ಈ ದಿನ ಸಂಪಾದಕೀಯ | ಭ್ರಷ್ಟಾಚಾರವೆಂಬ ಸ್ನಾನದ ಕೋಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಬೆತ್ತಲೆಯೇ…

Date:

ರಾಜಕೀಯ ಭ್ರಷ್ಟಾಚಾರದ ತಾಯಿಬೇರುಗಳಲ್ಲಿ ಒಂದಾಗಿರುವ ಗುತ್ತಿಗೆ ಕಾಮಗಾರಿಗಳ ಕೊಳೆಯನ್ನು ತೊಳೆಯಲು ಸಿದ್ದರಾಮಯ್ಯ ಸರ್ಕಾರ ಕ್ರಮಗಳನ್ನು ಜರುಗಿಸಬೇಕಿತ್ತು. ಈ ಕರ್ತವ್ಯ ನಿರ್ವಹಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ಇಲ್ಲಿಯ ತನಕ ವಿಫಲ ಆಗಿದೆ.

- Advertisement -

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ರಾಜ್ಯ ಸರ್ಕಾರದ ವಿರುದ್ಧ ಮುಂಬರುವ ಮಾರ್ಚ್ ಐದರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಭಾರೀ ಪ್ರತಿಭಟನೆ ನಡೆಸುವುದಾಗಿ ಸಾರಿದೆ. ಸುಮಾರು ₹31,000 – ₹37,000 ಕೋಟಿಗೂ ಹೆಚ್ಚು ಬಾಕಿ ಬಿಲ್‌ಗಳ ಪಾವತಿ ವಿಳಂಬದ ವಿರುದ್ಧ ಸಂಘವು ಇತ್ತೀಚಿನ ದಿನಗಳಲ್ಲಿ ಬಾರಿ ಬಾರಿ ದನಿಯೆತ್ತಿದೆ. ಬಾಕಿ ಬಿಲ್ ಗಳ ಪಾವತಿಯಲ್ಲಿ ಪಾರದರ್ಶಕತೆಗಾಗಿ ಆಗ್ರಹಿಸುತ್ತಿದೆ. ರಾಜ್ಯದ ಗುತ್ತಿಗೆದಾರರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಪ್ರಮುಖ ಸಂಸ್ಥೆಯಿದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಸಂಪತ್ತು ಮತ್ತು ಮನುಷ್ಯನ ನೈತಿಕತೆ: ಅರ್ಥಶಾಸ್ತ್ರದ ಇಗ್ ನೊಬೆಲ್...

ಪ್ರತಿವರ್ಷ ನೊಬೆಲ್ ಪ್ರಶಸ್ತಿ ಘೋಷಣೆಯಾಗುವ ಕೆಲವೇ ದಿನಗಳ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೊಬೆಲ್ ಪುರಸ್ಕೃತರ ಸಮ್ಮುಖದಲ್ಲೇ ಇಗ್ ನೊಬೆಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. "ಮೊದಲು ಜನರನ್ನು ನಗಿಸಬೇಕು, ನಂತರ ಅವರನ್ನು ಆಳವಾಗಿ ಯೋಚಿಸುವಂತೆ...

ಬಾಕಿ ಬಿಲ್ ಪಾವತಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ‘ಪರ್ಸೆಂಟೇಜ್’ ಲಂಚ ಕೇಳುತ್ತಿದ್ದಾರೆಂದು ಸಂಘದ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿ ಆರೋಪ ಮಾಡಿದ್ದಾರೆ.

ಭರವಸೆಯ ವಿನಾ ತಮಗೆ ಯಾವ ಪರಿಹಾರವೂ ದೊರೆತಿಲ್ಲ. ಬಾಕಿ ಬಿಲ್ ಪಾವತಿಯಲ್ಲಿ ಮೂರು ವರ್ಷಗಳ ವಿಳಂಬವು ಸಣ್ಣ ಮತ್ತು ಮಧ್ಯಮ ವಹಿವಾಟಿನ ಗುತ್ತಿಗೆದಾರನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡಿದೆ. ಕಾಮಗಾರಿಗಳ ಬಿಲ್ ಪಾವತಿಯ ವಿಚಾರದಲ್ಲಿ ‘ಜ್ಯೇಷ್ಠತೆ’ ಅಥವಾ ‘ಸರದಿ’ಯ ಪಾಲನೆ ಆಗುತ್ತಿಲ್ಲ ಎಂದೂ ಸಂಘ ದೂರಿದೆ.

ಲಂಚದ ಶೇಕಡಾವಾರು ಪ್ರಮಾಣವನ್ನು ಸಂಘ ಬಹಿರಂಗಪಡಿಸಿಲ್ಲ. ಆದರೆ ಬಿಜೆಪಿಯ ಅವಧಿಗಿಂತ ಹೆಚ್ಚಾಗಿದೆ ಎಂದಿದೆ.

ಬದಲಿಗೆ ಲಂಚದ ಪ್ರಮಾಣ ಬಿಜೆಪಿ ಅವಧಿಗಿಂತ ಹೆಚ್ಚಾಗಿದೆ ಎಂಬ ಗುತ್ತಿಗೆದಾರರ ಸಂಘದ ಆರೋಪ ತೀವ್ರ ಗಂಭೀರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಿಷಯ ಕುರಿತು ಈವರೆಗೆ ಸಂಘದ ಪ್ರತಿನಿಧಿಗಳನ್ನು ಭೇಟಿ ಮಾಡಿಲ್ಲ. ಮಾಡಿದರೆ ಲಂಚದ ಪ್ರಮಾಣ ಮತ್ತು ಯಾವ್ಯಾವ ಅಧಿಕಾರಿಗಳು ಮತ್ತು ಮಂತ್ರಿಗಳು ಲಂಚ ಕೇಳುತ್ತಿದ್ದಾರೆಂದು ಅವರ ಮುಂದೆ ಹೇಳುವುದಾಗಿ ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗುತ್ತಿಗೆ ಲಂಚದ ವಿಷಯವನ್ನು ಬಹುದೊಡ್ಡ ರೀತಿಯಲ್ಲಿ ಚುನಾವಣಾ ವಿಷಯ ಆಗಿಸಿತ್ತು. ಶೇ.40ರ ಲಂಚದ ಸರ್ಕಾರ ಎಂದು ಬಿಜೆಪಿಯನ್ನು ಹಂಗಿಸುವ ಭಾರೀ ಪ್ರಚಾರವನ್ನೇ ನಡೆಸಿತು. ತರುವಾಯ ಅಧಿಕಾರ ಹಿಡಿಯಿತು. ಬಿಜೆಪಿಯ ಶೇ.40ರ ಭ್ರಷ್ಚಾಚಾರವನ್ನು ಮತದಾರರ ಮುಂದೆ ಎದ್ದು ಕಾಣುವಂತೆ ಬಿಂಬಿಸಿ ಅದರ ಚುನಾವಣಾ ಲಾಭವನ್ನೂ ಪಡೆಯಿತು. ಈ ತರ್ಕದ ಪ್ರಕಾರ ಕಾಂಗ್ರೆಸ್ ಸರ್ಕಾರ ಈ ಹೊತ್ತಿಗೆ, ‘ಪರ್ಸೆಂಟೇಜ್’ ಗುತ್ತಿಗೆ ಲಂಚವನ್ನು ತೊಲಗಿಸಬೇಕಿತ್ತಲ್ಲವೇ?

ಗುತ್ತಿಗೆದಾರರ ಸಂಘವು ಬಿಜೆಪಿ ಸರ್ಕಾರದ ವಿರುದ್ಧ ಮಾಡಿದ್ದ ಶೇ.40 ಪರ್ಸೆಂಟ್ ಕಮಿಷನ್ ಆರೋಪ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರ, 2023ರ ಆಗಸ್ಟ್ ನಲ್ಲಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಏಕವ್ಯಕ್ತಿ ವಿಚಾರಣಾ ಆಯೋಗವನ್ನು ರಚಿಸಿತ್ತು. ಈ ಆಯೋಗ 2025ರಲ್ಲಿ ಮಧ್ಯಂತರ ವರದಿ ನೀಡಿತು.

2019-2023ರ ಅವಧಿಯಲ್ಲಿ 50 ಲಕ್ಷ ರುಪಾಯಿ ವೆಚ್ಚವನ್ನು ಮೀರಿದ  ಲೋಕೋಪಯೋಗಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ನಗರಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳಲ್ಲಿ ಅಕ್ರಮಗಳ ಆರೋಪಗಳನ್ನು ಆಯೋಗದ ವಿಚಾರಣೆಯ ವ್ಯಾಪ್ತಿಗೆ ಸೇರಿಸಲಾಗಿತ್ತು. ಬಿಜೆಪಿ ನಿರ್ದಿಷ್ಟ ಆಡಳಿತಾವಧಿಯಲ್ಲಿ ಐದು ಇಲಾಖೆಗಳಲ್ಲಿ 4.7 ಲಕ್ಷ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಅವುಗಳ ಪೈಕಿ 3.2 ಲಕ್ಷ ಪೂರ್ಣಗೊಂಡಿದ್ದವು. ಆಯೋಗ ಐದು ಇಲಾಖೆಗಳ 1,729 ಕಾಮಗಾರಿಗಳ ಪರಿಶೀಲನೆ ನಡೆಸಿತು.

2022-23ರ ವಿತ್ತೀಯ ವರ್ಷದಲ್ಲಿ ವಿಧಾನಸಭಾ ಚುನಾವಣೆಗಳು ತಿಂಗಳುಗಳಷ್ಟೇ ದೂರ ಉಳಿದಿದ್ದ ಹಂತದಲ್ಲಿ ಕರೆಯಲಾಗಿದ್ದ ಟೆಂಡರುಗಳ ಮೊತ್ತ ಭಾರೀ ಪ್ರಮಾಣದಲ್ಲಿ ಏರಿದ್ದನ್ನು ಆಯೋಗ ವಿಶೇಷವಾಗಿ ಪ್ರಸ್ತಾಪಿಸಿದೆ. 2021-22ರ ವಿತ್ತೀಯ ವರ್ಷದಲ್ಲಿ ಕರೆಯಲಾಗಿದ್ದ ಐದು ಇಲಾಖೆಗಳ ಟೆಂಡರುಗಳ ಒಟ್ಟು ಮೊತ್ತ 49,474 ಕೋಟಿ ರುಪಾಯಿಗಳಷ್ಟಿತ್ತು. 2022-23ರ ವಿತ್ತೀಯ ವರ್ಷದ ಹೊತ್ತಿಗೆ ಈ ಮೊತ್ತ 1,454,554 ಕೋಟಿ ರುಪಾಯಿಗಳಿಗೆ ಜಿಗಿಯಿತು. ಅರ್ಥಾತ್ ಶೇ.300ರಷ್ಟು ಹೆಚ್ಚಳ ಎಂದು ಆಯೋಗ ಹೇಳಿದೆ.

“ಗುತ್ತಿಗೆದಾರರ ಸಂಘ ಮಾಡಿರುವ ಆಪಾದನೆಗಳಲ್ಲಿ ನೂರಕ್ಕೆ ನೂರು ನಿಜಾಂಶ ಇರಲಾರದು. ಸಂಘವು ತನ್ನ ಆಪಾದನೆಗಳನ್ನು ರುಜುವಾತು ಮಾಡುವಲ್ಲಿ ವಿಫಲವಾಗಿರಬಹುದು. ತಮ್ಮನ್ನು ಬಲಿಪಶುಗಳನ್ನಾಗಿಸಬಹುದು ಎಂಬ ಭಯ ಶಂಕೆಗಳು ಅವರನ್ನು ಕಾಡಿರಬಹುದು. ಆದರೆ ಸಾರ್ವಜನಿಕ ದೂರುಗಳನ್ನು ಪರಿಶೀಲಿಸಿದಾಗ ಟೆಂಡರ್ ಪ್ರಕ್ರಿಯೆಗೆ ಮುನ್ನ ಮತ್ತು ನಂತರ ಭ್ರಷ್ಟಚಾರ ನಡೆದಿರುವ ಸೂಚನೆಗಳು ಮೇಲ್ನೋಟಕ್ಕೆ ಕಂಡು ಬಂದಿವೆ” ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಶೇ.8ರಷ್ಟು ಕಾಮಗಾರಿಗಳನ್ನು ಆಡಳಿತಾತ್ಮಕ ಅನುಮೋದನೆ ಇಲ್ಲದೆ ಕೈಗೊಳ್ಳಲಾಗಿದೆ. ಶೇ.14ರಷ್ಟು ಕಾಮಗಾರಿಗಳಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಸರಿಯಾಗಿ ಅನುಸರಿಸಿಲ್ಲ. ಶೇ.17ರಷ್ಟು ಕಾಮಗಾರಿಗಳಲ್ಲಿ ಭದ್ರತಾ ಠೇವಣಿಗಳನ್ನು ಸಕಾಲಕ್ಕೆ ಬಿಡುಗಡೆ ಮಾಡಿಲ್ಲ. ಶೇ.10ರಷ್ಟು ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಪಾಡಿಲ್ಲ. ಶೇ.23ರಷ್ಟು ಕಾಮಗಾರಿಗಳ ಬಿಲ್ ಬಾಕಿ ಪಾವತಿಯಲ್ಲಿ ‘ಸರದಿ’ ಅಥವಾ ‘ಹಿರಿತನ’ವನ್ನು ಅನುಸರಿಸಿಲ್ಲ ಎಂದೂ ಮಧ್ಯಂತರ ವರದಿ ಸಾರಿದೆ.

ಪೂರ್ಣಗೊಂಡಿರುವ ಕಾಮಗಾರಿಗಳ ಬಿಲ್ ಗಳ ಪಾವತಿಯನ್ನು 60 ದಿನಗಳ ಒಳಗಾಗಿ ಕಡ್ಡಾಯವಾಗಿ ಪಾವತಿ ಮಾಡಬೇಕು ಎಂಬ ಶಿಫಾರಸನ್ನೂ ಆಯೋಗ ಮಾಡಿತ್ತು.

ಆಯೋಗವು ವರದಿ ಸಲ್ಲಿಸಿ, ಮುಂದಿನ ತಿಂಗಳ ಮಾರ್ಚ್ ಐದಕ್ಕೆ ಒಂದು ವರ್ಷ ತುಂಬಲಿದೆ. ವರದಿಯಲ್ಲಿ ಕಂಡು ಬಂದಿರುವ ಅಕ್ರಮಗಳ ತನಿಖೆಗೆಂದು ರಾಜ್ಯ ಕಾಂಗ್ರೆಸ್ ಸರ್ಕಾರ 2025ರ ಮಾರ್ಚ್ ತಿಂಗಳಲ್ಲೇ ವಿಶೇಷ ತನಿಖಾ ತಂಡವನ್ನು ನೇಮಕ ಮಾಡಿತು.

 ಬಿಜೆಪಿ ಸರ್ಕಾರದ ವಿರುದ್ಧ ಆಪಾದನೆಗಳನ್ನು ಮಾಡಿ, ವಿಚಾರಣಾ ಆಯೋಗವನ್ನು ರಚಿಸಿದ ರಾಜ್ಯ ಸರ್ಕಾರ, ಆಯೋಗದ ಮಧ್ಯಂತರ ವರದಿಯನ್ನು ಬಹಿರಂಗ ಚರ್ಚೆಗಿಡಬೇಕಿತ್ತು. ಜಾರಿ ಯೋಗ್ಯ ಶಿಫಾರಸುಗಳನ್ನು ಅಂಗೀಕರಿಸಬೇಕಿತ್ತು. ಅಂಗೀಕರಿಸಲಾದ ಶಿಫಾರಸುಗಳನ್ನು ಜಾರಿಗೆ ತರಬೇಕಿತ್ತು. ತಾನು ನೇಮಕ ಮಾಡಿದ್ದ ವಿಶೇಷ ತನಿಖಾ ತಂಡದ ಕಾರ್ಯಪ್ರಗತಿ ಏನೆಂದು ಜನತೆಗೆ ತಿಳಿಸಬೇಕಿತ್ತು. ಹಾಲಿ ಕಾಂಗ್ರೆಸ್ ಸರ್ಕಾರದಲ್ಲಿ ಪಡೆಯಲಾಗುತ್ತಿರುವ ಪರ್ಸೆಂಟೇಜ್ ಲಂಚ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದ್ದದ್ದಕ್ಕಿಂತ ಹೆಚ್ಚು ಎಂಬ ಗುತ್ತಿಗೆದಾರರ ಗಂಭೀರ ಆಪಾದನೆಗೆ ಆಧಾರವಿಲ್ಲ ಎಂದು ಪುರಾವೆಗಳ ಸಹಿತ ಅಲ್ಲಗಳೆಯಬೇಕಿತ್ತು.

ರಾಜಕೀಯ ಭ್ರಷ್ಟಾಚಾರದ ತಾಯಿಬೇರುಗಳಲ್ಲಿ ಒಂದಾಗಿರುವ ಗುತ್ತಿಗೆ ಕಾಮಗಾರಿಗಳ ಕೊಳೆಯನ್ನು ತೊಳೆಯಲು ಕ್ರಮಗಳನ್ನು ಜರುಗಿಸಬೇಕಿತ್ತು. ಇದು ರಾಜ್ಯ ಸರ್ಕಾರದ ಕರ್ತವ್ಯವೇ ಆಗಿತ್ತು. ಈ ಕರ್ತವ್ಯ ನಿರ್ವಹಣೆಯಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲ ಆಗಿದೆ.

ಆದರೆ ಬಿಜೆಪಿಯನ್ನು ಶೇ.40ರ ಪರ್ಸೆಂಟೇಜ್ ಭ್ರಷ್ಟಾಚಾರದ ಕಟಕಟೆಯಲ್ಲಿ ನಿಲ್ಲಿಸಿದ್ದ ಅದೇ ಕಾಂಗ್ರೆಸ್ ಪಕ್ಷ, ಇದೀಗ ಅದೇ ಕಟಕಟೆಯಲ್ಲಿ ತಾನು ನಿಲ್ಲಬೇಕಾಗಿ ಬಂದಿರುವುದು ಬಹು ದೊಡ್ಡ ವಿಡಂಬನೆ.  

‘ಹಮಾಮ್ ಮೇಂ ಸಬ್ ನಂಗಾ’ (ಸ್ನಾನದ ಕೋಣೆಯಲ್ಲಿ ಎಲ್ಲರೂ ಬೆತ್ತಲೆಯೇ) ಎಂಬ ಗಾದೆ ಮಾತು ಉತ್ತರ ಕರ್ನಾಟಕದಲ್ಲಿ ಈಗಲೂ ಚಾಲ್ತಿಯಲ್ಲಿದೆ. ಭ್ರಷ್ಟಾಚಾರವೆಂಬ ಸ್ನಾನದ ಕೋಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಬೆತ್ತಲೆಯೇ ಎಂಬ ಕಠಿಣ ಪ್ರಶ್ನೆ ಸಿದ್ದರಾಮಯ್ಯ ಸರ್ಕಾರದ ಮುಂದಿದೆ. ಸಮಜಾಯಿಷಿ ನೀಡುವುದು ಸರ್ಕಾರದ ಆದ್ಯ ಬಾಧ್ಯತೆ. ಇಲ್ಲದೆ ಹೋದರೆ ಉತ್ತರದಾಯಿತ್ವ ಎಂಬ ಜನತಾಂತ್ರಿಕ ಮೌಲ್ಯಕ್ಕೆ ಅರ್ಥವೇ ಉಳಿಯುವುದಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬಿಜೆಪಿ, ಭಕ್ತರು ಮತ್ತು ಸಾರ್ವಜನಿಕ ಸಭ್ಯತೆ

ದೇಶದ ರಾಜಕೀಯ ಇತಿಹಾಸವನ್ನು ತಿಳಿಯದ, ಮಹನೀಯರ ನಡೆ-ನುಡಿಗಳನ್ನು ಅರಿಯದ; ಅರಿತರೂ ಅಳವಡಿಸಿಕೊಳ್ಳದ...

ಈ ದಿನ ಸಂಪಾದಕೀಯ | ನಕಲಿ ಆಹಾರ ಮತ್ತು ಔಷಧ: ಜನರ ಜೀವದ ಜೊತೆ ಚೆಲ್ಲಾಟ

ಆಹಾರ ಮತ್ತು ಔಷಧಗಳ ಉತ್ಪಾದನೆ, ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ನಡೆಯುವ...

ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?

ಜಾತಿಪದ್ಧತಿಯೊಂದಿಗೆ ರಾಜಿ ಮಾಡಿಕೊಂಡ ಆರೆಸ್ಸೆಸ್ ಪ್ರಣೀತ ಸಾಮರಸ್ಯ ವಾದದಿಂದ ಅಸ್ಪೃಶ್ಯರು, ದಲಿತರು...

ಈ ದಿನ ಸಂಪಾದಕೀಯ | ಅಮೆರಿಕ ದಾದಾಗಿರಿಗೆ ಮೋದಿ ಮೌನ- ರಾಜತಾಂತ್ರಿಕತೆಯಲ್ಲ, ಶರಣಾಗತಿ!

ಅಮೆರಿಕ ಜೊತೆಗಿನ ಭಾರತದ ನಂಟು 'ಸಮಾನ ಸಾರ್ವಭೌಮತ್ವ'ದ ಮೇಲೆ ಆಧಾರಿತವಾಗಿರಬೇಕೇ ಹೊರತು,...