ಈ ದಿನ ಸಂಪಾದಕೀಯ | ಕಾಂಗ್ರೆಸ್‌ಗಷ್ಟೇ ಅಲ್ಲ, ಸಮಾಜಕ್ಕೆ ಅರ್ಥವಾಗಿದೆಯೇ ಆರ್‌ಎಸ್‌ಎಸ್ ಅಜೆಂಡಾ?

Date:

ನಾವು ಚರಿತ್ರೆಯ ಬೇರುಗಳನ್ನು ಅರಿಯದೆ ಹೋದರೆ, ಗುಲಾಮಗಿರಿ ಮುಂದುವರಿಯುತ್ತದೆ; ಆರ್‌ಎಸ್‌ಎಸ್ ಸಿದ್ಧಾಂತವನ್ನು ಪ್ರದರ್ಶಿಸುವ ಮಂದಿ ಕಾಂಗ್ರೆಸ್‌ನೊಳಗೂ ಸಿಗುತ್ತಾರೆ, ಬೇರೆ ಕಡೆಯೂ ಸಿಗುತ್ತಾರೆ! 

ಕಾಂಗ್ರೆಸ್‌ನೊಳಗಿರುವ ಸಂಘಪರಿವಾರದ ಮಂದಿಯ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ. ಆರ್‌ಎಸ್‌ಎಸ್‌ನ ಪಥಸಂಚಲನದಲ್ಲಿ ಭಾಗಿಯಾಗಿದ್ದ ತಿಪಟೂರಿನ ವೈದ್ಯ ಜಿ.ಎಸ್. ಶ್ರೀಧರ್, ಸರ್ಕಾರದ ಯಶಸ್ವಿನಿ ಟ್ರಸ್ಟ್‌ನಲ್ಲೂ ಇದ್ದು ಕಾಂಗ್ರೆಸ್‌ಗೆ ಮುಜುಗರ ತಂದಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

- Advertisement -

ಈ ಕುರಿತು ಪ್ರಶ್ನಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್, ”ಸಂಘಪರಿವಾರ ಮತ್ತು ಅದರ ಕೋಮುವಾದದ ವಿರುದ್ಧ ದೇಶಾದ್ಯಂತ ಕಾಂಗ್ರೆಸ್‌ ಸಮರ ಸಾರಿದೆ. ಇಂತಹ ಸಂದರ್ಭದಲ್ಲಿ, ಕಾಂಗ್ರೆಸ್‌ ಶಾಸಕ ಷಡಕ್ಷರಿ ಅವರು ಸಂಘಪರಿವಾರದ ಕಟ್ಟಾ ಕಾರ್ಯಕರ್ತನಾಗಿರುವ ಡಾ.ಶ್ರೀಧರ್ ಅವರನ್ನು ‘ಯಶಸ್ವಿನಿ ಟ್ರಸ್ಟ್‌’ಗೆ ಶಿಫಾರಸು ಮಾಡಿದ್ದರು. ಷಡಕ್ಷರಿ ಅವರ ನಡೆಯು ಪಕ್ಷದ ಸಿದ್ಧಾಂತಗಳಿಗೆ ವ್ಯತಿರಿಕ್ತವಾಗಿದೆ. ಕೋಮುವಾದಿಗಳ ಪರ ಎನಿಸಿಕೊಂಡಿರುವ ಶಾಸಕರ ಇಂಥ ಧೋರಣೆಯನ್ನು ಸಹಿಸಲು ಅಸಾಧ್ಯ. ಹೀಗಾಗಿ ಟ್ರಸ್ಟಿಯಾಗಿ ನೇಮಿಸಿ ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಎಸ್‌ಐಆರ್‌ | 13 ಕೋಟಿ ಮತಗಳ ಮಾರಣಹೋಮ

ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅತ್ಯಂತ ಪ್ರಮುಖ ಅಡಿಪಾಯವೇ ಮತದಾನದ ಹಕ್ಕು. ದೇಶದ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದುಕೊಂಡಿರುವುದೇ ಚುನಾವಣಾ ವ್ಯವಸ್ಥೆಯ ಮೇಲಿರುವ ಸಾರ್ವಜನಿಕರ ಅಪಾರ ನಂಬಿಕೆಯಿಂದ. ಆದರೆ, ಚುನಾವಣಾ ಆಯೋಗವು (ECI) ದೇಶಾದ್ಯಂತ ಜಾರಿಗೆ...

ಡಾ.ಜಿ.ಎಸ್.ಶ್ರೀಧರ್ ಅಂತಹ ದೊಡ್ಡಪಡೆಯೇ ಕಾಂಗ್ರೆಸ್ ಸರ್ಕಾರದ ಒಳಗೆ ಆಯಕಟ್ಟಿನ ಜಾಗಗಳಲ್ಲಿ ಇರುವುದು ಬಹಿರಂಗ ಸತ್ಯ. ಆದರೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಿಯಾಂಕ್ ಖರ್ಗೆಯಂತಹ ನಾಯಕರ ಕಾರಣಕ್ಕೆ ಅವರು ಬಹಿರಂಗವಾಗಿ ಸಂಘದ ಸಖ್ಯವನ್ನು ಪ್ರದರ್ಶಿಸುವುದಿಲ್ಲ. ಹೊರಗಡೆ ಅಲ್ಲವಾದರೂ ಅಂತರಂಗದಲ್ಲಿ ಸಂಘವನ್ನು ಆರಾಧಿಸಿಕೊಂಡು ಸುಮ್ಮನಾಗುತ್ತಾರೆ. ಆದರೆ ಕಾಂಗ್ರೆಸ್‌ನೊಳಗೆ ಇರುವ ಆರ್‌ಎಸ್‌ಎಸ್‌ ಮಂದಿಯನ್ನು ದೂಷಣೆ ಮಾಡುವುದಕ್ಕಿಂತ ಐತಿಹಾಸಿಕವಾಗಿ ಆಗಿರುವ ತಪ್ಪು ಬೆಳವಣಿಗೆಗಳು ಮತ್ತು ಅದಕ್ಕೆ ಕಂಡುಕೊಳ್ಳಬೇಕಾದ ಮಾರ್ಗಗಳ ಕುರಿತು ಯೋಚಿಸಬೇಕಾಗುತ್ತದೆ. ಆರ್‌ಎಸ್‌ಎಸ್ ಸಂಘಟನೆಯನ್ನು ಹೇಗೆ ಕಟ್ಟಲಾಗಿದೆ? ಅದರ ತಳಹದಿ ಯಾವುದು? ಎಂಬುದನ್ನು ಕಂಡುಕೊಂಡರೆ ಮಾತ್ರ ಕಾಂಗ್ರೆಸ್‌ ಪಕ್ಷವಷ್ಟೇ ಅಲ್ಲ, ಇಡೀ ಸಮಾಜ ಸೈದ್ಧಾಂತಿಕವಾಗಿ ಗಟ್ಟಿಯಾಗಬಹುದು ಮತ್ತು ಭಾರತದ ಧರ್ಮನಿರಪೇಕ್ಷತೆಯನ್ನು ಉಳಿಸಿಕೊಳ್ಳಬಹುದು.

ಭಾರತದ ಹಿಂದುತ್ವ ರಾಜಕಾರಣದ ಕುರಿತು ಆಳವಾಗಿ ಅಧ್ಯಯನ ಮಾಡಿರುವ, ಫ್ರೆಂಚ್ ಮೂಲದ ರಾಜಕೀಯ ವಿಜ್ಞಾನಿ ಕ್ರಿಸ್ಟೋಫ್ ಜಾಫ್ರೆಲಾಟ್ ಅವರು ಇತ್ತೀಚೆಗೆ ‘ದಿ ವೈರ್’ ಯೂಟ್ಯೂಬ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಆಡಿರುವ ಮಾತುಗಳು ಆರ್‌ಎಸ್ಎಸ್‌ನ ‘ಕಾರ್ಯ ವಿಧಾನ’ವನ್ನು ಬಹಿರಂಗಪಡಿಸುತ್ತವೆ. ಆರ್‌ಎಸ್‌ಎಸ್‌ ಸಂಘಟನೆಯನ್ನು ಹೇಗೆ ಕಟ್ಟಲಾಗಿದೆ ಎಂಬುದನ್ನು ವಿವರಿಸುವ ಜಾಫ್ರೆಲಾಟ್, ”ಅದರ ಉದ್ದೇಶ ಅಧಿಕಾರ ಹಿಡಿಯುವುದಲ್ಲ, ಜನರ ಮನಸ್ಸಿನ ಮೇಲೆ ಹಿಡಿತ ಸಾಧಿಸುವುದು” ಎನ್ನುತ್ತಾರೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಉಳಿವಿಗಾಗಿ ಉಡಾಳನ ವಿರುದ್ಧ ಎದ್ದುನಿಂತ ಅಮೆರಿಕ

ಜಾಫ್ರೆಲಾಟ್ ಎಚ್ಚರಿಸುವ ಮಾತುಗಳು ಹೀಗಿವೆ: “ಹಿಂದೂ ಜನಾಂಗೀಯವಾದ ಮತ್ತು ಹಿಂದೂರಾಷ್ಟ್ರ ಎಂಬುದು ಆರ್‌ಎಸ್‌ಎಸ್‌ನ ಮೂಲ ಸಿದ್ಧಾಂತ. ಯಹೂದಿಗಳಿಗಾಗಿಯೇ ಪ್ರತ್ಯೇಕ ರಾಷ್ಟ್ರ ರೂಪಿಸಿದ ಝಿಯೋನಿಸಂನಿಂದ ಪ್ರಭಾವಿಸಲ್ಪಟ್ಟ ಪ್ರತಿಗಾಮಿ ಆಲೋಚನೆ ಇದು. ಅಲ್ಪಸಂಖ್ಯಾತರು ಈ ನೆಲದ ಮಕ್ಕಳಿಗೆ ಸಮಾನರಲ್ಲ ಎಂಬುದು ಆರ್‌ಎಸ್‌ಎಸ್‌ನ ಪ್ರತಿಪಾದನೆ. ಸಂಘಟನೆಯನ್ನು ರಾಜಕೀಯದಲ್ಲಿ ತೊಡಗಿಸುವುದು ಹೆಡಗೇವಾರ್, ಗೋಲ್ವಾಲ್ಕರ್ ಅವರ ಆದ್ಯತೆಯಾಗಿರಲಿಲ್ಲ. ರಾಜಕಾರಣಕ್ಕೆ ಇಳಿದಿದ್ದರೆ ಬ್ರಿಟಿಷರು ಸಂಘಟನೆಯನ್ನು ದಮನ ಮಾಡುತ್ತಾರೆಂದು ಅವರು ಯೋಚಿಸಿದರು. ರಾಜಕಾರಣವನ್ನು ಮಾಡುವುದು ಅವರ ಮೂಲ ಅಜೆಂಡಾದಲ್ಲಿ ಕಂಡುಬರುವುದಿಲ್ಲ. ಅವರಿಗೆ ಇದ್ದದ್ದು ದೀರ್ಘಕಾಲೀನ ಕಾರ್ಯಯೋಜನೆ. ಅಧಿಕಾರವನ್ನು ವಶಕ್ಕೆ ಪಡೆಯಬೇಕೆಂಬುದು ಅವರ ಮೊದಲ ಗುರಿಯಾಗಿರಲಿಲ್ಲ. ಅವರು ಬಯಸಿದ್ದು ಸಮಾಜವನ್ನು ವಶಕ್ಕೆ ತೆಗೆದುಕೊಳ್ಳುವುದಾಗಿತ್ತು. ಸಮಾಜದ ಮನಸ್ಥಿತಿಯನ್ನು ಮರುರೂಪಿಸುವುದು ಮತ್ತು ಮನೋಸ್ತರವನ್ನು ಆಕ್ರಮಿಸುವುದು ಅವರ ಉದ್ದೇಶವಾಗಿತ್ತು. ಅದೇ ದಾರಿಯನ್ನು‌ ಇಂದಿಗೂ ಕ್ರಮಿಸುತ್ತಿದ್ದಾರೆ. ಇದೇ ಅವರ ಮುಖ್ಯವಾದ ಗುರಿ ಮತ್ತು ಆಟ. ಅಧಿಕಾರವನ್ನು ಹಿಡಿಯುವುದಕ್ಕೆ ಆದ್ಯತೆ ಕೊಟ್ಟರೆ, ಅದು ಒಂದಲ್ಲ ಒಂದು ದಿನ ಕೈತಪ್ಪಿ ಹೋಗಬಹುದು. ಸಮಾಜದ ಜುಟ್ಟು ಹಿಡಿದುಕೊಂಡರೆ ಅಧಿಕಾರವು ಅದಾಗಿಯೇ ಬರುತ್ತದೆ. 20- 50ರ ದಶಕದವರೆಗೂ ಅವರು ತಮ್ಮ ಶಾಖೆಗಳನ್ನು ವಿಸ್ತರಿಸುತ್ತಾ, ತಾವು ನಂಬುವ ವ್ಯವಸ್ಥೆಗಾಗಿ ಕೆಲಸ ಮಾಡುತ್ತಾ ಹೋದರು. ನಂತರ ಜನಸಂಘದ ಮೂಲಕ ರಾಜಕಾರಣಕ್ಕೆ ಇಳಿದರು. ಜನಸಂಘದೊಂದಿಗೆ ಸೋಷಿಯಲಿಸ್ಟರು ಕೈ ಜೋಡಿಸಿ ರೂಪಿಸಿದ ಸರ್ಕಾರ ಬಹುಕಾಲ ಉಳಿಯಲಿಲ್ಲ. ಜನಸಂಘ ಮತ್ತು ಆರ್‌ಎಸ್‌ಎಸ್‌ ಎರಡರಲ್ಲೂ ಸದಸ್ಯತ್ವ ಇರುವುದನ್ನು ಮಧು ಲಿಮಯೆ ಥರದ ಸಮಾಜವಾದಿ ರಾಜಕಾರಣಿಗಳು ಕಟುವಾಗಿ ಪ್ರಶ್ನಿಸಿದರು. ಸಮ್ಮಿಶ್ರ ಸರ್ಕಾರ ನಮಗೆ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಆರ್.ಎಸ್.ಎಸ್ ಬಂದಿತ್ತು. ಅಂದಿನ ಆರ್‌ಎಸ್‌ಎಸ್ ಸರಸಂಚಾಲಕ ದೇವರಸ್, ‘ನಾವು ಹಿಂದೂ ಮತಬ್ಯಾಂಕ್ ಭದ್ರ ಮಾಡಬೇಕು. ಹಿಂದೂಗಳಿಗೆ ಅವರ ಹಕ್ಕುಗಳ ಕುರಿತು ಪಾಠ ಹೇಳಬೇಕು ಮತ್ತು ರಾಜಕಾರಣಿಗೆ ಪಾಠವನ್ನು ಹೇಳಬೇಕು’ ಎಂಬ ಅಜೆಂಡಾವನ್ನು ಪ್ರಚಾರಕ್ಕೆ ತರುತ್ತಾರೆ. ಅದುವೇ ಬಾಬ್ರಿ ಮಸೀದಿ ದ್ವಂಸಕ್ಕೆ ಮುನ್ನುಡಿ ಬರೆಯುತ್ತದೆ.”

ಜಾಫ್ರೆಲಾಟ್ ಅವರು ಮತ್ತಷ್ಟು ವಿವರಿಸುತ್ತಾ, ”ಹಿಟ್ಲರ್‌ನ ಗುರಿ ಅಧಿಕಾರ ಹಿಡಿಯುವುದಾಗಿತ್ತು. ಮುಸಲೋನಿ ರೋಮ್‌ನತ್ತ ನಡೆದ. ಆದರೆ ಆರ್‌ಎಸ್‌ಎಸ್‌ ದೆಹಲಿಯತ್ತ ಹೆಜ್ಜೆ ಹಾಕಲಿಲ್ಲ. ಅವರ ಗುರಿ, ಫ್ಯಾಸಿಸ್ಟ್‌ನ ಮುಂದುವರಿದ ಭಾಗವಾದ ಟೊಟಲಿಟೇರಿಯನಿಸಂ(Totalitarianism)” ಎನ್ನುತ್ತಾರೆ. ಅಂದರೆ ವಿರೋಧ ಪಕ್ಷಗಳನ್ನು ಸಂಪೂರ್ಣ ದಮನ ಮಾಡಿ, ರಾಜಕೀಯ, ಆರ್ಥಿಕತೆ, ಶಿಕ್ಷಣ ವ್ಯವಸ್ಥೆ, ಕಲೆ, ವಿಜ್ಞಾನ, ನಾಗರಿಕರ ಖಾಸಗಿ ಜೀವನ- ಎಲ್ಲವನ್ನೂ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳವುದು ಆರ್‌ಎಸ್‌ಎಸ್‌ ಗುರಿ. “ಆರ್‌ಎಸ್‌ಎಸ್‌ಗೆ ಯಾವುದೇ ರಾಜಕೀಯ ಪಕ್ಷದ ಹಂಗಿಲ್ಲ, ನಮ್ಮದು ಸಾಂಸ್ಕೃತಿಕ ಸಂಘಟನೆ” ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್ ಮಂದಿಯ ಅಸಲಿ ರೂಪವಿದು. ಜಾತ್ಯತೀತತೆ, ಸಮಾನತೆ, ಸಹೋದರತೆ ಮತ್ತು ಸಾಮಾಜಿಕ ನ್ಯಾಯವನ್ನು ಬೋಧಿಸುವ ಯಾವುದೇ ಪಕ್ಷವು ಆರ್‌ಎಸ್‌ಎಸ್‌ಗೆ ಅಪಥ್ಯ. ನಾವು ಯಾವುದೇ ಪಕ್ಷದ ಜೊತೆಗಿಲ್ಲ ಎನ್ನುವ ಆರ್‌ಎಸ್‌ಎಸ್ ಅಸಲಿಯಾಗಿ ಇರುವುದು ಬಿಜೆಪಿಯೊಂದಿಗೆ ಎಂಬುದೂ ಅಷ್ಟೇ ಸತ್ಯ. ಆದರೆ ಹಿಟ್ಲರ್, ಮುಸಲೋನಿ ಥರದಲ್ಲಿ ನೇರವಾಗಿ ಪಕ್ಷರಾಜಕಾರಣವನ್ನು ಮಾಡದೆ, ಸಾಂಸ್ಕೃತಿಕ ರಾಜಕೀಯದ ಮೂಲಕ ಹಿಡಿತ ಸಾಧಿಸಿ, ಆ ಮೂಲಕ ಬ್ರಾಹ್ಮಣೀಯ ಮೇಲ್ಪಂಕ್ತಿಯನ್ನು ರೂಪಿಸುವುದು ಆರ್‌ಎಸ್‌ಎಸ್ ಗುರಿ.

ಇಟಾಲಿಯನ್ ಮಾರ್ಕ್ಸ್ ವಾದಿ ಚಿಂತಕ, 1921ರಲ್ಲಿ ಸ್ಥಾಪನೆಯಾದ ಇಟಾಲಿಯನ್ ಕಮ್ಯುನಿಸ್ಟ್ ಪಾರ್ಟಿಯ ಕೇಂದ್ರ ಸಮಿತಿಯ ಸದಸ್ಯನಾಗಿದ್ದ ಆಂಟೋನಿಯೋ ಗ್ರಾಮ್ಶಿ ‘ಸಾಂಸ್ಕೃತಿಕ ಯಾಜಮಾನ್ಯ’ (ಹೆಜೆಮನಿ) ಪರಿಕಲ್ಪನೆಯನ್ನು ಮಂಡಿಸಿದ. “ಅಧಿಕಾರಾರೂಢ ವರ್ಗವೂ ಸೇರಿದಂತೆ ಒಂದು ಸಮಾಜದ ಪ್ರಬಲ ಸಮುದಾಯಗಳು ತಮಗೆ ಅಧೀನವಾಗಿರುವ ಸಮುದಾಯಗಳ ಮೇಲೆ ಸ್ವಪ್ರೇರಣೆಯ ಸಮ್ಮತಿಯನ್ನು ಗಳಿಸಿ, ತಮ್ಮ ನಿಯಂತ್ರಣವನ್ನು ಮುಂದುವರಿಸುತ್ತವೆ. ಇಂತಹ ‘ಸಮ್ಮತಿ’ಯು ಪ್ರಬಲ ಹಾಗೂ ಅಧೀನ ಸಮುದಾಯಗಳು ಒಟ್ಟಿಗೆ ರೂಪಿಸಿದ ರಾಜಕೀಯ ವೈಚಾರಿಕ ಒಪ್ಪಂದದಿಂದ ಸಾಧ್ಯವಾಗುತ್ತದೆ” ಎಂದು ಹೆಜೆಮನಿಯನ್ನು ವಿವರಿಸುವ ಗ್ರಾಮ್ಶಿ, ಎರಡು ಮಾರ್ಗಗಳ ಮೂಲಕ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಪರಿಸರದ ಮೇಲೆ ಪ್ರಬಲ ಸಮುದಾಯಗಳು ಹಿಡಿತ (ಹೆಜೆಮನಿ) ಸಾಧಿಸುತ್ತವೆ ಎನ್ನುತ್ತಾನೆ‌. 1. ಸೇನೆ, ಪೊಲೀಸ್ ಇತ್ಯಾದಿಗಳನ್ನು ಬಳಸಿ ನೇರ ಬಲಪ್ರಯೋಗ ಮಾಡಿ ಅಧೀನಗೊಳಿಸುವುದು. 2. ಪ್ರಬಲ ಸಮುದಾಯಗಳ ದೃಷ್ಟಿಕೋನವೇ ಸರಿ ಇದ್ದು, ಇತರರ ಅಸ್ಮಿತೆಯು ಕೀಳೆಂದು ‘ಸರ್ವಸಮ್ಮತಿಯನ್ನು ಸೃಷ್ಟಿಸುವುದು.’ ಆರ್‌ಎಸ್‌ಎಸ್‌ ಗಾಢವಾಗಿ ಪ್ರತಿಪಾದಿಸುವ ಪ್ರತಿಗಾಮಿ ವ್ಯವಸ್ಥೆಯನ್ನು ಎರಡು ಮಾರ್ಗಗಳಲ್ಲೂ ಹೇರಲಾಗಿದೆ. ಸರ್ವಸಮ್ಮತಿಯ ಸೃಷ್ಟಿಸುವ ಮಾರ್ಗವು ಅತ್ಯಂತ ಅಪಾಯಕಾರಿ ಎಂಬುದನ್ನು ಮನಗಾಣಬೇಕು. ಆರ್‌ಎಸ್‌ಎಸ್ ತನ್ನ ನೂರು ವರ್ಷಗಳ ಪಯಣದಲ್ಲಿ ಒತ್ತು ಕೊಟ್ಟಿದ್ದು- ಸರ್ವಸಮ್ಮತಿಯ ಮಾರ್ಗಕ್ಕೆ. ಪ್ರಬಲ ಬ್ರಾಹ್ಮಣೀಯ ವ್ಯವಸ್ಥೆಯು ರೂಪಿಸಿದ ದೃಷ್ಟಿಕೋನವನ್ನು ಒಪ್ಪಿಕೊಳ್ಳುವುದರಿಂದ ತಮಗೆ ಲಾಭವಾಗುತ್ತದೆ ಎಂದು ಭ್ರಮಿಸುವ ಸಮುದಾಯಗಳು ತಮ್ಮ ಐಡೆಂಟಿಟಿಗಳನ್ನು ತಾವಾಗಿಯೇ ಕಳೆದುಕೊಳ್ಳುತ್ತವೆ. ಆರ್‌ಎಸ್‌ಎಸ್ ಹೇಳುವ ಏಕಸಂಸ್ಕೃತಿಯ ಹಿಂದುತ್ವ ಪರಿಕಲ್ಪನೆಯು ಇತರ ಐಡೆಂಟಿಟಿಗಳನ್ನು ಶಾಶ್ವತವಾಗಿ ಅಳಿಸಿಹಾಕುವ ಅಜೆಂಡಾವನ್ನು ಹೊಂದಿದೆ. ಅದು ಪ್ರತಿಪಾದಿಸುವ ಶ್ರೇಣೀಕೃತ ಅರ್ಥಾತ್ ಬ್ರಾಹ್ಮಣರು ಮೇಲು ಇತರರು ಕೀಳು ಎಂಬ ಮನೋಭಾವವನ್ನು ಸ್ಥಾಪಿಸಲು ನೂರು ವರ್ಷಗಳಿಂದ ಕೆಲಸ ಮಾಡಿದೆ. ಹೀಗಾಗಿ ಎಲ್ಲ ಸಮುದಾಯಗಳಲ್ಲೂ, ಎಲ್ಲ ಪಕ್ಷಗಳಲ್ಲೂ ಆರ್‌ಎಸ್ಎಸ್‌ ಹೇಳುವ ಸಾಂಸ್ಕೃತಿಕ ಗುಲಾಮಗಿರಿಯನ್ನು ಒಪ್ಪಿಕೊಳ್ಳುವ, ಬಹುತ್ವದಿಂದ ದೂರ ಹೋಗಿರುವ ಮಂದಿ ಇದ್ದಾರೆ. ಹೀಗಾಗಿ ಆರ್‌ಎಸ್‌ಎಸ್ ಎಂಬುದನ್ನು ಪಕ್ಷ ರಾಜಕಾರಣ ಸಮಸ್ಯೆ ಎಂಬಂತೆ ನೋಡುವುದಕ್ಕಿಂತ, ಇಡೀ ಸಮಾಜಕ್ಕೆ, ಸಂವಿಧಾನಕ್ಕೆ ಎದುರಾಗಿರುವ ಸವಾಲು ಎಂದು ಗ್ರಹಿಸಬೇಕಾಗುತ್ತದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸಂಘಪರಿವಾರದ ಹುನ್ನಾರಗಳನ್ನು ಅರಿತ ದಲಿತರು

ನಾವೀಗ ಏನು ಮಾಡಬೇಕು? ಈ ಸಾಂಸ್ಕೃತಿಕ ಯಜಮಾನಿಕೆಯ ವಿರುದ್ಧ ಭಾರತ ದೇಶ ಕಂಡಿರುವ ಸುದೀರ್ಘ ಸಂಘರ್ಷದ ಚರಿತ್ರೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಅಷ್ಟೇ. ಬ್ರಾಹ್ಮಣೀಯ ವ್ಯವಸ್ಥೆಗೆ ಇತರ ಸಮುದಾಯಗಳನ್ನು ಅಧೀನಗೊಳಿಸುವಿಕೆಯ ವಿರುದ್ಧ ಚರಿತ್ರೆಯುದ್ಧಕ್ಕೂ ಚಳವಳಿಗಳು ನಡೆದಿವೆ. ಆ ಚಳವಳಿಗಳ ಬೇರುಗಳಿಗೆ ನಾವು ಹೋಗಬೇಕಿದೆ. ಬ್ರಾಹ್ಮಣೀಯ ವ್ಯವಸ್ಥೆಯ ವಿರುದ್ಧ ಮೊದಲಿಗೆ ಬೃಹತ್ ಚಳವಳಿಯನ್ನು ಕಟ್ಟಿದವನು ಗೌತಮ ಬುದ್ಧ. ಹೆಜೆಮನಿಯ ವಿರುದ್ಧ ಮೊದಲಿಗೆ ಕ್ರಾಂತಿಯನ್ನು ಮಾಡಿದ ಬುದ್ಧ, ಸಮಾನತೆಯ ಸಮಾಜವನ್ನು, ಮಾನವ ಘನತೆಯನ್ನು, ವೈಜ್ಞಾನಿಕ ದೃಷ್ಟಿಕೋನವನ್ನು ಬಿತ್ತಿದ. ‘ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡಿ’ ಎಂದ.‌ ಶ್ರಮಣ (ಶ್ರಮ ಸಂಸ್ಕೃತಿ) ಪರಂಪರೆಯ ಗುರುವಾಗಿ ನಿಂತ. ಆತನ ಸಾಲಿನಲ್ಲಿ ಬರುವ ಎಲ್ಲ ಅನುಭಾವಿ ಪರಂಪರೆಗಳು ಹೆಜೆಮನಿಯನ್ನು ಒಡೆದು ಹಾಕುತ್ತಲೇ ಬಂದಿವೆ. ಸಿದ್ಧ, ಆರೂಢ, ಅಚಲ, ನಾಥ, ವಚನ ಚಳವಳಿ, ತತ್ವಪದಕಾರರ ಆಂದೋಲನಗಳೆಲ್ಲವೂ ಹೆಜೆಮನಿಯನ್ನು ಮೂಲೋತ್ಪಾಟನೆ ಮಾಡಲು ಶ್ರಮಿಸಿವೆ. ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಾದ ‘ಶರಣರ ಚಳವಳಿ’ಯ ಮೂಲತತ್ವಗಳನ್ನು ಜನಮನಕೆ ಕೊಂಡೊಯ್ಯುವ ಕೆಲಸ ಇಂದು ಬಿರುಸಾಗಿ ಆಗಬೇಕಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿನೊಳಗೊಂದು ಆರೆಸ್ಸೆಸ್ ಆನೆ ಅವಿತಿರುವ ದುರಂತ!

ರಾಷ್ಟ್ರೀಯ ಮಟ್ಟದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನಡೆಸಿದ ಬೌದ್ಧ ಚಳವಳಿಯ ಮಹತ್ವವನ್ನು ತುಳಿತಕ್ಕೊಳಗಾದ ಸಮುದಾಯಗಳು ಅರಿಯಬೇಕು. ದಲಿತ, ಹಿಂದುಳಿದ ವರ್ಗಗಳಲ್ಲಿ ಜಾಗೃತಿಯ ಪ್ರಜ್ಞೆಯನ್ನು ಬಿತ್ತಿದ ನಾರಾಯಣಗುರು, ಪೆರಿಯಾರ್, ಗುರುನಾನಕ್, ಫುಲೆ ದಂಪತಿ ಸೇರಿದಂತೆ ಮೊದಲಾದ ಸಾಂಸ್ಕೃತಿಕ ಚಳವಳಿಕಾರರನ್ನು ಮತ್ತೆಮತ್ತೆ ಧ್ಯಾನಿಸಬೇಕು. ಅಸ್ಪೃಶ್ಯತೆಯ ಕಡುವಿರೋಧಿಯಾಗಿ ನಿಂತು, ಬಹುತ್ವದ ನೆಲೆಯಲ್ಲಿ ‘ಹಿಂದೂ ಧರ್ಮ’ವನ್ನು ವ್ಯಾಖ್ಯಾನಿಸಿದ ಗಾಂಧೀಜಿಯವರ ಮಾರ್ಗವೂ ಈ ಹೆಜೆಮನಿಯನ್ನು ಎದುರಿಸಲು ಖಂಡಿತ ಸಹಾಯಕ.

ನಾವು ಚರಿತ್ರೆಯ ಬೇರುಗಳನ್ನು ಅರಿಯದೆ ಹೋದರೆ, ಗುಲಾಮಗಿರಿ ಮುಂದುವರಿಯುತ್ತದೆ; ಆರ್‌ಎಸ್‌ಎಸ್ ಸಿದ್ಧಾಂತವನ್ನು ಪ್ರದರ್ಶಿಸುವ ಮಂದಿ ಕಾಂಗ್ರೆಸ್‌ನೊಳಗೂ ಸಿಗುತ್ತಾರೆ, ಬೇರೆ ಕಡೆಯೂ ಸಿಗುತ್ತಾರೆ! ಈ ಸಂಖ್ಯೆ ಹೆಚ್ಚಾದಷ್ಟು ಈ ದೇಶದ ಜಾತ್ಯತೀತ (ಧರ್ಮನಿರಪೇಕ್ಷ), ಬಹುತ್ವ ಗುಣ ಮಾಯವಾಗುತ್ತದೆ. ಮತ್ತೆ ಮನುಸ್ಮೃತಿ ಹಂತಹಂತವಾಗಿ ಜಾರಿಯಾಗುತ್ತದೆ. ಈ ಗುಲಾಮಗಿರಿಯ ರೋಗಕ್ಕೆ ‘ಪ್ರಿಸ್ಕ್ರಿಪ್ಷನ್’ ನಮ್ಮ ಸಂವಿಧಾನ ಎಂಬುದನ್ನು ಜನಸಮುದಾಯಕ್ಕೆ ಮನದಟ್ಟು ಮಾಡಬೇಕಾಗಿದೆ. ಸಂವಿಧಾನ ಉಳಿದರೆ, ನಮ್ಮ ಗುರುತುಗಳು ಉಳಿಯುತ್ತವೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಹಬ್ಬ-ಆಚರಣೆಗಳೇ ಬಿಜೆಪಿಯ ದ್ವೇಷದ ಅಸ್ತ್ರ; ಜನತೆ ಎಚ್ಚೆತ್ತುಕೊಳ್ಳಲಿ!

ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ಆಚರಣೆಗಳ ಪಾವಿತ್ರ್ಯವನ್ನು ಹಾಳುಗೆಡವುವ, ಹಬ್ಬಗಳನ್ನು...

ಈ ದಿನ ಸಂಪಾದಕೀಯ | ಪ್ರಜಾ ಸೇವೆ ಪ್ರಚಾರವೂ ಇರಲಿ, ಪ್ರಜೆಗಳ ಬದುಕಿನಲ್ಲಿ ಬದಲಾವಣೆಯನ್ನೂ ತರಲಿ

ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಜನರಿಗೆ ತಲುಪಲು ಪ್ರಚಾರ ಮುಖ್ಯ; ಅದಕ್ಕಿಂತ ಸಾಮಾನ್ಯರ...

ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು...

ಈ ದಿನ ಸಂಪಾದಕೀಯ | ಪಾದಯಾತ್ರೆಯ ಪಾವಿತ್ರ್ಯತೆಯನ್ನು ಬಿಜೆಪಿ ಮುಖಂಡರು ಮಣ್ಣುಗೂಡಿಸಿದರೇ?

ದೇಶದಲ್ಲಿ ಇಲ್ಲಿಯವರೆಗೆ ಜರುಗಿದ ಪಾದಯಾತ್ರೆಗಳು ಜನರ ಸಮಸ್ಯೆಗಳನ್ನು ಹೊತ್ತು ನಡೆದ ಹೆಜ್ಜೆಗಳಾಗಿದ್ದವು,...