ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ

Date:

ಸಂವಿಧಾನದತ್ತವಾಗಿ ಅಧಿಕಾರ ಪಡೆದ, ಬಹುಜನರ ಆಶಯಗಳ ಪ್ರತೀಕವಾಗಿ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಈಗ ಕಠೋರವಾಗಿ ವರ್ತಿಸಬೇಕಿದೆ. ಹೆಣ ರಾಜಕಾರಣ ಮಾಡುವ ರಾಜಕೀಯ ಪಕ್ಷಗಳು, ಸಂಘಟನೆಗಳು ಹಾಗೂ ವ್ಯಕ್ತಿಗಳ ಬಗ್ಗೆ ಸರ್ಕಾರವು ನಿರ್ದಾಕ್ಷಿಣ್ಯವಾಗಿ ಹಾಗೂ ಕಠಿಣವಾಗಿ ವರ್ತಿಸಬೇಕಿದೆ. 

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಮಂಕಾಗಿದ್ದ ಕೇಸರಿ ಪಾಳಯದಲ್ಲಿ ಜೀವ ಸಂಚಾರವಾಗಿದೆ. ಬಿಜೆಪಿ ಮುಖಂಡರು ಮತ್ತು ಕೆಲವು ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ತಮ್ಮ ಎಂದಿನ ಹೆಣ ರಾಜಕಾರಣ ಆರಂಭಿಸಿ. ಸರ್ಕಾರದ ಜೊತೆಗೆ ಸಂಘರ್ಷಕ್ಕೆ ಇಳಿದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಜ್ಯ ಬಿಜೆಪಿ ಮುಖಂಡರು ಬೀದಿಗಿಳಿದರೆ, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆಯಿಲ್ಲ ಎಂದು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಸರ್ಕಾರದ ವಿರುದ್ಧ ಬೊಬ್ಬೆ ಹಾಕುತ್ತಿದ್ದಾರೆ. ಇವರೆಲ್ಲರ ಬೊಬ್ಬೆ, ಪ್ರತಿಭಟನೆಗಳಿಗೆ ಕಾರಣವಾದ ವಿಚಾರ ತಿ ನರಸೀಪುರದ ವೇಣುಗೋಪಾಲ್ ಎನ್ನುವವರ ಹತ್ಯೆ ಹಾಗೂ ಬೆಳಗಾವಿಯ ಜೈನ ಮುನಿ ಕಾಮಕುಮಾರ ನಂದಿಯ ಹತ್ಯೆ. ಎರಡೂ ಪ್ರಕರಣಗಳ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು, ಎಫ್‌ಐಆರ್ ಹಾಕಿದ್ದಾರೆ ಮತ್ತು ಆರೋಪಿಗಳನ್ನೂ ಬಂಧಿಸಿದ್ದಾರೆ.

ಆದರೆ, ಒಂದು ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದೆ ಎಂದು ಟೀಕೆಗೆ ಗುರಿಯಾಗಿದ್ದ ಬಿಜೆಪಿಗೆ ಈಗ ಈ ಕೊಲೆಗಳೇ ನೆಪವಾಗಿ ಒದಗಿವೆ. ಕೊಲೆಗಳಿಗೆ ಧಾರ್ಮಿಕ ದ್ವೇಷದ ಲೇಪ ನೀಡಲು ಹೊರಟಿರುವ ಬಿಜೆಪಿ, ತನ್ನ ಎಂದಿನ ಹೆಣ ರಾಜಕಾರಣವನ್ನು ಮತ್ತೆ ರಾಜ್ಯದಲ್ಲಿ ಮತ್ತೆ ಆರಂಭಿಸಿದೆ.

ಎರಡೂ ಕೊಲೆಗಳ ವಿವರಗಳನ್ನು ಪರಿಶೀಲಿಸಿದರೆ, ಅವು ವೈಯಕ್ತಿಕ ಕಾರಣಕ್ಕಾಗಿ ನಡೆದಂಥವು ಎನ್ನುವುದು ಸ್ಪಷ್ಟವಾಗುತ್ತದೆ. ತಿ ನರಸೀಪುರದಲ್ಲಿ ಹನುಮ ಜಯಂತಿ ಆಚರಣೆ ವೇಳೆ ಮಂಡಿ ವ್ಯಾಪಾರಿ ವೇಣುಗೋಪಾಲ್ ಮತ್ತು ಅದೇ ಊರಿನ ಮಣಿಕಂಠನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಅದೇ ಹಿನ್ನೆಲೆಯಲ್ಲಿ ಮಣಿಕಂಠ ಮತ್ತು ಇತರ ಕೆಲವರು ಸೇರಿಕೊಂಡು ವೇಣುಗೋಪಾಲ್‌ನನ್ನು ಕೊಲೆ ಮಾಡಿದ್ದಾರೆ. ಇನ್ನು ಜೈನ ಮುನಿಯ ಪ್ರಕರಣದಲ್ಲಿ, ಕೊಟ್ಟ ಹಣವನ್ನು ವಾಪಸ್ ಕೇಳಿದ ಕಾರಣಕ್ಕಾಗಿ ನಾರಾಯಣ ಮಾಳಿ ಎನ್ನುವ ಮುನಿಯ ಆಪ್ತನೇ ಅವರನ್ನು ಕೊಂದಿದ್ದಾಗಿ ಹೇಳಿದ್ದಾನೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಷ್ಟಾದರೂ ವೇಣುಗೋಪಾಲ್ ಹಿಂದುತ್ವವಾದಿ ಸಂಘಟನೆಯೊಂದರ ಕಾರ್ಯಕರ್ತನಾಗಿದ್ದ ಎನ್ನುವುದನ್ನೇ ಒಂದು ನೆಪವಾಗಿಸಿಕೊಂಡು ಚಕ್ರವರ್ತಿ ಸೂಲಿಬೆಲೆ, ಶ್ರೀರಾಮುಲು ಮುಂತಾದವರು ದ್ವೇಷ ಹರಡುವ, ಸಾಮರಸ್ಯ ಕದಡುವ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ವಿಪರ್ಯಾಸ ಎಂದರೆ, ಶೋಷಿತ ಎಸ್‌ಟಿ ಸಮುದಾಯದ ವೇಣುಗೋಪಾಲ್, ಇಂದು ಬಿಜೆಪಿಯ ಹಿಂದೂ ಹೆಸರಿನ ಪ್ರಬಲ ಜಾತಿಗಳ ಪಾರಮ್ಯದ ಹೋರಾಟಕ್ಕೆ ಅಸ್ತ್ರವಾಗಿದ್ದಾನೆ.

ಈ ಹಿಂದೆ ಕೂಡ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಡಿ ಕೆ ರವಿ ಆತ್ಮಹತ್ಯೆ ಮಾಡಿಕೊಂಡಿದ್ದು ದೊಡ್ಡ ವಿವಾದವಾಗಿತ್ತು. ಬಿಜೆಪಿ ಆಗಲೂ ಇದೇ ರೀತಿ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕರು, ಮಂತ್ರಿಗಳ ಕೈವಾಡ ಇದೆ ಎಂದು ಬೊಬ್ಬೆ ಹೊಡೆದಿತ್ತು. ಸತ್ಯ ಹೊರಬರಬೇಕೆಂದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಹೀಗಿನಂತೆ ಆಗಲೂ ಒತ್ತಾಯಿಸಿತ್ತು. ಸಿದ್ದರಾಮಯ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ತನಿಖೆಯ ನಂತರ ಡಿ ಕೆ ರವಿ, ಅವರ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬಿಐ ವರದಿ ಹೇಳಿತ್ತು.                

ವೇಣುಗೋಪಾಲ್ ಹಾಗೂ ಜೈನ ಮುನಿ ಹತ್ಯೆಗಳು ಹೇಗೆ ನೋಡಿದರೂ ವೈಯಕ್ತಿಕ ಕಾರಣಕ್ಕೆ ನಡೆದಂಥವು. ಇದರ ಹಿಂದೆ ಯಾವುದೇ ಧರ್ಮ ಸಂಘರ್ಷವಿಲ್ಲ, ಧಾರ್ಮಿಕ ಗುಂಪುಗಳಿಲ್ಲ. ಮತ್ತು ಸೈದ್ಧಾಂತಿಕ ದ್ವೇಷದ ಕಾರಣಗಳಿಲ್ಲ. ಆದರೂ ಈ ಪ್ರಕರಣಗಳಿಗೆ ಕೋಮು ಬಣ್ಣ ಹಚ್ಚಲು ಬಿಜೆಪಿ ಮತ್ತು ಕೆಲ ಹಿಂದುತ್ವವಾದಿ ಸಂಘಟನೆಗಳು ಪ್ರಯತ್ನಿಸುತ್ತಿವೆ. ಹಿಂದುವಿನ ಕೊಲೆ ನಡೆದಿದೆ, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂಗಳು ಅಪಾಯಕ್ಕೆ ಗುರಿಯಾಗಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.

ಬಿಜೆಪಿ ಹಿಂದೂಗಳ ಹಿತ ಕಾಯುವ ಪಕ್ಷ ಎನ್ನುವುದಾದರೆ, ರಾಜ್ಯದಲ್ಲಿ ಬಹಳಷ್ಟು ಹಿಂದೂಗಳಿದ್ದಾರೆ. ಅವರಿಗೆ ನೂರೆಂಟು ಕಷ್ಟಗಳಿವೆ, ಸಮಸ್ಯೆಗಳಿವೆ. ಉದ್ಯೋಗ, ಶಿಕ್ಷಣ, ಸೂರು ಮುಂತಾದ ಕೊರತೆಗಳಿವೆ. ಅದ್ಯಾವುದರ ಬಗ್ಗೆಯೂ ಯಾಕೆ ಬಿಜೆಪಿ ಎಂದೂ ಚಕಾರ ಎತ್ತುವುದಿಲ್ಲ ಎನ್ನುವ ಪ್ರಶ್ನೆಗಳನ್ನು ಮತ್ತೆ ಮತ್ತೆ ಕೇಳಬೇಕಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಅವರ ಬೆಲೆ ಏರಿಕೆ, ಭ್ರಷ್ಟಾಚಾರಗಳಿಂದ ಬಾಧಿತರಾಗಿದ್ದವರೂ ಕೂಡ ಬಹುಸಂಖ್ಯಾತ ಹಿಂದೂಗಳೇ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ ಆತನೊಬ್ಬ ಹಿಂದೂ ಎನ್ನುವುದು ಯಾರಿಗೂ ಮುಖ್ಯವಾಗಿರಲಿಲ್ಲ. ಮಂತ್ರಿಗಳು, ಶಾಸಕರ ವಿರುದ್ಧ 40% ಕಮಿಷನ್ ಆರೋಪ ಮಾಡಿ ತಮ್ಮ 80ನೇ ವಯಸ್ಸಲ್ಲಿ ಜೈಲಿಗೆ ಹೋದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೂ ಕೂಡ ಓರ್ವ ಹಿಂದೂನೇ. ಆಗಲೂ ಸ್ವಯಂಘೋಷಿತ ಹಿಂದುತ್ವವಾದಿ ಸಂಘಟನೆಗಳು ಅವರ ಪರವಾಗಿ ಬೀದಿಗಿಳಿಯಲಿಲ್ಲ.   

ಅಂದರೆ, ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಜನ ಹಿಂದೂಗಳ ಹತ್ಯೆ ನಡೆದರೂ, ಹಿಂದೂಗಳಿಗೆ ಅನ್ಯಾಯವಾದರೂ ಅದು ಅವರಿಗೆ ಮುಖ್ಯ ವಿಷಯ ಅನ್ನಿಸುವುದಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಇಬ್ಬರು ಹಿಂದೂ ಸ್ನೇಹಿತರೇ ಹೊಡೆದಾಡಿಕೊಂಡು ಸತ್ತರೂ ಅದು ವಿವಾದವಾಗುತ್ತದೆ. ನಡುವೆ ಧರ್ಮದ ವಿಚಾರವನ್ನು ಹುಡುಕಿ ತರಲಾಗುತ್ತದೆ.

ಜನರ ಸಾವನ್ನು ತನ್ನ ರಾಜಕಾರಣಕ್ಕೆ ಬಳಸಿಕೊಳ್ಳುವ ಗುಣ ಬಿಜೆಪಿಗೆ ಮೊದಲಿನಿಂದಲೂ ಕರಗತವಾಗಿದೆ. ಇದನ್ನು ಹಿಂದುತ್ವದ ಪ್ರಯೋಗಶಾಲೆಯಾದ ಕರಾವಳಿಯಲ್ಲಿ ಬಳಸಿ ಯಶಸ್ಸು ಕಂಡ ನಂತರ ರಾಜ್ಯದ ಇತರೆಡೆ ಕೂಡ ವಿಸ್ತರಿಸಲು ಬಿಜೆಪಿ ಶ್ರಮಿಸುತ್ತಿದೆ.

ಸಂವಿಧಾನದತ್ತವಾಗಿ ಅಧಿಕಾರ ಪಡೆದ, ಬಹುಜನರ ಆಶಯಗಳ ಪ್ರತೀಕವಾಗಿ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಈಗ ಕಠೋರವಾಗಿ ವರ್ತಿಸಬೇಕಿದೆ. ಜನರ ಸಾವಿನ ವಿಷಯ ಇಟ್ಟುಕೊಂಡು ಅದನ್ನು ರಾಜಕಾರಣದ ದಾಳವನ್ನಾಗಿ ಬಳಸುವ ಪಕ್ಷಗಳು, ಸಂಘಟನೆಗಳು ಹಾಗೂ ವ್ಯಕ್ತಿಗಳ ಬಗ್ಗೆ ಸರ್ಕಾರವು ನಿರ್ದಾಕ್ಷಿಣ್ಯವಾಗಿ ಹಾಗೂ ಕಠಿಣವಾಗಿ ವರ್ತಿಸಬೇಕು. ಈ ವಿಚಾರದಲ್ಲಿ ದ್ವೇಷ ಭಾಷಣ ಮಾಡುವ ಮುಖಂಡರ ವಿರುದ್ಧ, ಸತ್ಯವನ್ನು ಮರೆಮಾಚಿ ಸುಳ್ಳನ್ನು ಬಿತ್ತುವ ಕೂಗು ಮಾರಿ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೆ ಮಾಡದೇ ಕಾಂಗ್ರೆಸ್ ಮೃದು ಹಿಂದುತ್ವದ ಮೊರೆ ಹೋದರೆ, ಅದರ ಫಲವನ್ನೂ ಎಲ್ಲರೂ ಅನುಭವಿಸಬೇಕಾಗುತ್ತದೆ.  

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬೆಲೆ ಏರಿಕೆ, ನಿರುದ್ಯೋಗವೇ ಚುನಾವಣೆ ವಿಷಯ; ಎಚ್ಚೆತ್ತ ಮತದಾರರು

ಅಚ್ಛೇ ದಿನಗಳು ಬರಲಿಲ್ಲ ಎಂಬುದು ಜನರ ಅಭಿಪ್ರಾಯಗಳಿಂದ ಸ್ಪಷ್ಟವಾಗುತ್ತದೆ. ದೇಶಭಕ್ತಿಯ ಹೆಸರಲ್ಲಿ...

ಈ ದಿನ ಸಂಪಾದಕೀಯ | ಲಡಾಖಿನ ಹೋರಾಟವೂ ಮತ್ತು ಮೋದಿಯ ಮೊಂಡಾಟವೂ

ಆರ್ಟಿಕಲ್‌ 370 ತೆರವುಗೊಳಿಸಿದ ಮೋದಿಯವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರು ಬೇಕಾದರೂ...