ರಾಘವೇಂದ್ರ ಪಾಟೀಲ ಅವರ ಕತೆ | ದೇಸಗತಿ

Date:

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು ಮುದಗೊಳಿಸಲಿ ಎಂಬ ಕಾರಣಕ್ಕಾಗಿ ಈದಿನ.ಕಾಮ್, ಮರೆಯಬಾರದ ಕತೆಗಳು ಮಾಲಿಕೆಯಲ್ಲಿ ಪ್ರತಿ ಭಾನುವಾರ ಪ್ರಕಟಿಸಲಿದೆ.

ಇದನ್ನು ಓದಿದ್ದೀರಾ?: ರಾಘವೇಂದ್ರ ಪಾಟೀಲ ಅವರ ಕತೆ | ದೇಸಗತಿ (ಮೊದಲ ಭಾಗ)

- Advertisement -

ಕಳೆದವಾರದಿಂದ…

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚಿಕ್ಕಮಗಳೂರು | ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಸಂತೆ ನಡೆಸಲು...

ಉದ್ಯಾನವನ ಮಾನವನ ಮಾನಸಿಕ ನೆಮ್ಮದಿ, ವಿನೋದ, ವಿಶ್ರಾಂತಿ ಹಾಗೂ ವನ್ಯಜೀವಿ ಹಾಗೂ ನೈಸರ್ಗಿಕ ಪರಿಸರವನ್ನು ಸಂರಕ್ಷಿಸಲು ಮೀಸಲಿಟ್ಟ ಒಂದು ಹಸಿರು ತಾಣ ಎಂದೇ ಹೇಳಬಹುದು. ಆಧುನಿಕ ವ್ಯವಸ್ಥೆಯಲ್ಲಿ ನಗರ ಜೀವನದ ಜಂಜಾಟದ ನಡುವೆ...

ವಿಜಯಪುರ | 80ರ ಗಡಿ ದಾಟಿದ ಬಿಳಿ ಜೋಳ,...

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳದ ರೊಟ್ಟಿ. ಉತ್ತರ ಕರ್ನಾಟಕದ ಜನರ ಬದುಕು, ಆಹಾರ ಸಂಸ್ಕೃತಿಯ ಅವಿಭಾಜ್ಯ ಭಾಗವಾಗಿರುವ ಜೋಳವೇ ಈಗ ಸಾಮಾನ್ಯ ಜನರ ಕೈಗೆಟುಕದ ವಸ್ತುವಾಗುತ್ತಿದೆ. ಕೆಲವೇ ದಿನಗಳ ಹಿಂದೆ ಕೆಜಿಗೆ...

ರಾಜಕಾರಣಿಯ ಬೆಡ್‌ರೂಮಿನಲ್ಲಿ ಪ್ರಜಾಪ್ರಭುತ್ವ ಹುಡುಕುವ ಮಾಧ್ಯಮಗಳು!

ಒಂದು ಸಣ್ಣ ಪ್ರಶ್ನೆ, ಪ್ರಿಯ ಓದುಗರೇ! ಬೆಡ್‌ರೂಮಿನ ಹೊಗೆಯ ಹಿಂದೆ ಓಡುವ ಮಾಧ್ಯಮಗಳಿಗೆ, ಜನರ ಬದುಕನ್ನು ಸುಡುತ್ತಿರುವ ಬೆಂಕಿ ಕಾಣುವುದಿಲ್ಲವೇ? ರಾಜಕಾರಣಿಯೊಬ್ಬರ ಖಾಸಗಿ ಬದುಕಿನ ಬಗ್ಗೆ ಸುದ್ದಿ ಹೊರಬಿದ್ದರೆ ಸಾಕು; ಮಾಧ್ಯಮಗಳಲ್ಲಿ ಚರ್ಚೆಗಳ ಮಹಾಪೂರ. ಯಾರು...

‘ಹಾಂ. ನೋಡ್ರಿ ಪಟವರ್ಧನ್…’ ಅಂತ ಭಟ್ಟರು ಪಟವರ್ಧನ್ ಅನ್ನೂ ಶಬ್ದದ ಮ್ಯಾಲ ನಾಡಾಗಿಲ್ಲದ ಭಾರಾ ಹಾಕಿ ಹೇಳಲಿಕ್ಕತ್ತಿದರು… ‘ನಿಮಗೆ ಕ ತಾಲೀಮು ಛಲೋ ಅದು ಅಂತ ನನ್ನ ಮನಸಿಗೆ ಖಾತ್ರಿ ಆನಸೇದ… ಕತ್ತಿಗೆ ರಕ್ತಾ ಹಚಿಗೊಂಡs ಈ ಊರ ಪ್ರವೇಶ ಮಾಡೀರಿ… ಮತ್ತs… ನಿಮಗ ಇನೊಂದ ಮಾತ ಹೇಳಬೇಕಂದರ ನನಗೆ ಜೋತಿಷ್ಯದಾಗ ಅಷ್ಟ ಇಷ್ಟ ಸಾಧನಾ ಅದ ಏನ್ರೆಪಾ. ನೀವು ಹೊಳೀದಾಟಿ ಈ ಊರಿಗೆ ಬಂದ ಮುಹೂರ್ತದ ಕುಂಡಲಿ ಹಾಕಿ ನೋಡೀನು… ಹೂಂ… ಜೋತಿಷ್ಯ ಹೇಳೂದನ ನಾ ಯಾಕ ಮುಚ್ಚಿಡೂ ಕೆಲಸಾ ಮಾಡಲಿ?… ಆ ಕುಂಡಲಿ ಹೇಳುವ ಜೋತಿಷ್ಯ ನಿಮಗೆ ಗೊತ್ತ ಅದs ಏನು?’ ಇವಗೇನು ಗೊತ್ತು!… ಇವ ನಿರಾಸಕ್ತಿಯಿಂದ ಕಣ್ಣು ಕಿರಿದುಗೊಳಿಸಿಕೊಂಡು ಕೂತಿದ್ದ. ಭಟ್ಟರು ತಾವ ಹೇಳಲಿಕತ್ತಿದರು… ‘ನೋಡರಿ ಪಟವರ್ಧನ… ನೀವು ಅಮೃತ ಘಳಿಗಿಯೊಳಗೆ ಈ ಊರು ಪ್ರವೇಶ ಮಾಡೀರಿ… ನೀವು ಬಂದ ಮುಹೂರ್ತದ ಕುಂಡಲೀ ಪ್ರಕಾರ, ನಿಮಗ ರಾಜನಾಗೂ ಯೋಗ ಅದ. ನೀವು ದೇಸಗತಿ ಕಟ್ಟತೀರಿ…’ ಅಂತ ಭಟ್ಟರು ಹುರುಪು ತುಂಬಿಸುವ ದನಿಯೊಳಗ ಹೇಳತಿದ್ದರೆ ಈ ರಂಗೋ ಪಟವರ್ಧನ ಅನ್ನುವ ಮನಶಾ ಹೊಸಾ ಗುರುತು- ಎದುರಿಗೆ ಕೂತವರು ಹಿರೇಮನಶಾರು ಅನ್ನುವ ಯಾವ ಮರ್ಯಾದಿಯನ್ನೂ ಗಮನಿಸದವನಂಗ ಹಾ ಹ್ಹಾs ಹ್ಹಾss ಅಂತ ಗಹಗಹಿಸಿ ನಗಲಿಕತ್ತಿದ. ನಗುವಷ್ಟು ನಕ್ಕು ಆಮ್ಯಾಲ ಸಾವಕಾಶೇ ತನ್ನ ನಗೀ ಸಂಭಾಳಿಸಿಕೊಂಡು… ‘ಅಲ್ಲರೀ ಭಡಜೀ…’ ಅಂತ ಏನೋ ಹೇಳಲಿಕ್ಕೆ ಹೊಂಟಾವ ಅದನ್ನ ಬಿಟ್ಟು- ‘ಹಾಂ… ನಿಮ್ಮ ಊರಾಗ ಗರಡೀ ಮನೀ ಅದs ಏನು?’ ಅಂತ ಕೇಳಿದ. ಇವನ ನಗೀ. ಈಗ ಈ ಏನೇನೂ ಸಂಬಂಧ ಇಲ್ಲದ ಮಾತೂ ಇವನ್ನ ಕೇಳಿ ಭಟ್ಟರು ಅಪ್ರತಿಭರಾದರು. ಅಲ್ಲ… ಬೇಕಾರ ಜೋತಿಷ್ಯನs ಸುಳ್ಳ ಇರಬಹುದಂತ ಇಟಕೋಳೂಣೂ… ಆತು. ಹಂಗs ಅನಕೋಲಿ. ಆದರ ನೀ ರಾಜಾ ಆಗತೀ- ದೇಸಗತೀ ಕಟ್ಟತೀ ಅಂತ ಹೇಳೂ ಮಾತಗೋಳನ ಹಿಂಗ ಅಗದೀ ನಿರ್ಲಕ್ಷ್ಯದಿಂದ ನೋಡೂದಂದರ… ಅಗದೀ ವಿಚಿತ್ರ. ಕನಿಷ್ಠ ಮನಸಿಗರೇ ಸಂತೋಷ ಅನಸಬೇಕೋ ಬ್ಯಾಡೋ…? ಅಂತ ಭಟ್ಟರು ಮನಸಿನೊಳಗs ವಿಚಾರ ಮಾಡಿಕೋತ ಆಶ್ಚರ್ಯಪಡತಿದ್ದರು. ಅವರು ಇಂಥಾ ಗೂಢದೊಳಗ ಇರುವಾಗ ಇಂವ ಮತ್ತೆ ಕೇಳಿದ… ‘ಇಲ್ಲರೀ…?’ …’ಊಹೂಂ… ಅದ’ ಅಂದರು ಭಟ್ಟರು… ‘ಗರಡೀ ಮನಿಗೆ ಸಹಸಾ ಯಾವ ಮಂದಿ ಹೋಗತೈತಿರೀ…’ ಅಂತ ಕೇಳಿದಾಗ ಭಟ್ಟರು ನಿರುತ್ಸಾಹದಿಂದ ತಣ್ಣಗಾದರು. ಅವರು ತಿರಸ್ಕಾರದಿಂದ ‘ರಿಕಾಮೀ ಬ್ಯಾಡರ ಹುಡಗೋರೂ… ಮತ್ಯಾರಿಗೆ ಸವಡ ಇರತದ…’ ಅಂದರು.

Advertisements

ಇದನ್ನು ಓದಿದ್ದೀರಾ?: ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕತೆ | ನೋಂಬು

…’ಭಡಜೀ… ಈಗ ದೇಸಗತೀ ವಿಚಾರ ಹೇಳ್ರಿ…’ ಅಂತ ರಂಗೋಪಟವರ್ಧನ್ ಹೇಳಿದಾಗ ಭಟ್ಟರಿಗೆ ಅವನ ದನಿಯೊಳಗಿದ್ದ ಉತ್ಸಾಹದ ಎಳೇ ನೋಡಿ ಆಶ್ಚರ್ಯ ಆತು. ಅವರು ಸೋಜಿಗದಿಂದ ಅವನ್ನ ನೋಡತಿರಬೇಕಾದ ಅಂವ ‘ನಾ ದೇಸಾಯಿ ಅದರ ನೀವs ದೇಸಗತಿಗೆ ಕಾರಭಾರಿಗೋಳು’ ಅಂತಂದು ನಕ್ಕ. ಭಟ್ಟರು ತಮ್ಮೊಳಗೆ ತಾವs ಮುಳಗಿಕೋತ ‘ನಗಬ್ಯಾಡ್ರಿ ಪಟವರ್ಧನ್… ನನ್ನ ಲೆಕ್ಕಾಚಾರ ಸುಳ್ಳ ಆಗಲಿಕ್ಕೆ ಸಾಧ್ಯನs ಇಲ್ಲ…’ ಅಂತ ಹೇಳಿದರು. ‘ಮತ್ತ ನಿಮ್ಮ ಲೆಕ್ಕಾಚಾರನರೇ ಹೇಳ್ರೆಲಾs…’ ಪಟವರ್ಧನನ ಈ ಮಾತಿಗೆ ಭಟ್ಟರು ಹೂಂ… ಅಂತ ಸಶಬ್ದ ಉಸುರು ಬಿಟಗೋತ ಅವನ ಸಮೀಪಕ್ಕೆ ಸರದು ಸಣ್ಣ ದನಿಯಿಂದ ಏನೋ ರಹಸ್ಯದ ಬೀಜ ಮಾತು ಹೇಳವರಂಗ ಹೇಳಲಿಕ್ಕತ್ತಿದರು… ‘ನೋಡರೀ ಪಟವರ್ಧನ್… ನಮ್ಮ ಭಾಗದಾಗ ವಿಚಿತ್ರನs ನಡದೇತಿ… ಯಾಂವನರೇ ಒಂದ ದಂಡ ಕಟಿಗೊಂಡ ಬರತಾನೂ… ಬಂದು ತಾನು ಪೇಶವೇಗೋಳ ಸರದಾರಾ-ಚೌಥ ಕೊಡರೀ ಅಂತಾನು. ಆಮ್ಯಾಲ ಇನ್ನೊಬ್ಬ ಬರತಾನೂ… ಬಂದು ನಾ ವಿಜಾಪುರದ ಸುಬೇದಾರಾ… ದಂಡಿನ ಖರ್ಚ ವಸೂಲ ಮಾಡಾಕ ಬಂದೀನೂ ಅಂತಾನು. ಇವರೇನ ಖರೇ ಸುಬೇದಾರರೋ ಏನ ದರೋಡೇಖೋರರೋ ಯಾಂವ ಬಲ್ಲ!… ಅಲ್ಲರೀ ಪೇಶವೇಗೋಳೂ ನವಾಬರೂ ವರ್ಷಕ್ಕೆ ಒಮ್ಮೆ ವಸೂಲ ಮಾಡಬೇಕ್ರೆಪಾs… ಹಿಂತಾ ದಂಡಗೋಳು ಹಗಲೆಲ್ಲಾ ಬಂದರ ಹೆಂಗ?… ಕೊಡಲಿಲ್ಲ ಅಂತೀರಾs… ಜೀವಾ ತಗೀತಾರು. ಒಬ್ಬೊಬ್ಬರು ಬಂದಾಗನೂ ಜೀವಾ ಎಲ್ಲಾ ಗ್ವಾಳೇ ಹಾಕಿ ಕೊಡೂದು. ಅವರು ಅದನ್ನ ತಗೊಂಡು- ಇಷ್ಟs… ಏನೋ ಹರಾಮಖೋರ… ಅಂತ ನಮ್ಮನ್ನ ಒದ್ದಹೋಗೂದು… ಇಷ್ಟಕ್ಕs… ಮುಗೀಲಿಲ್ಲ… ಇದು ರಾಜಾಗೋಳ ಸುದ್ದಿ ಆತು. ಇವರದು ಒಂದು ಪರೀ ಆದರ ಪಿಂಡಾರಿಗೋಳದು ಇನ್ನೊಂದು ಪರೀ. ಅವರದ ಹೇಳಿದರ ಅಂತೂ ಮೈಯಾಗ ಥಂಡೀ ತುಂಬಿಧಂಗಾಗತದ… ಕುದರೀ ಹತಿಗೊಂಡ ಟಕ- ಟಕಾss… ಅಂತ ಧೂಳ ಎಬಿಸಿಗೋತs ಬಂದು ಮನೀ ಮನೀ ನುಗ್ಗತಾರ. ಚರ್ಮಾ ಒಂದ ಬಿಟ್ಟು ಉಳದದ್ದೆಲ್ಲಾ ಸುಲಕೊಂಡ ಹೋಗತಾರ…’ ಭಟ್ಟರು ಪಿಂಡಾರಿಗೋಳ ಸುದ್ದಿ ಹೇಳತಿರಬೇಕಾದರ ಇವನಿಗೆ… ಭಟ್ಟರು ತನ್ನ ಗುರುತು ಹಿಡದುಬಿಟ್ಟರೇನೋ… ತಂದs ಸುದ್ದಿ ಹೇಳಲಿಕತ್ಯಾರೇನೋ… ಅಂತ ಅನಿಸಿತು. ಭಟ್ಟರು… ‘ಇಂದ ಮುಂಜಾನೆ ಸೈತ, ನೀವು ತಲಿಗೆ ಕತ್ತಿ ಕಟಿಗೊಂಡು ಹೊಳೀ ದಾಟಿ ಬಂದಾಗ ನಿಮ್ಮ ಕತ್ತೀ ನೋಡಿ ಆ ರಾಕ್ಷಸರ ನೆನಪs ಬಂದಬಿಟ್ಟಿತ ನೋಡ್ರಿ… ದರೋಡೀಖೋರ ಆದರ ಒಬ್ಬನs ಯಾಕ ಬರತಿದ್ದಾ ಅಂತ ಅನಿಸಿ ಮನಸಿಗೆ ಸಮಾಧಾನ ಆತು…’ ಅಂತ ಹೇಳಿದಾಗ ಇವ ಹುಳ್ಳುಳ್ಳಗೇ ನಕ್ಕ. ಆದರ ಅವನ ಮನಸಿಗೆ ಒಂದ ಮಾತು ಮಾತ್ರ ಖಾತ್ರಿ ಆತು. ಏನಂತಂದರ… ತನಗ ಇಲ್ಲಿ ಬದಕಲಿಕ್ಕಂತೂ ಏನೇನೂ ತ್ರಾಸ ಆಗೂದುಲ್ಲ… ಹೂಂ… ಈ ಜುಟ್ಟಲದ ಭಟ್ಟ ಅದೇನು ನಾಟಕಾ ಹೂಡತಾನೊ ಹೂಡಲಿ. ಅದು ನಡಿಯೂದಾದರ ಒಂದ ಕೈ ನೋಡೇ ಬಿಡೋಣ… ಅಂತ ವಿಚಾರ ಮಾಡಿದ ವೆಂಕೋಬರಾವ್ ಭಟ್ಟರ ಕಾರ್ಯತಂತ್ರದೊಳಗ ಭಾಗವಹಿಸಲಿಕ್ಕೆ ತಯಾರಾದ…

ಡಂಗರಾ ಹೊಡಿಸಿ ಮನಿಗೆ ಒಬ್ಬೊಬ್ಬರಂಗ ಸಂಜೀ ಮುಂದ ಚಾವಡಿಗೆ ಬರಬೇಕಂತ ಸಾರಿಸಲಾಯಿತು… ಮಂದಿ… ಯಾಕೋ ಉಪsದ್ಯಾರು ಚಾವಡಿಗೆ ಬಾs ಅಂತ ಕರಸ್ಯಾರಲಾs… ಅಂತ ಅನಕೋತs ಚಾವಡಿಗೆ ಬಂತು. ಅಲ್ಲಿ ಬಂದ ನೋಡಿದರs… ಚಾವಡೀ ಕಟ್ಟಿಮ್ಯಾಲ ಗುಡಾರ ಹಾಸಿ… ಆ ಗುಡಾರದಮ್ಯಾಲ ಗ್ವಾಡಿಗೆ ಹೊಂದಿ ಒಂದು ಲೋಡು ಇಡಿಸ್ಯಾರೆss… ಆ ಲೋಡಿಗೆ ಆನಿಕೊಂಡು ಕಟ್ಟುಮಸ್ತಾದ ಒಬ್ಬಾಂವ ಜರ್ಬಿನಿಂದ ಕುಂತಿದ್ದರೇss ನಮ್ಮ ಭಟ್ಟರು ಅವನ ಮುಂದ ಕಟ್ಟಿತುದೀಗೆ ಇಲಿಯಂಗೆ ನಡಾ ಬಗ್ಗಿಸಿ ನಿಂತಾರೇ!… ಹಾ! ಅಂತ್ಯು ಬಂದ ಮಂದಿ… ಎಲಾs… ನಮ್ಮ ಉಪsದ್ಯಾರು ಹಿಂಗ ನಿಂತಾಗ ಇಂವ ಕುಂತಿರಬೇಕಾರss ಇಂವ ನಮ್ಮಂಗ ಅಸನರೀ ಮನಶಾ ಅಲ್ಲಾ… ಇವ ಸಾಕ್ಷಾತ್ ಪೇಶವೇ ಸರ್ಕಾರನs ಇದ್ದಿರಬೇಕು… ಅಂತ ಪಿಸಿ ಪಿಸಿ ಅಂತ ಮಾತಾಡಿಕೊಂಡಿತು. ಅಯ್ಯೋ ದೇವರ! ಇನ್ನೇನ ನಮ್ಮ ತಲೀಮ್ಯಾಲ ತಂದೆಪಾss ಅಂತ ಆ ಜನಾ ಅಂಬೂದು ಅಂಜಿ ಧೇನಿಸಿಕೊಂತ… ಈಗ ಇಲ್ಲಿ ಕುಂಡ್ರೂದೋ ನಿಂದರೂದೋ ಅಂತ ಗೊಂದಲದಾಗ ಇರಬೇಕಾರs… ಆ ಲೋಡಿಗೆ ಆನಿಕೊಂಡು ಕುಂತ ಯಜಮಾನ, ಕುಂಡಿರ್‍ರಿ… ಅಂತನ್ನುವ ಹಂಗ ಸನ್ನೇ ಮಾಡಿದ. ಮಂದಿ ಅನುಮಾನಿಸಿತು. ಆಗ ಭಟ್ಟರು ಮಂದಿ ಕಡೆ ಮಕಾ ಮಾಡಿ ಬಾಯಿಯ ಮ್ಯಾಲ ಬೆಳ್ಳ ಇಟಗೊಂಡು- ಕಣ್ಣೂ ಮತ್ತೆ ಗೋಣಿನಿಂದ ಸನ್ನಿ ಮಾಡಿದರು. ಆಗ ಮಂದಿ ಸದ್ದು ಮಾಡಧಂಗೆ ನಿಂತನಿಂದಲ್ಲೇ ಕುಂತಿತು. ಆಗ ಅಲ್ಲಿ ಕುಂತ ಮಂದಿಯ ಬಾಯನ್ನುವದು ಮಾಯ ಆಗಿತ್ತು. ಈಗ ಅವರಿಗೆ ಮಕದ ತುಂಬs ಬರೇ ಕಣ್ಣಗೋಳು. ಅವರ ಕಿವೀ ಅನ್ನೂವು ಈಗ ಮರದಗಲ ಆಗಿ ಕುಂತಿದ್ದೂ…!

ಇದನ್ನು ಓದಿದ್ದೀರಾ?: ಮೊಗಳ್ಳಿ ಗಣೇಶ್ ಅವರ ಕತೆ | ಬುಗುರಿ

ಭಟ್ಟರು ನಡಾಬಗ್ಗಿಸಿ ಸಲಾಮು ಮಾಡಿದರು. ಲೋಡಿಗೆ ಆನಿಕೊಂಡು ಕುಂತವರು ಮುಗಳುನಗೀ ನಕ್ಕು… ಬಾಯಿ ಬಿಚ್ಚದೇ ಆಗಲಿ- ಅಂತನ್ನುವ ಹಂಗ ಗೋಣು ಅಳಿಗ್ಯಾಡಿಸಿದರು. ಆಗ ಉಪsದ್ಯಾರು ಉಪsದ್ಯಾರು ಅಂತ ಕರಿಸಿಕೋತಿದ್ದ ತ್ರಿಯಂಬಕ ಭಟ್ಟರು ಜನತಾಕ್ಕ ವರ್ಣಿಸಿ ಹೇಳಲಿಕತ್ತಿದರು…

…ನಿಮಗೆಲ್ಲಾ ಗೊತ್ತಿದ್ದ ಮಾತs ಐತಿ. ನಮ್ಮ ಧರಮನಟ್ಟಿಯ ನಾಡಿನ್ಯಾಗ ಪ್ರಜಾಮಂದಿ ಭಾಳ ತ್ರಾಸಿನಾಗ ಐತಿ. ದರೋಡೀಖೋರರ ಕಾಟ ಅನ್ನೂದು ತಾಳಧಂಗ ಆಗೇತಿ. ಪೇಶವೇ ಸರ್ಕಾರಕ್ಕೆ ಈ ವಿಚಾರಾ ತಿಳಿಸಿ… ಪ್ರಜಾಮಂದಿನ್ನ ರಕ್ಷಣಾ ಮಾಡರಿ ಅಂತ ನಾನೂ… ಒಂದ ಅಹವಾಲ ಬರದಿದ್ದಿನಿ… ಒಬ್ಬರ ಸರದಾರನ್ನ ನಮಗ ದೇಸಾಯರನ ಮಾಡಿ ಕಳಸರಿ ಅಂತ ಬರೆದಿದ್ದಿನಿ. ಅದಕ್ಕs ಪೇಶವೇ ಸರ್ಕಾರ ನಮಗ ಅಗದೀ ಖಂಬೀರ ದೇಸಾಯರನ್ನs ಕಳಿಸ್ಯಾರು… ಇವರು ಕುದರಿ ಹತಿಗೊಂಡು ದಟ್ಟಾನ ಅರಣ್ಯದಾಗ ಹಾದು ಬರಬೇಕಾದರ ಒಂದ ಎಂಟಗೇಣಿನ ಹುಲೀ ಹಾss ಅಂತ ಹಾರಿ ಎದುರಿಗೇ ಬಂತಂತ. ದೇಸಾಯರು ಅಂಜಿಕೀ ಅಳಕೂ ಯಾವದೂ ಇಲ್ಲದ ಕುದರೀ ಇಳದು ಕತ್ತಿ ಹಿರದು ನಿಂತರಂತ. ಆ ಹುಲೀ- ಹಾ ನನ್ನ ಊಟ ಸಿಕ್ಕಿತೂ… ಇವನ್ನ ಕೊಂದ ತಿಂತನೂ- ಅಂತ ಮಾಡಿಕೊಂಡು ಆss ಅಂತ ಗರ್ಜಿಸಿ ಮೈಮ್ಯಾಗ ಬಿತ್ತಂತ… ಭಟ್ಟರ ಮಾತು ಕೇಳತಿದ್ದ ಮಂದಿ ‘ಆ’ ಅಂತ ಬಾಯಿ ತಕ್ಕೊಂಡು ಕೂತಿತ್ತು… ಭಟ್ಟರು ಇನ್ನಷ್ಟು ಹುರಪಿನಿಂದ ಹೇಳಲಿಕ್ಕತ್ತಿದರು… ದೇಸಾಯರು ಹುಲೀ ತಮ್ಮ ಕತ್ತಿಯ ಕೈ ಅಳತಿಗೆ ಬರಲೀ ಅಂತ ಅಲ್ಲೇ ನಿಂತಲ್ಲೇ ನಿಂತಿದ್ದರಂತ… ಆ ಹುಲೀ ಇನ್ನೇನು ಇವರ ಮೈಮ್ಯಾಲ ಬೀಳಬೇಕು ಅನ್ನುವಾಗ ಸರಕ್ಕಂತ ತಪ್ಪಿಸಿಕೊಂಡು, ಸುಂಯ್… ಅಂತ ಕತ್ತಿ ಬೀಸಿದರಂತ. ಹುಲಿಯ ರುಂಡಂಬುವದು ಹತ್ತಮಾರ ದೂರ ಹೋಗಿ ಬಿದ್ದಿತ್ತಂತ… ದೇಸಾಯರು ಮತ್ತ ಸಟಕ್ಕನs ಕುದರೀಹತ್ತಿ ನಡದು ಬಿಟ್ಟರಂತ… ಛಲೋ ಕೆಲಸಕ್ಕೆ ನೂರಾ ಎಂಟು ವಿಘ್ನಗೋಳುs ಅಂತ ಹಿರ್‍ಯ ರು ಹೇಳತಾರ. ಹಂಗs ಆತು. ಇಲ್ಲಿ ಬಂದ ನೋಡತಾರs… ಹೊಳೀ ಅಂಬೂದು ಒಡಲೆಲ್ಲಾ ತುಂಬಿ ಹರೀಲಿಕತ್ತೇತಿ… ಇವರ ಪರಿವಾರದವರು ಅಂದರು… ರಾವ್ ಸಾಹೇಬ… ಹೊಳಿಗೆ ಮಾಪೂರ ಬಂದsತಿ… ಈಗ ದಾಟೋದು ಯೋಗ್ಯ ಅಲ್ಲ… ದೇಸಾಯರು ಈ ಮಾತಿಗೆ… ಛೇ ಛೇ… ಪ್ರಜಾಮಂದೀದು ಎಷ್ಟು ತ್ರಾಸೋ ಏನು ತಾಪತ್ರಯನೋ ಯಾರಿಗೆ ಗೊತ್ತು? ತಡಾ ಮಾಡುವದು ಯೋಗ್ಯ ಅಲ್ಲ ಅಂತಂದು ಕುದರೀ ಇಳದು ತಮ್ಮ ಪರಿವಾರದವರಿಗೆ ಒಪ್ಪಿಸಿ ಹೊಳೇದಾಟಾಕ ತಯಾರಾದರು… ‘ಬ್ಯಾಡಾs… ತುಂಬಿದ ಹೊಳೇ… ರಾವಸಾಹೇಬ್… ಸೆಳವು ಭಾಳ ಇರತಾವು… ಬ್ಯಾಡಾ… ಗೊತ್ತಿಲ್ಲದ ಹೊಳಿ, ಸುಳೀ ಗಿಳೀ ಇದ್ದಿರತಾವು… ಬ್ಯಾಡರಿ ರಾವ್‌ ಸಾಹೇಬ… ಹಿರಿಹೊಳೀ. ದೊಡ್ಡ ಮಡಾಗಿಡೀ ಇದ್ದಿರತಾವೂ…’ ಅಂತ ಆ ಪರಿವಾರದವರು ಪರಿಪರಿಯಾಗಿ ಬೇಡಿಕೊಂಡು… ಹೊಳೇ ದಾಟುವುದು ಬ್ಯಾಡಂತ ಸಕ್ತ ಮನ್ನಾ ಮಾಡಿದರಂತ. ಆದರ ದೇಸಾಯರು… ನೀವು ಯಾರೂ ಬರೂದು ಬ್ಯಾಡ… ಹೊಳ್ಳಿ ಹೋಗರೀ ಅಂತ ತಾಕೀತು ಮಾಡಿ ತೆಲಿಗೆ ಕತ್ತೀಕಟಿಗೊಂಡು ಹಿರಿಹೊಳಿ ದಾಟಿ ಈಸಿ ಬಂದಾರು… ಇಂದ ನಸಕಿನ್ಯಾಗ ಇನೂ ಕತ್ತಲಿ ಇದ್ದಂಗs ಜಳಕಕ್ಕಂತ ಹೊಳಿಗೆ ಹೋದಿನಿ… ನಾ ಜಳಕಾ ಮಾಡತಿರಬೇಕಾರ ಇವರು ಈಸಿಗೋತs ಹೊಳೀ ದಾಟಿ ಬರಾಕತ್ತಿದ್ದರು. ನನಗ ಅಜಬ ಅನಿಸಿತು. ಭೋರೆಂಬುವ ಈ ಸೆಳವಿನೊಳಗ ಈಸಿ ಬರುವ ಈ ಖಂಬೀರ ಮನಶಾ ಯಾರಿದ್ದಾನೂ… ಇಂಥಾ ಒಬ್ಬ ಮನಶಾನ್ನ ಪೇಶವೇ ಸರ್ಕಾರ ನಮಗ ದೇಸಾಯಿನ್ನ ಮಾಡಿ ಕಳಿಸಿದರ ಹಗಲೆಲ್ಲಾ ಸುಲಕೊಂಡು ಹೋಗವರ ನಿಗ್ಗರ ತಪ್ಪತೈತೀ ಅಂತ ಧೇನಿಸಿಕೋತ ನಿಂತಿರಬೇಕಾದರss… ನನ್ನ ಮುಂದು ಬಂದ ನಿಂತರು. ತೆಲೀಗೆ ಕತ್ತಿ ಕಟಿಗೊಂಡಾರೆ. ನನ್ನ ಕಾಲು ಗದಾಗದಾ ಅಂತ ನಡಗಿದೂ… ಧರಮನಟ್ಟಿ ಯಾವ ಕಡೇ? ಅಂತ ನನ್ನ ಕೇಳಿದ ಮ್ಯಾಲ ಹಾಂ… ಇನ್ನ ನಮ್ಮ ಊರವರ ಕಥೀ ಮುಗೀತು ಅಂತ ಅನಿಸಿತು. ನಾನು ಇದs ಆ ಊರರೀ ಅಂತ ತೋರಿಸಿದಿನಿ. ಅಲ್ಲಿ ತ್ರಿಯಂಬಕ ಭಟ್ಟ ಅಂತ ಇದ್ದಾನಂತ, ನಿನಗ ಅಂವ ಗೊತ್ತ ಇದ್ದಾನ ಏನು? ಅಂದರು. ನನ್ನ ಎದೀನs ಒಡೀತು. ಭಗವಂತ ಕೊಟ್ಟಿದ್ದು ಸ್ವೀಕರಿಸೋದು… ಅಂತ ಎದೀ ಗಟ್ಟಿ ಮಾಡಿಕೊಂಡು ‘ಅಂವ ನಾನsರೀ…’ ಅಂತಂದೆ. ದೇಸಾಯರು ಅಂದರು… ‘ಅಂಜಬ್ಯಾಡ. ನೀನು ಪೇಶವೇ ಸರ್ಕಾರಕ್ಕ ಅಹವಾಲ ಬರಕೊಂಡಿದ್ದೆಲ್ಲಾ… ಪೇಶವೇ ಸರ್ಕಾರ ತಮ್ಮ ಪ್ರತಿನಿಧಿ ಅಂತ ನನ್ನ ಕಳಿಸ್ಕಾರ…’ ನನಗೆ ಹಂಗs ಟಣಾ ಟಣಾ ಅಂತ ಕುಣಿಯೂಹಂಗ ಆತು. ದೇವರು ಇಂದ ನಮ್ಮನ್ನ ಕಣ್ಣ ತಗದ ನೋಡಿದಾ ಅನಕೊಂಡಿನಿ… ನಮಗ ಅಗದೀ ಖಂಬೀರ ದೇಸಾಯರು ಬಂದರು… ಭಟ್ಟರು ಇಷ್ಟೆಲ್ಲ ವರ್ಣಿಸಿ ವರ್ಣಿಸಿ ಹೇಳಿದಾಗ ಹುಚ್ಚೆದ್ದ ಮಂದಿ- ಉಧೋ ಉಧೋss ಅಂತ ಸಂತೋಷದಿಂದ ಕೂಗಿತು…

ಇದನ್ನು ಓದಿದ್ದೀರಾ?: ಯು.ಆರ್. ಅನಂತಮೂರ್ತಿ ಅವರ ಕತೆ | ಸೂರ್ಯನ ಕುದುರೆ

…ವಿಠಲನs ಮನಸ ಮಾಡಿದ್ದ ಅಂದಮ್ಯಾಲ ಇನ್ನ ಹುಲಮಾನವರದೇನು ಬಿಸಾಟುs… ಭಟ್ಟರು ಇಷ್ಟ ಮಾತಾಡಿದ್ದು ಹೊಸಾ ದೇಸಾಯರ ಬಗ್ಗೆ ಯಾವ ಅನುಮಾನ ಇರಬಾರದು ಅಂತನ್ನುವದಷ್ಟs ಅಲ್ಲ. ಅವರ ಬಗ್ಗೆ ಮಂದಿಯೊಳಗ ಭಯಾ ಭಕ್ತಿ ಅನ್ನೂದನ್ನ ಹುಟ್ಟಿಸಬೇಕಾಗಿತ್ತು… ಯಾಕಂದರ ದೇಸಗತಿ ಕಟ್ಟಲಿಕ್ಕೆ ರಗಡ ಖರ್ಚು ಆಗೂದು. ಅದನ್ನ ಮಂದಿ ಕೊಡದs ಮತ್ಯಾರು ಕೊಡಬೇಕು… ಈಗ ಸದ್ದೇಕ್ಕ, ಸುರುವಾತಿಗೆನs ದಂಡ ಕಟ್ಟಬೇಕು. ಅದು ಹೆಂಗ? ಬಿನ್ನಪಗಾರೀ!… ಹಿಂತಾದ್ದರಾಗ ಭಟ್ಟರು ಇನ್ನೆಂಗ ಮಾತಾಡಬೇಕು! ಅಂತೂ ಅವರ ಮಾತು ಮಂದೀಮ್ಯಾಲ ಛಾಪ ಒಗೀತು. ಈಗ ಸುರುವಾತು… ಗರಡಿಯಮನಿಯ ಹುಡಗೋರು ಕುಸ್ತಿಯ ಪಟ್ಟು ಕಲಿಯೂದನ್ನ ಬಿಟ್ಟು ಕತ್ತಿ ತಿರುವುದೂ ಭರ್ಚಿ ಒಗಿಯೂದೂ ಅದೂ ಕಲೀಲಿಕತ್ತಿದರು. ಕಂಬಾರಸಾಲ್ಯಾಗ ಕುಂಟೀರೆಂಟಿಗೋಳ ಕುಡಗೋಳನ ಹೆಣೆಯೂದು ಬಿಟ್ಟು- ಈಗ ಸುತಗಿಗೋಳು ಕಾದ ಕಬ್ಬಿಣಾ ಹೊಡದು ಹೊಡದು ಕತ್ತೀ ಭರ್ಚಿ ತಯಾರ ಮಾಡಲಿಕ್ಕೆ ಸುರು ಮಾಡಿದವು. ಬಡಿಗಿಸಾಲ್ಯಾಗ ಬಡಿಗ್ಯಾ ಜಾಲೀ ಸಳ್ಳು ಕೆತ್ತಿ ಸಫಾಯಿ ಮಾಡಿ ಅದರ ತುದಿಗೆ ಕಾಯಿಸಿ ನೀರು ಕುಡಿಸಿದ ಉಕ್ಕಿನ ಭಲ್ಲೇ ಕೂಡಸಲಿಕ್ಕತ್ತಿದ…

ದೇಸಾಯರಿಗೆ ಇರಲಿಕ್ಕಂತ ವಾಡೇಕಟ್ಟಿಸೂ ಮಾತಬಂತು. ದೇಸಾಯರನs ಈಗ ಸದ್ದೇಶ ವಾಡೇದ ಸುದ್ದಿ ಬ್ಯಾಡ. ಮುಂದಕ ನೋಡಿದರಾತು ಅಂತ ಅಂದಾಗ ಆ ಮಾತು ಭಾಳ ಪಟಾಯಿಸಿತು. ಆಹಾ… ನಮ್ಮ ಭಾಗ್ಯೇದ ಬಾಗಿಲು ತೆರೀತು… ತಂದೀಯಂಥಾ ದೇಸಾಯರು ಬಂದಾರು ಅಂತ ಮಂದಿ ಉಬ್ಬಿ ಉಬ್ಬಿ ಕುಣೀತು. ಹೊಂದಿ- ಹೊಂದಿಗಿದ್ದ ಮೂರುಮನಿಯವರು ತಮ್ಮ ಮನಿಗೋಳನ ಬಿಟಗೊಟ್ಟು ಗುಡಸಲಾ ಕಟಿಗೊಂಡರು. ಅವರ ಮೂರೂ ಮನಿಗೋಳನ ಸೇರಿಸಿ ದೇಸಾಯರ ತಾತ್ಪೂರ್ತಿಕ ವಾಡೇ ಮಾಡಿದರು. ಕೆಮ್ಮಣ್ಣ ತಂದು ಹೊರಗ್ವಾಡೀನೆಲ್ಲಾ ಸಾರಿಸಿ ಸುಣ್ಣದ ತಿಳಿ ಜೋರಿಕ್ಕಿಸಿದರು… ಒಳಗ್ವಾಡೀನೆಲ್ಲಾ ಹಾಳಮಣ್ಣಲೆ ಸಾರಿಸಿ ಮ್ಯಾಲ ಸೆಗಣದಲೇ ಸಾರಿಸಿ ಅದರ ಮ್ಯಾಗ ಸುಣ್ಣಾ ಹಚ್ಚಿಸಿದರು. ಆ ಸುಣ್ಣದ ಗ್ವಾಡಿಗೋಳ ಮ್ಯಾಲs ಕ್ಯಾಮಿಯ ಕೆಂಬಣ್ಣದಿಂದ ಚಿತ್ತಾರ ಬರದು ಸಿಂಗಾರ ಮಾಡಿದರು. ಆ ಮೂರು ಹಾಳಮಣ್ಣಿನ ಗ್ವಾಡಿಗಳ ಮನಿಗಳನ್ನs ಊರ ಮಂದಿ ಎಲ್ಲಾ ದೇಸಾಯರ ವಾಡೇ- ದೇಸಾಯರ ವಾಡೇ ಅಂತ ಅಭಿಮಾನದಿಂದ ನೋಡಲಿಕ್ಕತ್ತಿತು… ಅವರಿಗೆ, ತಮ್ಮ ದೇಸಾಯರು- ನೆಲದಮ್ಯಾಲ ಹೆಂಗ ಮನಗ್ಯಾರೂs… ದೇಸಾಯರ ವಾಡೇದಾಗ ಮನಗಾಕ ಒಂದ ಮಂಚಂಬೂದು ಇರಬೇಕೂ ಅಂತ ಅನಿಸಿತು. ಮತ್ಯಾಕ ತಡಾಮಾಡೂದು ಅಂತಂದವರ ಬಡಿಗಿಸಾಲಿಗೆ ಹೋಗಿ… ಬಡಿಗಿಗೌಡಾs ಬಡಗಿಗೌಡಾss… ದೇಸಾಯರ ವಾಡೇದಾಗ ಮನಗಾಕ ಮಂಚಂಬೂದು ಇಲದಾಗೇತಿ. ನೀನಾದರೂ ನಿನ್ನ ಬಿಡೋಕೆಲಸಾ ಬಿಟ್ಟು… ಸುಳವೂ ಚಿತ್ತಾರಾ ಬಿಡಿಸಿದ ಮಂಚಾನಾದರೂ ಮಾಡಿಕೊಡಬೇಕು… ಅಂತ ಕೇಳಿದರು. ಆ ಬಡಿಗ್ಯಾನಾದರೂ ದೇಸಾಯರ ಕೆಲಸ ಅಂದರ ನಾಡಿನ ಕೆಲಸ ಅಂತ ತಿಳಿದವನು. ಇಷ್ಟರ ಮ್ಯಾಲ… ತಾ ಮಾಡೂ ಮಂಚ ದೇಸಾಯರ ವಾಡೇದಾಗ ಕಾಣಾವರ ಕಣ್ಣಾಗಿನ ಗೊಂಬೀ ಹಂಗ ಇರತೈತಿ ಅಂತನೂ ಗೊತ್ತಿತ್ತು… ಆ ಬಡಗಿಗೌಡ ಬಿಡೂ ಕೆಲಸಾ ಬಿಟ್ಟು ಮಂಚಾನಾದರೂ ಮಾಡಲಿಕ್ಕೆ ತಯಾರಿದ್ದ. ಆದರs ಈ ಬಡಿಗ್ಯಾನ ಅಪ್ಪ ತನ್ನ ಮಗ್ಗ ಬರೇ ರೆಂಟೀ-ಕುಂಟೀ ಭಾಳಂದರ ಚಕಡಿಯ ಗಾಲೀ ಮಾಡೂದಷ್ಟs ಕಲಿಸಿಹೋಗ್ಯಾನೆ. ಹಿಂಗಾಗಿ… ತಾನಾದರೂ ದೇಸಾಯರು ಶಯನಾ ಮಾಡುವಂತಹಾ ಮಂಚಾ ಮಾಡಲಾರೆನಲ್ಲಾss ಅಂತ ಆ ಬಡಗಿಗೌಡ ಬಹುವಾಗಿ ವ್ಯಸನಪಟ್ಟ…

ಇದನ್ನು ಓದಿದ್ದೀರಾ?: ಎ.ಕೆ. ರಾಮಾನುಜನ್ ಅವರ ಕತೆ | ಅಣ್ಣಯ್ಯನ ಮಾನವಶಾಸ್ತ್ರ

ಹಿಂಗಂತ ಆದಮ್ಯಾಲ, ದಂಡಿನ ನಾಕ ಹುಡುಗೋರು ಮಗ್ಗಲ ಊರು- ಕಲಾಕೊಪ್ಪಕ ಹೊಂಟಿತು. ಅಲ್ಲಿ ಮಂಚಾ ಮಾಡುವ ಬಡಿಗ್ಯಾ ಇದ್ದ. ಆ ಬಡಿಗ್ಯಾ ಆಗ ಚಕಡಿಯ ಕೆಲಸಾ ಕೈಯಾಗ ಹಿಡದಿದ್ದ. ಗಾಲಿಯ ಪುಟೇದ ಮ್ಯಾಲs… ಗಾಲಿಯ ಹಲ್ಲಮ್ಯಾಲs ಸುಳವಿನ ಚಿತ್ತಾರ ಬಿಡಸಲಿಕತ್ತಿದ. ದಂಡಿನ ಹುಡಗೋರು ಬಡಗಿಸಾಲಿಗೆ ಹೋಗಿ ಆ ಆಚಾರಿ ಬರೀತಿದ್ದ ಸುಳವು ನೋಡಿಕೋತ ನಿಂತಬಿಟ್ಟೂ. ಅಚಾನಕವಾಗಿ ಹಿಂಗ ಬಂದು ನಿಂತ ಈ ಪಡ್ಡೆ ಹುಡುಗರನ್ನ ತುದಿಗಣ್ಣಿಂದ ನೋಡಿದ ಬಡಿಗ್ಯಾ, ಸುಳವು ಮೂಡಸೂದನ್ನ ನಿಂದರಿಸಿ… ಏನಾs ಅಂತನ್ನುವ ಹಂಗ ಹುಬ್ಬು ಹಾರಿಸಿದ… ಹಿಂಗಿಂಗs… ನಮ್ಮ ದೇಸಾಯರು ಮನಗೂಹಂತಾ ಮಂಚಾ ಮಾಡಬೇಕಾಗೇತಿ. ನಾಕ ಹೆಜ್ಜಿ ಬಂದು… ನಿವಳ ಹಂತಾ ತ್ಯಾಗದ ಗಿಡಾ ಆರಿಸಿಕೊಂಡು ಇಡೀ ಆರೇನಾಡು ಹೌದ ಹೌದ ಅನ್ನೂ ಹಂತಾ ಮಂಚಾ ಮಾಡಿಕೊಡಬೇಕೂ…. ಅಂದರು. ಆಚಾರಿ ಅಂದಾ… ‘ಇದೊಂದ ಚಕಡೀ ದಗದ ಮುಗದ ಹೋಗಲಿ, ಆಮ್ಯಾಲ ನಾಕದಿನಾ ಸಡವ ಮಾಡಿಕೊಂಡ ಬರತನು… ಈಗ ಸದ್ದೇಕ್ಕ ಆಗಾಣಿಲ್ಲ…’ …’ಆಗಾಣಿಲ್ಲ ಅಂತ ಅನ್ನಂಗಿಲ್ಲಪಾ ಇದು ದೇಸಾಯರ ಕೆಲಸ…’ ಅಂತ ದಂಡಿನ ಹುಡುಗೋರು ವಗರಿನಿಂದ ಹೇಳಿದೂ. ಕಾಮಗಾರಿ ಮಂದಿಗೆ ಸಿಟ್ಟಿ ಭಾಳಂತ. ಅದರಾಗs ಈ ತೆಲೀ ಮಾಸದ ಹುಡಗೋರು ನನ್ನಂಥಾ- ಮಂಚಾ ಮಾಡೂಹಂತಾ ವಿಶ್ವಕರ್ಮನ್ನ ಅಂಜಸೂದಂದರ ಅಂತ ಆ ಆಚಾರಿಗೆ ಕೋಪ ಅಂಬುವಂಥದು ಮೂಗಿನ ತುದಿಯ ಮ್ಯಾಲ ನಿಂತು ಥೈಥಕಥೈ… ಅಂತ ಕುಣಿಯಲಿಕತ್ತಿತು. ಆಚಾರಿ ‘ಹೋಗರ್‍ಯೋ ಮಕಳಿಗೋಳ್ರ್ಯಾ… ದೇಸಾಯಿ ಅಂತ ದೇಸಾಯಿ. ಎಂದಿಲ್ಲದ ದೇಸಾಯಿ ಅದ್ಯಾಂವ ಬಂದಾನು? ಬಂದರೂ ಬಂದಿರವಲ್ಲನ್ಯಾಕ. ಇದ್ದಿದ್ದರ ಅಂವ ನಿಮಗ ದೇಸಾಯಿ ಇದ್ದಿದ್ದಾನು. ನಂದೇನ ಮಣಸಾವ ಅದಾನವ…’ ಅಂತ ಉಗಡಾ ಮಾತು ಆಡಿಬಿಟ್ಟ…

ಮದಲs ಈ ಹುಡಗೋರು ಕಟ್ಟಿ ಮೇಯಿಸಿದ ಹೋರಿಗಳಂಗ ಇದ್ದರು. ದಿಗರ ವಯಸ್ಸು… ಮ್ಯಾಲ ಕ ದಾಂಡೂ ತಿರಿವಿದ ಹುರುಹುರು ಅನತಿದ್ದ ತೋಳಗೋಳು… ಇಷ್ಟರಮ್ಯಾಲ ಬಡಿಗ್ಯಾನ ದಿಗರ ಮಾತಗೋಳು. ಇದಕಿಂತಾ ಹೆಚ್ಚಿಗೇನಬೇಕು?… ಮದಲ ಬಡಿಗ್ಯಾಗ ನಾಕ ಇಕ್ಕರಿಸಿದರು. ಆಮ್ಯಾಲ ಅವನ್ನ ಹೆಡಮುರಗೀ ಕಟ್ಟಿದರು… ಬಡಿಗ್ಯಾನ ಹೇಂತಿ ಹೊಯ್ಯೋ ಬಡಕೋ ಮಾಡತಿರಬೇಕಾದರ ಇವರು ಬಡಿಗ್ಯಾನ್ನ ಹೊತಗೊಂಡು ಧರಮನಟ್ಟಿಗೆ ನಡದಬಿಟ್ಟರು. ಈ ಕಟಗೀ ಕೆತ್ತವನ್ನ ದೇಸಾಯರ ಮುಂದ ಯಾಕ ಒಯ್ಯಬೇಕಂತ ಅವರು ಅವನ್ನ ಬಡಿಗಿಸಾಲಿಗೆ ತಂದು ಒಗದರು. ಧರಮನಟ್ಟಿ ಹುಡಗೋರು ತಮ್ಮ ಊರಿನ ಬಡಿಗ್ಯಾನ್ನ ಹಿಂಗ ದಂಡಾವರ್ತಿ ಮಾಡಿ ಎಳಕೊಂಡ ಹೋಗ್ಯಾರ ಅಂತ ಗೊತ್ತಾದ ಕೂಡಲೇ ಕಲಾಕೊಪ್ಪದ ಹಿರ್‍ಯಾರು ಇದೇನ ದಂಡಾವರ್ತಿ ಅಂತ ತಿಳಕೋಬೇಕಂತ- ಮತ್ತ ಅವನ್ನ ಬಿಡಿಸಿಕೊಂಡ ಹೋಗಬೇಕಂತ ಧರಮನಟ್ಟಿಗೆ ಬಂದರು… ದಂಡಿನ ನೂರೆಂಟು ಹುಡಗೋರು ಭರ್ಚಿ ಹಿಡಕೊಂಡು ಇವರನ ಎದುರುಗೊಂಡಾಗ ಇವರ ಹರಣನs ಹಾರಿ ಹೋದಂಗ ಆತು… ಅಲ್ರೆಪಾ… ಇದೇನ್ರಪಾss ಅಂತ ಅಂಜಿ ಅಂಜಿ ಕೇಳುವ ಅವರನ ದಂಡಿನ ಹುಡಗೋರು- ನಮ್ಮ ಜೋಡೀ ಬರ್ರಿ- ಅಂತ ಹೇಳಿ ಕಾರಭಾರಿ ತ್ರಿಯಂಬಕ ಭಟ್ಟರ ಮನಿಗೆ ಕರಕೊಂಡ ಬಂದರು…

ಇದನ್ನು ಓದಿದ್ದೀರಾ?: ಶಾಂತಿನಾಥ ದೇಸಾಯಿ ಅವರ ಕತೆ | ದಿಗ್ಭ್ರಮೆ

ನಮ್ಮ ಭಟ್ಟರ ಮನೀಗ್ಯಾಕ ಕರಕೊಂಡ ಹೊಂಟಾರ ಇವರಾ… ಅಂತ ಸೋಜಿಗಪಡುತ್ತ ಬಂದ ಈ ಮಂದಿ ಅಲ್ಲಿ ತಡಿಯ ಮ್ಯಾಲ ಲೋಡಿಗೆ ಆನಿಕೊಂಡು ಕುಂತ ಭಟ್ಟರನ್ನ ನೋಡಿದರು… ಅಲಾs ಇವರs…! ಸತ್ಯನಾರೇಯಣ ಅದೂ ಇದೂ ಅಂತ ಪೂಜಿಗೇ ಶಾಂತೀಗೆ ಅಂತ ಬರತಿದ್ದ ಉಪsದ್ಯಾರs ಇವರೂ…! ನಾವು ಚಲೋ ದಿನಾ- ಮೂರ್ತಾ ಗೀರ್ತಾ ಅಂತ ಅದೂ ಇದೂ ಕೇಳಾsಕ ಬಂದಾಗ ಹುಲ್ಲ ಚಾಪೀಮ್ಯಾಲ ಕುಂತು, ಜನಿವಾರಕ್ಕೆ ನೂಲ ನೂತಗೋತ ತಕಲೀ ತಿರಗಿಸಿಕೋತ ಕುಂತಿರತಿದ್ದರಲಾs ಅದs ಉಪsದ್ಯಾರs ಇವರೂ…! ಕಲಾಕೊಪ್ಪದ ಮಂದಿಗೆ ಗೂಢ ಆತು… ದಂಡಿನ ಹುಡಗೋರು ಇವರನ ಅಲ್ಲಿಗೆ ತಂದಬಿಟ್ಟು ಸಲಾಮು ಮಾಡಿ ಎಲ್ಲಾ ಹಕೀಕತ್ತು ಹೇಳಿದರು. ಭಟ್ಟರು ನಿರ್ಲಿಪ್ತರಾಗಿ ಎಲ್ಲಾ ಕೇಳಿಕೊಂಡು… ‘ಆತೂ- ನೀವು ಹೊರಗೆ ನಿಂದರ್‍ರಿ’ ಅಂತ ಹೇಳಿದರು. ಹುಡಗೋರು ಇನ್ನೊಮ್ಮೆ ಸಲಾಮ ಮಾಡಿ ಹೊರಗೆ ಹೋಗಿ ನಿಂತಿಗೊಂಡೂ. ಕಲಾಕೊಪ್ಪದ ಹಿರ್‍ಯಾರು ಒಮ್ಮೆ ಬಾಗಲ ಹೊರಗ ಭರ್ಚಿ ಹಿಡಕೊಂಡು ನಿಂತ ದಂಡಿನ ಹುಡಗರನ- ಮತ್ತ ಇತ್ತ ಗಾದೀ ಮ್ಯಾಲ ಕುಂತ ಭಟ್ಟರನ ನೋಡಿಕೋತ ಏನೂ ತಿಳೀಧವರಂಗ ಪಿಳಿ ಪಿಳೀ ಅಂತ ಕಣ್ಣ ಪಿಳಿಕಿಸಿಕೋತ ನಿಂತಿರಬೇಕಾದರ ಭಟ್ಟರು- ಕುಂಡರ್‍ರಿ ಅಂತ ಹೇಳಿದರು. ಹಿರ್‍ಯಾರು ಅನುಮಾನಿಸಿಕೋತ ಅಲ್ಲೇ ನಿಂತ ನಿಂತಲ್ಲೇ ಕುಂತರು…

ಎಳೀ ಎಳೀ ಬಿಡಿಸಿ ಹೇಳಿದರು ಭಟ್ಟರು… ಪೇಶವೇ ಅವರ ಪ್ರತಿನಿಧಿ ಅಂದರ ಸಾಕ್ಷಾತ್ ಪೇಶವೇ ಅವರs ಇದ್ದಂಗ. ನಮ್ಮ ದಂಡು ನಿಮ್ಮನ್ನ ಇಲ್ಲಿ ಕರಕೊಂಡ ಬಂತಂತ ಎಲ್ಲಾನೆಟ್ಟಗಾತು. ಇದs ಇಲ್ಲಿ ಕರಕೊಂಡ ಬರದs ಜsರ ತಪ್ಪಿ ದೇಸಾಯರ ಮುಂದ ನಿಮನ್ನ ಕರಕೊಂಡ ಹೋಗಿದ್ದರ ಘಾತ ಆಗತಿತ್ತು… ಸಿಟ್ಟಿನವರವರು… ಅದೂ ಅಲ್ಲದs ಅವರ ಕತ್ತಿಗೆ ಹತ್ತಿದ ನೆತ್ತರದ ಕೆಂಪು ಬಾಡಬಾರದಂತ. ಭಟ್ಟರ ಮಾತು ಕೇಳಿದ ಕಲಾಕೊಪ್ಪದ ಹಿರ್‍ಯಾರ ಕಾಲs ಹಾರಿದವು. ಅವರು ‘ರಾಯರs ಆ ಛಂಗಿ ಸೂಳೀಮಗಾ ಬಡಿಗ್ಯಾs ಏನೂ ತಿಳೀದs… ಮಾತಾಡ್ಯಾನರೀ. ಇದೊಮ್ಮೆ ಹೊಟ್ಯಾಗ ಹಾಕ್ಕೋರಿ… ನಾವು ಅಂವಗ ಚಲೂತಂಗೆ ಬುದ್ದೀ ಹೇಳತೀವರೀ… ಇನ್ನೊಮ್ಮೆ ನಮ್ಮ ಊರಿಂದ ಹಿಂತಾ ಹ್ಯಾಗಿ ಕೆಲಸ ಆಗಧಂಗ ನೋಡಿಕೋತೀವರೀ… ಅಂತ ದೈನಾಸಪಟಗೋತ ಹೇಳಿದರು. ಭಟ್ಟರು ಹೂಂ… ಅಂತಂದವರು ಒಮ್ಮಿಗೆಲೇ ನೆನಪಿಗೆ ಬಂದವರಂಗ ‘ಹಾಂ… ಅಂದಂಗ ನಿಮ್ಮದ ಕಲಾಕೊಪ್ಪಲಾs?… ನಾಳೆ ದೇಸಾಯರು ದಂಡ ತಗೊಂಡು ನಿಮ್ಮ ಊರಿಗೇ ಹೊಂಟಾರು… ಧರ್ಮ ಕರ್ಮ ಸಂಯೋಗದಿಂದ ನೀವs ಇಲ್ಲಿಗೆ ಬಂದರೀರೆಲಾs… ಈಗ ನೀವು ನಾಳೆ ಅಂದರ ನಾಳೆನss…. ಪ್ರತಿಯೊಂದು ಮನಿಂದ ಎರಡೆರಡ ಚೀಲ ಜ್ವಾಳಾ- ಒಂದೊಂದ ಚೀಲ ಗೋದೀ ಎಲ್ಲಾ ಗ್ವಾಳೇ ಮಾಡಿ ಚಿಕಡಿಗೋಳನ ಹೊಂದಿಸಿಕೊಂಡು ತಂದ ಹಾಕಬೇಕು… ಹಾಂ… ನಿಮ್ಮ ಊರಗೌಡ ಯಾರೂs…?’ ಅಂತಂದಾಗ ಒಬ್ಬ ಪೀಚಲು ಮನಶಾ ಪಿಳಿ ಪಿಳಿ ಅಂತ ಕಣ್ಣ ಪಿಳಿಕಿಸಿಗೋತ ‘ನಾನರೀ…’ ಅಂತ ಕೈಮುಗದ. ‘ನಿಂದs ನೋಡ ಇದರದೆಲ್ಲಾ ಜವಾಬದಾರೀ… ಸಂಜೀ ಒಳಗ ಚಕಡಿಗೋಳು ಬಂದೂ ಪಾಡಾತು. ಇಲ್ಲಾತಂದರ ಮುಂದಿಂದೆಲ್ಲಾ ದೇಸಾಯರ ಚಿತ್ತ… ತಿಳೀತಿಲ್ಲೋ…?’ ಅಂತಂದ ಭಟ್ಟರ ಮಾತಿಗೆ ಅಂವ ಗೋಣು ಹಾಕಿದ. ‘ಹಂಗರ ನೀವೆಲ್ಲಾ ಹೊಂಡರಿ!… ಹಾಂ. ಆ ಬಡಿಗ್ಯಾ ಇಲ್ಲೇ ಇರಲಿ. ಇಲ್ಲಿ ಕೆಲಸಾ ಮುಗಿಸಿದ ಮ್ಯಾಲ ನಾವು ಅಂವನ್ನ ಕಳಿಸಿಕೊಡತೀವು…’ ಅಂತ ಹೇಳಿ ಭಟ್ಟರು ಅವರನ್ನ ಕಳಿಸಿಕೊಟ್ಟರು.

ಇದನ್ನು ಓದಿದ್ದೀರಾ?: ತ್ರಿವೇಣಿ ಅವರ ಕತೆ | ನರಬಲಿ

…ದಂಡು ದಳಾ ಏನೂ ಒಯ್ಯದs ಕಲಾಕೊಪ್ಪದ ಕಪ್ಪ ಬಂತು- ಮತ್ತ ದೇಸಗತಿ ಎರಡಹಳ್ಳಿಗೆ ಹಬ್ಬಿದಂಗಾತು. ಇದಾದ ಮ್ಯಾಲ ಸುರುವಾತು ದಂಡಿನ ಕೆಲಸ. ದಂಡಿನ ಹುಡಗೋರಿಗೆ ಪಡೀನೂ ಸಿಗಲಿಕ್ಕೆ ಸುರುವಾತು… ಸುತ್ತಮುತ್ತಲಿನ ಹದಿನೆಂಟ ಹಳ್ಳಿಗೋಳಿಗೆ- ಗೌಡಗ-ಪತ್ರಾ ಕಳಿಸಿದರು. ಎಲ್ಲೀ ಉಸಾಬರೀ… ದಂಡು ಬಂತಂದರ ಪ್ರಾಣಹಾನಿ ಅಂತ ಅವರು ಜ್ವಾಳಾ-ಕಾಳು-ರೊಕ್ಕಾ ರುಪಾಯಿ ಗ್ವಾಳೇ ಮಾಡಿಕೊಂಡು ತಾವs ತಂದು ಕೊಟ್ಟಬಿಟ್ಟರು. ಆದರ ಹಂಚಿನಾಳ ಗೌಡ ಒಬ್ಬ ಮಾತ್ರ ಟಾಂಗ ಕೊಡಲಿಕ್ಕೆ ನೋಡಿದ… ದಂಡು ಊರಾಗ ಹೊಕ್ಕಿತು… ಓಣಿ- ಓಣೀವಳಗ ಗೌಡನ್ನ ಎಳದಾಡಿದರು. ಅವನ ಆಕ್ರಂದನ ಮನಿಮನಿಗೋಳನ ತುಂಬಿ- ಮನಿಯೊಳಗಿನ ಮಂದೀ ಮಕ್ಕಳ ಕಿವೀ ತುಂಬಿ ಎದೀಗೆ ಇಳೀತು… ಎದ್ಯಾಗ ಅದು ಮಡಾ ಆಗಿ ನಿಂತಾಗss… ಮನಿ-ಮನಿಗಳೊಳಗಿನ ಅಡಕಲ ಗಡಿಗಿಗೋಳು ಸಟಾ ಸಟಾs ತಮ್ಮ ತಾವ‌ ಇಳದೂs… ಮನಿ-ಮನಿಯೊಳಗಿನ ಸಂದುಕಗೋಳ ಬಾಗಲಕ್ಕ ಹಾಕಿದ್ದ ಕೀಲಿಗೋಳು ತಮ್ಮ ತಾವs ಬಿಚಿಗೊಂಡೂ. ಕೈತುಂಬ… ಉಡಿತುಂಬ ತುಂಬಿಕೊಂಡು ಮಂದಿ ಚಾವಡಿಗೆ ತಂದು ತಂದು ದಂಡಿಗೆ ಒಪ್ಪಿಸಿತ. ಆಗ… ಭಂಗಾರಾ-ರೊಕ್ಕಾ-ರುಪಾಯೀದು ಇಷ್ಟ ದೋಡ್ಡ ಗಂಟ ಆತು. ಚಕಡೀ ಕೊಳ್ಳಗಟ್ಟಿಸಿಕೊಂಡು ಗಂಟು ಹೇರಿಸಿಕೊಂಡು ತಂದು, ದೇಸಾಯರ ಮುಂದ ಇಟ್ಟು-ಗಂಟೆ ಬಿಚ್ಚಿದರು… ದೇಸಾಯರು ಆ ಹೊರಲಾರದ ಹೊರಿಯ… ದೊಡ್ಡ ಗಂಟಿನ್ಯಾಗಿನ ಪುತಳೀ ಸರಾs… ಗೆಜ್ಜಿ ಟಿಕ್ಕೇ ಕೊಳ್ಳಚೀನೂ-ಬುಗಡಿಗೋಳೂ-ಕಾಲಗೆಜ್ಜಿ-ರೊಕ್ಕಾ ರುಪಾಯಿss ಎಲ್ಲಾ ದಿಟ್ಟಿಸಿ ದಿಟ್ಟಿಸಿ ನೋಡಿದರು… ನೋಡಿಕೋತ ನೋಡಿಕೋತ ದೇಸಾಯರು ಅಗದೀ ಉತ್ತೇಜಿತರಾದರು… ಚಿತ್ತ ಚಂಚಲಗೊಂಡಿತು. ಅವರು ಖೊಕ್… ಖೊಕ್ ಅಂತ ನಗಲಿಕ್ಕೆ ಸುರು ಮಾಡಿದರು. ದಂಡಿನ ಹುಡಗೋರಿಗೆ ದಿಗಲ ಆತು. ಕಾರಿಭಾರಿಗೋಳು ಆ ಹುಡಗೋರಿಗೆ ಸನ್ನೀ ಮಾಡಿದಾಗ ಅವರು ಸಾವಕಾಶೇ ಹಿಂದಕ ಸರದು ಹೋದರು. ದಂಡಿನ ಹುಡಗೋರನ ಹೊರಗ ಕಳಿಸಿದ ಮ್ಯಾಲ ಆ ಸಂಪತ್ತನ್ನ ಎತ್ತಿಸಿ ಖಜಾನಿಗೆ ಹಾಕಿಸಿ- ಭಟ್ಟರು ತಾವೂ ಹೌರಗs ಹೊರಗ ಬಂದಬಿಟ್ಟರು…

*

ಧರಮನಟ್ಟಿ ನಾಡಿನಾಗ ಹಿಂಗೆಲ್ಲಾ ನಡದಾಗ ಮ್ಯಾಗಡೇ ದೇಶದಾಗ ಏನ ನಡದಿತ್ತು…! ಪೇಶವೇಗೋಳ ರಾಜ್ಯದಾಗ ದಿಲ್ಲೀ ಸಿಂಹಾಸನದ ಕನಸಗೋಳ ಬೀಳಲಿಕತ್ತಿದ್ದೂ… ಮೊಗಲ ಚಕ್ರವರ್ತಿಗೋಳ ಇಬ್ಬರದು ತಲೀ ಕತ್ತರಿಸಿದ ಮಂತ್ರೀ, ದಿಲ್ಲೀಗಾದೀ ಮ್ಯಾಲ ಕುಂತು… ಆಳಲಿಕ್ಕೆಂತ ಮರಾಠರನ್ನ ಕರದ. ಮೆತ್ತನೆಯ ಗಾದೀ ಮ್ಯಾಲ ಕುಂತ ಪೇಶವೇ ಭಟ್ಟರಿಗೆ ಆಳುವ ರುಚಿ ಹತ್ತಿತ್ತು. ಬಾ ಅಂತ ಕರದಾಗ- ಯಾಕ ಆಗಬಾರದೂ… ಯಾಕ ಆಗಬಾರದೂ… ಅಂತ ಅವರು ದಿಲ್ಲಿಯ ಗಾದಿಯ ಕಡೆ ತೇಲುಗಣ್ಣು ಮೇಲುಗಣ್ಣು ಬಿಡಲಿಕ್ಕತ್ತಿದರು. ಆದರ ಖೀರಿನೊಳಗ ನೊಣಾ ಬಿದ್ದಂಗ ಅಪಘಾನದ ಮಹಮದನೊಬ್ಬ ನಡವ ಬಂದು ಸೇರಿಕೊಂಡು ಬಿಟ್ಟ!… ಹೆಂಗರೇ ಮಾಡಿ ದಿಲ್ಲಿಯ ಪಟ್ಟಾ ಹೊಡದು ತೀರಬೇಕು ಅಂತ ಮನಸು ಮಾಡಿದ ಪೇಶವೇಗೋಳ ರಾಜ್ಯ ಪಾಣಿಪತ್ತಿನ ಕಡೇ ಪ್ರಯಾಣ ಹೊಂಟಿತ್ತು… ಇಂಥಾ ನಾನಾ ದೊಡ್ಡ ಸಂಗತಿಗೋಳು ನಡೀತಿರಬೇಕಾದರ ಕೃಷ್ಣಾದ ದಕ್ಷಿಣದ ದಂಡಿಯೊಳಗಿನ ಪುಟ್ಟ ಧರಮನಟ್ಟಿಯ ವಿದ್ಯಮಾನ ಯಾರ ಲಕ್ಷದಾಗ ಬರತದ! ಹಿಂತಾದ್ದರೊಳಗs ಕಾರಭಾರಿಗೋಳು ಪುಣೇಕ್ಕ ಚೌಥ ಹೇರಿಸಿಕೊಂಡು ಒಯ್ಯು ನಜರು ಒಪ್ಪಿಸಿ… ಧರಮನಟ್ಟಿಯ ದೇಸಗತಿನ್ನ ಸಿಂಧು ಮಾಡಿಕೊಂಡ ಬಂದ ಬಿಟ್ಟರು. ಎಂದೂ ಇಲ್ಲದ ಆದಾಯ ತನ್ನಿಂದ ತಾನs ಬಂದಬಿದ್ದಾಗ ಹೆಚ್ಚಿಂದೇನ ಬೇಕು? ದೇಸಗತಿಯನ್ನ ಸಿಂಧುಗೊಳಿಸುವ, ರಂಗೋ ಪಟವರ್ಧನನ್ನ ದೇಸಾಯಿಯಾಗಿ ನೇಮಕಾ ಮಾಡುವ ಸನದನ್ನ ಕೊಟ್ಟುಬಿಟ್ಟರು… ತ್ರಿಯಂಬಕಭಟ್ಟರು ಆ ಸನದು ತಂದು ದೇಸಾಯರ ಕೈಗೆ ಕೊಟ್ಟರು. ಇವರು ‘ಏನು…?’ ಅಂತ ಕೇಳಿದರು. ಭಟ್ಟರು ವಿಚಾರಾ ಎಲ್ಲಾ ಹೇಳಿದರು. ಭಟ್ಟರ ಮಾತು ಕೇಳಿದ ಮ್ಯಾಲ ದೇಸಾಯರು ಆ ಸನದನ್ನ ದಿಟ್ಟಿಸಿ ನೋಡಿದರು. ಆಮ್ಯಾಲ ಸಣ್ಣಾಗಿ ನಗಲಿಕ್ಕೆ ಸುರುಮಾಡಿದರು… ಸಂತೋಷದಿಂದ ನಗಲಿಕ್ಕತ್ತಾರೆ ಅಂತ ಕಾರಭಾರಿಗಳೂ ಅವರ ಜೋಡೀ ಸೇರಿ ಸ್ವಲ್ಪ ನಕ್ಕರು… ಆದರ ದೇಸಾಯರ ನಗೀ ಉದ್ದ ಆತು. ಅದು ಬರತs ಬರತs ವಿಕಟ ಆಕ್ಕೋತ ಹೊಂಟಂಗ ಭಟ್ಟರು ನಗೂದು ನಿಲ್ಲಿಸಿ ಗಾಬರಿಗೊಂಡು ದೇಸಾಯರನ ನೋಡಲಿಕ್ಕತ್ತಿದರು… ದೇಸಾಯರು ನಕ್ಕೋತ ನಕ್ಕೋತನs ಇವರಿಗೆ ಹೋಗಲಿಕ್ಕೆ ಕೈ ಮಾಡಿದರು. ಭಟ್ಟರು ಅನುಮಾನಿಸಿಕೋತ ಅಲ್ಲಿಂದ ಹೊಂಟರು… ಮುಂದ ಎಷ್ಟೊತ್ತಿನ ತನಕಾ ದೇಸಾಯರು ನಕ್ಕರೋ ಯಾರಿಗೆ ಗೊತ್ತು!

ಇದನ್ನು ಓದಿದ್ದೀರಾ?: ಯಶವಂತ ಚಿತ್ತಾಲ ಅವರ ಕತೆ | ಮುಖಾಮುಖಿ

ಪೇಶವೇ ಸರ್ಕಾರದವರು ದೇಸಗತಿಯ ಸನದು ಕೊಡುವಾಗ, ವ್ಯಾಳೇ ಹೊತ್ತು ಬಂತಂದರ ದಂಡಿಗೆ ಹೇಳಿಕಳಸತೀವೂ… ಹೇಳಿ ಕಳಿಸಿದಾಗ ದಂಡು ಕಳಸಬೇಕಂತ ತಾಕೀತು ಮಾಡಿ ಕಳಿಸಿದ್ದರು. ಅದಕ್ಕs ಧರಮನಟ್ಟಿಯ ದಂಡಿನ ಪ್ರಮಾಣ ಹೆಚ್ಚಮಾಡಿದರು… ಒಂದ ಮಣ್ಣಿನ ಕಿಲ್ಲಾ ಕಟ್ಟಿಸಿದರು. ಆರು ದೊಡ್ಡ ದೊಡ್ಡ ಬಾಗಿಲುಗಳೂ… ಕಳ್ಳಬಾಗಲಗೋಳೂs. ಹೊಳೀಕಡೇದ್ದು ಮುಖ್ಯ ಬಾಗಲು. ಕಿಲ್ಲಾದ ಮುಖ್ಯ ಬಾಗಲದಾಗಿಂದ ಒಳಗ ಹೋಗತಿದ್ದಂಗs ವಿಠ್ಠಲನ ದೇವಸ್ಥಾನ. ಕಲ್ಲಿನ ಕಟ್ಟಡ. ಗ್ವಾಡೀ ಮತ್ತ ಶಿಖರದ ಮ್ಯಾಲೆಲ್ಲಾ ಸುಳವೂ ಚಿತ್ತಾರಗೋಳು. ಗರ್ಭಗುಡಿಯೊಳಗಿನ ವಿಠೋಬ- ರುಕುಮಾಯಿಯ ಮೂರ್ತಿ ಅಂತೂ ಆಗದೀ ಎದ್ದ ಬರೂಹಂಗ ಕಾಣಸತದ… ಗುಡೀ ದಾಟಿದ ಮ್ಯಾಲ ದೇಸಾಯರ ವಿಶಾಲವಾದ ವಾಡೇ. ಗಚ್ಚಿನ ಕಟ್ಟಡ. ಸಭಾಭವನ… ಅಂತಃಪುರ… ಸ್ನಾನಗೃಹ… ಹಿಂಗ ಆ ವಾಡೇ ಅಂಬೂದು ಪೇಶವೇಗೋಳ ಅರಮನಿ ಇದ್ದಂಗ ಇತ್ತು. ಈ ಕಿಲ್ಲಾ, ಗುಡೀ, ವಾಡೆಗೊಳು ಅಲ್ಲದs ಕಾರಭಾರಿಗಳಾದ ತ್ರಿಯಂಬಕ ಭಟ್ಟರಿಗೆ, ದಂಡನಾಯಕ ಕಲ್ಲೋಜಿಗೆ ಮತ್ತ ಹಿಂಗ ಬ್ಯಾರೇ ಬ್ಯಾರೇ ಅಧಿಕಾರಿಗೋಳಿಗೆ ಅವರವರ ಅಧಿಕಾರದ ಠೀವಿಗೆ ತಕ್ಕಂಥಾ ಪ್ರಶಸ್ತ ಮನಿಗೋಳನ ಕಟ್ಟಿಸಿದರು. ಇವೆಲ್ಲಾ ಹೆಂಗ ಆಗತಾವ…? ಪೇಶವೇಗೋಳು ತಮ್ಮ ದೇಸಾಯಿಗೆ ಸನದು ಕೊಟ್ಟಿದ್ದರs ಹೊರ್‍ತು ರೊಕ್ಕದ ಗಿಡಾ ಏನೂ ಕೊಟ್ಟಿದ್ದಿಲ್ಲ. ಹಿಂಗಾಗಿ ಮಂದೀ ಮ್ಯಾಲ ಹೆಚ್ಚು ಭಾರ ಬಿದ್ದs ಬೀಳಬೇಕು. ರಾಜಾ ಅಂದರ ಪ್ರತ್ಯಕ್ಷ ದೇವತಾ ಅಂತ ನಮ್ಮ ಸ್ಮೃತಿ ಶೃತಿಗೋಳೇನೋ ಸ್ಪಷ್ಟವಾಗಿ ಹೇಳ್ದಾವ. ಆದರ ಮಂದಿಗೆ ಅವದರ ಬಗ್ಗೆ ನಿಷ್ಠಾ ಎಲ್ಲಿ ಅದ?… ನಾಕ ಪೈ ಹೆಚ್ಚು ಕಂದಾಯ ಕೊಡಬೇಕಾತಂತ ಬೊಬ್ಬಾಟ ಸುರುವಾತು… ಕಥೀ ಹೇಳೂs ಅಂತ ಕಾಡುವ ಮಮ್ಮಕ್ಕಳಗೋಳಿಗೆ ಕಟ್ಟಿ ಮ್ಯಾಲ ಕುಂತ ಅಜ್ಜಗೋಳು ರಾಕ್ಷಸನಕಥೀ ಕಟ್ಟಿ ಹೇಳಲಿಕ್ಕತ್ತಿದ್ದರು… ‘ಹೀಂಗ ಒಂದಾನೊಂದು ಕಾಲದಾಗ ಧರಮನಟ್ಟಿ ಧರಮನಟ್ಟಿ ಅಂತ ಒಂದ ರಾಜ್ಯ ಇತ್ತಂತೆ. ಆ ರಾಜ್ಯಾನ ಒಬ್ಬಾ ರಾಗಸಸ ಆಳಾವನಂತ. ಆ ರಾಗಸಸನ ಕೈಯಾಗ ಈಸುದ್ದ ಕತ್ತಿ ಇತ್ತಂತ. ಆ ಕತ್ತಿ ತುದಿಗೆ ರಗತ ಬಸಿಯುವಂತಾ ರುಂಡ ಇರೂದು… ಆ ರಾಗಸಸಗ ಒಬ್ಬ ಮಂತ್ರಿ ಇದ್ದನಂತ. ಅಂವಗ ಒಂದ ಹಂಡೇದಂತಾ ತೆಲೀ ಮತ್ತ ಈಸುದ್ದ ನಾಲಿಗೀ… ಅಂವ ಮಂದಿ ಹಾದಾಡೂ ಹಾದೀಮ್ಮಾಗ ನಾಲಿಗೀ ಹಾಸಿಗೊಂಡ ಕುಂತು… ಮಂದಿ ಅದು ಹಾದಿ ಅಂತ ತಿಳದು ಅಡ್ಯಾಡೋವಾಗ ಕಪ್ಪಿ ಹಂಗ ಗಸಲ್ಲನs ನಾಲಿಗೀ ಒಳಗ ಎಳಕೊಂಡು ಮಂದಿನ್ನ ನುಂಗಾವಂತ…’ ಹಿಂಗ ಏನೇನೋ… ಅದs… ಕಥೀಗೆ ತೆಲೀ ಇಲ್ಲಾ ಬಾಲ ಇಲ್ಲಾ ಅಂತಾರಲಾs… ಹಂಗ…

ಹಿಂತಾದ್ದರಾಗ ದೇಸಾಯಿಗೆ ದಂಡನಾಯಕನ ಸಂಪರ್ಕ ಹೆಚ್ಚಾತು. ಮನಸು ಶೃಂಗಾರಕ್ಕ ಜೋತಬಿತ್ತು. ಕಾರಭಾರಿ ತ್ರಿಯಂಬಕ ಭಟ್ಟಗ ಅನಿಸಿತು… ಆತು… ದೇಸಾಯಿ ಇನ್ನ ನನ್ನ ಕೈಮೀರಿದಾs ಅಂತ. ಚಿಂತಿ ಹತ್ತಿ ತಲೀ ಕೆಟ್ಟಿತು. ಮನಸಿನ್ಯಾಗ ಏನೇನೋ ವಿಚಾರ ಪ್ರತಿವಿಚಾರಗೋಳು ನಡೆದು ಅವುಗಳ ತೂಕಾ ಹಾಕೂದಾತು… ಎಡಗಡೇದ ಪರಡಿ ಹಗರ ಆತಂತ ಬಲಗಡೆ ಪರಡ್ಯಾಗಿಂದ ತಿಂದಾ… ಬಲಗಡೇ ಪರಡಿ ಹಗರ ಆತಂತ ಎಡಗಡೇ ಪರಡ್ಯಾಗಿಂದ ತಿಂದಾ…! ಕಡಿಕ ಮನಸ ಗಟ್ಟಿಮಾಡಿ ದೇಸಾಯರ ಹಂತೇಕ ಬಂದ. ದೇಸಾಯರು ದಂಡನಾಯಕನ ಜೋಡಿ ರಸಿಕಗೋಷ್ಠಿ ಮಾಡಿಕೊಂತ ಕುಂತಿದ್ದರು. ಭಟ್ಟ ಬಂದದ್ದು ನೋಡಿ, ಶಿವಪೂಜಾದಾಗ ಕಡ್ಡಿ ಬಿಟ್ಟಂಗ ಆತು ಅಂತ ಮನಸಿನ್ಯಾಗ ಅನಕೋತs ದಂಡನಾಯಕ ಎದ್ದು ದೇಸಾಯರಿಗೆ ಮುಜರೀ ಮಾಡಿ, ಮಕಾ ಸಿಂಡರಿಸಿಕೊಂಡು ಹೋದ. ದೇಸಾಯರ ಮನಸಿನಾಗೂ ಹುಳ್ಳುಳ್ಳಗೆ ಆದಂಗಾತು. ಆದರೂ ಅವರು ಭಿಡೇಕ್ಕ ಬಿದ್ದು ನಕ್ಕಂಗ ಮಾಡಿದರು. ಕೂಡಲಿಕ್ಕೆ ಸನ್ನೀ ಮಾಡಿದರು. ಭಟ್ಟರು ಕೂತರು. ಕೂತು… ನಿಧಾನಕೇ ಮಾತುಗಳ ಬಲೀ ಹರವಲಿಕ್ಕತ್ತಿದರು. ದೇಸಗತಿ ಹೆಂಗ ಹುಟ್ಟಿತೂ ಅಂತ ಹೇಳಿದರು. ದೇಸಗತಿ ಹೆಂಗ ಬೆಳೀತು… ಹೆಂಗ ಸಮೃದ್ಧ ಆತೂs ಅಂತ ಹೇಳಿದರು. ಇದಕ್ಕೆಲ್ಲಾ ಕಾರಣ ಏನ ಹೇಳ್ರೀ ಅಂತ ಕೇಳಿದರು. ದೇಸಾಯರಿಗೆ ಈ ಭಡಜೀ ತಾನs ಎಲ್ಲಾದಕ್ಕೂ ಕಾರಣ ಅಂತನಲಿಕ್ಕೆ ಹತ್ಯಾನ ಅನಿಸಿತು. ಅವರಿಗೆ- ಹಂಗರs ನನ್ನ ಕತ್ತೀದೇನೂ ಮಹತ್ವ ಇಲ್ಲ ಏನು… ಅಂತ ಸಿಟ್ಟು ಬಂತು. ಭಟ್ಟರು ಬ್ಯಾರೇ ಮಾತs ಹೇಳಿದರು… ‘ಇದ ಎಲ್ಲಾ ಪಂಢರಾಪುರದ ಪಾಂಡುರಂಗನ ದಯಾs… ಅದಿಲ್ಲದಿರಕs ಇಲ್ಲಿ ದೇಸಗತಿ ಇರತಿರಲಿಲ್ಲಾ ಮತ್ತ ನೀವು ದೇಸಾಯರನೂ ಆಗತಿದ್ದಿಲ್ಲಾs…’ ದೇಸಾಯರು ಭಟ್ಟರನ ದಿಟ್ಟಿಸಿ ನೋಡಿದರು. ಆದರ ಭಟ್ಟರು ಅದನ್ನ ಗಮನಿಸಲೇ ಇಲ್ಲ. ಅವರು ಜಾಡರ ಹುಳದಂಗ ತಮ್ಮ ಬಲೀ ಹೆಣೀಲಿಕತ್ತಿದ್ದರು… ‘ಎಲ್ಲಾ ಕೊಟ್ಟಾನ ಭಗವಂತ. ಆದರ ದೇಸಗತಿಯ ಪ್ರಜಾಮಂದಿಗೆ ಮಾತೃಭಾಗ್ಯ ಇಲ್ಲದಂಗ ಆಗೇದ…’ ದೇಸಾಯರಿಗೆ, ಏನಂತಾನ ಇವ ಅಂತನಿಸಿತು. ನಾ ಪ್ರಜಾಕಂಟಕ ಆಗೀನಂತ ಇವನ ಅಭಿಪ್ರಾಯೋ ಏನು… ಅಂತ ಮನಸಿನಾಗ ಸಂಶಯ ಮೂಡಿತು. ಇತ್ತ ಭಟ್ಟರು ನೋಡಿದರ ತಮ್ಮ ಮಾತಿನ ಗಾಣಾ ಮುಂದುವರಿಸಿದ್ದರು… ‘ಉಪ್ಪಿಗಿಂತಾ ರುಚಿಯಿಲ್ಲಾ ತಾಯಿಗಿಂತಾ ಬಂಧೂಯಿಲ್ಲಾ ಅಂತಾರೆ. ನಾಡಿಗೆ ತಾಯಿ ಅನ್ನೂವಾಕಿ ಇಲದಿರಕ, ಮಂದಿಗೆ, ರಾಜಾ ಏನ ಕೆಲಸಾ ಮಾಡಿದರೂ ಕೆಡಕನಾಗೇ ಕಾಣಸ್ತಾನ. ವಾಡೇದಾಗ ರಾಣೀ ಇಲ್ಲದಿರಕ ಮಂದಿ ತಮ್ಮ ಹೆಂಡರನು ಹೆಣಮಕ್ಕಳನ ಮನಿಂದ ಹೊರಗ ಕಳಸಲಿಕ್ಕೆ ಅಂಜತಾರ…’ ದೇಸಾಯರು ಈಗ ಪೂರಾ ಮೆತ್ತಗಾದರು… ‘ನಾ ಏನ ಮಾಡಬೇಕ ಹೇಳ್ರಿ’ ಅಂದರು. ಕಾರಭಾರಿ ತ್ರಿಯಂಬಕಭಟ್ಟರು ‘ನನ್ನ ಕೆಲಸಾ ಬರೇ ದೇಸಾಯರ ಬುದ್ಧಿಯ ವ್ಯವಹಾರಕ್ಕೆ ಸಂಬಂಧಪಟ್ಟದ್ದಂತ ಅನಕೊಂಡು ಸುಮ್ಮನs ಕೂತಿದ್ದೆ. ಈ ಬುದ್ಧಿ ಅಂಬೂದು ಶರೀರದಾಗs ಇರತದ ಅಂತ ನನ್ನ ತಲಿಗೆ ಹೊಳೀಲೇ ಇಲ್ಲ ನೋಡ್ರಿ…’ ಅಂತಂದು ಹಾ… ಹಾs ಅಂತ ನಕ್ಕರು. ಆಮ್ಯಾಲ… ‘ಇರಲಿ ಈಗರs ಏನಾತು. ನೀವು ನಿಮ್ಮ ರಾಣೀ ಸಾಹೇಬರನ ಕರಿಸಿಬಿಡ್ರಿ…’ ಅಂತ ಹೇಳಿದಾಗ ದೇಸಾಯರು ಹಾಂs… ಅಂತ ಚೀತ್ಕಾರ ಮಾಡಿದರು. ಭಟ್ಟರು ‘ಯಾಕ?’ ‘ಏನಾತು’ ಅಂತಿರಬೇಕಾದರೆ ಅವರು ‘ಇಲ್ಲ. ನಂದ ಮದಿವಿ ಆಗಿಲ್ಲ. ನನಗ ಯಾವ ರಾಣೀನೂ ಇಲ್ಲ’ ಅಂತ ಗಾಬರಿ ಆದವರಂಗೆ ಭಡಾ ಭಡಾ ಮಾತಾಡಿದರು. ‘ಆಗಿರದಿದ್ದರ ಇಲ್ಲಾ… ಅದಕ್ಕಾಕ ಗಾಬರ್‍ಯಾಗೂದು. ಈಗ ಮದಿವೀ ಆಗಿ ಬಿಡ್ರಿ’- ಅಂತ ಭಟ್ಟರು ಹೇಳಿದಾಗ ದೇಸಾಯರು ಯಾವದೋ ಸಂಕಟದೊಳಗ ಸಿಕ್ಕಂಗ ತಳಮಳದಿಂದ ಒದ್ದಾಡಲಿಕ್ಕತ್ತಿದರು. ಅವರು ಅದs ತಳಮಳದೊಳಗs ‘ಕಾರಭಾರಿಗೋಳs…. ನೀವs ಅದೇನು ವ್ಯವಸ್ಥಾನೋ ಮಾಡಿಬಿಡ್ರಿ’ ಅಂದುಬಿಟ್ಟರು. ಭಟ್ಟರಿಗೆ ದೇಸಾಯರ ಜಾತಿಯ ಬಗ್ಗೆ ಒಂದು ಸಂಶಯದ ಎಳೀ ಇದ್ದs ಇತ್ತು. ಅದನ್ನ ಅವರು ತಮ್ಮ ಮನಸ್ಸಿನ್ಯಾಗಿಂದ ತಗದ ಹಾಕಲಿಕ್ಕೆ ಪ್ರಯತ್ನ ಮಾಡಿಕೋತ… ಗಟ್ಟಿ ಧೈರ್ಯಾ ಮಾಡಿ… ಸುತ್ತೂ ಬಳಸೀ ಮಾತಾಡಿ… ಅಂತೂ ಕಡಿಕ ಒಂದು ವ್ಯವಸ್ಥಾ ಅನ್ನೂದು ನಿರ್ಧಾರ ಆತು… ಕಾರಭಾರಿಗಳ ಮಗಳು- ಲೀಲಾs- ಇದೇ ಈಗ ಅರಳುತ್ತಿರುವ… ಷೋಡಶಿ… ದೇಸಾಯರ ವಾಡೇಕ್ಕ ರಾಣೀ ಸಾಹೇಬ ಆಗಿ ಬರುವದಂತ ನಿರ್ಧಾರವಾತು. ದೇಸಾಯರು ‘ಗೋಜು ಗೌಜಿನ ಮದಿವಿ ಬ್ಯಾಡ…’ ಅಂದರು. ಒಳಗೊಳಗೇ ಜಾತಿಯ ಮುಳ್ಳು ಚುಚ್ಚತಿದ್ದ ಭಟ್ಟರಿಗೂ ಇದs ಬೇಕಾಗಿತ್ತು… ಒಂದು ಶುಭದಿನ…. ಶುಭ ನಕ್ಷತ್ರದೊಳಗ ಲೀಲಾದೇವಿ ಮೇಣೆಯೊಳಗೆ ಕುಂತು ಬಂದು ದೇಸಾಯರ ಗಚ್ಚಿನವಾಡೇ ಪ್ರವೇಶ ಮಾಡಿದಳು. ಕಾರಭಾರಿಗೋಳು ಈಗ ರಾಜಮಾತುಲರೂ ಆದರು… ಈಗ ವಾಡೇಕ್ಕೊಂದು ಖದರು ಬಂತು. ವಿಠ್ಠಲನ ಗುಡಿಯೊಳಗ ನಿತ್ಯ ವಿಶೇಷ ಉತ್ಸವಗೋಳು ನಡಿಯಲಿಕ್ಕೆ ಸುರುವಾದವು… ಗುಡಿಯ ಅರ್ಚಕರು ನಿತ್ಯವಾಡೇಕ್ಕ ಬಂದು ತೀರ್ಥಾ ಪ್ರಸಾದಾ ಕೊಟ್ಟು ಹೋಗತೊಡಗಿದರು…

*

…ಹೂಂ… ಮುಂದಿಂದೆಲ್ಲಾ ವೈಭವದ ಕಥೀನೂ ಹೌದು ಅವನತಿಯ ಕಥೀನೂ ಹೌದು… ಅಪ್ಪನ ಕಾಲಕ್ಕೂ ಖದರ ಇತ್ತು. ಆದರ ಕೊನಿಗಾಲಕ್ಕs ಇಳಿಗಾಲ ಸುರುವಾತು… ವಿಠಲನ ಪ್ರೇರಣಾದಿಂದ ಹುಟ್ಟಿದ ದೇಸಗತಿನ್ನ ಅವನs ಕಾಪಾಡದಿದ್ದರ ಇನ್ಯಾರು ಕಾಪಾಡಲಿಕ್ಕೆ ಸಾಧ್ಯ ಆದೀತು?… ಕೆಂಪಮೋತೀ ಮಂದಿs ಎಲ್ಲಾ ರಾಜ್ಯಗೋಳನ ದೇಸಗತಿಗೋಳನ ತಿಂದ ಹಾಕಿದರು. ಪೇಶವೇಗೋಳನ ಭೋಸಲೇಗೋಳನ ಹಲ್ಲಿಗೆ ಹತ್ತದಂಗ ಗುಳುಂ ಅಂತ ನುಂಗಿದವರಿಗೆ ಧರಮನಟ್ಟಿಯ ದೇಸಗತಿ ಯಾವ ಮೂಲಿ…? ಹೋಗಲಿ. ಅವರು ಹೋದಮ್ಮಾಲರೇ ನಮ್ಮವರು ಮಾಡಿದ್ದೇನು? ಮದಲು ಮೂಲದಾಗ ಹೆಂಗಿತ್ತ ಹಂಗ ನೆಲಿಗೊಳಿಸಬೇಕೋ ಬ್ಯಾಡೋ…? ಎಬಡಗೋಳ ಅಂದರ ಥೇಟ ಎಬಡಗೋಳು. ಗಚ್ಚಿನ ಗಾಣಕ್ಕೆ ಹೂಡಿದ ಎತಗೋಳಹಂಗ, ಅವರು ಹಾಕಿದ ಗೆರೀ ಒಳಗs ಸುತ್ತ ಹೊಡೀಲಿಕತ್ಕಾರ… ಇವರೂ ದೇಸಗತಿ ಮುಳಿಗಿಸೇಬಿಟ್ಟರು… ಹೂಂ… ಪ್ರಜಾತಂತ್ರ ಅಂತ ಪ್ರಜಾತಂತ್ರ!… ಏನು ಹಂಗಂದರ? ದೇಶದಾಗಿರೂ ಮಂದೀದೆಲ್ಲಾ ರಾಜ್ಯ ಅಂತ!… ತೆಲೀ ಇಲ್ಲದ ಮಾತು… ಈಗ ಬೇಕಾದರ ನನ್ನ ಜೋಡೀ ಧರಮನಟ್ಟಿಗೆ ನಡೀರಿ. ಅಲ್ಲಿ ಚಾವಡ್ಯಾಗ ಮಂದಿನ್ನ ಕೂಡಸತನು… ಅಲ್ಲಿ ಕೂಡಿದ ಮಂದಿಗೆಲ್ಲಾ ನೀವs ತಿಳಿಸಿ ಹೇಳರಿ… ನಮ್ಮದು ಪ್ರಜಾರಾಜ್ಯಾ-ಪ್ರಜಾಮಂದೆನss ಆಳಾವರೂ- ಆಳೂದರಾಗ ಎಲ್ಲಾದರೂ ಪಾಲ ಐತಿ. ಹೊಲ್ಯಾರ ರಾಮಂದೂ ಅದರಾಗ ಪಾಲ ಐತೀ ಅಂತ ತಿಳಿಸಿ ಹೇಳರಿ… ಮಂದಿ ಇದನ ಕೇಳಿ ಖೊಕಾಟೀ ಹೊಡದ ನಗತಾರು… ಯಜಮಾನರಿಗೆ ಅರುಳು ಮರುಳೂ… ಯಾವನ್ನೋ ತೆಲೀ ಮಾಸದವನ್ನ ಕರಕೊಂಡ ಬಂದು ತೆಲೀ ಬಾಲಾ ಇಲ್ಲದ್ದ ಏನೋ ಹೇಳಸಾಕತ್ತಾರೂ… ಅಂತಾರ… ರಾಮಗನೂ ಆಳೂದರಾಗ ಪಾಲ ಐತೆಂತ… ತಗೋಪಾs! ಈ ಆಳೂದಂದರ ಸತ್ತ ದನಾ ಏನ… ರಾಮಗೂ ಪಾಲ ಐತಿ ಅಂತ…! ಹಿಂಗ ಮಾತಾಡಿ ಎದ್ದ ಹೋಗತಾರ…

ಇದನ್ನು ಓದಿದ್ದೀರಾ?: ಚದುರಂಗ ಅವರ ಕತೆ | ನಾಲ್ಕು ಮೊಳ ಭೂಮಿ

ಹಿಂಗೆಲ್ಲಾ ಮಾತಾಡತಾರಂತ ಧರಮನಟ್ಟಿ ಮಂದಿಗೆ ಇನ್ನೂ ದೇಸಗತಿಯ ಬಗ್ಗೆ ಅಭಿಮಾನನನ್ನೂದು ಉಳದದ ಅಂತ ನೀವು ತಿಳಕೋಬ್ಯಾಡರಿ. ಊಂ- ಹೂಂ. ಅದೇನೂ ಇಲ್ಲ… ಮಕ್ಕಳು! ಏನೂ ಕಳಕೋಬಾರದು… ಬರೂದು ಬರ್‍ಲಿ ಅಂತಾರವರು. ಬರೂಪೂರತೇ ಪ್ರಜಾತಂತ್ರ ಬೇಕು. ಕಳಕೋ ಮಾತು ಬಂದರ ಅದನ್ನ ಬೈತಾರ… ದೇಸಗತಿ ಹೋತೂ- ಇನ್ನ ಪ್ರಜಾತಂತ್ರ ಬಂತೂ ಅಂತ ಅಂದ ಕೂಡಲೇ ಧರಮನಟ್ಟಿ ಕಿಲ್ಲಾದ ಕಲ್ಲಗೋಳನ ವಾಡೇದ ಕಲ್ಲಗೋಳನs ಎಲ್ಲಾ ಕಿತಿಗೊಂಡು ಹೋಗಿ ತಮ್ಮ ತಮ್ಮ ಮನಿ ಹಿತ್ತಲ ಗ್ವಾಡಿಗೋಳನ ಏರಿಸಿಕೊಂಡರು. ಇದು ಬಿಡ್ರಿ… ಈ ಇಲೆಕ್ಷ ನ್‌ಗೋಳ ಬಳಗ ಆರಿಸಿ ಬರೂ ಮಂದಿಗೆ ತಾವು ರಾಮನ ಪ್ರತಿನಿಧಿ ಅನ್ನೂ ನೆನಪು ಬ್ಯಾಡ… ಕನಿಷ್ಠ ಆ ಕಲ್ಪನಾನರೇ ಎಲ್ಲಿ ಇರತದ…? ಆ ಆರಿಸಿ ಬಂದವರು ತಮ್ಮ ತಮ್ಮ ಪೂರ್‍ತೆ ತಾವು ರಾಜಾ ಆಗಿ ಕೂಡತಾರ… ಹೂಂ… ಅವರಿವರನs ಮಂದಿನ್ನs ಅಂದು ಏನು ಪ್ರಯೋಜನ!… ಇಂವ… ಈ ನನ್ನ ಮಮ್ಮಗನ್ನs ನೋಡರಿ. ತಾನು ದೇಸಾಯರ ವಂಶದಾಗ ಹುಟೀನ ಅನ್ನೂ ಖಬರ ಸೈತ ಇಲ್ಲ ಅಂವಗ. ರಕ್ತಾ ಎಲ್ಲಾ ನೀರ ಮಾಡಿಕೊಂಡ ಕೂತಾನ… ನಮ್ಮ ದೇಸಗತಿನ್ನ ನಷ್ಟ ಮಾಡಿದ ಕೆಂಪಮೋತಿಯವರ ಹೆಣ್ಣನ್ನು ಮದವೀ ಆಗಿ ಕುಂತಾನ… ಧರಮನಟ್ಟಿ ಒಳಗಿಂದೂ… ಅದೇನು ಕಲ್ಲಗುಡ್ಡಾs… ಅದನ್ನ ಮಾರತನೂ ಅಂತಾನ… ಇದೆಲ್ಲಾ ಹೆಂಗರ ಆಗವಲ್ಲದ್ಯಾಕ ಅಂದರ… ದೇಸಗತಿಯ ಕುಡಿs- ನಮ್ಮ ಅಮೃತನ್ನ… ಆ ಎಳೀಕಳಿಗಿನ್ನ… ಹಾಸ್ಟೆಲ್ಲಿಗೆ ಸೇರಿಸಿ ವಿಲಾಯತಿಗೆ ಹೋಗತನ ಅಂತಾನ… ನಮ್ಮನ್ನ ಮುರದವರಿಗೇ ಡೊಗ್ಗತನಂದರ ಏನ ಮಾಡೂದದ…? ಹೂಂ. ದೇವರ ಪುಣ್ಯಾs… ಈ ಅಮೃತನ್ನೂ ವಿಲಾಯತಿಗೆ ಕರಕೊಂಡ ಹೋಗತನ ಅಂತ ಅಂದಿಲ್ಲ. ನನ್ನ ಆಸೇ ಎಲ್ಲಾ ನನ್ನ ಅಮೃತನ ಮ್ಯಾಲ…

…ಹಾಂ… ಈಗ ವ್ಯಾಳ್ಯಾ ಎಷ್ಟ ಆಗೇದೋ…? ಖೋಲ್ಕಾಗ ಬಿದ್ದ ಬೆಳಕು ನೋಡಿದರ ಮಧ್ಯಾಹ್ನ ಆಗಿರಬೇಕು… ಅಂಧಂಗ ಕೂಸು ಅಮೃತ- ಬೆಳಿಗ್ಗೆ ಏಳತಿದ್ದಂಗs ಚಿಟ್… ಚಿಟ್… ಅಂತ ಚೀರಿ ಚೀರಿ ಅಳಲಿಕತ್ತಿತ್ತು. ಏನ ಆಗಿತ್ತೋ ಏನೋ? ತಾಯೀದಂತೂ ಆರೈಕಿ ಸಿಗಂಗಿಲ್ಲ. ಆಯಾ ಬಂದ ಮ್ಯಾಲs ಎಲ್ಲಾ… ಈಗೇನ ಕೂಸು ಅಳಲಿಕತ್ತಿಲ್ಲ… ಅವನ ಆಯಾ ಬಂದಿರಬೇಕು. ಯಾಕೋ ನನ್ನ ಆಯಾನs ಇನ್ನೂ ಬಂದಿಲ್ಲಲಾs?… ಬಂದು ನಾ ಇನ್ನೂ ಮಲಕೊಂಡೀನಂತ ಖೋಲ್ಯಾಗ ಬಂದಿಲ್ಲೋ ಯಾರಿಗೊತ್ತು… ‘ಅನಸೂಯಾ… ಅನಸೂಯಾss’ ಊಹೂಂ… ಬಂದಂಗ ಕಾಣಸೂದುಲ್ಲ… ಹೊಟ್ಟಿ ಜಡಾ ಆದಂಗ ಆಗೇದ… ನನ್ನ ಒಂದಿಷ್ಟ ಸಂಡಾಸಕ್ಕ ಕರಕೊಂಡ ಹೋಗಿ ಬಂದರ ಸಾಕು… ಅಮೃತನ ಆಯಾನ್ನರೇ ಕರೀಬೇಕು… ‘ಬಾಳವ್ವಾ… ಬಾಳವ್ವಾss’…

ಇದನ್ನು ಓದಿದ್ದೀರಾ?: ಕೊಡಗಿನ ಗೌರಮ್ಮ ಅವರ ಕತೆ | ವಾಣಿಯ ಸಮಸ್ಯೆ

…ಏನಿದೂ? ಬೆಳಿಗ್ಗೆ ಎಚ್ಚರಾದಾಗಿಂದ ಯಾರದೂ ಸುದ್ದಿ ಸುಳವನs ಇಲ್ಲ… ನನಗ ಚಹಾ ಸೈತ ತಂದಿಕೊಟ್ಟಿಲ್ಲ… ಮನ್ಯಾಗ ಯಾರರೇ ಇದ್ದಾರೋ ಇಲ್ಲೋ?… ಅನಸೂಯಾ… ಅನಸೂಯಾss ಬಾಳವ್ವಾs… ಅಂತ ಕಲ್ಪನಾಥ ದೇಸಾಯರು ಒದರಿ ಒದರಿ ಕರದದ್ದಕ್ಕ ಯಾವ ಉತ್ತರನೂ ಬರಲಿಲ್ಲ… ಅವರಿಗೆ, ಈ ಬೋಸಡೀಮಗಾ ಹೇಳದ ಕೇಳದs ವಿಲಾಯತಿಗೆ ಜಾಗಾ ಬಿಟ್ಟನೇನೂ… ಅಂತ ಸಂಶಯ ಬಂತು… ಮೂರನಾಕ ದಿನದಿಂದ ವೀಸಾ ಪಾಸಾ ಅಂತ ಮನಿಗೆ ಹತ್ತದಂಗ… ನಾಯಿ ಅಡ್ಡಾಡಿದಂಗ ಅಡ್ಯಾಡಲಿಕ್ಕೆ ಹತ್ತಿದ್ದನಂತ… ಅನಸೂಯಾ ಅಂತಿದ್ದಳು… ಹೋಗೇ ಬಿಟ್ಟಾರೇನ ಮತ್ತ…!? ದೇಸಾಯರಿಗೆ ಗಾಭರಾತು. ಅವರು ‘ಮಾಣಿಕ್… ಮಾಣೀಕ…’ ಅಂತ ಕೂಗಲಿಕ್ಕೆ ಹತ್ತಿದರು. ಯಾರೂ ಓ ಅನಲಿಲ್ಲ… ಈ ಅಮೃತನ ದನೀನೂ ಕೇಳಸವಲ್ಲದು. ಬೆಳಿಗ್ಗೆ ಅತ್ತದ್ದು… ಆವಾಗಿಂದ ಅದು ಅತ್ತದ್ದಾಗಲೀ ನಕ್ಕದ್ದಾಗಲೀ ದನೀನ ಇಲ್ಲ. ಆ ಕೂಸಿನ್ನೂ ಕರಕೊಂಡ ಹೋಗ್ಯಾರೇನ ಮತ್ತs… ಅಂತ ದೇಸಾಯರಿಗೆ ಸಂಶಯ ಬಂದು ಅವರು ಹೌಹಾರಿದರು… ನನ್ನ ದೇಸಗತಿಯ ಕುಡೀ ಅದು. ಅದನ್ನೂ ಪರಂಗಿ ನೆಲಕ್ಕ ಕದ್ದ ಒಯ್ದಾರೇನು…? ಅಮೃತಾs… ಅಂಬಣ್ಣಾs… ನೀ ಹೋಗಬ್ಯಾಡೋ ಕಂದಾ… ದೇಸಗತಿ ಎಲ್ಲಾ ನಿನ್ನ ಮ್ಯಾಲs ನಿಂತದೋ ಬಾಳಾs… ಅಂತ ಕಲ್ಪನಾಥರು ಭಾವವಶರಾಗಿ ಬಡಬಡಿಸಿಕೋತs ಧಡ್ ಅಂತ ಹಾಸಿಗೀ ಮ್ಯಾಲಿಂದ ಎದ್ದರು.

ಇದನ್ನು ಓದಿದ್ದೀರಾ?: ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕತೆ | ಕಮ್ಮಾರ ವೀರಭದ್ರಾಚಾರಿ ಜೋಯಿಸನಾದುದು

ಅವರಿಗೆ ಎಲ್ಲಿಂದ ಶಕ್ತಿ ಬಂದಿತ್ತೋ ಯಾರು ಬಲ್ಲರು… ಎದ್ದು ಸಂಡಾಸಕ್ಕ ಹೋಗಲಾರದವರು ಈಗ ಕೋಲು ಹಿಡಕೊಂಡು ಜೋಲಿ ಹೊಡಕೋತ ತಮ್ಮ ಖೋಲಿಂದ ಹಾಲಿಗೆ ಬಂದರು. ಮಾಣಿಕನ ಖೋಲಿಯ ಬಾಗಲು ತಗದಿತ್ತು. ಮಾಣೀಕ… ಮಾಣೀಕ… ಅಂತ ಕರೆದರು. ಯಾರರೇ ಇದ್ದರ ಹೌದಲ್ಲೋ! ಅಲ್ಲಿ ಒಳಗ ಹೊಕ್ಕು ನೋಡಿದರ ಅದು ಅಪೂಟs ಖಾಲೀ ಆಗಿತ್ತು. ಕಪಾಟಿನ ಬಾಗಲ ಎಲ್ಲಾ ಹಾರಹೊಡದು… ಖಾಲೀ ಆಗಿ ಕುಂತಿದ್ದೂ… ಅಲ್ಲಿಂದ ಸರಸರಾ ಮರಿಮಗನ ಖೋಲಿಗೆ ಬಂದರು. ಬಾಗಲಾ ದಾಟಿ ಒಳಗೆ ಹೋಗತಿದ್ದಂಗs ಬಲಕ್ಕ ತೊಟ್ಟಿಲ ಇತ್ತು… ತೊಟ್ಟಿಲದೊಳಗ ಬಗ್ಗಿ ನೋಡಿದರು. ಕೂಸು ಇರಲಿಲ್ಲ…! ಮುಂದನಡದು ಪಲಂಗದ ಹತ್ತಿರ ಬಂದರು… ಅಲ್ಲಿ ಆ ಹುಡಗ ಹಾಸಿಗೀ ಮ್ಯಾಲ ಗಡದ್ದಾಗಿ ಮಲಗೇದ. ಕಲ್ಪನಾಥ ರಾಯರಿಗೆ ಭಾಳ ಸಂತೋಷ ಆತು… ಆ ಸೂಳೀಮಗಾ ಹೋದರ ಹಾಳಾಗಿ ಹೋಗವಲ್ಲನ್ಯಾಕ. ದೇಸಗತಿಯ ಈ ಮುಗಳು ಒಂದನ್ನ ಬಿಟ್ಟ ಹೋಗ್ಯಾನಲಾs… ಅಷ್ಟು ಸಾಕು… ಧರಮನಟ್ಟಿ ಗುಡ್ಡದ ಜೋಡೀ ದೇಸಗತಿನ್ನ ಸೂರ್ಯಾ ಚಂದ್ರಾಮ ಇರೂತನಕಾ ನಿಲ್ಲಸತಾನ ಈ ನನ್ನ ಮರಿಮಗಾ!… ಕಲ್ಪನಾಥ ದೇಸಾಯರು ಹಿಂಗ ಧೇನಿಸಿಕೋತs ‘ಅಮೃತಾ… ನನ ಕಂದಾ… ಅಂಬಣ್ಣಾ…’ ಅಂತ ಕರಕೋತ ಹಾಸಗೀಮ್ಯಾಲ ಕೂತರು. ತಮ್ಮ ಇಡೀ ಜೀವನದ ಉದ್ದೇಶದ ಮೊತ್ತ ಅಂತನ್ನುವ ಅಭಿಮಾನದಿಂದ, ಮತ್ತ ತಾಯಿ ತಂದೀ ಇಬ್ಬರೂ ಬಿಟ್ಟು ಹೋದ ತಮ್ಮ ಕರುಳಿನ ಕುಡೀ ಅಂತನ್ನುವ ಪ್ರೀತಿ ಅಂತಃಕರಣದಿಂದ ಪ್ರೇರಿತರಾದ ದೇಸಾಯರು ಕೈ ಎತ್ತಿ ಕೂಸಿನ ಮೈ ಸವರಿ ಒಮ್ಮಿಗೆಲೇ ಕೆಂಡಾ ಮುಟ್ಟಿದವರಂಗ ಕೈ ಹಿಂದಕ ಎಳಕೊಂಡರು. ಕೂಸಿನ ಮೈ ಅನ್ನುವುದು ಭರ್ಪಿನಂಗ ತಣ್ಣಗಾಗೇದ. ದೇಸಾಯರು ಹೌಹಾರಿದರು… ‘ಅಮೃತಾs… ಅಮೃತಾss…’ ಅಂತ ಒದರಿ ಕರಕೋತs ಆ ಕೂಸಿನ ಎದೀಮ್ಯಾಲ ಕೈಯಿಟ್ಟು ನೋಡಿದರು. ಉಸರಿಲ್ಲಾವ… ಎದೀ ಬಡೀವಲ್ಲದು!… ಏನಾತು ಏನಾತು ನನ್ನ ಕಂದಗ…? ಏನಾತು ನನ್ನ ಕೂಸಿಗೆ? ಯಾವ ಚೋಳ ಕಡಿತೋ ನನ್ನ ಎಳೀ ಕಳಗಿಗೆ…? ಸಂತಾನ ಬ್ಯಾಡಾಗಿತ್ತಂತ ಪೇಚಾಡತಿದ್ದಳಲಾs ಆ ದುಷ್ಟ ತಾಯಿ… ಆಕೆನs ಕುತಗೀ ಹಿಚಿಕಿ ಹೋದಳೇನು…? ಹೇಳೋ ನನ್ನ ಅಂಬಣ್ಣಾ!… ಮಾತಾಡೋ ಬಾಳಾs… ಅಂತ ಗೋಳ್ಳಾಡಲಿಕ್ಕೆ ಹತ್ತಿದರು… ಅವರು ತಮ್ಮ ದುರ್ಬಲ ಕೈಗಳಿಂದ ಅಮೃತನ್ನ ಎತಿಗೋಳಿಕ್ಕೆ ನೋಡಿದರು. ಸಾಧ್ಯ ಆಗಲಿಲ್ಲ. ತಾವs ಮುಂದ ಬಾಗಿ ಕೂಸಿನ ಮೋತೀ ಸಮೀಪ ತಮ್ಮ ಮುಖಾಒಯ್ದರು… ಮೂಗಿಗೆ ಹಾಲಿನ ಗುನಗು ವಾಸನಿ ಗಮ್ಮಂತ ಬಡೀತು. ಕಣ್ಣು ಅಗಲಿಸಿ ಕೂಸಿನ ಮೋತೀ ದಿಟ್ಟಿಸಿ ದಿಟ್ಟಿಸಿ ನೋಡಿದ ದೇಸಾಯರು ಚಿಟ್ಟಂತ ಚೀರಿ, ಬೇಹೋಶ ಆಗಿ ಪಲಂಗಮ್ಯಾಲಿಂದ ಹೊಳ್ಳಿ ನೆಲಕ್ಕ ಬಿದ್ದರು. ಹಾಲಿನ ಗುನಗುವಾಸನೀ ಹೊಮ್ಮತಿದ್ದ ಅಮೃತನ ಮೋತಿ ತುಂಬ ಕಟ್ಟಿರಿವಿಗೋಳು ಮುತಿಗೊಂಡುಬಿಟ್ಟಾವೆ!… ಆ ಕೂಸಿನ ಕವಳೀ ಹಣ್ಣಿನಂಥಾ ಕಣ್ಣಗೋಳ ರೆಪ್ಪಿ… ಜೇನಿನ ಬಣ್ಣದ ಎಳಿಯ ತುಟೀ… ಇವನ್ನ ಆ ಕಟ್ಟಿರಿವಿಗೋಳು ಕಚ್ಚಿ ಕಚ್ಚಿ ತಿಂದು… ಅವು ತಿಂದಲ್ಲೆಲ್ಲಾ ಬೆಳ್ಳಗೇ ಮಾಂಸ ತರೆದುಕೊಂಡು… ಅಮೃತನ ಮುಖಾ ಅನ್ನೂದು ವಿಕಾರವಾಗಿ ಕೂತಿತ್ತು…

(ಕೃಪೆ: ಶತಮಾನದ ಸಣ್ಣ ಕತೆಗಳು, ಸಂ: ಎಸ್.ದಿವಾಕರ್, ಪ್ರ: ಪ್ರಿಸಂ ಬುಕ್ಸ್ ಪ್ರೈ.ಲಿ. ಬೆಂಗಳೂರು)

ರಾಘವೇಂದ್ರ ಪಾಟೀಲ

ರಾಘವೇಂದ್ರ ಪಾಟೀಲ (1951): ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಬೆಟಗೇರಿಯಲ್ಲಿ ಹುಟ್ಟಿದವರು. ಎಂ.ಎಸ್ಸಿ ಪದವೀಧರರು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮ ಸಂಸ್ಥೆಯ ಆಡಳಿತಾಧಿಕಾರಿಗಳಾಗಿದ್ದಾರೆ. ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದ ಸಾಂಸ್ಕೃತಿಕ ವೇದಿಕೆಯಾದ “ತಿರುಕ ರಂಗ” ಸ್ಥಾಪಿಸಿದ್ದಾರೆ. ಹಳ್ಳಿಯ ಶಾಲೆಯ ಮಕ್ಕಳಿಗಾಗಿ ರಂಗತರಬೇತಿ ಶಿಬಿರ ಕೂಡಾ ನಡೆಸುತ್ತಿದ್ದಾರೆ. ಅವರು ಅದೇ ಊರಿನಲ್ಲಿರುವ ಕಾಲೇಜಿನ ಪ್ರಿನ್ಸಿಪಾಲರಾಗಿ ಸಹಾ ಕಾರ್ಯನಿರ್ವಹಿಸಿದವರು. ‘ಒಡಪುಗಳು’, ‘ಪ್ರತಿಮೆಗಳು’, ‘ದೇಸಗತಿ’, ‘ಮಾಯಿಯ ಮುಖಗಳು'(ಕಥಾಸಂಕಲನಗಳು), ‘ಬಾಳವ್ವನ ಕನಸುಗಳು’, ‘ತೇರು’, ‘ಗೈರ ಸಮಜೂತಿ'(ಕಾದಂಬರಿಗಳು), ‘ವಾಗ್ವಾದ'(ಲೇಖನಗಳು), ‘ಅಜ್ಞಾತ ಮುಂಬಯಿ'(ಪ್ರವಾಸ ಸಾಹಿತ್ಯ), ‘ವಾಗ್ವಾದ'(ವಿಮರ್ಶೆ), ‘ಆನಂದಕಂದ'(ವ್ಯಕ್ತಿ-ಬದುಕು-ಬರೆಹ), ನವಮೇಘ ರೂಪಿ, ಕಾಡಿನ ಹುಡುಗ ಕೃಷ್ಣ(ಡಿ.ಎಸ್.ನಾಗಭೂಷಣರವರ ಜೊತೆಗೆ ಸಹಸಂಪಾದನೆ), ಮಾಸ್ತಿ ಸಾಹಿತ್ಯ ಸಮಗ್ರ ದರ್ಶನ(ಡಿ.ಎಸ್.ನಾಗಭೂಷಣರವರ ಜೊತೆಗೆ ಸಹಸಂಪಾದನೆ) ಕೃತಿಗಳನ್ನು ಪ್ರಕಟಿಸಿದ್ದಾರೆ. ಕಥೆ-ಕಾದಂಬರಿ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಇವರು ‘ಸಾಹಿತ್ಯ-ಸಂವಾದ’ ಸಾಹಿತ್ಯ ದ್ವೈಮಾಸಿಕದ ಸಂಪಾದಕರೂ ಹೌದು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ವರ್ಧಮಾನ ಪ್ರಶಸ್ತಿ, ಚದುರಂಗ ಪ್ರಶಸ್ತಿ, ಗೊರೂರು ಪ್ರತಿಷ್ಠಾನ ಪ್ರಶಸ್ತಿ, ಶ್ರೀಗಂಧ ಪ್ರಶಸ್ತಿ ಮುಂತಾದ ಹಲವಾರು ಪ್ರತಿಷ್ಠಿತ ಗೌರವಗಳು ಸಹಾ ಅವರನ್ನರಸಿ ಬಂದಿವೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಳೇಗೌಡ ನಾಗವಾರ ಅವರ ಕತೆ | ಕೂಡಿಕೆ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಜಿ.ಬಿ. ಜೋಶಿ ಅವರ ಕತೆ | ಡೂಗಜ್ಜನ ಬಹಿಷ್ಕಾರ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಸಿದ್ಧಲಿಂಗಯ್ಯ ಅವರ ಕತೆ | ಮತಾಂತರ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...

ಪಾಟೀಲ ಪುಟ್ಟಪ್ಪ ಅವರ ಕತೆ | ಸಾವಿನ ಮೇಜವಾನಿ

ಹುದುಗಿಹೋದ ಅನೇಕ ಮಹತ್ವದ ಕತೆಗಳನ್ನು ಹೆಕ್ಕಿ ತೆಗೆದು ಅವು ಕನ್ನಡದ ಮನಗಳನ್ನು...