ಒಂದು ಪ್ರದೇಶದ ಬದುಕು ನಿರ್ಮಾಣವಾಗುವಾಗ ಅದರಲ್ಲಿ ಪುರುಷರ ಕಾಣಿಕೆಯಷ್ಟೇ ಸ್ತ್ರೀಯರ ಕಾಣಿಕೆಯೂ ಇರುತ್ತದೆ. ಆದರೆ ರೂಢಿ ಸುಲಲಿತ ಜಗತ್ತು- ಪುರುಷ ಇತಿಹಾಸವನ್ನು ಎತ್ತಿ ಹಿಡಿದಷ್ಟು 'ಅವಳ' ಕಥೆಯ ಕಡೆಗೆ ಗಮನ ಹರಿಸುವುದಿಲ್ಲ ಎನ್ನುವ ಪ್ರೊ. ಸ. ಉಷಾ ಅವರು 'ಹಾಸನ ಮಣ್ಣಿನ ಹೆಣ್ಣು ದನಿಗಳು' ಕೃತಿ ಕುರಿತು ಕಂಡಿರಿಸಿದ್ದು ಇಲ್ಲಿದೆ...
ಪ್ರಸಿದ್ಧ ಇಂಗ್ಲಿಷ್ ಕವಿ ಜಾನ್ ಕೀಟ್ಸ್ ತನ್ನ “ಗ್ರೀಕ್ ಭಸ್ಮ ಕುಂಭ” ಎಂಬ ಕವಿತೆಯಲ್ಲಿ “heard melodies are sweet but those unheard are sweeter” ಎನ್ನುತ್ತಾನೆ. ‘ಹಾಸನ ಮಣ್ಣಿನ ಹೆಣ್ಣು ದನಿಗಳು’ ಎಂಬ ಪುಸ್ತಕವನ್ನು ಓದುವಾಗ, ಓದಿ ಎಷ್ಟೋ ದಿನಗಳಾದ ಮೇಲೂ ಈ ಮಾತು, ತನ್ನ ಅನೇಕಾರ್ಥಗಳಲ್ಲಿ ನನ್ನ ಒಳ ಮನದಲ್ಲಿ ಅನುರಣಿಸುತ್ತಲೇ ಇತ್ತು. ಕೇಳಿದ ಹಾಡುಗಳು ಮಧುರ, ಕೇಳದ ಹಾಡುಗಳು ಮಧುರಾತಿ ಮಧುರ! ಈ ಪುಸ್ತಕ- ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ 2026ನೆಯ ಇಸವಿಯ ಮಹಿಳಾ ಸಮಾವೇಶದ ಸಾಂದರ್ಭಿಕ ಗ್ರಂಥವಾಗಿ ಹೊರ ಬಂದಿದೆ. ಇಲ್ಲಿರುವುವು ಮುಗಿವಿಲ್ಲದ ಜೀವಂತಿಕೆಯ ಹೆಣ್ಣು ಕಥೆಗಳು! ಇದರ ಸಂಪಾದಕರು ರೂಪ ಹಾಸನ. ಸಂಪಾದಕ ಮಂಡಳಿಯಲ್ಲಿ ಆರ್.ಪಿ.ವೆಂಕಟೇಶಮೂರ್ತಿ, ಲೀಲಾವತಿ ಮತ್ತು ಅಹಮದ್ ಹಗರೆಯವರಿದ್ದಾರೆ. ಇದೊಂದು ಸಮಷ್ಟಿ ಪ್ರಯತ್ನ. ಬೇರುಗಳು, ಕಾಂಡಗಳು, ರೆಂಬೆಕೊಂಬೆಗಳು, ಚಿಗುರುಗಳು ಎಂದು ಕಾವ್ಯಾತ್ಮಕವಾಗಿ ವಿಂಗಡಿಸಲ್ಪಟ್ಟ ಬೇರೆ ಬೇರೆ ಲೇಖನಗಳಲ್ಲಿ ರಾಜಕೀಯ, ಸಾಹಿತ್ಯ, ಕೃಷಿ, ಚಿತ್ರಕಲೆ, ರಂಗಭೂಮಿ, ಜಾನಪದ ಕರಕೌಶಲ್ಯ, ವಿಜ್ಞಾನ, ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಾಸನ ಜಿಲ್ಲೆಯ ಮಹಿಳೆಯರ ಕುರಿತು ಲೇಖಕಿಯರೂ/ಲೇಖಕರೂ ಬರೆದಿದ್ದಾರೆ.
ನನಗೆ ತಿಳಿದಂತೆ ಈ ಬಗೆಯ ಪುಸ್ತಕ ಕನ್ನಡದಲ್ಲಿ ಮೊದಲನೆಯದು. ಒಂದು ಪ್ರಾದೇಶಿಕ ಸಂಸ್ಕೃತಿಯಲ್ಲಿ ಅನೇಕ ಎಳೆಗಳು ಅಂತರ್ಮಿಳಿತವಾಗಿರುತ್ತವೆ. ಒಂದು ಪ್ರದೇಶದ ಬದುಕು ನಿರ್ಮಾಣವಾಗುವಾಗ ಅದರಲ್ಲಿ ಪುರುಷರ ಕಾಣಿಕೆಯಷ್ಟೇ ಸ್ತ್ರೀಯರ ಕಾಣಿಕೆಯೂ ಇರುತ್ತದೆ. ಆದರೆ ರೂಢಿ ಸುಲಲಿತ ಜಗತ್ತು- ಪುರುಷ ಇತಿಹಾಸವನ್ನು ಎತ್ತಿ ಹಿಡಿದಷ್ಟು ‘ಅವಳ’ ಕಥೆಯ ಕಡೆಗೆ ಗಮನ ಹರಿಸುವುದಿಲ್ಲ. historyಯ ಜೊತೆಜೊತೆಗೇ her storyಯೂ ಹರಿಯಲೇ ಬೇಕಾದ ದಿನಗಳಿವು. ನಮ್ಮ ಹಿಂದಿನ ಸಮಾಜದ, ಇತಿಹಾಸದ ಉಪೇಕ್ಷೆಯನ್ನು ತಿದ್ದಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಬಾನು ಮುಷ್ತಾಕ್ ಅವರು ಮುನ್ನುಡಿಯಲ್ಲಿ ಹೇಳಿರುವಂತೆ, “ಇದು ಸಾಧಕರ ಪಟ್ಟಿ ಅಲ್ಲ… ಉದ್ದೇಶಪೂರ್ವಕ ಮರೆವಿನ ವಿರುದ್ಧ ಪ್ರಜ್ಞಾಪೂರ್ವಕ ಹೋರಾಟ”.
ಸಮಾವೇಶದ ಸಿದ್ಧತೆಗಾಗಿ ಕಟ್ಟಿದ ವಾಟ್ಸ್ ಆಪ್ ಗುಂಪಿನಲ್ಲಿ ಈ ಬಗೆಯ ಬರಹಗಳಿಗೆ ಪ್ರಚೋದನೆ ನೀಡಿ ಬರೆಸಿ, ಅವು ಸರಣಿ ರೂಪದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿ, ಮುಂದೆ ಒಂದು ಗ್ರಂಥವೇ ಆಗಿ ರೂಪುಗೊಂಡ ಪ್ರಕ್ರಿಯೆಯನ್ನು ಸಂಪಾದಕರು ತಮ್ಮ ಆರಂಭದ ನುಡಿಯಲ್ಲಿ ಹೇಳಿದ್ದಾರೆ. ಮಹಿಳಾ ಮುನ್ನಡೆ, ಮಹಿಳಾ ಹೋರಾಟಗಳು- ಪುರುಷ ನಿರಪೇಕ್ಷವಾದುವೇನಲ್ಲ. ಸಂವೇದನಾಶೀಲರಾದ ಪುರುಷರು, ಮಹಿಳಾ ಹೋರಾಟಕ್ಕೆ ಒತ್ತಾಸೆಯನ್ನು ಕೊಡುವುದು ಅತ್ಯಂತ ಆರೋಗ್ಯಕರವಾದ ಬೆಳವಣಿಗೆ. ಹಾಗೆ ಈ ಗ್ರಂಥದಲ್ಲಿ ಲೇಖಕರು, ಚಿತ್ರಕಲಾವಿದರು, ಪತ್ರಕರ್ತರು… ಸಾಮಾನ್ಯವಾದ ಪೂರ್ವಗ್ರಹಗಳನ್ನು ಮೀರಿ ತುಂಬಾ ಪ್ರಸನ್ನತೆಯಿಂದ ಗೌರವದಿಂದ ತಾವು ಗಮನಿಸಿದ ಸಾಧಕಿಯರ ಬಗ್ಗೆ ಬರೆದಿದ್ದಾರೆ.
ಇದನ್ನು ಓದಿದ್ದೀರಾ?: ಹೊಸ ಓದು | ವಿಕಾಸ್ ಮೌರ್ಯರ ‘ನುಡಿ ಚಮ್ಮಾಳಿಗೆ’
ಕರ್ನಾಟಕದ ರಾಜಕಾರಣದಲ್ಲಿ ಸಂಘಟನೆ, ನಿಸ್ಪೃಹತೆ, ಅಧಿಕಾರಕ್ಕೆ ಅಂಟಿಕೊಳ್ಳದ ಸಮಾಜಸೇವೆಗಳಿಗೆ ಯಶೋಧರಮ್ಮ ದಾಸಪ್ಪ ಪ್ರಸಿದ್ಧರು. ಅವರ ಬಗ್ಗೆ ಡಾ. ಎಚ್.ಎಸ್.ಅನುಪಮಾರ ಒಂದು ಹೊತ್ತಗೆಯಿಂದ ಸಂಗ್ರಹಿಸಿದ ಬರಹ, ಅವರ ಬಗ್ಗೆ ಬೆಳಕು ಚೆಲ್ಲಿದೆ. ವ್ಯಕ್ತಿಗಳ ಸಾಧನೆಗಳು ಕೆಲವೊಮ್ಮೆ ಕೆಲವು ಸಂಸ್ಥೆಗಳ ಬೆಂಬಲದಿಂದ ಪುಷ್ಟಿಗೊಳ್ಳುತ್ತವೆ. ಅಂತಹ ಮೂರು ಸಂಸ್ಥೆಗಳ ಬಗೆಗೂ ಇಲ್ಲಿ ಲೇಖನಗಳಿವೆ. ಹಾಸನದ ಕೆಂಪು ಚೆಲುವಾಜಮ್ಮಣ್ಣಿ ಸಮಾಜ, ಅರಸೀಕೆರೆಯ ಕಸ್ತೂರಿ ಬಾ ಸ್ಮಾರಕ ರಾಷ್ಟ್ರೀಯ ಟ್ರಸ್ಟ್- ಇವು ಅಂತಹ ಸಂಸ್ಥೆಗಳು. ಈ ಎರಡು ಸಂಸ್ಥೆಗಳೂ ಯಶೋಧರಮ್ಮ ದಾಸಪ್ಪ ಅವರ ನೆನಪಿನೊಡನೆ ತಳುಕು ಹಾಕಿಕೊಂಡಿವೆ. ಹಾಸನದಲ್ಲಿ ಲೇಖಕಿಯರ ಬಳಗ ಎಂಬ ಹೆಸರಿನಲ್ಲಿ ಪುಟ್ಟ ಸಂಘಟನೆಯೊಂದು ಹುಟ್ಟಿಕೊಂಡು ಬೆರಳೆಣಿಕೆಯಷ್ಟು ಗೆಳತಿಯರು ಅವರವರ ಮನೆಗಳಲ್ಲಿ ತಿಂಗಳಿಗೊಮ್ಮೆ ಸೇರಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾಗ, ಅವರಿಗೆ ಒಂದು ತಂಗುದಾಣವಾಗಿ ಈ ಸಂಸ್ಥೆ ಕೆಲ ಕಾಲ ಕೆಲಸ ಮಾಡಿದೆ. ಅರಸೀಕೆರೆಯಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾಗ ನಾನೂ ಬಳಗದ ಒಂದೆರಡು ಕಾರ್ಯಕ್ರಮಗಳಿಗೆ ಹೋದದ್ದಿದೆ.
ಈ ಗ್ರಂಥದಲ್ಲಿನ ಎಲ್ಲ ಲೇಖನಗಳೂ ಸಾಂಘಿಕ ಪ್ರಯತ್ನಕ್ಕೆ ಕೊಟ್ಟ ಒಳ್ಳೆಯ ಕಾಣಿಕೆಗಳೇ ಆಗಿವೆ. ಕೆಲವನ್ನು ಉಲ್ಲೇಖಿಸ ಬಯಸುವೆ. ಹಗರೆ ಎಂಬ ತಮ್ಮ ಊರಿನ ಮೌಖಿಕ ಕತೆಗಾರ್ತಿಯರ ಬಗ್ಗೆ ಬರೆದಿರುವ ಅಹಮದ್ ಹಗರೆ ಭಾವುಕರಾಗಿ ಹೀಗೆ ಬರೆಯುತ್ತಾರೆ- “ನನಗೆ ಇವನ್ನೆಲ್ಲ ದಾಖಲಿಸಬೇಕು ಎನ್ನುವ ಪ್ರಜ್ಞೆ ಬೆಳೆಯುವ ವೇಳೆಗೆ, ಕತೆಗಾರ್ತಿಯರ ಸಿಂಹಪಾಲು ಶಿವನ ಪಾದ ಸೇರಿಕೊಂಡಿದ್ದಾರೆ”. ಇದನ್ನು ಓದಿದಾಗ ನನಗೆ ನನ್ನ ಬಾಲ್ಯವೂ, ನನಗೆ ಕತೆ ಹೇಳಿದ ಅಜ್ಜಿಯರೂ ನೆನಪಾದರು. ನಾನು ಅವರು ಹೇಳಿದ ಕತೆಗಳನ್ನು ನನ್ನ ಮುಂದಿನ ಪೀಳಿಗೆಗಳಿಗೆ ಊಟ ಮಾಡಿಸುತ್ತಾ, ಜಡೆ ಹೆಣೆಯುತ್ತಾ ದಾಟಿಸಿದ್ದಿದೆ. ಈ ತಂತ್ರಜ್ಞಾನ ಯುಗದಲ್ಲಿ ಆಸಕ್ತ ಕೇಳುಗರು ಸಿಕ್ಕಲ್ಲಿ, ಅಹಮದ್ರವರೂ ಆ ಕೆಲಸ ಮಾಡಬಹುದೇನೋ.
ವಸು ಮಳಲಿ ಬಗ್ಗೆ ಬರೆದಿರುವ ಧನಲಕ್ಷ್ಮಿ ದೇವರಾಜ್- “ಸಾಂಪ್ರದಾಯಿಕ ಇತಿಹಾಸಕಾರರು ಧೂಳು ಹಿಡಿದ ಹಳೆಯ ದಾಖಲೆಗಳಲ್ಲಿ ಉತ್ತರ ಹುಡುಕುವಾಗ, ವಸು ಮಳಲಿ ಅವರು ಜನರ ಹಾಡುಗಳಲ್ಲಿ ಮೌಖಿಕ ಕಥನಗಳಲ್ಲಿ ಇತಿಹಾಸವನ್ನು ಹುಡುಕುತ್ತಿದ್ದರು… ಹಾಗಾಗಿ ಇವರು ಸಂಪಾದಿಸಿದ ಕೃತಿ- ಶೈಕ್ಷಣಿಕ ಸಂಶೋಧನೆಯಾಗಿರದೆ, ಅಧಿಕಾರಸ್ಥ ಚರಿತ್ರೆಯ ವಿರುದ್ಧದ ಒಂದು ಜನಪ್ರತಿರೋಧವಾಗಿ ಕಾಣಿಸುತ್ತದೆ” ಎಂದು ಹೇಳುತ್ತಾರೆ. ಈ ಎರಡು ಲೇಖನಗಳ ಹಿಂದಿರುವ ಆಶಯ ಯಾರ ಸಾಧನೆಗಳು ಸಾಂಪ್ರದಾಯಿಕ ಪಠ್ಯಗಳಲ್ಲಿ ಮರೆಯಾಗಿವೆಯೋ ಅವುಗಳನ್ನು ಎತ್ತಿ ಹಿಡಿಯುವುದಾಗಿದೆ. ರೈತ ಚಳವಳಿಯಲ್ಲಿ, ಹಾಸನ ಜಿಲ್ಲೆಯ ಜನಪರ ಹೋರಾಟಗಳಲ್ಲಿ ಭಾಗಿಯಾಗಿರುವ ಚಿತ್ರ ಕಲಾವಿದ ಬಿ.ಎಸ್.ದೇಸಾಯಿಯವರು ಈಗ ಕ್ರಿಯಾಶೀಲರಾಗಿರುವ ಸಾಕಷ್ಟು ಕಲಾವಿದೆಯರ ಬಗ್ಗೆ ಗೌರವದಿಂದ ಬರೆದಿದ್ದಾರೆ.
ಇದನ್ನು ಓದಿದ್ದೀರಾ?: ಜಾಹ್ನವಿಯವರ ‘ಸೆಕ್ಸಿ ದುರಗ’, ವಾಣಿಯವರ ಅದ್ಭುತ ಅಭಿನಯ- ನಾಡಿನಾದ್ಯಂತ ನಡೆದಾಡಲಿ
ರೈತ ಚಳವಳಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಮತಾ ಶಿವು ನೊಂದ ರೈತ ಮಹಿಳೆಯರ ಹೋರಾಟಗಳನ್ನು ನಿರೂಪಿಸಿ- “ಹಾಸನ ಜಿಲ್ಲೆಯ ರೈತ ಹೋರಾಟ ಕೇವಲ ಪುರುಷರ ಪೌರುಷದ ಕಥೆಯಲ್ಲ” ಎನ್ನುತ್ತಾರೆ. ಈ ಲೇಖನದಲ್ಲಿ ಒಂದು ಸೂಕ್ಷ್ಮ ವಿವರವಿದೆ. ಅದು ಎಲ್ಲ ಹೋರಾಟಗಳ ಹಿಂದಿನ ಮೌನ ಸೈನಿಕರನ್ನು ಗುರ್ತಿಸಿದೆ. ಆಲೂರು ತಾಲೂಕಿನ ಮರಸು ಗ್ರಾಮದ ಮಂಜುನಾಥ್ ಅವರ ಮನೆಯ ಮಹಿಳೆಯರು, ಚಳವಳಿಯ ಸಭೆಗಳು ಮುಗಿದು ಮಧ್ಯರಾತ್ರಿಯಾದರು ಬರುತ್ತಿದ್ದ ಇಪ್ಪತ್ತು ಮೂವತ್ತು ಜನರಿಗೆ ಬೇಸರವಿಲ್ಲದೆ ಬಿಸಿರೊಟ್ಟಿಯ ಊಟ ಮಾಡಿ ಹಾಕುತ್ತಿದ್ದರೆಂದು ಮಮತಾ ನೆನೆದಿದ್ದಾರೆ. ಇದೂ ಕೂಡ ಸಾಂಪ್ರದಾಯಿಕ ಸಮಾಜದ “ಉದ್ದೇಶಪೂರ್ವಕ ಮರೆವಿನ ವಿರುದ್ಧದ ಪ್ರಜ್ಞಾಪೂರ್ವಕ ಹೋರಾಟ” ಎಂಬ ಬಾನು ಅವರ ಮಾತಿಗೆ ಒಂದು ಜೀವಂತ ನಿದರ್ಶನ.
ಮ್ಯಾಕ್ಸಿಮ್ ಗಾರ್ಕಿ ತನ್ನ ‘ಮದರ್’ ಎಂಬ ಪ್ರಸಿದ್ಧ ಕಾದಂಬರಿಯಲ್ಲಿ ಓದು ಬರಹ ಅರಿಯದ ತಾಯಿ ನಿಶ್ಶಬ್ದವಾಗಿ ಹೋರಾಟಕ್ಕೆ ಬೆಂಬಲ ನೀಡಿದ್ದನ್ನು ಕೊನೆಗೆ ಮುಂಚೂಣಿ ಹೋರಾಟಗಾರರಿಲ್ಲದಂತಾದಾಗ ತಾನೇ ಮುಂಚೂಣಿಯಲ್ಲಿ ನಿಂತದ್ದನ್ನು ಚಿತ್ರಿಸಿದ್ದಾನೆ. ಇದು ಎಲ್ಲ ಹೋರಾಟಗಳ ಮೌನ ಚರಿತ್ರೆ. ಹಾಸನ ಜಿಲ್ಲೆಯ ಈ ಸಾಧಕಿಯರು ತಮಗೆ ಲಭ್ಯವಿದ್ದ ಅವಕಾಶಗಳಲ್ಲಿ ಸಾಧನೆಯನ್ನು ಮಾಡಿದರು. ಇನ್ನು ಕೆಲವರು ಅವಕಾಶಗಳನ್ನು ಸೃಷ್ಟಿಸಿಕೊಂಡು ಬೆಳೆದರು, ಕೆಲವರು ಇನ್ನು ಮುಂದೆ ಹೋಗಿ ಕಿರಿಯರಿಗೆ ಅವಕಾಶಗಳನ್ನು ಸೃಷ್ಟಿಸಿಕೊಟ್ಟರು. ಪೌರ ಕಾರ್ಮಿಕರು, ಅಂಗನವಾಡಿ ತಾಯಂದಿರು, ಕ್ರೀಡಾ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ ಮಹಿಳೆಯರನ್ನು ವಿವಿಧ ಬರಹಗಾರ್ತಿಯರು/ಬರಹಗಾರರು ನೆನೆದಿದ್ದಾರೆ. ಈ ಪುಟ್ಟ ಲೇಖನದಲ್ಲಿ ಪ್ರತಿಯೊಂದು ಲೇಖನವನ್ನೂ ಕುರಿತು ಚರ್ಚಿಸುವುದು ಸಾಧುವು ಅಲ್ಲ ಸಾಧ್ಯವೂ ಇಲ್ಲ. ಪುಸ್ತಕ ಓದುಗರೆದುರಿಗಿದೆ. ಈ ಎಲ್ಲ ಲೇಖನಗಳೂ ನನ್ನ ಕುತೂಹಲವನ್ನು ಕೆರಳಿಸಿವೆ, ನನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿವೆ ಎಂದು ಮಾತ್ರ ಹೇಳಬಲ್ಲೆ.
ಇದನ್ನು ಓದಿದ್ದೀರಾ?: ಎನ್.ಎಸ್. ಶಂಕರ್ ಬರೆದ ‘ರಾಮಾ’ಯಣ!
ಥಾಮಸ್ ಗ್ರೇ ಎಂಬ ಕವಿಯ ಒಂದು ಕವಿತೆ- “elegy written in a country church yard”ನಲ್ಲಿ ಕವಿ ಒಂದು ಹಳ್ಳಿಯ ಸ್ಮಶಾನ, ತನ್ನಲ್ಲಿ ಉಂಟು ಮಾಡಿದ ಭಾವನೆಗಳನ್ನು ಚಿತ್ರಿಸುತ್ತ, ಈ ನಿರ್ಲಕ್ಷಿತ ನೆಲದಲ್ಲಿ ಶಾಂತವಾಗಿ ಮಲಗಿರುವ ಈ ಹಳ್ಳಿಯ ಪೂರ್ವಜರಲ್ಲಿ ಮಿಲ್ಟನ್ನಂಥ ಕವಿ, ಕ್ರಾಮ್ ವೆಲ್ನಂಥ ರಾಜಕಾರಣಿ ಇದ್ದಿರಬಹುದು. ಅಂತಹ ಅನೇಕ ಹೂಗಳ ಸುಗಂಧ ಮರಳುಗಾಡಿನ ಗಾಳಿಯಲ್ಲಿ ವ್ಯರ್ಥವಾಗಿರಬಹುದು ಎಂದು ವಿಷಾದಿಸುತ್ತಾನೆ. ಈಗ ರೈತರು, ಕಾರ್ಮಿಕರು, ಗೃಹಿಣಿಯರು ಎಲ್ಲರೂ ಎಚ್ಚತ್ತಿದ್ದಾರೆ. ತಮಗೆ ತಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡು ಬೆಳೆಯುತ್ತಿದ್ದಾರೆ. ಅದನ್ನು ಕುರಿತು ಹಾಡುವ ಒಂದು ಪಡೆಯೂ ಸಿದ್ಧವಾಗಿದೆ ಎಂದು ಈ ಗ್ರಂಥ ತಿಳಿಸುತ್ತಿದೆ. ಇದು ಒಂದು ಜಿಲ್ಲೆಯ ಹಾಡು. ಕರ್ನಾಟಕದ ಎಲ್ಲಾ ಜಿಲ್ಲೆಗಳ ಅಂಚಿಗೊತ್ತರಿಸಲ್ಪಟ್ಟವರ ಕಥೆಗಳು ದಾಖಲಾದರೆ ಅದೊಂದು ಮಹಾಕಾವ್ಯವೇ ಆಗಬಹುದೇನೋ!





