ಈ ದಿನ ಸಂಪಾದಕೀಯ | ‘ಬ್ಯಾಲೆಟ್ ಪೇಪರ್’ ಬಂದರೆ ಎಲ್ಲವೂ ಸರಿಯಾಗುವುದೇ?

Date:

"ಸಾಂಸ್ಕೃತಿಕ ರಾಜಕಾರಣ ಮತ್ತು ಸಾಂಪ್ರದಾಯಿಕ ಮತಕೋಟೆಯನ್ನು ಕಡೆಗಣಿಸಿದರೆ, ಬ್ಯಾಲೆಟ್ ಪೇಪರ್ ಬಂದರೂ ಕಾಂಗ್ರೆಸ್‌ ಸಂಕಷ್ಟಕ್ಕೆ ಸಿಲುಕುತ್ತದೆ" ಎಂಬ ಎಚ್ಚರಿಕೆ ಇರಬೇಕಿದೆ.

‘ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ. ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ವೋಟ್ ಚೋರ್, ಗದ್ದಿ ಛೋಡ್’ ಸಮಾವೇಶದಲ್ಲಿ ಪಕ್ಷದ ನಾಯಕರೆಲ್ಲ ಒಕ್ಕೊರಲಿನಿಂದ ಚುನಾವಣಾ ಆಯೋಗಕ್ಕೆ ಸವಾಲು ಎಸೆದಿದ್ದಾರೆ.

- Advertisement -

ಚುನಾವಣಾ ಆಯೋಗ ಪಕ್ಷಪಾತಿಯಾಗಿ ನಡೆದುಕೊಂಡಿದೆ ಎಂಬುದರಲ್ಲಿ ಅನುಮಾನವೇನೂ ಇಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಿರಂತರವಾಗಿ ಎತ್ತುತ್ತಾ ಬಂದಿರುವ ಪ್ರಶ್ನೆಗಳಿಗೆ ಆಯೋಗವು ಸಮರ್ಪಕ ಉತ್ತರವನ್ನೇ ನೀಡಿಲ್ಲ ಎಂಬುದೂ ಆತಂಕಕಾರಿ ಸಂಗತಿ. ದೇಶದ ವಿವಿಧೆಡೆಯಲ್ಲಿ ಆಗಿರುವ ಭಾರೀ ಮತಗಳ್ಳತನ ಮತ್ತು ಅದರ ಮುಂದುವರಿಕೆಯಾಗಿ ಬಂದಿರುವ ಎಸ್ಐಆರ್ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಆಯೋಗ ಉತ್ತರಿಸಲೇಬೇಕಿದೆ. ಬಿಜೆಪಿಯ ಕೋಮುವಾದಿ ಕಾರ್ಯಾಚರಣೆಗೆ ಆಯೋಗವು ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂಬುದು ಸಾರ್ವಜನಿಕ ಚರ್ಚೆಯಲ್ಲಿ ಮಹತ್ವ ಪಡೆದಿದೆ. ಆಯೋಗ ಉತ್ತರಿಸಬೇಕಾದ್ದಲ್ಲಿ ಬಿಜೆಪಿ ಪ್ರತಿಕ್ರಿಯಿಸುವುದು ಏತಕ್ಕೆ ಎಂದು ಜನ ಪದೇಪದೇ ಕೇಳುತ್ತಲೇ ಇದ್ದಾರೆ. ಈ ಎಲ್ಲ ಪ್ರಶ್ನೆಗಳಿಗೆ ‘ಬ್ಯಾಲೆಟ್ ಪೇಪರ್’ ಮೂಲಕ ನಡೆಸುವ ಚುನಾವಣೆ ಉತ್ತರವಾಗಬಲ್ಲದೆ? ಬಿಜೆಪಿಯನ್ನು ಸೋಲಿಸಬಹುದೇ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

”ಜನರ ಮತದಾನದ ಹಕ್ಕನ್ನು ದುರ್ಬಲಗೊಳಿಸಲು ಚುನಾವಣಾ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ಅನುಮಾನ ಬರುವಂತೆ ಮಾಡಲಾಗಿದೆ. ಬ್ಯಾಲೆಟ್ ಪೇಪರ್‌ ಮೂಲಕ ನಡೆಯುವ ನ್ಯಾಯಸಮ್ಮತ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ತನ್ನ ಶಕ್ತಿಯನ್ನು ಸಾಬೀತುಪಡಿಸಬೇಕು. ಚುನಾವಣಾ ಆಯೋಗದ ಬೆಂಬಲವಿಲ್ಲದೆ ಬಿಜೆಪಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿಯು ಒಮ್ಮೆ ಬ್ಯಾಲೆಟ್ ಪೇಪರ್‌ನಲ್ಲಿ ನ್ಯಾಯಯುತ ಚುನಾವಣೆಯನ್ನು ಎದುರಿಸಬೇಕು ಎಂದು ಅವರಿಗೆ ಸವಾಲು ಹಾಕುತ್ತೇನೆ” ಎಂದಿದ್ದಾರೆ ಸಂಸದೆ ಪ್ರಿಯಾಂಕಾ ಗಾಂಧಿ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸರ್ಕಾರಗಳು ಬದಲಾದರೂ ಉತ್ತರ ಕರ್ನಾಟಕದ ಜನರ ಬದುಕು ಬದಲಾಗಲಿಲ್ಲವೇಕೆ?

ಚುನಾವಣಾ ಆಯೋಗ ಈ ಸವಾಲನ್ನು ಸ್ವೀಕರಿಸುತ್ತದೆ ಎಂದು ಭಾವಿಸಬೇಕಿಲ್ಲ. ಸದ್ಯದಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗಳನ್ನು ನೋಡಿದರೆ ‘ವೋಟ್ ಚೋರಿ’ ನಡೆದಿಲ್ಲ ಎಂದು ಯಾರೂ ಹೇಳುವುದಿಲ್ಲ. ಆಯೋಗವು ಬಿಜೆಪಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ ಎಂಬ ಅನುಮಾನಗಳಿಗೆ ಕಾರಣಗಳು ಇಲ್ಲದೇ ಇಲ್ಲ. ಆದರೆ ಇದಕ್ಕೆ ಬ್ಯಾಲೆಟ್ ಪೇಪರ್ ಚುನಾವಣೆಯೊಂದೇ ಉತ್ತರವಾಗುತ್ತದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ.

ಬ್ಯಾಲೆಟ್ ಪೇಪರ್ ಪ್ರಶ್ನೆ ಸುಪ್ರೀಂ ಕೋರ್ಟ್‌ ಮುಂದೆ ಹೋದಾಗ, ಕೋರ್ಟ್ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ (ಇವಿಎಂ) ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದು, “ಹಳೆಯ ಬ್ಯಾಲೆಟ್ ಪೇಪರ್ ಪದ್ಧತಿಗೆ ಮರಳಲು ಸಾಧ್ಯವಿಲ್ಲ” ಎಂದಿದೆ.

ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪಿ.ಬಿ. ವರಾಲೆ ಅವರಿದ್ದ ಪೀಠವು 2024ರ ನವೆಂಬರ್ 26ರಂದು ವಜಾಗೊಳಿಸಿತು. ”ಚುನಾವಣೆಯಲ್ಲಿ ಗೆದ್ದಾಗ ಇವಿಎಂ ಬಗ್ಗೆ ಯಾರೂ ಪ್ರಶ್ನೆ ಮಾಡುವುದಿಲ್ಲ, ಆದರೆ ಸೋತಾಗ ಮಾತ್ರ ಇವಿಎಂ ಹ್ಯಾಕ್ ಆಗಿದೆ ಎಂದು ಆರೋಪಿಸುತ್ತಾರೆ” ಎಂದು ಕೋರ್ಟ್ ಅರ್ಜಿದಾರರಿಗೆ ತಪರಾಕಿ ಹಾಕಿತ್ತು. ಇದಕ್ಕೂ ಮೊದಲು, ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠವು, ”ಹಳೆಯ ಬ್ಯಾಲೆಟ್ ಪೇಪರ್ ವ್ಯವಸ್ಥೆಯಲ್ಲಿ ಬೂತ್ ಕ್ಯಾಪ್ಚರಿಂಗ್ ಮಾಡುವುದು ಮತ್ತು ಮತಪತ್ರಗಳನ್ನು ಅಸಿಂಧು ಮಾಡುವುದು ಸಾಮಾನ್ಯವಾಗಿತ್ತು. ಇವಿಎಂ ಬಂದ ನಂತರ ಈ ಸಮಸ್ಯೆಗಳು ನಿವಾರಣೆಯಾಗಿವೆ” ಎಂದು ತಿಳಿಸಿತ್ತು.

ಯುರೋಪಿನ ಕೆಲವು ದೇಶಗಳು (ಉದಾಹರಣೆಗೆ ಜರ್ಮನಿ) ಬ್ಯಾಲೆಟ್ ಪೇಪರ್‌ಗೆ ಮರಳಿವೆ ಎಂದು ಅರ್ಜಿದಾರರು ವಾದಿಸಿದಾಗ, ಕೋರ್ಟ್, “ಜರ್ಮನಿಯ ಜನಸಂಖ್ಯೆಗಿಂತ ನಮ್ಮ ಪಶ್ಚಿಮ ಬಂಗಾಳ ರಾಜ್ಯದ ಜನಸಂಖ್ಯೆಯೇ ಹೆಚ್ಚಿದೆ. ಭಾರತದ ಚುನಾವಣಾ ಪ್ರಕ್ರಿಯೆ ಬೃಹತ್ ಮಟ್ಟದ್ದು, ಇಲ್ಲಿ ಬೇರೆ ದೇಶಗಳ ಹೋಲಿಕೆ ಸರಿಯಲ್ಲ. ಭಾರತದ ಮತದಾರರ ಸಂಖ್ಯೆ ಸುಮಾರು 97 ಕೋಟಿಗೂ ಅಧಿಕವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ಮೂಲಕ ನಡೆಸುವುದು ಮತ್ತು ಎಣಿಕೆ ಮಾಡುವುದು ಪ್ರಾಯೋಗಿಕವಾಗಿ ಕಷ್ಟಕರ” ಎಂದಿತ್ತು. ಅಂದರೆ ಬ್ಯಾಲೆಟ್‌ಗೆ ಮರಳಬೇಕೆಂಬ ಆಗ್ರಹಕ್ಕೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಹಾಗೆಂದು ಬದಲಾದ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದು ಹೇಳಲಾಗುವುದಿಲ್ಲ. ಮುಂದೊಂದು ದಿನ ಕೋರ್ಟ್ ತನ್ನ ನಿಲುವು ಬದಲಿಸಿದರೂ ಸ್ವಾಗತಾರ್ಹ. ಪ್ರತಿಪಕ್ಷಗಳು ಸೇರಿದಂತೆ ದೇಶವಾಸಿಗಳ ಮನಸ್ಸಿನಲ್ಲಿ ಎದ್ದಿರುವ ಗುಮಾನಿಗೆ, ವ್ಯವಸ್ಥೆಯು ಉತ್ತರ ಕಂಡುಕೊಳ್ಳಬೇಕಾಗುತ್ತದೆ. ಆದರೆ ಈ ಪ್ರಶ್ನೆಯನ್ನು ಎತ್ತಿರುವ ಕಾಂಗ್ರೆಸ್‌ ಪಕ್ಷವು ಇದರೊಂದರಿಂದಲೇ ಚುನಾವಣೆಯನ್ನು ಗೆದ್ದುಬಿಡುತ್ತದೆ ಎಂದು ಭ್ರಮಿಸಬೇಕಿಲ್ಲ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ‘ಭಾರತದ ಹೃದಯ’ವೇ ಸೆಕ್ಯುಲರಿಸಂ, ಸೋಷಿಯಲಿಸಂ; ಬುದ್ಧನೇ ಇವುಗಳ ಪ್ರವರ್ತಕ

ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ- ಸೇರಿದಂತೆ ಕಾಂಗ್ರೆಸ್‌ನ ಹಲವು ಹಿರಿಯರು ನಿಜಕ್ಕೂ ಪ್ರಜಾಪ್ರಭುತ್ವದ ಸಮರ್ಥ ಪ್ರತಿಪಾದಕರೇ ಹೌದು. ಸೆಕ್ಯುಲರ್ ಸಿದ್ಧಾಂತದಲ್ಲಿ ಅವರದ್ದು ಅಪ್ರತಿಮ ನಿಲುವು. ಆದರೆ ಕಾಂಗ್ರೆಸ್ ಪಕ್ಷವನ್ನು ಸಮಗ್ರವಾಗಿ ನೋಡಿದರೆ, ನೀತಿ ನಿರೂಪಣೆಗಳಲ್ಲಿ ಮತ್ತು ತಮ್ಮ ಪಕ್ಷದ ಭದ್ರ ಮತಕೋಟೆಯನ್ನು ರಕ್ಷಿಸಿಕೊಳ್ಳುವಲ್ಲಿ ಪದೇಪದೇ ಎಡವುತ್ತಿದೆ. ಬಿಹಾರದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು. ಕಾರಣ- ಅಲ್ಲಿ ಬೂತ್ ಮಟ್ಟದ ಪಕ್ಷ ಸಂಘಟನೆ ಇಲ್ಲವಾಗಿ ಬಹಳ ಕಾಲವೇ ಆಗಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯೇತರ ಪ್ರತಿಪಕ್ಷಗಳು ಚುನಾವಣೆ ಕೆಲವು ತಿಂಗಳು ಇರುವಾಗ ಸಕ್ರಿಯವಾಗಿದ್ದು, ನಂತರದ ದಿನಗಳಲ್ಲಿ ನಿದ್ದೆಗೆ ಜಾರಿರುತ್ತವೆ ಎಂಬ ಮಾತುಗಳು ಸರ್ವೇ ಸಾಮಾನ್ಯವಾಗಿವೆ. ಭಾರತದ ಸಾಂವಿಧಾನಿಕ ಮೌಲ್ಯಗಳ ಮೇಲೆ ಪ್ರಹಾರ ನಡೆಸುವ ಪ್ರತಿಗಾಮಿ ಶಕ್ತಿಗಳು ವರ್ಷವಿಡೀ ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿರುತ್ತವೆ. ಆ ಹೊತ್ತಿನಲ್ಲಿ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳು ಮಾಡುವುದಾದರೂ ಏನು? ತಳಮಟ್ಟದ ಕಾರ್ಯಕರ್ತರನ್ನು ಸೈದ್ಧಾಂತಿಕವಾಗಿ ಹುರುಪುಗೊಳಿಸದ ಹೊರತು, ಸೆಕ್ಯುಲರಿಸಂನ ಆಳ ಅಗಲದ ಬಗ್ಗೆ ಅವರಲ್ಲಿ ಶಕ್ತಿ ತುಂಬದ ಹೊರತು ಬದಲಾವಣೆ ಸಾಧ್ಯವಿಲ್ಲ.

ಸಂಘಪರಿವಾರಕ್ಕೆ ಒಂದು ಮುಖವಿಲ್ಲ. ಅದು ಸಾವಿರಾರು ವೇಷಭೂಷಣಗಳಲ್ಲಿ ಸಮಾಜವನ್ನು ಪ್ರಭಾವಿಸುತ್ತಾ, ಇಂಚಿಂಚೇ ಕೋಮುಭಾವನೆಯನ್ನು ಉದ್ದೀಪಿಸುತ್ತಾ ಬಂದಿದೆ. ಅದೊಂದು ದೀರ್ಘ ಅಜೆಂಡಾ. ”ಆರ್‌ಎಸ್‌ಎಸ್‌ನ ಉದ್ದೇಶ ರಾಜಕೀಯ ಅಧಿಕಾರವನ್ನು ಹಿಡಿಯುವುದಲ್ಲ. ಜನರ ಮನಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದೇ ಅದರ ಮುಖ್ಯ ಗುರಿ. ಆ ನಿಟ್ಟಿನಲ್ಲಿ ಕನಿಷ್ಠ 6 ದಶಕಗಳಿಂದ ಕೆಲಸ ಮಾಡಿದೆ” ಎನ್ನುತ್ತಾರೆ ಹಿಂದುತ್ವ ರಾಜಕಾರಣವನ್ನು ಆಳವಾಗಿ ಅಧ್ಯಯನ ಮಾಡಿರುವ ಖ್ಯಾತ ಲೇಖಕ ಕ್ರಿಸ್ಟೋಫ್ ಜಾಫ್ರೆಲಾಟ್. ಸಾಂಸ್ಕೃತಿಕ ರಾಜಕಾರಣವು ಚುನಾವಣಾ ರಾಜಕಾರಣವನ್ನು ಸುಲಭವಾಗಿ ಹಿಡಿತಕ್ಕೆ ತೆಗೆದುಕೊಳ್ಳುತ್ತದೆ. ಜಾತಿಗಳನ್ನು ಸಮೀಕರಣ ಮಾಡುವಲ್ಲಿ ಯಶಸ್ಸು ಕಂಡಿದೆ. ಜೊತೆಗೆ ಸಂಪತ್ತಿನ ಕ್ರೋಢೀಕರಣವು ಬಿಜೆಪಿಗೆ ವರದಾನವಾಗಿದೆ. ಇಂತಹ ಸನ್ನಿವೇಶದಲ್ಲಿ ಬಿಜೆಪಿಯೇತರ ಪಕ್ಷಗಳು ತಳಮಟ್ಟದಲ್ಲಿ ಸಾಂಸ್ಕೃತಿಕ ರಾಜಕಾರಣವನ್ನು ಗಟ್ಟಿಯಾಗಿ ಕಟ್ಟದ ಹೊರತು, ‘ಸೆಕ್ಯುಲರ್’ ಭಾರತವು ‘ಫ್ಯಾಸಿಸ್ಟ್’ ಭಾರತವಾಗಿ ನಿಧಾನಕ್ಕೆ ಪರಿವರ್ತನೆಯಾಗುತ್ತದೆ ಎಂಬ ಎಚ್ಚರಿಕೆ ಇರಬೇಕಾಗುತ್ತದೆ.

ಇನ್ನೊಂದೆಡೆ ತನ್ನ ಸಾಂಪ್ರದಾಯಿಕ ಮತಕೋಟೆಯನ್ನು ರಕ್ಷಿಸಿಕೊಳ್ಳುವಲ್ಲಿಯೂ ಕಾಂಗ್ರೆಸ್ ಪದೇಪದೇ ಎಡವುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಕರ್ನಾಟಕವನ್ನೇ ಉದಾಹರಣೆಯನ್ನಾಗಿ ನೋಡಿದರೆ, ಬಿಜೆಪಿಯ ದುರಾಡಳಿತಕ್ಕೆ ಮತ್ತು ಕೋಮುರಾಜಕಾರಣಕ್ಕೆ ಬೇಸತ್ತ ಅದೃಶ್ಯ ಮತದಾರರು 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ನೀಡಿದರು. ಚುನಾವಣಾ ಫಲಿತಾಂಶದ ಜಾತಿವಾರು ಮತವಿಭಜನೆಯನ್ನು ನೋಡಿದರೆ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದರು. ಆದರೆ ಈ ಜನಸಮುದಾಯದ ಹಕ್ಕೊತ್ತಾಯಗಳನ್ನು ಸರ್ಕಾರ ಸರಿಯಾಗಿ ಕೇಳಿಸಿಕೊಂಡಿದೆಯೇ ಎಂದು ನೋಡಿದರೆ ಉತ್ತರ ನಿರಾಶಾದಾಯಕವಾಗಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಮೃತದೇಹದೊಂದಿಗೇ ಯುವತಿ ಮದುವೆ; ಮರ್ಯಾದೆಗೇಡು ಹತ್ಯೆಗಳಿಗೆ ಕೊನೆ ಎಂದು?

ಕಾಂಗ್ರೆಸ್ ಎಷ್ಟೇ ಸಮಸ್ಯಾತ್ಮಕವಾಗಿ ವರ್ತಿಸಿದರೂ, ತೀವ್ರ ಕೋಮುವಾದಿ ಮತ್ತು ಸಂವಿಧಾನ ವಿರೋಧಿ ಪಾಳೆಯಕ್ಕೆ ಹೋಗದೆ ಕಾಂಗ್ರೆಸ್ ಪರ ನಿಂತ ನೊಂದ ಸಮುದಾಯಗಳನ್ನು ಸರ್ಕಾರ ನಡೆಸಿಕೊಳ್ಳುತ್ತಿರುವುದು ಹೇಗೆ? ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣವನ್ನು ಮನಬಂದಂತೆ ಖರ್ಚು ಮಾಡಲಾಯಿತು. ಒಳಮೀಸಲಾತಿ ವಿಚಾರವನ್ನು ಗೊಂದಲಕಾರಿಯಾಗಿ ಮಾಡಲಾಯಿತು. ತಬ್ಬಲಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ಯಾರನ್ನು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಕೋಟೆಯೆಂದು ಪರಿಗಣಿಸಲಾಗಿದೆಯೋ ಅವರನ್ನೇ ನಿರ್ಲಕ್ಷಿಸಿ ಬಲಾಢ್ಯ ಸಮುದಾಯಗಳ ಮರ್ಜಿಗೆ ಬಿದ್ದಂತೆ ಕಾಂಗ್ರೆಸ್ ವರ್ತಿಸುತ್ತದೆ. ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳದೆ ಹೋದರೆ, ಯಾವುದೇ ಬ್ಯಾಲೆಟ್ ಪೇಪರ್ ಬಂದರೂ ಪ್ರಯೋಜನವಾಗದ ಸ್ಥಿತಿಗೆ ಕಾಂಗ್ರೆಸ್ ಕುಸಿಯುತ್ತದೆ ಎಂಬುದನ್ನು ಮರೆಯಬಾರದು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ತಾಪಮಾನ ಏರಿಕೆಗೆ ಬದುಕಿನ ಬೆಲೆ ತೆರುವವರು ಯಾರು?

ಭೂಮಿಗೆ ನಮ್ಮ ಅಗತ್ಯವಿಲ್ಲ, ನಮಗೆ ಭೂಮಿಯ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು....

ಈ ದಿನ ಸಂಪಾದಕೀಯ | ಜನಪೀಡಕ ಕೇಸರಿ ಕೇಡಿಗಳಿಗೆ ಕಡೆಗಾಲ ಬಂದಿದೆ, ಎಚ್ಚರಗೊಳ್ಳುತ್ತಿದೆ ಜನಶಕ್ತಿ!

ಪಾಡ್‌ಕಾಸ್ಟ್‌ ಒಂದರಲ್ಲಿ ಮಾತನಾಡಿದ ಸ್ವತಂತ್ರ ಭಾರದ್ವಾಜ್ ಎಂಬ ವ್ಯಕ್ತಿ ನೀಡಿದ ಹೇಳಿಕೆಯೀಗ...

ಈ ದಿನ ಸಂಪಾದಕೀಯ | ಗುಳೆ ಹೊಸದಲ್ಲ, ಪರ್ಯಾಯ ಹುಡುಕದಿರುವುದು ಸರ್ಕಾರದ ವೈಫಲ್ಯವಲ್ಲವೇ?

ಗುಳೆ ಸಮಸ್ಯೆಯನ್ನು ಕೇವಲ ಕೃಷಿಕರ, ಬಡ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ...

ಈ ದಿನ ಸಂಪಾದಕೀಯ | GDP ಶೇ.7.8; ಅಸಲಿ ಅಭಿವೃದ್ಧಿ ಯಾರ ಪಾಲಿಗೆ?

ಈ ದೇಶದ GDP ದರ ನಿರೀಕ್ಷೆಗೂ ಮೀರಿ ಶೇ.7.8ರಷ್ಟು ದಾಖಲಾಗಿದ್ದರೆ ಅದು...