ಮತದಾರರು ಈಗ ಜಾತಿ ಸಮೀಕರಣಗಳನ್ನು ಮೀರಿ ಉಮೇದುವಾರನ ವರ್ಚಸ್ಸು, ಉದ್ಯೋಗ, ವಲಸೆ, ಶಿಕ್ಷಣ ಆಡಳಿತದಂತಹ ವಿಷಯಗಳತ್ತ ಗಮನ ಹರಿಸತೊಡಗಿರುವ ಹಾಗೂ ಪರ್ಯಾಯ ರಾಜಕೀಯ ಶಕ್ತಿಯನ್ನು ಪ್ರೋತ್ಸಾಹಿಸುವ ಸುಳಿವನ್ನು ಬಾಂಕಿಪುರ ಫಲಿತಾಂಶ ನೀಡಿದೆ.
ಬಿಹಾರ, ಮಧ್ಯಪ್ರದೇಶ ಹಾಗೂ ಗುಜರಾತಿನಲ್ಲಿ ನಡೆದ ಮೂರು ವಿಧಾನಸಭಾ ಚುನಾವಣೆ ಫಲಿತಾಂಶಗಳು ಹೊರಬಿದ್ದಿವೆ. ಈ ಪೈಕಿ ಬಿಹಾರದ ಬಾಂಕಿಪುರ ಕ್ಷೇತ್ರದ ಫಲಿತಾಂಶವನ್ನು ರಾಜನೀತಿಜ್ಞರು ಕುತೂಹಲದಿಂದ ಎದುರು ನೋಡುತ್ತಿದ್ದರು. ಜನಸುರಾಜ್ ಪಾರ್ಟಿಯ ಮುಖ್ಯಸ್ಥ ಮತ್ತು ರಾಜಕೀಯ ಪಕ್ಷಗಳ ಚುನಾವಣಾ ರಣನೀತಿಕಾರ ಪ್ರಶಾಂತ್ ಕಿಶೋರ್ ಪಾಂಡೆ ಈ ಕ್ಷೇತ್ರದಿಂದ ಆಯ್ಕೆಯಾಗಿರುವುದು ಬಿಹಾರದ ರಾಜಕಾರಣದಲ್ಲಿ ಮಹತ್ವದ ಮೈಲಿಗಲ್ಲು. 19 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸೋತಿರುವುದು ಗಮನಿಸಬೇಕಿರವು ಅಂಶ.
ಬಿಜೆಪಿಯ ಹೊಸ ಅಧ್ಯಕ್ಷ ನಿತಿನ್ ನಬೀನ್ ಸತತ ಐದನೆಯ ಸಲ ಆಯ್ಕೆಯಾಗಿದ್ದ ಕ್ಷೇತ್ರವಿದು. ಕೇಸರಿ ಪಕ್ಷದ ಅಚ್ಚರಿಯ ಆಯ್ಕೆಯಾಗಿ ಹೊರಹೊಮ್ಮಿದ ನಿತಿನ್ ಅವರನ್ನು ಬಿಜೆಪಿ ರಾಜ್ಯಸಭೆಗೆ ಆರಿಸಿ ಕಳಿಸಿದೆ. ತರುವಾಯ ಬಾಂಕಿಪುರ ವಿಧಾನಸಭಾ ಕ್ಷೇತ್ರ ತೆರವಾಗಿತ್ತು.
ಒಂಭತ್ತು ತಿಂಗಳ ಹಿಂದೆ 2025ರ ನವೆಂಬರ್ ನಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಪ್ರಶಾಂತ್ ಕಿಶೋರ್ ಭಾರೀ ಸೋಲು ಅನುಭವಿಸಿದ್ದರು. 238 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಈ ಎಲ್ಲ ಕ್ಷೇತ್ರಗಳಲ್ಲಿಯೂ ಅವರ ಉಮೇದುವಾರರು ಠೇವಣಿ ಕಳೆದುಕೊಂಡಿದ್ದರು.
ರಾಜಕೀಯ ವಿಶ್ಲೇಷಕರು ಪ್ರಶಾಂತ್ ಕಿಶೋರ್ ಅವರ ರಾಜಕಾರಣದ ‘ಅವಸಾನ ವಾರ್ತೆ’ ವಾರ್ತೆಯನ್ನು ಬರೆದಿದ್ದರು. ಪ್ರಶಾಂತ್ ರಾಜಕಾರಣ ಆರಂಭಗೊಳ್ಳುವ ಮುನ್ನವೇ ಅಂತ್ಯಗೊಂಡಿದೆ ಎಂದಿದ್ದರು. ಬಾಂಕೀಪುರದಲ್ಲಿ ಜನಸುರಾಜ್ ಪಾರ್ಟಿಯ ನಾಯಕನ ಗೆಲುವು ಈ ಭವಿಷ್ಯವಾಣಿಗಳನ್ನು ಸುಳ್ಳಾಗಿಸಿದೆ. ಬಿಹಾರದ ರಾಜಧಾನಿ ಪಟನಾದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಾಂಕಿಪುರವೂ ಒಂದು. ಬಿಜೆಪಿ ಇಲ್ಲಿ ಶೇ.50ರಷ್ಟು ಮತಗಳನ್ನು ಬಾಚಿಕೊಂಡು ಗೆಲ್ಲುತ್ತಲಿತ್ತು.
ಈ ಕ್ಷೇತ್ರವನ್ನು ಗೆದ್ದಿರುವ ಪ್ರಶಾಂತ್ ಬಿಹಾರವನ್ನು ಬಿಟ್ಟು ಪಲಾಯನ ಮಾಡುವುದಿಲ್ಲ ಎಂಬ ಮಾತನ್ನು ನಡೆಸಿ ತೋರಿದ್ದಾರೆ. 2026ರ ಫೆಬ್ರವರಿಯಿಂದ ಬಿಹಾರ ನವನಿರ್ಮಾಣ ಯಾತ್ರೆ ಶುರು ಮಾಡಿದರು. ಪಟನಾದ ತಮ್ಮ ಬಂಗಲೆ ತೊರೆದು ಬಿಹಾರ ನವನಿರ್ಮಾಣ ಆಶ್ರಮವಾಸಿಯಾದರು. ಜನಸುರಾಜ್ ಪಕ್ಷದ ಕಾರ್ಯಕರ್ತರಲ್ಲಿ ನಿರಾಸೆ ನೆಲೆಸಿತ್ತು. ಪುನಶ್ಚೇತನಕ್ಕೆ ದೊಡ್ಡ ರೀತಿಯ ಗೆಲುವಿನ ಅಗತ್ಯವಿತ್ತು. ಬಿಜೆಪಿಯ ಭದ್ರಕೋಟೆ ಬಾಂಕಿಪುರವನ್ನು ದೊಡ್ಡ ಮತಗಳ ಅಂತರದಿಂದ ಗೆದ್ದಿರುವ ಬೆಳವಣಿಗೆ ಅವರ ಕಾರ್ಯಕರ್ತರು-ಬೆಂಬಲಿಗರಲ್ಲಿ ಹೊಸ ಹುರುಪು ಮೂಡಿಸಿದೆ.
ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಬೆಂಬಲಿಸುವುದರಿಂದ ನಾವು ಗೆಲ್ಲುವುದಿಲ್ಲ. ದೀರ್ಘಕಾಲದಿಂದ ಬಿಜೆಪಿಗೆ ವೋಟು ನೀಡುತ್ತ ಬಂದಿರುವ ಬಹುದೊಡ್ಡ ಮತದಾರ ಸಮೂಹವು ಬದಲಾವಣೆಯ ಹೆಸರಿನಲ್ಲಿ ನಮಗೆ ಮತ ನೀಡಿದಾಗ ಮಾತ್ರವೇ ನಮ್ಮ ಪಕ್ಷ ಗೆಲ್ಲುವುದು ಸಾಧ್ಯ ಎಂಬ ಸೂತ್ರವನ್ನು ಪ್ರಶಾಂತ್ ತಮ್ಮ ಕಾರ್ಯಕರ್ತರು-ಬೆಂಬಲಿಗರ ಮುಂದಿಟ್ಟಿದ್ದರು. ಇದೀಗ ಬಿಜೆಪಿಯ ಸವರ್ಣ ಮತದಾರರು ಮತ್ತು ರಾಷ್ಟ್ರೀಯ ಜನತಾದಳವನ್ನು ಬೆಂಬಲಿಸುತ್ತಿದ್ದ ಮುಸಲ್ಮಾನರು-ಯಾದವರು ಪ್ರಶಾಂತ್ ಕಿಶೋರ್ ಅವರನ್ನು ಗೆಲ್ಲಿಸಿದ್ದಾರೆ.
ರಾಮಮಂದಿರದ ದಕ್ಷಿಣೆ ಕಳ್ಳತನ, ಪೆಟ್ರೋಲ್ ಗೆ ಎಥೆನಾಲ್ ಮಿಶ್ರಣ, ಪ್ರಶ್ನಪತ್ರಿಕೆ ಸೋರಿಕೆ, ಜೆನ್-ಝೀ ಪ್ರತಿಭಟನೆ, ಪೊಲೀಸ್ ದೌರ್ಜನ್ಯ, ಸಂಸತ್ ಅಧಿವೇಶನದಿಂದ ದೂರ ಉಳಿದ ಮೋದಿ-ಅಮಿತ್ ಶಾ ಮುಂತಾದ ಬೆಳವಣಿಗೆಗಳು ನಿಶ್ಚಿತವಾಗಿ ಬಾಂಕಿಪುರ ಉಪಚುನಾವಣೆಯನ್ನು ಪ್ರಭಾವಿಸಿವೆ.
ದಶಕಗಳಿಂದಲೂ ಬಿಹಾರದ ರಾಜಕಾರಣ ಯಾದವ, ಕುರ್ಮಿ, ರಜಪೂತ, ಭೂಮಿಹಾರ, ಮುಸಲ್ಮಾನ, ಅತಿ ಹಿಂದುಳಿದು ಜಾತಿಗಳು, ದಲಿತ-ಮಹಾದಲಿತ ಮುಂತಾದ ಜಾತಿ ಆಧಾರಿತ ಸಮೀಕರಣಗಳನ್ನು ಆಧರಿಸಿದೆ. ಪ್ರಶಾಂತ್ ಕಿಶೋರ್ ಅಭಿವೃದ್ಧಿಪರ ಆಡಳಿತದ ವಿಷಯವನ್ನು ಚುನಾವಣಾ ಚರ್ಚೆಯ ಕೇಂದ್ರಕ್ಕೆ ತಂದಿದ್ದರು. ಬಾಂಕಿಪುರದ ಸ್ಥಳೀಯ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರವನ್ನೂ ಪ್ರಸ್ತಾಪಿಸಿದ್ದರು. ವರ್ತಕರು, ಸವರ್ಣೀಯರು, ಕೊಳೆಗೇರಿಗಳನ್ನು ತಲುಪಿದ್ದರು. ಬಿಹಾರದ ಶೇ.89ರಷ್ಟು ಜನಸಂಖ್ಯೆ ಹಳ್ಳಿಗಳಲ್ಲಿ ಬದುಕುತ್ತಿದೆ. ಬಾಂಕಿಪುರದ ಮತದಾರರು ಸಾಕ್ಷರರು. ಕಾಯಸ್ಥರು, ವೈಶ್ಯ ಹಾಗೂ ಸವರ್ಣೀಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಂಯುಕ್ತ ಜನತಾದಳ, ರಾಷ್ಟ್ರೀಯ ಜನತಾದಳ ಹಾಗೂ ಬಿಜೆಪಿಗೆ ಇರುವಂತಹ ಬಲಿಷ್ಠ ಕಾರ್ಯಕರ್ತರ ಪಡೆ ಈಗಲೂ ಜನಸುರಾಜ್ ಬಳಿ ಇಲ್ಲ.
ಮತದಾರರು ಈಗ ಜಾತಿ ಸಮೀಕರಣಗಳನ್ನು ಮೀರಿ ಉಮೇದುವಾರನ ವರ್ಚಸ್ಸು, ಉದ್ಯೋಗ, ವಲಸೆ, ಶಿಕ್ಷಣ ಆಡಳಿತದಂತಹ ವಿಷಯಗಳತ್ತ ಗಮನ ಹರಿಸತೊಡಗಿರುವ ಹಾಗೂ ಪರ್ಯಾಯ ರಾಜಕೀಯ ಶಕ್ತಿಯನ್ನು ಪ್ರೋತ್ಸಾಹಿಸುವ ಸುಳಿವನ್ನು ಬಾಂಕಿಪುರ ಫಲಿತಾಂಶ ನೀಡಿದೆ.
ಅಂದಾಕ್ಷಣ ಜಾತಿಗ್ರಸ್ಥ ರಾಜಕಾರಣ ನಾಳೆಯೇ ಅಂತ್ಯಗೊಳ್ಳಲಿದೆ ಎಂದು ಭಾವಿಸುವಂತಿಲ್ಲ. ಆದರೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಒಳ್ಳೆಯ ಕೆಲಸ ಮಾಡಿ ತೋರಿಸಿದರೆ, ಬಿಹಾರದಲ್ಲಿ ಮೂರನೆಯ ಶಕ್ತಿಯ ಕುರಿತು ಮತದಾರರಲ್ಲಿ ಭರವಸೆ ಮೂಡಿಸಲು ಸಾಧ್ಯವಾದರೆ, ರಾಜ್ಯದ ಮೈತ್ರಿಕೂಟಗಳ ಚಹರೆ ಬದಲಾಗಲಿದೆ.
ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮಾತು ಕೇಳಿ 2011ರಲ್ಲಿ ವಿಶ್ವಸಂಸ್ಥೆಯ ಉದ್ಯೋಗವನ್ನು ಬಿಟ್ಟು ಬಂದು ಮುಖ್ಯಮಂತ್ರಿ ನಿವಾಸದಿಂದಲೇ ತಮ್ಮ ಚುನಾವಣ ರಣನೀತಿ ರೂಪಿಸುವ ಕೆಲಸ ಶುರು ಮಾಡಿದ್ದವರು ಪ್ರಶಾಂತ್ ಕಿಶೋರ್. ಸಾರ್ವಜನಿಕ ನೀತಿ ನಿರೂಪಿಸುವ ಜೊತೆಗೆ ಮೋದಿಗೆ ಭಾಷಣ ಬರೆದುಕೊಡುತ್ತಿದ್ದರು. ಮೋದಿ ಆಪ್ತವಲಯದಲ್ಲಿ ಒಬ್ಬರಾದರು. 2012ರಲ್ಲಿ ಮೋದಿಯವರಿಗಾಗಿ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರವನ್ನು ವಿನ್ಯಾಸಗೊಳಿಸಿದರು. ಸೊಹ್ರಾಬುದ್ದೀನ್ ಹತ್ಯಾಕಾಂಡದ ಆಪಾದಿತರಲ್ಲಿ ಒಬ್ಬರಾಗಿದ್ದ ಅಮಿತ್ ಶಾ 2010ರಿಂದ 2012ರ ಅವಧಿಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಗುಜರಾತಿನಿಂದ ಹೊರಗೆ ವಾಸಿಸಬೇಕಿತ್ತು. ಹೀಗಾಗಿ ದೊಡ್ಡ ಹೊಣೆ ಪ್ರಶಾಂತ್ ಹೆಗಲ ಮೇಲಿತ್ತು. ಬ್ರ್ಯಾಂಡ್ ಮೋದಿಯನ್ನು ಕಟ್ಟಿದ ಪ್ರಮುಖರಲ್ಲಿ ಪ್ರಶಾಂತ್ ಕೂಡ ಒಬ್ಬರಾದರು. 182 ಸೀಟುಗಳ ಪೈಕಿ 115ರಲ್ಲಿ ಗೆದ್ದರು ಮೋದಿ.
ಎಲೆಕ್ಷನ್ ವಾರ್ ರೂಮ್, ಡೇಟಾ ರೀಸರ್ಚ್, ಬ್ರ್ಯಾಂಡಿಂಗ್ ನಂತಹ ನವೀನ ವಿಧಾನಗಳನ್ನು ಭಾರತೀಯ ಚುನಾವಣೆ ವ್ಯವಸ್ಥೆಗೆ ತಂದು ಸ್ಥಾಪಿಸಿದರು ಪ್ರಶಾಂತ್. 2014ರ ಲೋಕಸಭಾ ಚುನಾವಣೆಯಲ್ಲೂ ಮೋದಿ ಪರವಾಗಿ ಇದೇ ಕೆಲಸಗಳನ್ನು ಮಾಡಿದರು. ಬಿಜೆಪಿ 282 ಸೀಟುಗಳನ್ನು ಗೆದ್ದು ಪೂರ್ಣ ಬಹುಮತದ ಸರ್ಕಾರ ಸ್ಥಾಪಿಸಿತು.
ಹೀಗೆ ಮೋದಿ ಪ್ರಧಾನಿಯಾದ ನಂತರ ಪ್ರಶಾಂತ್ ಅವರ ದಾರಿ ಬದಲಾಯಿತು. ಹೊಸ ಸರ್ಕಾರದಲ್ಲಿ ಅವರಿಗೆ ಯಾವ ಪಾತ್ರವೂ ಸಿಕ್ಕಿರಲಿಲ್ಲ. ಮೋದಿಯನ್ನು ತೊರೆದು ಅಂದಿನ ದಿನಗಳಲ್ಲಿ ಅವರ ರಾಜಕೀಯ ಹಗೆಯೆಂದು ಗುರುತಿಸಿಕೊಂಡಿದ್ದ ನಿತೀಶ್ ಕುಮಾರ್ ಪಾಳೆಯ ಸೇರಿಕೊಂಡರು.
2015ರಲ್ಲಿ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ನಿತೀಶ್ ಗೆ ನೆರವಾದರು. ಆಗ ಹುಟ್ಟಿಕೊಂಡದ್ದೇ ಐ-ಪ್ಯಾಕ್. ಮೋದಿಯವರು ಮುಝಫ್ಫರ್ನಗರದ ಚುನಾವಣಾ ರ್ಯಾಲಿಯಲ್ಲಿ ನಿತೀಶ್ ಅವರ ಡಿಎನ್ಎ ನಲ್ಲಿ ವ್ಯತ್ಯಾಸವಿದೆ ಎಂದು ಹಂಗಿಸಿ ಭಾಷಣ ಮಾಡಿದ್ದರು. ಪ್ರತಿಯಾಗಿ ಬಿಹಾರಿಗಳು ತಮ್ಮ ಉಗುರು ಮತ್ತು ಕೂದಲಿನ ಸ್ಯಾಂಪಲ್ ಗಳನ್ನು ಪ್ರಧಾನಮಂತ್ರಿಯವರ ಕಚೇರಿಗೆ ತಲುಪಿಸುವ ಚಳವಳಿಯನ್ನು ರೂಪಿಸಿದರು ಪ್ರಶಾಂತ್. ನಿತೀಶ್ ಮತ್ತು ಲಾಲೂ ಅವರ ಮೈತ್ರಿಕೂಟ ರಚನೆ ಪ್ರಶಾಂತ್ ಅವರ ಪ್ರಮುಖ ರಣನೀತಿಯಾಗಿತ್ತು. ಈ ಚುನಾವಣೆಯಲ್ಲಿ ನಿತೀಶ್-ಲಾಲೂ ಮಹಾಮೈತ್ರಿಯು 243ರಲ್ಲಿ 178 ಸೀಟುಗಳನ್ನು ಗೆದ್ದಿತ್ತು.. ಬಿಜೆಪಿ ಸದಸ್ಯಬಲ ಕೇವಲ 53 ಸೀಟುಗಳಿಗೆ ಸೀಮಿತವಾಯಿತು. ನಿತೀಶ್ ಪುನಃ ಬಿಹಾರದ ಮುಖ್ಯಮಂತ್ರಿಯಾದರು. ಹೊಸ ಸರ್ಕಾರದಲ್ಲಿ ಪ್ರಶಾಂತ್ ಅವರು ಮುಖ್ಯಮಂತ್ರಿಯ ಸಲಹೆಗಾರರಾದರು. ಕ್ಯಾಬಿನೆಟ್ ಮಂತ್ರಿಯ ದರ್ಜೆಯೂ ಲಭಿಸಿತ್ತು.
ಪಂಜಾಬಿನಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸರ್ಕಾರ ರಚನೆಗೆ ನೆರವಾದರು. 2017ರ ಉತ್ತರಪ್ರದೇಶ ಚುನಾವಣೆಗಳಿಗೆ ಕಾಂಗ್ರೆಸ್ ಪರ ಪಾತ್ರ ವಹಿಸಿದರು. ಆದರೆ ಯಶಸ್ಸು ಸಿಗಲಿಲ್ಲ. ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಗಾಂಧೀ ಅವರನ್ನು ಕಾಂಗ್ರೆಸ್ ಚಹರೆಯನ್ನಾಗಿ ತೋರುವ ಪ್ರಶಾಂತ್ ರಣನೀತಿಯನ್ನು ಕಾಂಗ್ರೆಸ್ ಒಪ್ಪಿರಲಿಲ್ಲ. ಕಡೆಯ ಗಳಿಗೆಯಲ್ಲಿ ಕಾಂಗ್ರೆಸ್ ಪಕ್ಷ ಸಮಾಜವಾದಿ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಪ್ರಶಾಂತ್ ಗೆ ಒಪ್ಪಿಗೆಯಿರಲಿಲ್ಲ. ನಿತೀಶ್ ಜೊತೆ ಸಂಬಂಧ ಗಾಢವಾಗಿ ಸಂಯುಕ್ತ ಜನತಾದಳದ ರಾಷ್ಟ್ರೀಯ ಉಪಾಧ್ಯಕ್ಷರಾದರು. ಈ ಸಂಬಂಧ ಬಹುಕಾಲ ಬಾಳಲಿಲ್ಲ. 2020ರಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇರೆಗೆ ಪ್ರಶಾಂತ್ ಅವರನ್ನು ಪಕ್ಷದಿಂದ ಹೊರಹಾಕಲಾಯಿತು. ಆನಂತರ ಆಂಧ್ರಪ್ರದೇಶದಲ್ಲಿ ಜಗನ್ಮೋಹನ ರೆಡ್ಡಿ, ದೆಹಲಿಯಲ್ಲಿ ಅರವಿಂದ್ ಕೇಜ್ರೀವಾಲ್, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ತಮಿಳುನಾಡಿನಲ್ಲಿ ಎಂ.ಕೆ.ಸ್ಟ್ಯಾಲಿನ್ ಅವರಿಗಾಗಿ ಕೆಲಸ ಮಾಡಿದರು.
2021ರಲ್ಲಿ ರಣನೀತಿಕಾರನ ಪಾತ್ರವನ್ನು ತ್ಯಜಿಸಿರುವುದಾಗಿ ಘೋಷಿಸಿದರು. 2022ರ ಮೇ ತಿಂಗಳಲ್ಲಿ ಜನಸುರಾಜ್ ಪಾರ್ಟಿಯ ಸ್ಥಾಪನೆಯನ್ನು ಸಾರಿದರು. ಬಿಹಾರದ ಪಾದಯಾತ್ರೆ ಮಾಡಿದರು. 2,697 ಹಳ್ಳಿಗಳನ್ನು ಮುಟ್ಟಿದರು. ಶಿಕ್ಷಣ, ಉದ್ಯೋಗ, ವೃದ್ಧಾಪ್ಯವೇತನ, ಮಹಿಳೆಯರಿಗೆ ಸುಲಭದ ಸಾಲ ಹಾಗೂ ಭೂಸುಧಾರಣೆಯ ಕಾರ್ಯಸೂಚಿಯನ್ನು ಪ್ರಕಟಿಸಿದರು. ಗಾಂಧೀ ಮತ್ತು ಅಂಬೇಡ್ಕರ್ ಅವರನ್ನು ಮಾದರಿಯನ್ನಾಗಿ ಸ್ವೀಕರಿಸಿದರು. ಬಿಜೆಪಿಯ ಬಿ ಟೀಮ್ ಎಂದು ಅವರನ್ನು ಹೀಗಳೆಯಲಾಯಿತು. ಈ ಹಿನ್ನೆಲೆಯ ಪ್ರಶಾಂತ್ ಬಿಹಾರದಲ್ಲಿ ಮೂರನೆಯ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟುವರೇ ಎಂದು ಕಾದು ನೋಡಬೇಕಿದೆ.




