829 ಅಂಗನವಾಡಿಗಳ ಸ್ವಂತ ಕಟ್ಟಡದ ನಿರೀಕ್ಷೆ ಹುಸಿಯಾಗಿಯೇ ಉಳಿದಿದ್ದು, ಮಕ್ಕಳ ಸಮಗ್ರ ಬೆಳವಣಿಗೆ, ಆರೋಗ್ಯ ರಕ್ಷಣೆ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಭದ್ರ ಅಡಿಪಾಯವಾಗುವ ಅಂಗನವಾಡಿ ಕೇಂದ್ರಗಳು ಜಿಲ್ಲೆಯ ಅನೇಕ ಕಡೆಗಳಲ್ಲಿ ಇನ್ನೂ ಮೂಲಸೌಕರ್ಯಗಳ ಕೊರತೆಯಿರುವ ಬಾಡಿಗೆ ಕಟ್ಟಡಗಳಲ್ಲೇ ಕಾರ್ಯ ನಿರ್ವಹಿಸುತ್ತಿವೆ.
ಸುರಕ್ಷಿತ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ ಹಾಗೂ ಮಕ್ಕಳ ಕಲಿಕೆಗೆ ಅಗತ್ಯವಾದ ಸೌಲಭ್ಯಗಳ ಅಭಾವ ಕಾಡುತ್ತಿದ್ದು, ಮಕ್ಕಳ ಭವಿಷ್ಯ ರೂಪಿಸುವ ಈ ಕೇಂದ್ರಗಳಿಗೆ ಶಾಶ್ವತ ಮತ್ತು ಗುಣಮಟ್ಟದ ಮೂಲಸೌಕರ್ಯ ಕಲ್ಪಿಸುವಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯವು ಶಿಕ್ಷಣ ಮತ್ತು ಮಕ್ಕಳ ಕಲ್ಯಾಣದ ಬಗ್ಗೆ ಇರುವ ಆದ್ಯತೆಯ ಕೊರತೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತಿದೆ.
ವಿಜಯಪುರ ಜಿಲ್ಲೆಯ ಅಂಗನವಾಡಿ ಕೇಂದ್ರಗಳ ಸ್ಥಿತಿ ಮಕ್ಕಳ ಸಮಗ್ರ ಬೆಳವಣಿಗೆಗೆ ಅಗತ್ಯವಾದ ಮೂಲಸೌಕರ್ಯಗಳ ಕೊರತೆಯನ್ನು ಬಯಲಿಗೆಳೆಯುತ್ತದೆ. ಜಿಲ್ಲೆಯ ಒಟ್ಟು 7,755 ಅಂಗನವಾಡಿ ಕೇಂದ್ರಗಳಲ್ಲಿ 829 ಕೇಂದ್ರಗಳು ಇನ್ನೂ ಬಾಡಿಗೆ ಕಟ್ಟಡಗಳಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಕೇವಲ 1,489 ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡಗಳ ಸೌಲಭ್ಯವಿದೆ. ಉಳಿದ ಕೇಂದ್ರಗಳು ಶಾಲಾ ಕಟ್ಟಡಗಳು, ಗ್ರಾಮ ಪಂಚಾಯಿತಿ ಕಚೇರಿಗಳು, ಸಮುದಾಯ ಭವನಗಳು ಹಾಗೂ ಇತರೆ ಸರ್ಕಾರಿ ಕಟ್ಟಡಗಳಲ್ಲಿ ನಡೆಯುತ್ತಿವೆ.
ನಗರ ಪ್ರದೇಶದ ಕೇಂದ್ರಗಳಿಗೆ ತಿಂಗಳಿಗೆ ರೂ. 3,000 ಹಾಗೂ ಗ್ರಾಮೀಣ ಪ್ರದೇಶದ ಕೇಂದ್ರಗಳಿಗೆ ರೂ. 2,000 ಬಾಡಿಗೆ ನಿಗದಿಪಡಿಸಲಾಗಿದ್ದರೂ, ಈ ಮೊತ್ತದಲ್ಲಿ ಮಕ್ಕಳಿಗೆ ಸುರಕ್ಷಿತ, ವಿಶಾಲ ಮತ್ತು ಅಗತ್ಯ ಸೌಲಭ್ಯಗಳನ್ನು ಹೊಂದಿರುವ ಕಟ್ಟಡಗಳನ್ನು ಪಡೆಯುವುದು ದುಸ್ತರವಾಗಿದೆ. ಪರಿಣಾಮವಾಗಿ, ಅನೇಕ ಅಂಗನವಾಡಿಗಳು ಇಕ್ಕಟ್ಟಾದ ಕೊಠಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳ ಆಟ, ಕಲಿಕೆ ಹಾಗೂ ಪೌಷ್ಟಿಕ ಆಹಾರ ವಿತರಣೆಗೆ ಸೂಕ್ತ ವಾತಾವರಣದ ಕೊರತೆ ಎದುರಿಸುತ್ತಿವೆ.
ಶುದ್ಧ ಕುಡಿಯುವ ನೀರು, ಶೌಚಾಲಯ, ಅಡುಗೆ ವ್ಯವಸ್ಥೆ ಮತ್ತು ಸುರಕ್ಷಿತ ಆಟದ ಮೈದಾನದಂತಹ ಮೂಲಭೂತ ಸೌಲಭ್ಯಗಳ ಅಭಾವವೂ ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ಭದ್ರ ಅಡಿಪಾಯವಾಗಬೇಕಾದ ಅಂಗನವಾಡಿ ಕೇಂದ್ರಗಳು ಸಮರ್ಪಕ ಮೂಲಸೌಕರ್ಯಗಳ ಕೊರತೆಯಿಂದ ತಮ್ಮ ಉದ್ದೇಶವನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಲು ಪರದಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಸರ್ಕಾರ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಒದಗಿಸುತ್ತಿದ್ದರೂ, ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಕಟ್ಟಡಗಳ ಲಭ್ಯತೆ ಸಾಧ್ಯವಾಗುತ್ತಿಲ್ಲ. ಜನಸಂಖ್ಯೆಯ ಏರಿಕೆ ಮತ್ತು ಹೊಸ ಅಂಗನವಾಡಿ ಕೇಂದ್ರಗಳ ಸ್ಥಾಪನೆಯಿಂದ ಶಾಶ್ವತ ಕಟ್ಟಡಗಳ ಅಗತ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಸದ್ಯ ಅನೇಕ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕಾಗಿ ಸರ್ಕಾರ ಬಾಡಿಗೆ ವೆಚ್ಚವನ್ನು ಭರಿಸುತ್ತಿದೆ. ಆದರೆ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸುರಕ್ಷಿತ ಹಾಗೂ ಅಗತ್ಯ ಮೂಲಸೌಕರ್ಯ ಹೊಂದಿರುವ ಸ್ವಂತ ಕಟ್ಟಡಗಳೇ ಹೆಚ್ಚು ಪರಿಣಾಮಕಾರಿ ಮತ್ತು ದೀರ್ಘಕಾಲಿಕ ಪರಿಹಾರ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ವಿಜಯಪುರ ನಗರದಲ್ಲಿ ಸ್ವಂತ ಕಟ್ಟಡ 91 ಇದ್ದರೆ, ಬಾಡಿಗೆ 230 ಹಾಗೂ ಸರ್ಕಾರಿ ಕಟ್ಟಡಗಳಲ್ಲಿ 30 ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ವಿಜಯಪುರ ಗ್ರಾಮೀಣ ಭಾಗದಲ್ಲಿ ಸ್ವಂತ ಕಟ್ಟಡ 257 ಇದ್ದರೆ, 56 ಬಾಡಿಗೆ ಹಾಗೂ ಸರ್ಕಾರಿ ಕಟ್ಟಡಗಳಲ್ಲಿ 87 ಕೇಂದ್ರಗಳಿವೆ. ಸಿಂದಗಿ ತಾಲ್ಲೂಕಿನಲ್ಲಿ 249 ಸ್ವಂತ ಕಟ್ಟಡಗಳಿದ್ದರೆ, 155 ಬಾಡಿಗೆ ಹಾಗೂ 82 ಸರ್ಕಾರಿ ಕಟ್ಟಡಗಳಲ್ಲಿ ನಡೆಯುತ್ತಿವೆ.
ಮುದ್ದೇಬಿಹಾಳ ತಾಲ್ಲೂಕಿನಲ್ಲಿ 255 ಸ್ವಂತ ಕಟ್ಟಡಗಳಿದ್ದರೆ, 155 ಬಾಡಿಗೆ ಹಾಗೂ 67 ಸರ್ಕಾರಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಇಂಡಿ ತಾಲ್ಲೂಕಿನಲ್ಲಿ 227 ಸ್ವಂತ ಕಟ್ಟಡಗಳಿದ್ದರೆ, 114 ಬಾಡಿಗೆ ಕಟ್ಟಡಗಳು ಹಾಗೂ 65 ಸರ್ಕಾರಿ ಕಟ್ಟಡಗಳಲ್ಲಿ ನಡೆಯುತ್ತಿವೆ. ಚಡಚಣ ತಾಲ್ಲೂಕಿನಲ್ಲಿ 121 ಸ್ವಂತ ಕಟ್ಟಡಗಳಿದ್ದರೆ, 50 ಬಾಡಿಗೆ ಕಟ್ಟಡಗಳಲ್ಲಿ ಹಾಗೂ 27 ಸರ್ಕಾರಿ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ 301 ಸ್ವಂತ ಕಟ್ಟಡಗಳಿದ್ದರೆ, 85 ಬಾಡಿಗೆ ಕಟ್ಟಡಗಳು ಹಾಗೂ 70 ಸರ್ಕಾರಿ ಕಟ್ಟಡಗಳಲ್ಲಿ ನಡೆಯುತ್ತಿವೆ.
ಗ್ರಾಮೀಣ ಭಾಗಗಳ ಅನೇಕ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಹಲವು ಕಡೆ ಒಂದೇ ಕೋಣೆಯಲ್ಲಿ ಮಕ್ಕಳಿಗೆ ಪಾಠ ಹೇಳುವುದು, ಪೌಷ್ಟಿಕ ಆಹಾರ ತಯಾರಿಕೆ ಮತ್ತು ವಿತರಣೆ, ಅಗತ್ಯ ಸಾಮಗ್ರಿಗಳ ಸಂಗ್ರಹಣೆ ಸೇರಿದಂತೆ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ.
ಮಳೆಗಾಲದಲ್ಲಿ ಮೇಲ್ಛಾವಣಿ ಸೋರುವುದು, ಬೇಸಿಗೆಯಲ್ಲಿ ಅತಿಯಾದ ಬಿಸಿಲಿನ ತಾಪ, ಶೌಚಾಲಯ ಹಾಗೂ ಸುರಕ್ಷತಾ ವ್ಯವಸ್ಥೆಗಳ ಕೊರತೆಯಿಂದ ಮಕ್ಕಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿ ಮಕ್ಕಳಿಗೆ ಗುಣಮಟ್ಟದ ಪೂರ್ವಪ್ರಾಥಮಿಕ ಶಿಕ್ಷಣ ಮತ್ತು ಆರೈಕೆ ಒದಗಿಸುವ ಉದ್ದೇಶಕ್ಕೆ ಅಡ್ಡಿಯಾಗುತ್ತಿದೆ.
ಈದಿನ.ಕಾಮ್ ಜೊತೆ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರದೀಪ್ ಪಾಟೀಲ ನಾಗರದಿನ್ನಿ ಮಾತನಾಡಿ, “ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಸಮಗ್ರ ಬೆಳವಣಿಗೆಗೆ ಅಂಗನವಾಡಿ ಕೇಂದ್ರಗಳು ಅತ್ಯಂತ ಪ್ರಮುಖವಾಗಿವೆ. ಆದರೆ ಸರ್ಕಾರದ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಕೊರತೆಯಿಂದ ಅನೇಕ ಅಂಗನವಾಡಿ ಕೇಂದ್ರಗಳು ಮೂಲಭೂತ ಸೌಲಭ್ಯಗಳಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ” ಎಂದು ಆತಂಕ ವ್ಯಕ್ತಪಡಿಸಿದರು.
“ಹಿಂದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯವಸ್ಥೆ ಅಸ್ತಿತ್ವದಲ್ಲಿದ್ದಾಗ ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ತ್ವರಿತವಾಗಿ ಪರಿಹರಿಸುವ ಅವಕಾಶವಿತ್ತು. ಆದರೆ ಅಧಿಕಾರ ವಿಕೇಂದ್ರೀಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡದ ಕಾರಣ ಇಂತಹ ಸಮಸ್ಯೆಗಳು ಹೆಚ್ಚುತ್ತಿವೆ” ಎಂದು ಅಭಿಪ್ರಾಯಪಟ್ಟರು.
“ಮಕ್ಕಳ ಸುರಕ್ಷಿತ ಮತ್ತು ಗುಣಮಟ್ಟದ ಕಲಿಕಾ ವಾತಾವರಣಕ್ಕಾಗಿ ರಾಜ್ಯ ಸರ್ಕಾರ ಅಂಗನವಾಡಿ ಕೇಂದ್ರಗಳಿಗೆ ಶಾಶ್ವತ ಸ್ವಂತ ಕಟ್ಟಡಗಳನ್ನು ನಿರ್ಮಿಸಿ, ಅಗತ್ಯ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಬೇಕಿದೆ” ಎಂದು ಒತ್ತಾಯಿಸಿದರು.
“ಅಂಗನವಾಡಿ ಕೇಂದ್ರಗಳಿಗೆ ಶಾಶ್ವತ ಕಟ್ಟಡ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ಸೂಕ್ತ ಸ್ಥಳಾವಕಾಶ ಇರುವ ಸರ್ಕಾರಿ ಶಾಲಾ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ಸ್ಥಳಾಂತರಿಸಲು ಆದ್ಯತೆ ನೀಡಲಾಗುವುದು” ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ. ಸಂತೋಷಕುಮಾರ ಎಚ್ ಈದಿನ.ಕಾಮ್‌ಗೆ ಪ್ರತಿಕ್ರಿಯಿಸಿದರು.
ಆಟದ ಮೈದಾನ, ಶುದ್ಧ ಕುಡಿಯುವ ನೀರು, ಪ್ರತ್ಯೇಕ ಅಡುಗೆ ಕೊಠಡಿ, ಶೌಚಾಲಯ ಹಾಗೂ ಸುರಕ್ಷಿತ ಕಲಿಕಾ ವಾತಾವರಣ ಕಲ್ಪಿಸುವ ಮೂಲಕ ಅಂಗನವಾಡಿಗಳ ಗುಣಮಟ್ಟ ಹೆಚ್ಚಿಸಬೇಕಾಗಿದೆ. ಮಕ್ಕಳ ಭವಿಷ್ಯದ ಮೊದಲ ಹೆಜ್ಜೆಯಾಗಿರುವ ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ.
ಜಿಲ್ಲೆಯಲ್ಲಿರುವ ನೂರಾರು ಬಾಡಿಗೆ ಅಂಗನವಾಡಿ ಕೇಂದ್ರಗಳಿಗೆ ಶೀಘ್ರದಲ್ಲೇ ಸ್ವಂತ ಕಟ್ಟಡಗಳನ್ನು ನಿರ್ಮಿಸಿ ಸುರಕ್ಷಿತ ಹಾಗೂ ಗುಣಮಟ್ಟದ ಕಲಿಕಾ ವಾತಾವರಣ ಕಲ್ಪಿಸುವತ್ತ ಸರ್ಕಾರ ಮತ್ತು ಜನಪ್ರತಿನಿಧಿಗಳು ಮುಂದಾಗಲಿ ಎಂಬುದು ಶಿಕ್ಷಣ ಪ್ರೇಮಿಗಳ ಆಶಯವಾಗಿದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು



