ರೈತರ ಆತ್ಮಹತ್ಯಾ ಸರಣಿಯ ಬೇರುಗಳಿರುವುದು1991ರಲ್ಲಿ ಪರಿಚಯಿಸಿದ ಹೊಸ ಆರ್ಥಿಕ ನೀತಿ ಮತ್ತು ಅಲ್ಲಿಂದ ನಾಲ್ಕು ವರ್ಷಗಳ ನಂತರ ಜಾರಿಗೆ ಬಂದ ಕೃಷಿಗೆ ಸಂಬಂಧಿಸಿದ ಒಪ್ಪಂದದ ಡಬ್ಲ್ಯೂ.ಟಿ.ಒ. ನಿಯಮಗಳಲ್ಲಿ. ಜಾಗತಿಕ ಮಾರುಕಟ್ಟೆಗಳು, ದೈತ್ಯ ಕಾರ್ಪೊರೇಷನ್ನುಗಳ ಅದೃಶ್ಯ ಹಸ್ತಗಳ ಕೈಗೆ ನಮ್ಮ ರೈತನ ಅಳಿವು ಉಳಿವುಗಳನ್ನು ಒಪ್ಪಿಸಿ ದಶಕಗಳೇ ಗತಿಸಿವೆ
ಮೊನ್ನೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿಗಳ ಸಿ.ಇ.ಒ.ಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಸುದ್ದಿ ಪತ್ರಿಕೆಗಳಲ್ಲಿ ವ್ಯಾಪಕವಾಗಿ ವರದಿಯಾಗಿತ್ತು. ಅವರ ಅಸಮಾಧಾನದ ಕೇಂದ್ರಬಿಂದು ರಾಜ್ಯದಲ್ಲಿ ವರದಿಯಾದ ರೈತರ ಆತ್ಮಹತ್ಯೆಗಳಾಗಿದ್ದವು.
ಇದೇ ವರ್ಷದ ಏಪ್ರಿಲ್ ತಿಂಗಳಿನಿಂದ ಸೆಪ್ಟಂಬರ್ ಒಂಬತ್ತರ ನಡುವೆ ರಾಜ್ಯದಲ್ಲಿ ಕನಿಷ್ಠ 251 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 1996ರಿಂದ ಲಭ್ಯವಿರುವ ಅಧಿಕೃತ ಅಂಕಿ ಅಂಶಗಳು ಈ ದುರಂತ ಸರಣಿಯ ಒಟ್ಟು ಸಂಖ್ಯೆಯನ್ನು 11 ಸಾವಿರ ಎಂದು ದಾಖಲಿಸಿವೆ. ರಾಷ್ಟ್ರೀಯ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಪ್ರಕಾರ ದೇಶದಲ್ಲಿ 2021ರಲ್ಲಿ 10,881 ಮಂದಿ ರೈತರು ಮತ್ತು ಕೃಷಿಕೂಲಿಕಾರರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮಳೆ ವೈಫಲ್ಯದ ಪರಿಣಾಮವಾಗಿ ಬೆಳೆ ವೈಫಲ್ಯ, ಕಳಪೆ ಬಿತ್ತನೆ ಬೀಜ, ಗೊಬ್ಬರದ ಅಭಾವ, ಸಾಹುಕಾರರಿಂದ ಪಡೆದ ದುಬಾರಿ ಬಡ್ಡಿ ದರದ ಸಾಲದ ಹೊರೆ, ತನ್ನ ಉತ್ಪಾದನೆಗೆ ನ್ಯಾಯವಾದ ದರ ದೊರೆಯದೆ ಇರುವುದು ಕೃಷಿ ಮಂಡಿಗಳಲ್ಲಿ ದಲ್ಲಾಳಿಗಳಿಂದ ಶೋಷಣೆಗಳು ರೈತನನ್ನು ಆತ್ಮಹತ್ಯೆಗೆ ದೂಡುತ್ತಿವೆ. ಈ ಆತ್ಮಹತ್ಯೆಗಳ ನಂತರ ಕುಟುಂಬದ ಭಾರದ ನೊಗಕ್ಕೆ ಬದುಕಿಡೀ ಬಿಗಿದು ಕಟ್ಟಿದ ಎತ್ತಾಗಿ ಹೆಣಗುವವಳು ಆತನ ಪತ್ನಿ. ಪ್ರಾಣ ನೀಗಿದ ಆತನೇನೋ ಬಾರದೂರಿಗೆ ಹೊರಟು ಹೋದ. ಆತ ಬಿಟ್ಟು ಹೋದ ಪತ್ನಿ ಮಕ್ಕಳ ಬದುಕು ನಿತ್ಯ ನರಕಗಳಾಗಿವೆ. ಅನುದಿನ ಸಾವಿರ ಸಲ ಸತ್ತರೂ ಘನತೆಯ ಬದುಕುಗಳು ಇವರಿಂದ ದೂರ ದೂರ.
ಕೃಷಿವಲಯ ತೀವ್ರ ಒತ್ತಡಕ್ಕೆ ಸಿಲುಕಿದೆ. ಬೆಳೆ ವಿಮೆ, ಸರ್ಕಾರದಿಂದ ಕೃಷಿ ಉತ್ಪನ್ನಗಳ ಖರೀದಿ, ಮಾರುಕಟ್ಟೆ, ಸಾಲ, ದಾಸ್ತಾನು ವ್ಯವಸ್ಥೆಗಳು ಅವಗಣನೆಗೆ ಗುರಿಯಾಗಿ ನರಳಿವೆ. ಮಳೆಯನ್ನೇ ಅತಿಯಾಗಿ ಆಶ್ರಯಿಸಿರುವ ಒಕ್ಕಲುತನ, ಧಾರಣೆಗಳ ಕುಸಿತ, ಒಂದೆಕರೆ ಗಾತ್ರಕ್ಕೆ ಕುಗ್ಗುತ್ತ ನಡೆದಿರುವ ಭೂ ಹಿಡುವಳಿಗಳು, ಹುಚ್ಚುಚ್ಚಾಗಿ ವರ್ತಿಸಿರುವ ಹವಾಮಾನ, ಜಾಳಾಗುತ್ತಿರುವ ನೆಲ, ಕೃಷಿಯೀತರ ಉದ್ದೇಶಗಳಿಗೆ ಕೃಷಿ ಭೂಮಿಯ ಪರಿವರ್ತನೆ ಈ ವಲಯವನ್ನು ಹಿಂಡಿ ಹಿಪ್ಪೆ ಮಾಡಿವೆ.
ರೈತರ ಆತ್ಮಹತ್ಯಾ ಸರಣಿಯ ಬೇರುಗಳಿರುವುದು 1991ರಲ್ಲಿ ಪರಿಚಯಿಸಿದ ಹೊಸ ಆರ್ಥಿಕ ನೀತಿ ಮತ್ತು ಅಲ್ಲಿಂದ ನಾಲ್ಕು ವರ್ಷಗಳ ನಂತರ ಜಾರಿಗೆ ಬಂದ ಕೃಷಿಗೆ ಸಂಬಂಧಿಸಿದ ಒಪ್ಪಂದದ ಡಬ್ಲ್ಯೂ.ಟಿ.ಒ. ನಿಯಮಗಳಲ್ಲಿ. ಜಾಗತಿಕ ಮಾರುಕಟ್ಟೆಗಳು, ದೈತ್ಯ ಕಾರ್ಪೊರೇಷನ್ನುಗಳ ಅದೃಶ್ಯ ಹಸ್ತಗಳ ಕೈಗೆ ನಮ್ಮ ರೈತನ ಅಳಿವು ಉಳಿವುಗಳನ್ನು ಒಪ್ಪಿಸಿ ದಶಕಗಳೇ ಗತಿಸಿವೆ.
ತೊಂಬತ್ತರ ದಶಕಗಳಲ್ಲಿ ಹೊಗೆಯಾಡಿದ ಕೃಷಿ ಬಿಕ್ಕಟ್ಟು ಹತ್ತೇ ವರ್ಷಗಳಲ್ಲಿ ಸ್ಫೋಟಿಸಿತು. ಜಾಗತಿಕ ವ್ಯಾಪಾರ ವಾಣಿಜ್ಯ ಉದಾರೀಕರಣದಲ್ಲಿ ಈ ಬಿಕ್ಕಟ್ಟಿನ ಬೇರುಗಳನ್ನು ಕಾಣಲಾಗುತ್ತದೆ. ಭಾರೀ ಮೊತ್ತದ ಸಬ್ಸಿಡಿಗಳನ್ನು ಪಡೆದ ವಿದೇಶೀ ಕೃಷಿ ಉತ್ಪನ್ನಗಳಿಂದ ತುಂಬಿದ ಏರಿಳಿತದ ತಳಮಳ ತಳ್ಳಂಕಗಳ ಮಾರುಕಟ್ಟೆಯ ಬೇಗುದಿಗೆ ಭಾರತೀಯ ರೈತನನ್ನು ಎಸೆಯಲಾಯಿತು. ಆತ ಆತ್ಮಹತ್ಯೆಗಳು ವಲಸೆಗಳಿಗೆ ಶರಣಾದ. ರೈತ ಪ್ರತಿಭಟನೆಗಳು ಸ್ಥಳೀಯ ಮತ್ತು ರಾಷ್ಟ್ರಮಟ್ಟದಲ್ಲಿ ಕಾಲ ಕಾಲಕ್ಕೆ ನಡೆಯುತ್ತಲೇ ಇವೆ. ಇತ್ತೀಚಿನ ವರ್ಷಗಳಲ್ಲಿ ಜೈಪುರ, ದೆಹಲಿ, ಮುಂಬಯಿ ರೈತರ ಭಾರೀ ಪಾದಯಾತ್ರೆ ಪ್ರತಿಭಟನೆಗಳಿಗೆ ಸಾಕ್ಷಿಯಾಗಿವೆ. ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ಮುಖ ಅಡಿಯಾಗಿ ಬೋರಲು ಬಿದ್ದಿದೆ. ರೈತ ವಿರೋಧಿ ನೀತಿಗಳನ್ನು ಪಾಲಿಸಲಾಗುತ್ತಿದೆ.
ಸಾರ್ವಜನಿಕ ವಲಯದ ಬ್ಯಾಂಕುಗಳು ಸಾಲ ನೀಡಿಕೆಗೆ ಮೀಸಲಾದ ಹಣದ ಶೇ.18ರಷ್ಟನ್ನು ಕೖಷಿವಲಯಕ್ಕೆ ನೀಡಬೇಕೆಂಬ ನಿರ್ದೇಶನ ಜಾರಿಯಾಗುತ್ತಿಲ್ಲ. ಕಾರ್ಪೊರೇಟ್ ಕಂಪನಿಗಳಿಗೆ ಮೋದಿ ಸರ್ಕಾರ ಹತ್ತಾರು ಲಕ್ಷ ಕೋಟಿ ತೆರಿಗೆ ರಿಯಾಯಿತಿ ಘೋಷಿಸಿದೆ. ಲಕ್ಷಾಂತರ ಕೋಟಿ ರುಪಾಯಿಗಳ ಸಾಲವನ್ನು ವಸೂಲಿಯಾಗದ ಸಾಲದ ಲೆಕ್ಕಕ್ಕೆ ಬರೆದುಕೊಳ್ಳಲಾಗಿದೆ.
ಏರುತ್ತಲೇ ಹೋಗುವ ಉತ್ಪಾದನಾ ವೆಚ್ಚ ಮತ್ತು ಕುಸಿಯುತ್ತಲೇ ಹೋಗುವ ಕೃಷಿ ಉತ್ಪನ್ನಗಳ ಧಾರಣೆಗಳು, ಧಾರಾಳ ಸರ್ಕಾರಿ ಸಬ್ಸಿಡಿಗಳ ಫಲಾನುಭವಿ ಅಮೆರಿಕೆಯ ರೈತನ ಜೊತೆ ತನಗೆ ಗೊತ್ತಿಲ್ಲದೆಯೇ ಸ್ಪರ್ಧಿಸುತ್ತಿರುವ ವಿಷಮ ಸ್ಥಿತಿ ಹಾಗೂ ಆಕಾಶ ಕುಸುಮ ಎನಿಸಿದ ಕೃಷಿ ಸಾಲದ ಎಲ್ಲ ಸಂಕಟಗಳು ಒಟ್ಟುಗೂಡಿ ನಮ್ಮ ಅಸಹಾಯಕ ರೈತನನ್ನು ಸಾಲದ ಬಲೆಗೆ ಕೆಡವಿವೆ. ಸುಲಭಕ್ಕೆ ಹರಿದು ಒಗೆಯಲಾಗದ ದುಷ್ಟ ಜೇಡನ ಬಲೆಯಿದು. ದೇಶದ ಶೇ.60ರಷ್ಟು ಜನಸಂಖ್ಯೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕೃಷಿ ವಲಯದಲ್ಲಿ ತನ್ನ ಅನ್ನ ಅರಿವೆ ನೀರು ನೆರಳುಗಳಿಗಾಗಿ ದುಡಿಯುತ್ತಿದೆ. ರೈತ ಕುಟುಂಬಗಳ ನಿಟ್ಟುಸಿರು, ಕಣ್ಣೀರು, ಅಸಹಾಯಕತೆ, ಆರ್ತನಾದಕ್ಕೆ ಲೋಕ ಕುರುಡು ಕಿವುಡು. ಹಳ್ಳಿಗೆ ಬಿದ್ದ ಬೆಂಕಿ ಒಂದಲ್ಲ ಒಂದು ದಿನ ದಿಲ್ಲಿಗೂ ಬಿದ್ದೀತು.
ಕಾರು, ಸಾಫ್ಟ್ ವೇರು, ಷೇರು, ಸರ್ಕಾರಿ ಹುದ್ದೆಗಳು, ಕಾರ್ಪೊರೇಟುಗಳ ವಿಲಾಸ, ಫ್ಲ್ಯಾಟು, ಕಾಂಡೋಮಿನಿಯಮಂ, ಮೋಜು ಮಜಾ ಐಷಾರಾಮಗಳ ಮತ್ತಿನಲ್ಲಿ ಮುಳು ಮುಳುಗಿ ಏಳುತ್ತಿರುವ ಮತ್ತೊಂದು ಭಾರತವಿದೆಯಲ್ಲ, ಅದರ ಕಾಲ ಕೆಳಕ್ಕೂ ರೈತನ ಸಂಕಟದ ಬೆಂಕಿ ಹರಿದು ಉರಿಯಲಿದೆ.
ಈ ಸಮಸ್ಯೆಗೂ ನಮಗೂ ಸಂಬಂಧವೇ ಇಲ್ಲ ಎಂಬ ಆತ್ಮವಂಚನೆಯ ಧೋರಣೆಯನ್ನು ಸೊಕ್ಕಿರುವ ಸಮುದಾಯಗಳು ಬಿಟ್ಟುಕೊಡಲೇಬೇಕು. ಮಹಾತ್ಮಾಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಹಸಿದ ಒಡಲುಗಳಿಗೆ ಅನ್ನದ ಖಾತ್ರಿ ಯೋಜನೆಗಳು ತಮ್ಮ ತಿಜೋರಿಗಳಿಗೆ ಇಕ್ಕಿದ ಕನ್ನ ಎಂದು ಭಾವಿಸಿ ಮುಖ ಊದಿಸಿಕೊಂಡು ಚುಚ್ಚು ಮಾತಾಡುತ್ತ ತಿರುಗುತ್ತಾರೆ ಹೊಟ್ಟೆ ತುಂಬಿದ ನೆತ್ತಿ ತಂಪಾದ ಈ ಮಂದಿ. ಷೇರು ಸರ್ಟಿಫಿಕೇಟುಗಳು, ಕಾಗದದ ರೂಪಾಯಿ ನೋಟುಗಳು, ಲೋಹದ ನಾಣ್ಯಗಳು, ಬೆಳ್ಳಿ ಬಂಗಾರಗಳು ಹೊಟ್ಟೆ ತುಂಬಿಸುವುದಿಲ್ಲ. ಹೊಟ್ಟೆ ತುಂಬಲು ನೆತ್ತಿ ತಂಪಾಗಲು ನೆಲವ ಉತ್ತು ಬಿತ್ತಿ ಬೆಳೆದ ಅನ್ನಾಹಾರವೇ ಬೇಕು ಎಂಬ ಸತ್ಯವನ್ನು ರೈತನೇ ಈ ವರ್ಗಕ್ಕೆ ನೆನಪು ಮಾಡಿಕೊಡಬೇಕಿದೆ.
1922ರ ಮಾರ್ಚ್ ತಿಂಗಳು. ದೇಶದ್ರೋಹದ ಆಪಾದನೆಯ ಮೇರೆಗೆ ಗಾಂಧೀಜಿಯನ್ನು ಬಂಧಿಸಿ ಅಹ್ಮದಾಬಾದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅಂದು ಜಾರಿಯಲ್ಲಿದ್ದ ಕಾನೂನಿನ ಪ್ರಕಾರ, ಜಾತಿ ಅಥವಾ ಕಸುಬಿನಿಂದ ತಮ್ಮನ್ನು ಗುರುತಿಸಿಕೊಳ್ಳುವಂತೆ ನ್ಯಾಯಾಧೀಶರು ಗಾಂಧೀಜಿಯನ್ನು ಕೇಳಿದರು. ‘ನಾನೊಬ್ಬರೈತ ಮತ್ತು ನೇಕಾರ’ ಎಂದರು ಗಾಂಧೀ. ಚಕಿತಗೊಂಡ ನ್ಯಾಯಾಧೀಶ ಪುನಃ ಅದೇ ಪ್ರಶ್ನೆ ಕೇಳಿದರು. ಗಾಂಧೀ ಅದೇ ಉತ್ತರವನ್ನೂ ನೀಡಿದರು.
ನೂರು ವರ್ಷಗಳ ಹಿಂದಿನ ಚಂಪಾರಣ್ ರೈತರ ಸ್ಥಿತಿಯೇ ಇಂದಿನ ಭಾರತದ ರೈತರ ಸ್ಥಿತಿಗತಿಯೂ ಆಗಿದೆ ಎನ್ನುತ್ತಾರೆ ಗಾಂಧೀಜಿಯ ಮೊಮ್ಮಗ ತುಷಾರ್ ಗಾಂಧೀ. ಅತಿ ದೀನ ದಲಿತ ರೈತರ ಶೋಷಣೆ ಇಂದಿಗೂ ನಿಂತಿಲ್ಲ. ಬ್ರಿಟಿಷರ ಭಾರತದಲ್ಲಿ ಲಾಭಬಡುಕತನವೇ ರೈತರ ಶೋಷಣೆಯ ಮೂಲವಾಗಿತ್ತು. ಸ್ವತಂತ್ರ ಭಾರತದಲ್ಲಿಯೂ ಈ ಸ್ಥಿತಿ ಬದಲಾಗಿಲ್ಲ. ಕಚ್ಚಾ ಉತ್ಪನ್ನವನ್ನು ಬಿಕರಿಗಿಟ್ಟ ರೈತ ಮತ್ತು ಸಿದ್ಧ ಉತ್ಪನ್ನವನ್ನು ಖರೀದಿಸುವ ಬಳಕೆದಾರ ಇಬ್ಬರ ಕಣ್ಣಿಗೂ ಸುಣ್ಣವೇ. ಬೆಣ್ಣೆ ಉಣ್ಣುವವರು ಅಂದೂ ಪೊಗದಸ್ತಾಗಿದ್ದರು, ಇಂದೂ ಪೊಗದಸ್ತಾಗೇ ಮೆರೆದಿದ್ದಾರೆ.ರೈತರನ್ನು ಬಾಧಿಸುವ ಸಂಗತಿಗಳು ಅಂತಿಮವಾಗಿ ಇಡೀ ಸಮಾಜವನ್ನು ಬಾಧಿಸುತ್ತವೆ ಎಂಬ ಆಳದ ತಿಳಿವಳಿಕೆ ಗಾಂಧೀಜಿಗೆ ಇತ್ತು.
ಮೋದಿ ಸರ್ಕಾರದ ಕೃಷಿ ದರ ನೀತಿ, ಭೂಸ್ವಾಧೀನ ನೀತಿ, ಬೆಳೆವಿಮೆ ರೈತರಿಗೆ ನೆರವಾಗಿಲ್ಲ. ನೋಟು ರದ್ದು ಮತ್ತು ಹಸಿಬಿಸಿ ಜಿ.ಎಸ್.ಟಿ. ಜಾರಿಯಿಂದ ಹೊಡೆತ ನೀಡಿವೆ. ಜಾನುವಾರುಗಳ ಸಾಕಣೆಗೆ ಮುಳುವಾಗಿದ್ದಾರೆ ಸರ್ಕಾರಿ ಪ್ರಾಯೋಜಿತ ‘ಗೋರಕ್ಷಕರು’. ಕಪಟವಿಲ್ಲದ ಸಾಲ ಮನ್ನಾ, ವಿದ್ಯುತ್ ದರಗಳಲ್ಲಿ ಇಳಿಕೆ, ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ದರ, ಕಬ್ಬು ಮಾರಾಟದ ಬಾಕಿ ಬೆಟ್ಟದ ತೀರುವಳಿ ಮುಂತಾದ ಬೇಡಿಕೆಗಳಲ್ಲಿ ಯಾವುವೂ ಈಡೇರುವಂತೆ ಕಾಣುತ್ತಿಲ್ಲ. ಸರ್ಕಾರಕ್ಕೆ ರೈತರು ಆದ್ಯತೆಯಾಗಿ ಕಾಣುತ್ತಿಲ್ಲ.
ಇದನ್ನು ಓದಿ ‘ಭಾರತ’ವೆಂಬುದು ಶ್ರೇಷ್ಠವೇ? ‘ಇಂಡಿಯಾ’ ಕನಿಷ್ಠವೇ?
ಶೋಷಣೆಯಿಂದ ಬಿಡುಗಡೆಯಾಗುವ ಚಂಪಾರಣ್ ರೈತರ ಕನಸು ಸ್ವತಂತ್ರ ಭಾರತದಲ್ಲಿ ನನಸಾಗಿಲ್ಲ. ನೀಲಿ ಬೆಳೆದುಕೊಡುವಂತೆೆ ಕತ್ತು ಹಿಸುಕಿದ ಬಿಳಿಯ ತೊಲಗಿದ ನಂತರ ಅವರ ಜಾಗವನ್ನು ಸಾಹುಕಾರ ಲೇವಾದೇವಿಗಾರರು, ಸ್ವತಂತ್ರ ಭಾರತದಲ್ಲಿ ಕಾರ್ಪೊರೇಟುಗಳ ಗುಲಾಮಗಿರಿಗೆ ಬಿದ್ದಿರುವ ಅಧಿಕಾರದಾಹಿಗಳು ತುಂಬಿದ್ದಾರೆ.
ರೈತರನ್ನು ಶೋಷಿಸುವ ಚಂಪಾರಣ್ ಗಳು ಸ್ವತಂತ್ರ ಭಾರತದಲ್ಲಿ ಇನ್ನಷ್ಟು ಹುಲುಸಾಗಿ ಬೆಳೆದಿವೆ. ಕೊಬ್ಬಿ ಹಬ್ಬಿವೆ ನೂರಾರು ಚಂಪಾರಣ್ ಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳತೊಡಗಿರುವ ಸಾವಿರಾರು ರೈತ ಕುಟುಂಬಗಳ ಕಷ್ಟ ಕಣ್ಣೀರುಗಳ ಕಥನಗಳನ್ನು ಆಲಿಸಲು, ಅವುಗಳನ್ನು ಕಂದು ತೊಗಲಿನ ಸಾಹೇಬರುಗಳ ಸರ್ಕಾರದ ಮುಂದಿರಿಸಿ ನ್ಯಾಯ ಕೇಳುವ ಗಾಂಧೀ ಈಗ ಇಲ್ಲ. ಇದ್ದಿದ್ದರೆ ಅವರು ಆಜೀವ ಪರ್ಯಂತ ಜೈಲಿನಲ್ಲಿ ಕೊಳೆಯುತ್ತಿದ್ದರು.

ಡಿ ಉಮಾಪತಿ
ಹಿರಿಯ ಪತ್ರಕರ್ತರು