ಕರ್ನಾಟಕಕ್ಕೆ ಕಂಟಕವಾಗಲಿದೆಯೇ ನಂದಿನಿ-ಅಮುಲ್‌ ವಿಲೀನ?

Date:

ಕೇಂದ್ರದ ಅಧಿಕಾರಶಾಹಿಯಲ್ಲಿ ಗುಜರಾತ್‌ ಮೂಲದ ಅಧಿಕಾರಿಗಳದ್ದೇ ಕಾರುಬಾರು. ಆದರೆ ಭಾರತವೆಂದರೇ ಬರೀ ಗುಜರಾತ್‌ ಮಾತ್ರ ಅಲ್ಲವಲ್ಲ! ನಮ್ಮಲ್ಲಿರುವುದು ಒಕ್ಕೂಟ ವ್ಯವಸ್ಥೆ. ಹೀಗಾಗಿ ಯಾವುದೇ ಒಂದು ರಾಜ್ಯಕ್ಕೆ ಮಾತ್ರ ಕೇಂದ್ರ ಸರ್ಕಾರ ಮಣೆ ಹಾಕುವಂತಿಲ್ಲ!

ಕಳೆದ ವರ್ಷ ಡಿಸೆಂಬರ್‌ ಅಂತ್ಯದಲ್ಲಿ ಮಂಡ್ಯದ ಗೆಜ್ಜಲಗೆರೆಯಲಿನ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಆವರಣದಲ್ಲಿ ಜರುಗಿದ ಮೆಗಾ ಡೈರಿ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಮಾತನಾಡುತ್ತಾ, ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ʼನಂದಿನಿʼಯನ್ನು ಗುಜರಾತ್‌ ಮೂಲದ ʼಅಮೂಲ್‌ʼ ಜೊತೆ ವಿಲೀನಗೊಳಿಸಿದರೇ ಕರ್ನಾಟಕದ ಹಾಲು ಉತ್ಪಾದಕರಿಗೆ ಅನುಕೂಲವಾಗುತ್ತದೆ ಎಂಬರ್ಥದ ಮಾತುಗಳನ್ನು ಆಡಿದ್ದರು. ಇದಕ್ಕೆ ಮೊದಲು ಕೂಡ ಅವರು ಇದೇ ವರಸೆಯ ಹೇಳಿಕೆಗಳನ್ನು ನೀಡಿದ್ದರು. ಈ ಬೆಳವಣಿಗೆ ರೈತರಲ್ಲಿ ಮತ್ತು ಸಹಕಾರಿ ವಲಯದವರಲ್ಲಿ ಆತಂಕವನ್ನು ಮೂಡಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ವ್ಯಾಪಕವಾಗಿಯೇ ಪ್ರತಿರೋಧದ ದನಿಗಳು ಎದ್ದಿದ್ದವು.

ಸಹಕಾರ ಕ್ಷೇತ್ರ ರಾಜ್ಯದ ವಿಷಯವಾಗಿದೆ. ಆದರೆ ಕೇಂದ್ರದಲ್ಲಿ ಸಹಕಾರ ಸಚಿವಾಲಯ ಅಸ್ತಿತ್ವಕ್ಕೆ ಬಂದ ತರುವಾಯ ಲಾಭದಾಯಕ ಮಹಾಮಂಡಲಗಳ ವಿಚಾರ ಮುನ್ನೆಲೆಗೆ ಬಂದಿತ್ತು. ಕೇಂದ್ರ ಸರ್ಕಾರಕ್ಕೆ ವಿಲೀನಿಕರಣದ ಬಗೆಗೆ ವಿಶೇಷ ಆಸ್ಥೆ ಮತ್ತು ಮೋಹವಿದೆ. ಹಿಂದೆ ಈ ವಿಲೀನೀಕರಣ ಪ್ರಕ್ರಿಯೆ ಕರ್ನಾಟಕದ ಪಾಲಿಗೆ ಶಾಪವಾಗಿ ಪರಿಣಮಿಸಿದ್ದನ್ನು ಸ್ಮರಿಸಬಹುದು. ಕರ್ನಾಟಕ ಮೂಲದ ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ವಿಜಯಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಕಾರ್ಪೋರೇಶನ್‌ ಬ್ಯಾಂಕ್‌… ಅನೇಕ ದಶಕಗಳಿಂದ ಗ್ರಾಹಕರಿಗೆ ಸೇವೆಯನ್ನು ಸಲ್ಲಿಸಿದ್ದವು. ಅವೇನೂ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಿ ಸಂಕಷ್ಟದ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೂ ಅವುಗಳನ್ನು ವಿಲೀನಗೊಳಿಸಲಾಯಿತು. ಕರ್ನಾಟಕದ ಬ್ಯಾಂಕ್‌ ಕ್ಷೇತ್ರದ ಹೆಗ್ಗುರುತುಗಳಾಗಿದ್ದ ಇವುಗಳನ್ನು ನಾಮಾವಶೇಷಗೊಳಿಸಲಾಯಿತು.

ಕರ್ನಾಟಕ ಹಾಲು ಮಹಾಮಂಡಲ(ಕೆಎಂಎಫ್)‌ ನಮ್ಮ ರಾಜ್ಯದ ಮುಂಚೂಣಿಯಲ್ಲಿರುವ, ಲಾಭದಾಯಕ ಸಹಕಾರಿ ಸಂಸ್ಥೆಯಾಗಿದೆ. ವಿಶ್ವ ಬ್ಯಾಂಕಿನ ನೆರವಿನಿಂದ 1974ರಲ್ಲಿ ಕರ್ನಾಟಕ ಡೈರಿ ಅಭಿವೃದ್ಧಿ ನಿಗಮವು (ಕೆಡಿಡಿಸಿ) ಸ್ಥಾಪನೆಯಾಯಿತು. ತರುವಾಯ ಹಂತ ಹಂತವಾಗಿ ನಮ್ಮ ರಾಜ್ಯಾದ್ಯಂತ ಬೆಳೆದ ಈ ಸಹಕಾರಿ ಸಂಸ್ಥೆ ಕರ್ನಾಟಕ ಗ್ರಾಮೀಣ ಆರ್ಥಿಕತೆಗೆ ಗಮನಾರ್ಹ ಕೊಡುಗೆಗಳನ್ನು ನೀಡಿತು. 1984ರಲ್ಲಿ ಕೆಡಿಡಿಸಿ ಕೆಎಂಎಫ್‌ ಎಂದು ಮಾರ್ಪಾಟಾಯಿತು. ಒಂದು ಮೂಲದ ಪ್ರಕಾರ ಇದರಲ್ಲಿ 16 ಹಾಲು ಒಕ್ಕೂಟಗಳಿದ್ದು, ಸುಮಾರು ರೂ. 20,000ಕೋಟಿಗಿಂತಲೂ ಮಿಗಿಲಾದ ವ್ಯಾಪಾರ ವಹಿವಾಟುಗಳನ್ನು ಮಾಡುತ್ತಿದೆ. ಕೆಎಂಎಫ್‌ ʼ ನಂದಿನಿʼ ಬ್ಯ್ರಾಂಡ್‌ ಹೆಸರಿನಲ್ಲಿ ಮಾರಾಟವಾಗುತ್ತಿರುವ ಹಾಲು, ಮೊಸರು, ತುಪ್ಪ, ಬೆಣ್ಣೆ, ಖಾದ್ಯ ಪದಾರ್ಥಗಳು ಜನತೆಗೆ ಪ್ರಿಯವಾಗಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಮ್ಮ ದೇಶದಲ್ಲಿ ʼಅಮೂಲ್‌ ʼನಂತಹ ಸಹಕಾರಿ ಸಂಸ್ಥೆ ಕಾನೂನಾತ್ಮಕವಾಗಿ ಎಲ್ಲಿ ಬೇಕಾದರೂ ತನ್ನ ವ್ಯಾಪಾರ ವಹಿವಾಟುಗಳನ್ನು ನಡೆಸಬಹುದು. ಕೆಎಂಎಫ್‌ನ ಉತ್ಪನ್ನಗಳು ಚೆನ್ನೈ, ಗೋವಾ, ಹೈದರಾಬಾದ್‌, ನಾಗಪುರ, ಮುಂಬೈ ಮತ್ತು ಇತರ ಕೆಲವು ಪ್ರದೇಶಗಳ ಮಾರುಕಟ್ಟೆಗಳಲ್ಲಿ ಲಭ್ಯವಿವೆ. ಹಾಗೆಯೇ ಅಮೂಲ್‌ ಉತ್ಪನ್ನಗಳು ಕೂಡ ದೇಶಾದ್ಯಂತ ಮಾರುಕಟ್ಟೆಗಳಲ್ಲಿ ದೊರಕುತ್ತವೆ. ಕೆಎಂಎಫ್‌, ಅಮೂಲ್‌ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಆದರೆ ನಂದಿನಿ ಮತ್ತು ಅಮೂಲ್‌ ಪದಾರ್ಥಗಳ ಬೆಲೆಗಳಲ್ಲಿ ವ್ಯತ್ಯಾಸಗಳಿವೆ. ಇಡೀ ದಕ್ಷಿಣ ಭಾರತದಲ್ಲೇ ಒಂದು ಲೀಟರ್‌ ನಂದಿನಿ ಹಾಲಿನ ಬೆಲೆ ಕನಿಷ್ಠವಾದದ್ದೆಂದು ಹೇಳಲಾಗುತ್ತಿದೆ. ಅಮೂಲ್ ಉತ್ಪನ್ನಗಳ ಬೆಲೆ ಸ್ವಲ್ಪ ಅಧಿಕ ಎಂದೇ ಹೇಳಬಹುದು.

ʼಅಮೂಲ್‌ʼಗೆ ನಮ್ಮ ದೇಶದ ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಹೆಸರಿದೆ. ಹಾಗೆಯೇ ಕೆಎಂಎಫ್‌ನ ʼನಂದಿನಿʼ ಬ್ರ್ಯಾಂಡ್‌ ಕೂಡ ಅನೇಕ ವರ್ಷಗಳಿಂದ ಹೆಸರುವಾಸಿಯಾಗಿದೆ. ನಮ್ಮ ದೇಶದಲ್ಲಿ ಗುಜರಾತ್‌ ಮತ್ತು ಕರ್ನಾಟಕ ಒಂದರ್ಥದಲ್ಲಿ ʼಹಾಲು ಸಮೃದ್ಧ ರಾಜ್ಯ’ಗಳೆಂದು ಕರೆಯಬಹುದು. ಹೀಗಿರಬೇಕಾದರೇ, ʼಅಮೂಲ್‌ ʼಕರ್ನಾಟಕಕ್ಕೆ ಏಕೆ ಲಗ್ಗೆ ಹಾಕಲು ಪ್ರಯತ್ನಿಸುತ್ತಿದೆ ಎಂಬ ಪ್ರಶ್ನೆ ಏಳುವುದು ಸಹಜ. ಇದರ ಹಿಂದೆ ರಾಜಕೀಯ ಕಾರಣಗಳು ಇವೆಯೇ? ಖಂಡಿತ ಇವೆ.

ಇದನ್ನು ಓದಿ ನಂದಿನಿ v/s ಅಮುಲ್‌: ರೈತನ ಬದುಕಿನ ಮೇಲೆ ಡಬಲ್‌ ಎಂಜಿನ್‌ ಸರ್ಕಾರದ ರೋಡ್ ರೋಲರ್!

ಕೇಂದ್ರ ಸರ್ಕಾರದಲ್ಲಿ ಸಹಕಾರಿ ಕ್ಷೇತ್ರದ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸುವುದರ ಹಿಂದೆ ಕೂಡ ರಾಜಕೀಯ ಹಿತಾಸಕ್ತಿಗಳ ಪಾತ್ರವನ್ನು ಕಡೆಗಣಿಸುವಂತಿಲ್ಲ. ಏಕೆಂದರೆ ಅನೇಕ ರಾಜ್ಯಗಳ (ಬಹುಶಃ ಬಿಜೆಪಿ ಆಡಳಿತವಿರುವ ರಾಜ್ಯಗಳನ್ನು ಹೊರತುಪಡಿಸಿ) ದೊಡ್ಡ ಸಹಕಾರಿ ಸಂಸ್ಥೆಗಳ ಆಡಳಿತ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಅಷ್ಟಾಗಿ ಬಿಜೆಪಿ ನಿಯಂತ್ರಣದಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ. ಸಹಕಾರಿ ಕ್ಷೇತ್ರದ ಮೇಲೆ ತನ್ನ ಹಿಡಿತವನ್ನು ಬಲಗೊಳಿಸಿದರೇ, ಬಿಜೆಪಿ ತನ್ನ ರಾಜಕೀಯ ಲಾಭಗಳನ್ನು ಇನ್ನಷ್ಟು ವೃದ್ಧಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಅಮೂಲ್‌ ಮಧ್ಯಪ್ರವೇಶವನ್ನು ವಿಶ್ಲೇಷಿಸಬೇಕು.

2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ತರುವಾಯ ಗುಜರಾತ್‌ ರಾಜ್ಯಕ್ಕೆ ಅಧಿಕ ಮಟ್ಟದ ಉತ್ತೇಜನ ದೊರಕುತ್ತಿರುವುದು ಗುಟ್ಟಿನ ವಿಷಯವಲ್ಲ. ಕೇಂದ್ರದ ಅಧಿಕಾರಶಾಹಿಯಲ್ಲಿ ಗುಜರಾತ್‌ ಮೂಲದ ಅಧಿಕಾರಿಗಳದ್ದೇ ಕಾರುಬಾರು. ಆದರೆ ಭಾರತವೆಂದರೇ ಬರೀ ಗುಜರಾತ್‌ ಮಾತ್ರ ಅಲ್ಲವಲ್ಲ! ನಮ್ಮಲ್ಲಿರುವುದು ಸಂಯುಕ್ತ ವ್ಯವಸ್ಥೆ (ಫೆಡರಲಿಸಂ). ಹೀಗಾಗಿ ಯಾವುದೇ ಒಂದು ರಾಜ್ಯಕ್ಕೆ ಮಾತ್ರ ಕೇಂದ್ರ ಸರ್ಕಾರ ಮಣೆಯನ್ನು ಹಾಕುವಂತಿಲ್ಲ!

ಇದನ್ನು ಓದಿ ನನ್ನ ಮತ |ಕೆಟ್ಟದ್ದನ್ನು ಕಿತ್ತೊಗೆಯಲು ಮತದಾನವೊಂದೇ ನಾಗರಿಕರಿಗೆ ಇರುವ ಏಕೈಕ ಅಸ್ತ್ರ

ಅಮೂಲ್‌ ಜೊತೆ ನಂದಿನಿ ವಿಲೀನದ ವಿಷಯ ಮುನ್ನೆಲೆಗೆ ಬಂದ ನಂತರ ನಮ್ಮ ರಾಜ್ಯದ ವಿರೋಧ ಪಕ್ಷಗಳು, ಕನ್ನಡಪರ ಸಂಸ್ಥೆಗಳು ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಪ್ರಕ್ರಿಯೆಯ ವಿರುದ್ಧ ಅಭಿಯಾನ ಜರುಗುತ್ತಿದೆ. ʼನಂದಿನಿʼ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್. ಇದರಾಚೆಗೂ ಅದು ನಮ್ಮ ರಾಜ್ಯದ ಒಂದು ಅಸ್ಮಿತೆ ಎಂದರೇ ಅತಿಶಯೋಕ್ತಿಯಾಗುವುದಿಲ್ಲ! ಇದನ್ನು ಉಳಿಸಿ, ಬೆಳೆಸುವುದರಲ್ಲಿ ಕನ್ನಡಿಗರು ನಿಗಾ ಇಡಬೇಕು; ತಮ್ಮ ಪಾತ್ರವನ್ನು ವಹಿಸಬೇಕು.

ಮ ಶ್ರೀ ಮುರಳಿ ಕೃಷ್ಣ
+ posts

ಬರಹಗಾರ, ಸಾಮಾಜಿಕ ಕಾರ್ಯಕರ್ತ

ಪೋಸ್ಟ್ ಹಂಚಿಕೊಳ್ಳಿ:

ಮ ಶ್ರೀ ಮುರಳಿ ಕೃಷ್ಣ
ಮ ಶ್ರೀ ಮುರಳಿ ಕೃಷ್ಣ
ಬರಹಗಾರ, ಸಾಮಾಜಿಕ ಕಾರ್ಯಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...