ಈ ದಿನ ಸಂಪಾದಕೀಯ | ಆರೆಸ್ಸೆಸ್ ಆಸೆ ಮತ್ತು ಬಿಜೆಪಿಯ ಭ್ರಮೆ

Date:

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಸಂಘದ ಸೂಚನೆಯಂತೆ ‘ಒಂದು ರಾಷ್ಟ್ರ’ದ ಭಜನೆ ಮಾಡುತ್ತಿದೆ. ಎಲ್ಲ ರಾಜ್ಯಗಳೂ ಒಂದೇ ರೀತಿ ವರ್ತಿಸಿದರೆ, ಒಂದೇ ನೀತಿಯನ್ನು ಅನುಸರಿಸುವಂತೆ ಮಾಡಿದರೆ ದೇಶವನ್ನು ಒಗ್ಗೂಡಿಸಿದಂತೆ, ಬಲಪಡಿಸಿದಂತೆ ಎಂದು ಬಿಜೆಪಿ ನಂಬಿರುವಂತಿದೆ. ಆದರೆ ಭಾರತದ ಬಹುತ್ವವನ್ನು ಗೌರವಿಸದೇ ಇದ್ದರೆ, ಬಹು ಬಗೆಯ ಅಭಿವ್ಯಕ್ತಿಗೆ ಅವಕಾಶ ಕೊಡದೇ ಇದ್ದರೆ, ಭಾರತ- ಭಾರತವಾಗಿ ಉಳಿಯುವುದಿಲ್ಲ.

`ಮುಂದಿನ 20–30 ವರ್ಷಗಳಲ್ಲಿ ಭಾರತವು ವಿಶ್ವಗುರುವಾಗಿ ಹೊರಹೊಮ್ಮುವುದು ನಿಶ್ಚಿತ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮುಂಬೈನಲ್ಲಿ ಮಾತನಾಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರು, ಸುಮಾರು ವ‍ರ್ಷಗಳಿಂದ ಹೀಗೆ ಹೇಳುತ್ತಲೇ ಇದ್ದಾರೆ. ಹಾಗೆಯೇ ಸಂಘದ ಶಾಖೆಗಳು ಪ್ರತಿನಿತ್ಯ, ಸಾರ್ವಜನಿಕ ಮೈದಾನದ ಮೂಲೆಯಲ್ಲಿ ಒಂದಿಪ್ಪತ್ತು ಜನ ಸೇರಿ ದೇಶಭಕ್ತಿಯ ಬೋಧನೆ, ದೇಹಕ್ಕೆ ಕಸರತ್ತು, ನಮಸ್ತೆ ಸದಾ ವತ್ಸಲೆ ಮಾತೃಭೂಮೆ ಜಪ ಮಾಡುತ್ತಲೇ ಬರುತ್ತಿದ್ದಾರೆ.  

ಸಂಘದ ಮುಖ್ಯಸ್ಥರು ಹಾಗೆ ಹೇಳುವುದನ್ನು ಬಿಟ್ಟಿಲ್ಲ, ಪರಿವಾರ ಹೀಗೆ ಮಾಡುವುದನ್ನು ನಿಲ್ಲಿಸಿಲ್ಲ. ದೇಶವೂ ಉದ್ಧಾರವಾಗಲಿಲ್ಲ.

ಆದರೆ ಇದು ಇಷ್ಟು ಸರಳವಾದ ವಿಷಯವಲ್ಲ. ಸರಿಸಿ ಸುಮ್ಮನಾಗುವಂಥದ್ದೂ ಅಲ್ಲ. ಏಕೆಂದರೆ, 1925ರಲ್ಲಿ ಆರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, 1951ರಲ್ಲಿ ಜನಸಂಘ ಹುಟ್ಟುಹಾಕಿತು. 1980ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಜನ್ಮ ನೀಡಿತು. ಈ ಬಿಜೆಪಿ ಎನ್ನುವುದು ಆರೆಸ್ಸೆಸ್‌ನ ರಾಜಕೀಯ ಅಂಗ. ಇದರ ಮುಖ್ಯಸ್ಥರಾದ ಮೋಹನ್ ಭಾಗವತ್ ನೀಡುವ ಹೇಳಿಕೆಗಳು ಕಾರ್ಯರೂಪಕ್ಕಿಳಿಯುವುದು ಕೇಂದ್ರ ಸರ್ಕಾರದ ನಡೆಗಳಲ್ಲಿ. ಹೀಗಾಗಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗುತ್ತದೆ.

ಸಂಘದ ಮುಖ್ಯಸ್ಥರು ಭಾರತದ ಭವಿಷ್ಯದ ಬಗ್ಗೆ ಹೇಳುತ್ತಲೇ, `ಭಾರತದ ಈ ಸಾಧನೆ ಕುರಿತು ಜಾಗತಿಕ ಮಟ್ಟದಲ್ಲಿ ಸುಳ್ಳು ಮಾಹಿತಿಯನ್ನು ಹಬ್ಬಿಸುವ ಕಾರ್ಯ ನಡೆಯುತ್ತಿದೆ. ಇಂಥ ಪ್ರಯತ್ನಗಳಿಗೆ ಪ್ರತ್ಯುತ್ತರ ನೀಡಲು ಪೀಳಿಗೆಯನ್ನು ಸಜ್ಜುಗೊಳಿಸಬೇಕು’ ಎಂದು ಕರೆ ಕೊಡುತ್ತಾರೆ.

ಭಾರತದ ಸಾಧನೆ ಕುರಿತು ಜಾಗತಿಕ ಮಟ್ಟದಲ್ಲಿ ಸುಳ್ಳು ಮಾಹಿತಿಯನ್ನು ಹಬ್ಬಿಸಲಾಗುತ್ತಿದೆ ಎನ್ನುವ ಭಾಗವತರು, ಅವರಾರೆಂದು ಹೆಸರಿಸುವುದಿಲ್ಲ. ಆದರೆ ಇಂಥ ಪ್ರಯತ್ನಗಳಿಗೆ ಪ್ರತ್ಯುತ್ತರ ನೀಡಲು ಪೀಳಿಗೆಯನ್ನು ಸಜ್ಜುಗೊಳಿಸಬೇಕು ಎಂಬ ಪ್ರಚೋದನೆಯ ಮಾತುಗಳನ್ನಾಡುತ್ತಾರೆ.

ಇದು ಅವರ ಅಂತರಂಗದ ಅಭೀಪ್ಸೆ. ಅವರ ಪ್ರಕಾರ ಸುಳ್ಳು ಮಾಹಿತಿ ಹಬ್ಬಿಸುತ್ತಿರುವವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿನವರು. ಹೊರದೇಶದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದು, ಇವರಿಗೆ ದೇಶದ್ರೋಹದಂತೆ ಕಾಣುತ್ತದೆ. ರಾಹುಲ್ ಮತ್ತವರ ಪಕ್ಷಕ್ಕೆ ಪ್ರತ್ಯುತ್ತರ ನೀಡಲು ಸಂಘದ ಪರಿವಾರವಷ್ಟೇ ಅಲ್ಲ, ಹೊಸ ಪೀಳಿಗೆಯನ್ನೇ ಸಜ್ಜುಗೊಳಿಸಬೇಕೆಂದು ಕರೆ ಕೊಟ್ಟಿದ್ದಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಬಿಜೆಪಿಯ ಹಸ್ತಗಳಿಗೆ ಮೆತ್ತಿದೆ ಇದ್ರೀಸ್ ನೆತ್ತರು

ಪ್ರತ್ಯುತ್ತರ ಎಂದರೆ ಏನು? ಸೋಷಿಯಲ್ ಮೀಡಿಯಾ, ಮೀಡಿಯಾ, ನ್ಯಾಯಾಂಗ, ಕಾರ್ಯಾಂಗವನ್ನು ದುರ್ಬಳಕೆ ಮಾಡಿಕೊಂಡು ರಾಹುಲ್ ಗಾಂಧಿಯನ್ನು ಬಗ್ಗುಬಡಿಯುವುದು. ಬಾಯಿ ಬಿಡದಂತೆ ಮಾಡುವುದು. ಈಗ, ಭಾಗವತರು ಬಯಸಿದಂತೆಯೇ ಆಗಿದೆ. ರಾಹುಲ್ ಗಾಂಧಿಗೆ ಅನರ್ಹತೆಯ ಶಿಕ್ಷೆಯನ್ನೂ ಕೊಡಲಾಗಿದೆ.

ಅಂದರೆ ಈಗ ಭಾರತ ವಿಶ್ವಗುರುವಿನತ್ತ ಹೆಜ್ಜೆ ಹಾಕಲು ಯಾವ ಅಡ್ಡಿ-ಆತಂಕಗಳು ಇಲ್ಲ ಎಂದಾಯಿತಲ್ಲವೇ? ಭಾರತ ವಿಶ್ವಕ್ಕೆ ಗುರು ಆಗುವ ನಿಟ್ಟಿನಲ್ಲಿ ಏನೇನು ಮಾಡಿದೆ, ಮಾಡುತ್ತಿದೆ, ಮಾಡಲು ಮುಂದಾಗಿದೆ ಎನ್ನುವುದನ್ನು ತಿಳಿಯುವುದು ಭಾರತೀಯರೆಲ್ಲರ ಹಕ್ಕು ಅಲ್ಲವೇ? ದೇಶ ನಿಜಕ್ಕೂ ವಿಶ್ವಗುರುವಿನತ್ತ ಹೆಜ್ಜೆ ಹಾಕಿದರೆ, ಭಾರತೀಯರೆಲ್ಲರೂ ಸಂಭ್ರಮಿಸುತ್ತಾರಲ್ಲವೇ?

ಅಸಲಿಗೆ, ಆರೆಸ್ಸೆಸ್‌ ಮತ್ತು ಬಿಜೆಪಿಗೆ ಬೇಕಾಗಿರುವುದು ಅಧಿಕಾರವೇ ಹೊರತು ದೇಶವಲ್ಲ. ತಮ್ಮ ನಡೆಯನ್ನು ವಿರೋಧಿಸುವವರನ್ನು ಬಗ್ಗುಬಡಿಯುವುದೇ ಹೊರತು, ಪ್ರಜಾಪ್ರಭುತ್ವದ ಸೊಗಸನ್ನು ಸಾರುವುದಲ್ಲ. 1925ರಲ್ಲಿ ಜನ್ಮತಾಳಿದ ಆರೆಸ್ಸೆಸ್‌ಗೆ ಇನ್ನು ಎರಡು ವರ್ಷ ಕಳೆದರೆ ನೂರು ವರ್ಷ ದಾಟುತ್ತದೆ. ಸಂಘದ ಆ ನೂರು ವರ್ಷಗಳ ಸಂಭ್ರಮವನ್ನು ಭಾರತದ ಸಂಭ್ರಮವನ್ನಾಗಿ ಮಾಡುವುದು ಆರೆಸ್ಸೆಸ್‌ ಆಸೆ. ಅದಕ್ಕೆ ಬೇಕಾದ ಸಿದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮಾಡುತ್ತಿದೆ. ಅಡ್ಡಿಯಾಗುವವರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸುತ್ತಿದೆ.

ಅಷ್ಟಕ್ಕೂ ಆರೆಸ್ಸೆಸ್‌ ಹುಟ್ಟಿದ್ದು ಹಿಂದೂ ರಾಷ್ಟ್ರದ ಉದ್ದೇಶಕ್ಕಾಗಿ. ಮುಸ್ಲಿಮರು, ಕ್ರೈಸ್ತರು, ಪಾರ್ಸಿಗಳು, ಸಿಖ್ಖರು, ಜೈನರು, ಬೌದ್ಧರನ್ನು ಹೊರಗಟ್ಟಿ- ಒಂದು ರಾಷ್ಟ್ರ ಒಂದು ಧರ್ಮ ಮಾಡಲಿಕ್ಕಾಗಿ. ಆ ಕಾರಣಕ್ಕಾಗಿಯೇ ಗಾಂಧಿಯ ಸ್ವತಂತ್ರ ಹೋರಾಟದಲ್ಲಿ ಅದು ಭಾಗಿಯಾಗಲಿಲ್ಲ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಒಪ್ಪಲಿಲ್ಲ. ಸಮಸಮಾಜದ ಆಶಯಗಳುಳ್ಳ ಮೀಸಲಾತಿಯನ್ನು ಹೀಯಾಳಿಸದೇ ಬಿಡಲಿಲ್ಲ.

ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಿದೆ. ಸಂಘದ ಸೂಚನೆಯಂತೆ ಕಳೆದ ಕೆಲವು ವರ್ಷಗಳಿಂದ ‘ಒಂದು ರಾಷ್ಟ್ರ’ ಎಂಬ ಭಜನೆ ಮಾಡುತ್ತಿದೆ. ದೇಶವನ್ನು ಒಗ್ಗೂಡಿಸಲು, ಬಲಪಡಿಸಲು ‘ಒಂದಾಗುವಿಕೆ’ ಬೇಕು ಎಂಬ ಸಂಘದ ಆಶಯವನ್ನು ದೇಶದ ಆಶಯವನ್ನಾಗಿಸಲು ಹಾತೊರೆಯುತ್ತಿದೆ. ಇಡೀ ದೇಶಕ್ಕೆ ಅನ್ವಯವಾಗುವ ಒಂದೇ ಬಗೆಯ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ.

ಎಲ್ಲ ರಾಜ್ಯಗಳೂ ಒಂದೇ ರೀತಿ ವರ್ತಿಸಿದರೆ, ಒಂದೇ ನೀತಿಯನ್ನು ಅನುಸರಿಸುವಂತೆ ಮಾಡಿದರೆ ದೇಶವನ್ನು ಒಗ್ಗೂಡಿಸಿದಂತೆ, ಬಲಪಡಿಸಿದಂತೆ ಆಗುತ್ತದೆ ಎಂದು ಬಿಜೆಪಿ ನಂಬಿರುವಂತಿದೆ. ಆದರೆ ಭಾರತದ ಬಹುತ್ವವನ್ನು ಗೌರವಿಸದೇ ಇದ್ದರೆ, ಬಹು ಬಗೆಯ ಅಭಿವ್ಯಕ್ತಿಗೆ ಅವಕಾಶ ಕೊಡದೇ ಇದ್ದರೆ, ಭಾರತ- ಭಾರತವಾಗಿ ಉಳಿಯುವುದಿಲ್ಲ. ಸಾವಿರಾರು ಬಗೆಯ ಪಕ್ಷಿಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿ, ಕೇವಲ ಒಂದೇ ಬಗೆಯ ಪಕ್ಷಿಗಳು ಮಾತ್ರ ಉಳಿದರೆ, ಏನು ಚೆಂದ?

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬಡವರ ಗ್ಯಾರಂಟಿ ಮತ್ತು ಉಳ್ಳವರ-ಉಂಡವರ ವಿಕೃತಿ

ಬಡವರ ಗ್ಯಾರಂಟಿಗಳ ಬಗ್ಗೆ ನಿಜಕ್ಕೂ ಹೊಟ್ಟೆಗೆ ಬೆಂಕಿ ಬೀಳಿಸಿಕೊಂಡಿರುವವರು, ಒಳಗಿನ ಹೊಲಸನ್ನೆಲ್ಲ...

‘ಈ ದಿನ’ ಸಂಪಾದಕೀಯ | ಒಡಿಶಾ ಎದುರಿಸುತ್ತಿರುವ ಮಾಸಾಶನ ಸಮಸ್ಯೆ ಕರ್ನಾಟಕವನ್ನು ಕಾಡದಿರಲಿ

ತಾನು ಚುನಾವಣೆ ವೇಳೆ ನೀಡಿದ 'ಗ್ಯಾರಂಟಿ'ಗಳನ್ನು ಈಡೇರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ...

ಈ ದಿನ ಸಂಪಾದಕೀಯ | ಯುಪಿಎಸ್‌ಸಿ ಪರೀಕ್ಷೆ; ಹೆಣ್ಣುಮಕ್ಕಳೇ ಟಾಪರ್ಸ್‌, ಮಹತ್ವದ ಹುದ್ದೆಗಳು ಮಾತ್ರ ಪುರುಷರಿಗೇ ಮೀಸಲು!

ಎಷ್ಟೇ ಕ್ಲಿಷ್ಟಕರ ಪರೀಕ್ಷೆಗಳನ್ನು ಪಾಸು ಮಾಡಿರಲಿ, ಯಾವುದೇ ಸಮುದಾಯದಿಂದ ಬಂದಿರಲಿ, ಸರ್ಕಾರದ...

ಈ ದಿನ ಸಂಪಾದಕೀಯ | ಬೆಂಗಳೂರು: ಅಂಡರ್‌ಪಾಸ್, ಫ್ಲೈಓವರ್, ರಸ್ತೆ ಗುಂಡಿ; ಹೆಜ್ಜೆ ಹೆಜ್ಜೆಗೂ ಕಾಡುವ ಸಾವು!

ಬೆಂಗಳೂರು ನಗರದಲ್ಲಿ ಯಾವುದು ಸರಿ ಇದೆ ಎಂದು ಜನ ಕೇಳುವಂತಾಗಿದೆ. ರಸ್ತೆಗಳು...