ನಮ್ಮ ಸಿಎಂ | ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬಿದ ಸಿದ್ದರಾಮಯ್ಯ

Date:

ಸಿದ್ದರಾಮಯ್ಯ ಹಿಂದುಳಿದ ವರ್ಗದವರು. ದೂರದೃಷ್ಟಿ, ಬುದ್ಧಿಮತ್ತೆ, ಅನುಭವ ಮತ್ತು ಅರ್ಹತೆಗಳಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರುವುದು ಪ್ರಜಾಪ್ರಭುತ್ವಕ್ಕೆ ಬೆಲೆ ಬರುವಂಥಾದ್ದು. ಅವರು ಜನಪರ ಆಡಳಿತ ನೀಡುವ ಮೂಲಕ ಕರ್ನಾಟಕ ಕೋಮುವಾದಿಗಳ ಕೈಗೆ ಸಿಗದಂತೆ ನೋಡಿಕೊಳ್ಳಲಿ.

ಮೇ 20ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯನವರು, ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಹಿಂದುಳಿದ ವರ್ಗದವರು. ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಅವರ ಚಿಂತನೆಗಳಿಂದ ಪ್ರಭಾವಿತರಾದವರು. ರೈತನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿಯವರ ಹೋರಾಟಗಳನ್ನು ಬಹಳ ಹತ್ತಿರದಿಂದ ಕಂಡುಂಡವರು. ಸಾಹಿತಿಗಳಾದ ದೇವನೂರ ಮಹಾದೇವ, ಶ್ರೀಕೃಷ್ಣ ಆಲನಹಳ್ಳಿ, ಪ್ರೊ. ಕೆ. ರಾಮದಾಸ್, ಕೆ.ನ. ಶಿವತೀರ್ಥನ್, ಪ.ಮಲ್ಲೇಶ್ ಅವರೊಂದಿಗೆ ಒಡನಾಡಿದವರು. ರಾಮಕೃಷ್ಣ ಹೆಗಡೆ, ಎಚ್.ಡಿ. ದೇವೇಗೌಡ ಮತ್ತು ಜೆ.ಎಚ್. ಪಟೇಲರ ರಾಜಕೀಯ ಗರಡಿಯಲ್ಲಿ ಪಳಗಿದವರು. ಜ್ಞಾನಪೀಠ ಪುರಸ್ಕೃತ ಸಾಹಿತಿ ಪ್ರೊ. ಯು.ಆರ್. ಅನಂತಮೂರ್ತಿಯವರಂಥ ಬುದ್ಧಿಜೀವಿ ಚಿಂತಕರ ನಿರಂತರ ಸಂಪರ್ಕದಲ್ಲಿದ್ದವರು. ಅದಕ್ಕಿಂತ ಹೆಚ್ಚಾಗಿ ಕಡುಕಷ್ಟದ ಕುಟುಂಬದಿಂದ ಬಂದವರು.

ಈ ಎಲ್ಲ ಕಾರಣದಿಂದಾಗಿಯೋ ಏನೋ, ಸಿದ್ದರಾಮಯ್ಯನವರು ಪ್ರಜಾಪ್ರಭುತ್ವದ ಆಶಯಗಳಿಗೆ ಅನುಗುಣವಾಗಿ ನಡೆದವರು. ಅಷ್ಟೇ ಅಲ್ಲ, ಜನಪರವಾಗಿ ಚಿಂತಿಸುವವರು. ನೆಲ-ಜಲ-ಭಾಷೆಯ ವಿಷಯದಲ್ಲಿ ಬದ್ಧತೆಯಿಂದ ವರ್ತಿಸುವವರು. ಜೊತೆಗೆ, ಎಡಪಂಥೀಯ ವಿಚಾರಧಾರೆಗಳತ್ತ ಒಲವುಳ್ಳವರು. ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರ ಪರ ಕಾಳಜಿ ಕಳಕಳಿಯುಳ್ಳವರು. ತಮ್ಮ ಹಿಂಬಾಲಕರಿಗೆ, ಜಾತಿಯವರಿಗೆ ಅನುಕೂಲ ಮಾಡಿಕೊಟ್ಟರೂ, ಕಡು ಭ್ರಷ್ಟರ ಪಟ್ಟಿಗೆ ಸೇರದವರು. ಆದರೆ ಅಧಿಕಾರ ಬಂದಾಗ ದರ್ಪ, ದುರಹಂಕಾರದಿಂದ ವರ್ತಿಸುತ್ತಾರೆಂಬ ಆರೋಪವೂ ಇವರ ಮೇಲಿದೆ. ರಾಜ್ಯದ ಜನಸಂಖ್ಯೆಯಲ್ಲಿ ಮೂರನೇ ಒಂದರಷ್ಟಿದ್ದು, ಮೇಲ್ಜಾತಿಯಷ್ಟೇ ಪ್ರಬಲರಾಗಿರುವ ಕುರುಬ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯನವರು; ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೊಳಗಾಗಿದ್ದ ಕುರುಬ ಜನಾಂಗದಲ್ಲಿ ಜಾಗೃತಿಯನ್ನುಂಟುಮಾಡಿದರು. ರಾಜಕೀಯರಂಗದಲ್ಲಿ ಕುರುಬ ಸಮುದಾಯಕ್ಕೆ ಅಸ್ತಿತ್ವ  ತಂದುಕೊಟ್ಟವರು. 

ಇದನ್ನು ಓದಿದ್ದೀರಾ?: ಗ್ಯಾರಂಟಿ ಯೋಜನೆ | ನಿರ್ವಹಣೆಯಲ್ಲಿ ಶಿಸ್ತು, ಸಂಪತ್ತಿನ ಸೋರಿಕೆ ತಡೆಯುವುದು ಅಗತ್ಯ 

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಂತಹ ಸಿದ್ಧರಾಮಯ್ಯನವರು ಹುಟ್ಟಿದ್ದು ಬಡವರ ಮನೆಯಲ್ಲಿ, 12 ಆಗಸ್ಟ್, 1948ರಲ್ಲಿ, ಮೈಸೂರು ತಾಲೂಕಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ. ಓದಿದ್ದು ಬಿಎಸ್ಸಿ, ಎಲ್ಎಲ್ಬಿ ಪದವಿ. ಕಾನೂನು ಪದವಿ ಪಡೆದ ನಂತರ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಬಡವರ ಪರವಾಗಿ ವಕಾಲತ್ತು ವಹಿಸುವ ಮೂಲಕ ಜನಪ್ರಿಯ ವಕೀಲರೆಂದೇ ಹೆಸರು ಗಳಿಸಿದ್ದರು. ಮೊದಲಿಗೆ, ಮೈಸೂರಿನ ಸಿವಿಲ್ ವಕೀಲರಾದ ಚಿಕ್ಕಬೋರಣ್ಣನವರ ಜೂನಿಯರ್ ಆಗಿದ್ದ ಸಿದ್ದರಾಮಯ್ಯನವರು, ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಕೆಲವು ಕಾಲ ಉಪನ್ಯಾಸಕರಾಗಿಯೂ ದುಡಿದಿದ್ದರು.

ಜನರೊಂದಿಗೆ ಬೆರೆತು ಜನಾನುರಾಗಿಯಾಗಿದ್ದ ಕಾರಣಕ್ಕಾಗಿಯೇ ಸಿದ್ದರಾಮಯ್ಯನವರು 1978 ರಲ್ಲಿ ರಾಜಕೀಯ ರಂಗಕ್ಕೆ ಧುಮುಕಿ, ತಾಲೂಕ್ ಬೋರ್ಡ್ ಮೆಂಬರ್ ಆದರು. ಆನಂತರ 1980ರಲ್ಲಿ ಮೊದಲಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿದರು. ಸೋತರು. ಆದರೆ ಹುಟ್ಟು ಛಲಗಾರ ಆ ಸೋಲಿನಿಂದ ಹಿಮ್ಮೆಟ್ಟಲಿಲ್ಲ. 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ಆ ನಂತರ ಅಬ್ದುಲ್ ನಜೀರ್ ಸಾಬ್ ಒತ್ತಾಯಕ್ಕೆ ಮಣಿದು ಜನತಾ ಪಕ್ಷ ಸೇರಿದರು. ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾ ಸರ್ಕಾರದಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕದಾದ್ಯಂತ ಪರಿಚಿತರಾದರು. 1985ರಲ್ಲಿ ಮತ್ತೆ ಶಾಸಕರಾಗಿ ಚುನಾಯಿತರಾದ ಸಿದ್ದರಾಮಯ್ಯನವರು, ಮೊದಲ ಬಾರಿಗೆ ಪಶು ಸಂಗೋಪನಾ ಖಾತೆ ಸಚಿವರಾದರು. ಆ ಖಾತೆಯನ್ನು ದಕ್ಷತೆಯಿಂದ ನಿರ್ವಹಿಸಿದ್ದನ್ನು ಕಂಡ ಹೆಗಡೆಯವರು, ಪಶು ಸಂಗೋಪನೆಯ ಜೊತೆಗೆ ರೇಷ್ಮೆ ಮತ್ತು ಸಾರಿಗೆ ಖಾತೆಗಳನ್ನೂ ನೀಡಿ ಪ್ರೋತ್ಸಾಹಿಸಿದರು.

ಇಂತಹ ಸಿದ್ದರಾಮಯ್ಯನವರು 1989ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ರಾಜಶೇಖರಮೂರ್ತಿಯವರಿಂದ ಸೋಲಿನ ರುಚಿ ಕಂಡರು. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮತ್ತೆ ಸೋತರು. ಸುಮ್ಮನೆ ಕೂರದ ಸಿದ್ದರಾಮಯ್ಯನವರು ಜನರೊಂದಿಗೆ ಬೆರೆತು ಸೋಲಿನಲ್ಲಿಯೇ ಗೆಲುವಿನ ಮೆಟ್ಟಿಲುಗಳನ್ನು ಹುಡುಕುತ್ತಿದ್ದಾಗ, ಪಕ್ಷ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿತು. ಇದು ಸಿದ್ದರಾಮಯ್ಯನವರ ರಾಜಕೀಯ ಬದುಕಿನಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ ಘಟ್ಟ. ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್. ಪಟೇಲ್ ರಂತಹ ಘಟಾನುಘಟಿಗಳ ಜೊತೆಗೂಡಿ ರಾಜ್ಯ ಸುತ್ತುವ, ಜನತೆಯ ಮನಸ್ಸನ್ನು ಅರಿಯುವ, ಪಕ್ಷ ಸಂಘಟಿಸುವ ನಿಟ್ಟಿನಲ್ಲಿ ಉತ್ತಮ ಕೆಲಸಗಾರ ಎಂಬ ಹೆಸರು ಸಂಪಾದಿಸಿದರು.

ಮುಂದೆ 1994 ರಲ್ಲಿ ಜನತಾ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರುವಲ್ಲಿ ಸಿದ್ದರಾಮಯ್ಯನವರ ಪಾತ್ರ ಪ್ರಮುಖವಾಗಿತ್ತು. ಹಾಗೆಯೇ ಅವರೂ ಕೂಡ ರಾಜ್ಯ ಮಟ್ಟದ ನಾಯಕರಾಗಿ ಹೊರಹೊಮ್ಮಿದರು. ಪಕ್ಷ ಅಧಿಕಾರಕ್ಕೆ ಬಂದು ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾದಾಗ, ಅವರ ಕ್ಯಾಬಿನೆಟ್ ನಲ್ಲಿ ಸಿದ್ದರಾಮಯ್ಯನವರಿಗೆ ಭಾರೀ ತೂಕದ ವಿತ್ತ ಖಾತೆ ಲಭಿಸಿತು. 1996 ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿಯಾಗಲು ದೆಹಲಿಗೆ ತೆರಳಿದಾಗ, ಜೆ.ಎಚ್. ಪಟೇಲ್ ಮುಖ್ಯಮಂತ್ರಿಯಾದರು. ಆಗ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾದರು. 

ಆ ನಂತರ ಜನತಾಪಕ್ಷ ಇಬ್ಭಾಗವಾಗಿ ಗೌಡ-ಹೆಗಡೆ ಬಣಗಳಾದಾಗ, ಸಿದ್ದರಾಮಯ್ಯನವರು ದೇವೇಗೌಡರ ಜಾತ್ಯತೀತ ಜನತಾದಳದಲ್ಲಿ ಉಳಿದರು. ಗೌಡರು ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರು. ಸಿದ್ದರಾಮಯ್ಯ ಪಕ್ಷದ ಅಧ್ಯಕ್ಷರಾದರೂ, ಗೌಡ-ಹೆಗಡೆ ಬೇರೆಯಾಗಿದ್ದು ಮತ್ತು ಐದು ವರ್ಷಗಳ ಆಡಳಿತದಲ್ಲಿ ಕಚ್ಚಾಟವೇ ಪ್ರಮುಖವಾಗಿದ್ದು ಪಕ್ಷದ ಮೇಲೆ ಭಾರೀ ಪರಿಣಾಮ ಬೀರಿತು. 1999 ರಲ್ಲಿ ದಯನೀಯವಾಗಿ ಸೋಲಿನ ರುಚಿ ಉಣ್ಣಬೇಕಾಯಿತು. ಹಾಗೆಯೇ ಮತ್ತೆ ಅಧಿಕಾರವನ್ನು ಕಾಣಬೇಕಾದರೆ 2004 ರವರೆಗೆ ಕಾಯಬೇಕಾಯಿತು. 2004 ರ ಚುನಾವಣೆಯಲ್ಲಿ ಜನತಾದಳ ಪಕ್ಷ ಸರ್ಕಾರ ರಚಿಸುವಷ್ಟು ಬಹುಮತ ಪಡೆಯದ ಕಾರಣ, ಕಾಂಗ್ರೆಸ್ ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ಆಗ ಕಾಂಗ್ರೆಸ್ ನಿಂದ ಧರಮ್ ಸಿಂಗ್ ಮುಖ್ಯಮಂತ್ರಿಯಾದರೆ, ಜೆಡಿಎಸ್ ನಿಂದ ಸಿದ್ದರಾಮಯ್ಯನವರು ಎರಡನೆ ಬಾರಿಗೆ ಉಪ ಮುಖ್ಯಮಂತ್ರಿ ಪಟ್ಟಕ್ಕೇರಿದರು.

ಆದರೆ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬಿದ್ದು, ಕುಮಾರಸ್ವಾಮಿ-ಯಡಿಯೂರಪ್ಪನವರ ಹೊಂದಾಣಿಕೆಯ ಟ್ವೆಂಟಿ ಟ್ವೆಂಟಿ ಸರ್ಕಾರ ರಚನೆಯಾಗಿ, ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಈ ಘಟ್ಟದಲ್ಲಿ ಸಿದ್ದರಾಮಯ್ಯನವರು ತಾವು ಪಾಲಿಸಿಕೊಂಡು ಬಂದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ, ತಮ್ಮ ಪಕ್ಷದ ಜಾತ್ಯತೀತ ಮೌಲ್ಯಗಳನ್ನು ಗಾಳಿಗೆ ತೂರಿ ಬಲಪಂಥೀಯ ಕೋಮುವಾದಿ ಪಕ್ಷದೊಂದಿಗೆ ಸೇರಿ ಸರ್ಕಾರ ರಚಿಸಿದ ಕುಮಾರಸ್ವಾಮಿಯವರ ಕ್ರಮವನ್ನು ಉಗ್ರವಾಗಿ ಖಂಡಿಸಿದರು. ಇದು ಸಿದ್ದರಾಮಯ್ಯನವರು 2006 ರಲ್ಲಿ ಜೆಡಿಎಸ್ ತೊರೆಯಬೇಕಾದ ಅನಿವಾರ್ಯ ಸ್ಥಿತಿಯನ್ನು ನಿರ್ಮಿಸಿತು. ಆ ಸಂದರ್ಭದಲ್ಲಿ ಅವರ ಬದ್ಧತೆಗೆ, ನಿಲುವಿಗೆ ಹತ್ತಿರವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡರು. ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಉಪಚುನಾವಣೆ ಎದುರಿಸಿ, ಕೇವಲ 257 ಮತಗಳ ಅಂತರದಿಂದ ಗೆದ್ದು ಮತ್ತೆ ಶಾಸಕರಾದರು.

2008ರಲ್ಲಿ ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ವರುಣಾ ಕ್ಷೇತ್ರ ಹೊಸದಾಗಿ ರಚನೆ ಆಯಿತು. ಆ ಕ್ಷೇತ್ರದಿಂದ ಸಿದ್ದರಾಮಯ್ಯನವರು ಗೆದ್ದು ಶಾಸಕರಾದರು, ಬಳಿಕ ವಿಧಾನಸಭೆ ಪ್ರತಿಪಕ್ಷ ನಾಯಕರಾದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಬಳ್ಳಾರಿಯ ಗಣಿಧಣಿಗಳ ವಿರುದ್ಧ ರಣಕಹಳೆ ಮೊಳಗಿಸಿ, ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ, ರಾಜ್ಯ ರಾಜಕೀಯದಲ್ಲಿ ಹೊಸಸಂಚಲವನ್ನೇ ಸೃಷ್ಟಿಸಿದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ತೃತೀಯ ರಂಗಕ್ಕೆ ಶಕ್ತಿ ತುಂಬಲಿದೆಯೇ ಕರ್ನಾಟಕದ ಗೆಲುವು?

ಹಾಗೆ ನೋಡಿದರೆ, ಸಿದ್ದರಾಮಯ್ಯನವರು ತಮ್ಮ 45 ವರ್ಷಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ 9 ಸಲ ಗೆದ್ದು ಶಾಸಕರಾಗಿದ್ದಾರೆ. 2013 ರಲ್ಲಿ ಗೆದ್ದು ಮುಖ್ಯಮಂತ್ರಿಯಾಗಿದ್ದಾರೆ. ಅಧಿಕಾರಕ್ಕೇರಿದಾಗ ಕೊಟ್ಟ ಆಶ್ವಾಸನೆಗಳನ್ನು ಪೂರೈಸಿ ನುಡಿದಂತೆ ನಡೆದ ಸರ್ಕಾರ ಎಂದು ಹೆಸರು ಗಳಿಸಿದ್ದಾರೆ. ಅತೀ ಹೆಚ್ಚು ಸಲ, ಅಂದರೆ 13 ಸಲ ಬಜೆಟ್ ಮಂಡಿಸಿ ದಾಖಲೆ ನಿರ್ಮಿಸಿದ್ದಾರೆ. ಆದರೆ ಇದೇ ಅವಧಿಯಲ್ಲಿ ಲೋಕಾಯುಕ್ತ ಮುಚ್ಚಿದ್ದು, ಭ್ರಷ್ಟ ಶ್ಯಾಂ ಭಟ್ಟನನ್ನು ಕೆಪಿಎಸ್ಸಿ ಚೇರ್ಮನ್ ಪಟ್ಟಕ್ಕೇರಿಸಿದ್ದು, ರೀಡೂ ನೆಪದಲ್ಲಿ ಡಿ ನೋಟಿಫಿಕೇಶನ್ ಮಾಡಿದ ಆರೋಪಕ್ಕೆ ಗುರಿಯಾಗಿದ್ದು, ಬೈರತಿ ಬ್ರದರ್‍ಸ್ ಬೆಳೆಸಿದ್ದು, ಜಮೀರ್-ಮಹದೇವಪ್ಪರಿಗೆ `ಸಲುಗೆ’ ಕೊಟ್ಟಿದ್ದು, ದಲಿತರಿಗೆ ಸಿಎಂ ಪಟ್ಟ ತಪ್ಪಿಸಿದ್ದು ಮತ್ತು ಜಾತ್ಯಸ್ಥರನ್ನೇ ಸುತ್ತ ಇಟ್ಟುಕೊಂಡಿದ್ದು- ಹಲವು ಆರೋಪಗಳಿಗೂ ಗುರಿಯಾಗಿದ್ದಾರೆ. ಹಾಗೆಯೇ ಕಳೆದ ಐದು ವರ್ಷಗಳ ಕಾಲ ಶಾಸನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೂ ಸಿಲುಕಿಸಿದ್ದಾರೆ. ಪ್ರಧಾನಿ ಮೋದಿಯವರಿಗೆ ತಕ್ಕ ಉತ್ತರ ಕೊಟ್ಟು ಸಮರ್ಥ ನಾಯಕ ಎನಿಸಿಕೊಂಡಿದ್ದಾರೆ. 

ಈಗ, 2023ರ ವಿಧಾನಸಭಾ ಚುನಾವಣೆಯ ನೇತೃತ್ವ ವಹಿಸಿ, ರಾಜ್ಯದಾದ್ಯಂತ ಸುತ್ತಾಡಿ ಪಕ್ಷ ಸಂಘಟಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದಾರೆ. ಪಕ್ಷಕ್ಕೆ ಬಹುಮತ ಬಂದಾಗ ಪ್ರಜಾಸತ್ತಾತ್ಮಕ ರೀತಿಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ, ಮುಖ್ಯಮಂತ್ರಿಯಾಗಿದ್ದಾರೆ. ಒಬ್ಬ ಸಮರ್ಥ ಮುಖ್ಯಮಂತ್ರಿಗಿರಬೇಕಾದ ದೂರದೃಷ್ಟಿ, ಬುದ್ಧಿಮತ್ತೆ, ಅನುಭವ ಮತ್ತು ಅರ್ಹತೆಗಳಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರುವುದು ಪ್ರಜಾಪ್ರಭುತ್ವಕ್ಕೆ ಬೆಲೆ ಬರುವಂಥಾದ್ದು. ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬುವಂಥಾದ್ದು.

ಈ ನಿಟ್ಟಿನಲ್ಲಿ ರಾಜ್ಯದ ಜನತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸದಿರಲಿ, ಜನಪರ ಆಡಳಿತ ನೀಡುವ ಮೂಲಕ ಕರ್ನಾಟಕ ಕೋಮುವಾದಿಗಳ ಕೈಗೆ ಸಿಗದಂತೆ ನೋಡಿಕೊಳ್ಳಲಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರ ಬಜೆಟ್ | ”ಎಕನಾಮಿಕ್ ಸರ್ವೇ”: ಗಾಳಿ ಬಂದತ್ತ ತೂರಿಕೊಳ್ಳುವ ಪ್ಲಾನ್ ಇರಬಹುದೇ?

ಸರ್ಕಾರದ ಈ ವಾರ್ಷಿಕ ವರದಿಗಳೆಲ್ಲ ಪ್ರತ್ಯೇಕವಾಗಿ ತಮ್ಮ ತಮ್ಮ ವಾದಗಳನ್ನು ಬಲವಾಗಿ...

ಅಧಿವೇಶನ | ಮಾಲ್ ಸೇರಿ ಇತರೆಡೆ ಪ್ರವೇಶಕ್ಕೆ ಶೀಘ್ರ ಮಾರ್ಗಸೂಚಿ ಪ್ರಕಟ: ಡಿ ಕೆ ಶಿವಕುಮಾರ್

ಮಾಲ್ ಸೇರಿದಂತೆ ಯಾವುದೇ ಸ್ಥಳಗಳಿಗೆ ಭೇಟಿ ನೀಡುವವರ ನಿರ್ದಿಷ್ಟ ವಸ್ತ್ರಗಳಿಗೆ ನಿರ್ಬಂಧ...

ಲೈಂಗಿಕ ದೌರ್ಜನ್ಯ ಪ್ರಕರಣ | ಸೂರಜ್‌ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕಳೆದ ತಿಂಗಳು ಬಂಧನಕ್ಕೆ...

ಗುಬ್ಬಿ | ದಲಿತರ ಸ್ಮಶಾನ ಭೂಮಿ ವ್ಯಾಪ್ತಿಯ ಅಳತೆ ಕಲ್ಲು ಕಿತ್ತೊಗೆದ ಕಿಡಿಗೇಡಿಗಳು

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಡೇನಹಳ್ಳಿ ಗ್ರಾಮಕ್ಕೆ ಸೇರಿದ ಗೋಮಾಳ ಜಮೀನಿನಲ್ಲಿ...