್ತದಿರುವುದು ಕೂಡ ಈ ಪ್ರವಾಹಕ್ಕೆ ಪ್ರಮುಖ ಕಾರಣವಾಗಿದೆ.

ಕೆಂಪೇಗೌಡರ ಕಾಲದಲ್ಲಿ 200ಕ್ಕೂ ಹೆಚ್ಚು ಕೆರೆಗಳ ನಿರ್ಮಾಣ ಮಾಡಿದ್ದರು. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿಯಲು ರಾಜಕಾಲುವೆ ನಿರ್ಮಾಣ ಮಾಡಿದ್ದರು. ಇದೀಗ ಕೆರೆಗಳೆಲ್ಲಾ ಲೇಔಟ್‌ಗಳಾಗಿ, ದೊಡ್ಡ ದೊಡ್ಡ ಕಟ್ಟಡಗಳಾಗಿ ನಿರ್ಮಾಣ ಮಾಡಿದ್ದಾರೆ. ಮೂರಂಕಿ ಇದ್ದ ಕೆರೆಗಳ ಸಂಖ್ಯೆ ಇದೀಗ ಎರಡಂಕಿಗೆ ಕುಸಿದಿದೆ.

ಬೆಂಗಳೂರು

ರಾಜಾ ಕಾಲುವೆಗಳನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ರಾಜಾ ಕಾಲುವೆಗಳು ಪ್ರಾಥಮಿಕ ಹಂತದಲ್ಲಿ 50 ಮೀಟರ್, ದ್ವಿತೀಯ ಹಂತದಲ್ಲಿ 35 ಮತ್ತು ಮೂರನೇ ಹಂತದಲ್ಲಿ 25 ಮೀಟರ್ ಇರಬೇಕು ಎಂಬ ನಿಯಮವಿದೆ. ಆದರೆ, ಕೆಲವು ಕಡೆ ರಾಜಕಾಲುವೆ ವಿಸ್ತೀರ್ಣ 5 ಅಡಿಗಿಂತಲೂ ಕಡಿಮೆ ಇದೆ. ಹೀಗಿದ್ದಾಗ, ಮಳೆ ನೀರು ಹರಿದು ಹೋಗಲು ಸ್ಥಳಾವಕಾಶ ಇಲ್ಲದ ಕಾರಣ, ಚರಂಡಿ ನೀರು ಜತೆಗೆ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ.

ರಾಜಾ ಕಾಲುವೆ ಒತ್ತುವರಿ ಎಗ್ಗಿಲ್ಲದೆ ನಡೆದಿದ್ದು, ದೊಡ್ಡವರ ಪಾಲು ಇದರಲ್ಲಿ ದೊಡ್ಡದಿದೆ. ಸದ್ಯ ಕೋರಮಂಗಲದ ರಾಜಾಕಾಲುವೆ 113 ಕಿ.ಮೀ ಉದ್ದವಿದ್ದು, 62 ಕಿ.ಮೀ ಇಳಿದಿದೆ. ವೃಷಭಾವತಿ ರಾಜಾಕಾಲುವೆ 226 ಕಿ.ಮೀ ಯಿಂದ 112 ಕಿ.ಮೀ.ಗೆ ಇಳಿದಿದೆ.

ಸರ್ಜಾಪುರ ರಸ್ತೆಯ ರೇನ್ ಬೋ ಡ್ರೈವ್ ಲೇಔಟ್, ಹೊರಮಾವು ಸಮೀಪದ ಶ್ರೀ ಸಾಯಿ ಲೇಔಟ್, ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ, ಕೆಆರ್ ಪುರಂ, ಎಚ್ ಬಿ ಆರ್ ಲೇಔಟ್, ಹೊಸಕೆರೆಹಳ್ಳಿ ಮೊದಲಾದ ಪ್ರದೇಶಗಳು ಮಳೆ ನೀರಿನಿಂದ ತುಂಬುತ್ತಿವೆ.

ಈ ಸುದ್ದಿ ಓದಿದ್ದೀರಾ? ಹೊಸ ತಲೆಮಾರಿಗೆ ಹಳೆಯ ನೆನಪು 5 | ಚಂದದ ಚೆಲ್ಲಘಟ್ಟ ಕೆರೆ ಮೇಲೆ ಹಸಿರಿನ ‘ಗಾಲ್ಫ್ ಕೋರ್ಸ್’ ನಿರ್ಮಾಣ

ಪ್ರವಾಹದ ಎಲ್ಲ ಸಮಸ್ಯೆಗಳಿಗೆ ರಾಜಾಕಾಲುವೆ ಮತ್ತು ಒಳ ಚರಂಡಿಗಳ ಒತ್ತುವರಿ ಮೂಲ ಕಾರಣ. ಬೆಂಗಳೂರಿನಲ್ಲಿ ಸುಮಾರು 2951 ಅತಿಕ್ರಮಣವಾಗಿರುವ ಪ್ರದೇಶಗಳನ್ನು ಗುರುತಿಸಲಾಗಿದೆ. ಇನ್ನೂ 784 ಪ್ರದೇಶಗಳ ಒತ್ತುವರಿ ತೆರವುಗೊಳಿಸಬೇಕಿದೆ. ಪ್ರಭಾವಿಗಳು ಸೇರಿದಂತೆ ಜನಸಾಮಾನ್ಯರಿಂದಲೂ ರಾಜಾಕಾಲುವೆ ಒತ್ತುವರಿಯಾಗಿದೆ.  118 ಒತ್ತುವರಿ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ.

ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದರ ಅಧ್ಯಯನದ ಪ್ರಕಾರ, ಬೆಂಗಳೂರಿನಲ್ಲಿ ಚರಂಡಿ ನೀರು ಸರಾಗವಾಗಿ ಹರಿಯಬೇಕಾದರೆ 658 ಕಿ.ಮೀ ಚರಂಡಿ ನಿರ್ಮಾಣವಾಗಬೇಕು ಎಂದು ವರದಿ ಸಲ್ಲಿಸಿದೆ.

ಬೆಂಗಳೂರಿನ ಬಿಬಿಎಂಪಿ, ಬೆಸ್ಕಾಂ, ಬಿಡಿಎ, ಬೆಂಗಳೂರು ಸಂಚಾರಿ ಪೊಲೀಸ್, ಮೆಟ್ರೋ ರೈಲು ನಿಗಮ, ಸ್ಮಾಟ್ ಸಿಟಿ ಲಿಮಿಟೆಡ್‌. ಬಿಎಂಟಿಸಿ, ಬಿಡಬ್ಲ್ಯೂ ಎಸ್ ಎಸ್ ಬಿ ಮೊದಲಾದ ಇಲಾಖೆಗಳೊಂದಿಗೆ ಸಮನ್ವಯದ ಕೊರತೆ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಪ್ರಮುಖ ಅಡ್ಡಿಯಾಗಿದೆ.

ಬೆಂಗಳೂರು

ಬಿಬಿಎಂಪಿ ಹೇಳಿಕೆ

ಪ್ರವಾಹ ಪೀಡಿತ 198 ಪ್ರದೇಶಗಳ ಪೈಕಿ 118ರಲ್ಲಿ ಮಾತ್ರ ಶಾಶ್ವತ ಪರಿಹಾರ ಕಾಮಗಾರಿಗಳು ನಡೆಯುತ್ತಿವೆ. 51 ಅಂಡರ್ ಪಾಸ್‌ಗಳ ಪೈಕಿ 40ರಲ್ಲಿ ನೀರು ನಿಲ್ಲದಂತೆ ಕಾಮಗಾರಿ ನಡೆಸಿದೆ. ರಾಜಕಾಲುವೆಗಳನ್ನು ಸುಸ್ಥಿತಿಯಲ್ಲಿಡುವುದು, ಚರಂಡಿಗಳ ಮರು ನಿರ್ಮಾಣ ಮತ್ತಿತರ ಸಮಸ್ಯೆ ಎದುರಿಸಲು 63 ತಂಡ ರಚಿಸಲಾಗಿದೆ ಎಂದು ಬಿಬಿಎಂಪಿ ಹೇಳಿತ್ತು.

ಈ ತಂಡಗಳು ಮಳೆ ನೀರು ತೆರವುಗೊಳಿಸುವುದು, ಬಿದ್ದ ಮತ್ತು ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಕೆಲಸ ಮಾಡಲಿದೆ. ಜತೆಗೆ ವಲಯವಾರು ಸಮಗ್ರ ಪ್ರವಾಹ ನಿರ್ವಹಣಾ ಸಮಿತಿಗಳನ್ನೂ ರಚಿಸಿ ಉಸ್ತುವಾರಿ ನೋಡಿಕೊಳ್ಳಲು ಸೂಚನೆ ನೀಡಿದೆ.

ಈ ಬಗ್ಗೆ ಬೆಂಗಳೂರಿಗರು ಏನಂತಾರೆ?

ಗುರುವಾರ ರಾತ್ರಿ ಸ್ನೇಹಿತರ ಮನೆಯಿಂದ ವಿದ್ಯಾಭ್ಯಾಸ ಮುಗಿಸಿ, ಮೈಸೂರು ರೋಡ್‌ ಮುಖಾಂತರ ಮನೆಗೆ ತೆರಳುವಾಗ ಜೋರು ಮಳೆ ಪ್ರಾರಂಭವಾಗಿತ್ತು. ಆಗಲೇ ಲೇಟ್‌ ಆಗಿದೆ ಎಂದು ಹಾಗೇ ಹೊರಟೆ. ಮಳೆ ಬಂದ ಕೆಲವೇ ನಿಮಿಷಗಳಲ್ಲಿ, ಗಾಳಿ ಆಂಜನೇಯ ರಸ್ತೆಯ ತುಂಬ ನೀರು ನಿಂತಿತ್ತು. ಈ ವೇಳೆ, ನಾನು ಮನೆಗೆ ತಲುಪುವುದು ಕಷ್ಟವಾಗಿತ್ತು. ಮತ್ತೆ ಹಿಂತಿರುಗಿ ಹೋಗಿ ಬೇರೆ ರಸ್ತೆ ಮಾರ್ಗ ಬಳಸಿ ಮನೆ ಸೇರುವಂತಾಯಿತು” ಎಂದು ಈ ದಿನ.ಕಾಮ್‌ಗೆ ವಿದ್ಯಾರ್ಥಿ ವಿವೇಕ್ ತಿಳಿಸಿದರು.

ಬೆಂಗಳೂರು

“ಬಿಬಿಎಂಪಿ ಕ್ರಮ ಕೈಗೊಂಡಿದೆ. ಕ್ರಮ ಕೈಗೊಳ್ಳುತ್ತದೆ ಎಂದು ಪದೇಪದೆ ಹೇಳುತ್ತಿದೆ. ಆದರೆ, ಎಷ್ಟರ ಮಟ್ಟಿಗೆ ಕ್ರಮ ಕೈಗೊಳ್ಳುತ್ತಿದೆ ಎಂಬ ಬಗ್ಗೆ ಮಳೆ ಬಂದ ದಿನ ತಿಳಿಯುತ್ತದೆ. ರಸ್ತೆಗಳು ಸಂಪೂರ್ಣ ಜಲಾವೃತವಾಗುತ್ತವೆ. ರಸ್ತೆಗಳಲ್ಲಿ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಮಳೆನೀರು ಅಲ್ಲದೇ, ಚರಂಡಿ ನೀರು ರಸ್ತೆಯ ಮೇಲೆ ತುಂಬಿರುತ್ತದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಬಿಬಿಎಂಪಿ ಆದಷ್ಟು ಹೇಳಿಕೆ ನೀಡಿ ಕಾಲಹರಣ ಮಾಡುವ ಬದಲು ಸಮಸ್ಯೆ ಬಗೆಹರಿಸಬೇಕು” ಎಂದು ಈ ದಿನ.ಕಾಮ್‌ಗೆ ಆಟೋ ಚಾಲಕ ಮುನಿರಾಜ್ ಹೇಳಿದರು.

ಆಟೋ ಚಾಲಕ ಮಂಜುನಾಥ್ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಗುರುವಾರ ಸುರಿದ ಜೋರು ಮಳೆಗೆ ಬೆಂಗಳೂರಿನ ಹಲವು ರಸ್ತೆಗಳು ಜಲಾವೃತವಾಗಿದ್ದವು. ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಸಮಸ್ಯೆ ಉಂಟಾಗುತ್ತದೆ. ಈ ವೇಳೆ, ನಾವು ಆಟೋ ಓಡಿಸಿ ಜೀವನ ನಡೆಸುವುದು ಕಷ್ಟವಾಗುತ್ತದೆ. ಅದರಲ್ಲಿಯೂ ನಗರದಲ್ಲಿ ಮಳೆ ಸಮಯದಲ್ಲಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡುವ ಪ್ರಸಂಗ ಹಲವು ಬಾರಿ ಎದುರಾಗಿದೆ. ಏಕೆಂದರೆ, ಹದಗೆಟ್ಟ ರಸ್ತೆ, ರಸ್ತೆಗುಂಡಿಗಳು, ಅವೈಜ್ಞಾನಿಕ ರಸ್ತೆ ಹುಬ್ಬು ಸೇರಿದಂತೆ ಹಲವು ಸಮಸ್ಯೆಗಳಿಂದ ಬೆಂಗಳೂರು ನಗರ ಅಭಿವೃದ್ಧಿ ಹೊಂದುತ್ತಿದೆ” ಎಂದರು.

ನಗರದಲ್ಲಿ ಮಳೆಯಿಂದ ಉಂಟಾಗುತ್ತಿರುವ ಅವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆಯಲು ಈ ದಿನ.ಕಾಮ್‌ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಅವರು ಕರೆಗೆ ಉತ್ತರಿಸಲಿಲ್ಲ.

+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ದಾರಿಗಳ ಮೇಲು ಮಯ್ ಮೇಲುಮಯ್ ಮೇಲೆ ಬಿದ್ದ ಮಳೆನೀರು ಚರಂಡಿ ಸೇರಲು ತಕ್ಕ ಮಟ್ಟಗಿನ ಕಿಂಡಿಗಳನ್ನು ಮಾಡದಿರುವುದನ್ನು ಕಾಣಬಹುದು. ದಾರಿಮೇಲುಮಯ್ ಮೇಲೆ ಬಿದ್ದಿರುವ ಪ್ಲಾಸ್ಟಿಕ್ ಹಾಳೆ,ಕಪ್‌ಗಳು,ಇತರೆ ಕಸ ಚರಂಡಿ ಸೇರದಂತೆ ನೇರ ಜಾಲರಿಗಳನ್ನಜ ಸಳವಡಿಸಬೇಕಾಗಿದೆ. ದಾರಿ ಪಕ್ಕದ ಚರಂಡಿಗಳ ಕಿಂಡಿ/ಬಾಯಿಗರ ಅಡ್ಡಲಾಗಿ ಕಟ್ಟಡಳಿಗೆ ವಿದ್ಯುತ್ ಕೇಬಲ್, ಕೊಳಚೆ ನೀರಿನ ಕೊಳವೆ, ಕೆಲವೆಡೆ ನೀರಿನ ಕೊಳವೆಗಳನ್ನು ಹಾಯಿಸಿರುವುದನ್ನು ಗಮನಿಸಬೇಕು. ಹಾಗೆಯೇ ಅಡ್ಡಮೋರಿಗಳನ್ನು ಗಮನಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಿನಲ್ಲೇ ಆತ್ಮಹತ್ಯೆ

ಇಬ್ಬರು ಮಕ್ಕಳನ್ನು ಕೊಂದು ಪರಪ್ಪನ ಅಗ್ರಹಾರ ಸೇರಿದ್ದ ತಾಯಿ ಗಂಗಾದೇವಿ ಜೈಲಿನಲ್ಲಿ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...

ಎನ್‌ಸಿಪಿಇಡಿಪಿಯಿಂದ ಬೆಂಗಳೂರು- ಕಲಬುರಗಿ ವಿಶೇಷ ಚೇತನರ ಆರೋಗ್ಯ ಸ್ಥಿತಿಗತಿ ಕುರಿತ ಅಧ್ಯಯನ ವರದಿ ಬಿಡುಗಡೆ

ಕರ್ನಾಟಕದಲ್ಲಿನ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕಲಬುರಗಿ ಜಿಲ್ಲೆಗಳ ವಿಶೇಷ...

ಬೆಂಗಳೂರು | ಅಪರಿಚಿತ ವಾಹನ ಡಿಕ್ಕಿ: ಫ್ಲೈ ಓವರ್‌ನಿಂದ ಬಿದ್ದು ಯುವಕ ಸಾವು

ರಾಜ್ಯದಲ್ಲಿ ಇಂದು ಸಾಲು ಸಾಲು ಅಪಘಾತ ಸಂಭವಿಸುತ್ತಿವೆ. ಇದೀಗ, ಅಪರಿಚಿತ ವಾಹನವೊಂದು...