ಹಾಲುಮಠದ ಪರಂಪರೆಯೇ ಬಹುತ್ವಕ್ಕೆ ಹೆಸರುವಾಸಿ. ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ವಿವಿಧ ಹಿನ್ನೆಲೆಯ ಜನಸಮೂಹ ಈ ಮಠಕ್ಕೆ ನಡೆದುಕೊಂಡು ಬರುತ್ತಿತ್ತು. ಆದರೆ ಹಾಲುಮಠದಲ್ಲಿ ಅಭಿನವ ಸ್ವಾಮೀಜಿ ಅಧಿಕಾರ ಹಿಡಿದ ಮೇಲೆ ಎಲ್ಲವೂ ಬದಲಾಗುತ್ತಾ ಹೋಯಿತು. ದ್ವೇಷ ಭಾಷಣಕಾರರ ಸಾಲಿನಲ್ಲಿ ಸ್ವಾಮೀಜಿ ಕಾಣಿಸಿಕೊಳ್ಳತೊಡಗಿದರು.
ವಿಜಯನಗರ ಜಿಲ್ಲೆಯ ಹಿರೇಹಡಗಲಿಯಲ್ಲಿರುವ ಹಾಲ ಸಂಸ್ಥಾನ ಮಠ ಈಗ ಚರ್ಚೆಯಲ್ಲಿದೆ. ಇಲ್ಲಿನ ಅಭಿನವ ಸ್ವಾಮೀಜಿ ಅರ್ಥಾತ್ ಅಭಿನವ ಹಾಲವೀರಪ್ಪಜ್ಜ ಅವರು ವಂಚನೆ ಪ್ರಕರಣದಲ್ಲಿ ಸಿಲುಕಿ ಮಠದ ಘನತೆಗೆ ಚ್ಯುತಿ ತಂದಿದ್ದಾರೆ.
ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ವಂಚಿಸಿರುವ ಪ್ರಕರಣದಲ್ಲಿ ಅಭಿನವ ಸ್ವಾಮಿ ಮೂರನೇ ಆರೋಪಿಯಾಗಿ ಬಂಧನಕ್ಕೊಳಗಾಗಿದ್ದಾರೆ. ದ್ವೇಷಭಾಷಣಗಳ ಮೂಲಕ ಮುಂಚೂಣಿಗೆ ಬಂದ ಹಿಂದುತ್ವ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೆರೆಯಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಹಾಲಮಠದ ಸ್ವಾಮೀಜಿ ಒಡಿಶಾದಲ್ಲಿ ಪೊಲೀಸರ ಬಲೆಗೆಬಿದ್ದು ಈಗ ಸಿಸಿಬಿ ವಶದಲ್ಲಿದ್ದಾರೆ.
ವೀರಶೈವ- ಲಿಂಗಾಯತ ಪರಂಪರೆಗೆ ಸೇರಿದ ಹಾಲ ಸಂಸ್ಥಾನ ಮಠ ವಿಶೇಷವಾಗಿ ಸಂತಾನ ಮಠವೆಂದೂ, ಪುತ್ರ ಮಠವೆಂದೂ ಪ್ರಸಿದ್ಧಿ ಪಡೆದಿದೆ. ಅಂದರೆ ಇಲ್ಲಿನ ಮಠಾಧೀಶರು ಮದುವೆಯಾಗುತ್ತಾರೆ, ಸಂಸಾರಿಗಳಾಗಿ ಬಾಳುತ್ತಾರೆ. ಮಠಾಧೀಶರ ಮಕ್ಕಳು ಮಠದ ಅಧಿಕಾರ ಹಿಡಿದು ಮುಂದುವರಿಯುತ್ತಾರೆ.
ಶರಣರು ’ಸತಿ ಪತಿ’ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು. ಹೀಗಾಗಿ ಸ್ವಾಮೀಜಿಗಳು ಮದುವೆಯಾಗುವುದು ಈ ನೆಲದ ಅವೈದಿಕ ಧಾರೆಯ ರೂಢಿಗಳಲ್ಲಿ ಒಂದು. ಈ ಕಾರಣಕ್ಕಷ್ಟೇ ಅಲ್ಲದೇ ಸೌಹಾರ್ದ ಪರಂಪರೆಗೂ ಸಾಕ್ಷಿಯಾಗಿದ್ದರಿಂದ ಹಿರೇಹಡಗಲಿಯ ಹಾಲಮಠ ಭಿನ್ನವಾಗಿ ನಿಲ್ಲುತ್ತದೆ.
ಹಾಲುಮಠದ ಪರಂಪರೆಯೇ ಬಹುತ್ವಕ್ಕೆ ಹೆಸರುವಾಸಿ. ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ವಿವಿಧ ಹಿನ್ನೆಲೆಯ ಜನಸಮೂಹ ಈ ಮಠಕ್ಕೆ ನಡೆದುಕೊಂಡು ಬರುತ್ತಿತ್ತು. ಆದರೆ ಹಾಲುಮಠದಲ್ಲಿ ಅಭಿನವ ಸ್ವಾಮೀಜಿ ಅಧಿಕಾರ ಹಿಡಿದ ಮೇಲೆ ಎಲ್ಲವೂ ಬದಲಾಗುತ್ತಾ ಹೋಯಿತು. ದ್ವೇಷ ಭಾಷಣಕಾರರ ಸಾಲಿನಲ್ಲಿ ಸ್ವಾಮೀಜಿ ಕಾಣಿಸಿಕೊಳ್ಳತೊಡಗಿದರು.
ಸಾಮೂಹಿಕ ವಿವಾಹ, ಮುಳ್ಳುಗದ್ದುಗೆ ಉತ್ಸವದ ಮೂಲಕ ಗಮನ ಸೆಳೆಯುವ ಈ ಮಠ ಉತ್ತರ ಕರ್ನಾಟಕದಲ್ಲಿ ಹಲವು ಶಾಖೆಗಳನ್ನೂ ಹೊಂದಿದೆ. ಅಭಿನವ ಸ್ವಾಮೀಜಿಯ ತಂದೆ ಹಾಲ ವೀರಭದ್ರಜ್ಜ ವೃತ್ತಿಯಲ್ಲಿ ವ್ಯವಸಾಯಗಾರರಾಗಿದ್ದರು. ಜನರಿಂದ ಪಡೆದ ಕಾಳು, ಕಡ್ಡಿ, ದವಸ, ಧಾನ್ಯ, ದೇಣಿಗೆಯ ಮೂಲಕ ಮುಳ್ಳಗದ್ದುಗೆ ಜಾತ್ರೆ ನಡೆಸುತ್ತಿದ್ದರು. ಹಿಂದೂ ಮುಸ್ಲಿಂ ಸಮುದಾಯಗಳು ಒಟ್ಟಿಗೆ ಸೇರಿ ಈ ಜಾತ್ರೆಯನ್ನು ನಡೆಸುವುದು ವಿಶೇಷವಾಗಿತ್ತು.
ಅಭಿನವ ಸ್ವಾಮೀಜಿ ಈ ಸಲದ ಜಾತ್ರೆಗೆ ಯಾವುದೇ ದೇಣಿಗೆಯನ್ನು ಪಡೆಯಲಿಲ್ಲ. ಎಲ್ಲ ವೆಚ್ಚವನ್ನೂ ಅವರೇ ಭರಿಸಿದರು. ಸ್ಥಳೀಯ ಸಂಸ್ಥೆಯ ಚುನಾವಣೆಗಳ ಸಂದರ್ಭದಲ್ಲೂ ಸ್ವಾಮೀಜಿ ತಮ್ಮ ಕೋಮುದ್ವೇಷವನ್ನು ಪ್ರದರ್ಶಿಸಿದ್ದರು. ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿದ ಕಳಂಕವನ್ನು ಮೆತ್ತಿಕೊಂಡರು.
ಅಭಿನವ ಸ್ವಾಮೀಜಿಯವರು ಕೂಡ ತಂದೆಯಂತೆ ವೃತ್ತಿಯಲ್ಲಿ ಕೃಷಿಯ ಮೂಲಕ ಗುರುತಿಸಿಕೊಂಡಿದ್ದವರು. ಇವರ ಕುಟುಂಬಸ್ಥರಾದ ಹಾಲ ಸೋಮಜ್ಜ, ಸಿದ್ದಪ್ಪ, ಸಣ್ಣ ಹಾಲ ಸ್ವಾಮೀಜಿ ಕೂಡ ವ್ಯವಸಾಯಗಾರರಾಗಿದ್ದಾರೆ. ಕುಟುಂಬಸ್ಥರ ನಡುವೆ ಜಮೀನು ಹಂಚಿಕೆಯಾಗಿ ಈಗ ಹಿರೇಹಡಗಲಿ ಮಠವು ಸುಮಾರು 40 ಎಕರೆ ಜಮೀನು ಹೊಂದಿದೆ ಎಂದು ವರದಿಗಳು ಹೇಳುತ್ತವೆ. ಹೀಗೆ ತನ್ನ ಪಾಡಿಗೆ ತಾನಿದ್ದ ಮಠ, ಹಿಂದುತ್ವದ ಕುಲುಮೆಗೆ ಸಿಲುಕಿ ತನ್ನ ಸಾಂಸ್ಕೃತಿಕ ಚಹರೆಗಳನ್ನು ಕಳೆದುಕೊಳ್ಳತೊಡಗಿತು.
ರಾಜಕೀಯವಾಗಿ ಗುರುತಿಸಿಕೊಳ್ಳುವ ಇರಾದೆ ಹೊಂದಿದ್ದ ಅಭಿನವ ಸ್ವಾಮೀಜಿ ಹಿಂದುತ್ವದ ಪ್ರತಿಪಾದಕರಾಗಿ ಹೊಮ್ಮಿದರು. ಬಿಜೆಪಿಯ ದೊಡ್ಡ ದೊಡ್ಡ ನಾಯಕರ ಸಖ್ಯ ಬೆಳೆಸಿಕೊಂಡರು. ಕರಾವಳಿ ಕರ್ನಾಟಕದ ಕೋಮು ದ್ವೇಷ ಭಾಷಣಕಾರರನ್ನು ತಮ್ಮ ಪ್ರಾಂತ್ಯಕ್ಕೆ ಕರೆಸಿ ಕಾರ್ಯಕ್ರಮಗಳನ್ನು ನಡೆಸಿದರು. ಹೀಗೆ ಸ್ವಾಮೀಜಿಯ ಸಂಪರ್ಕಕ್ಕೆ ಬಂದವರೇ ಚೈತ್ರಾ ಕುಂದಾಪುರ ಮತ್ತು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ಎನ್ನುತ್ತಾರೆ ಸ್ಥಳೀಯರು.
“ಸ್ವಾಮೀಜಿಗೆ ದೊಡ್ಡದೊಡ್ಡ ಬಿಜೆಪಿ ನಾಯಕರ ಒಡನಾಟವಿತ್ತು. ಆದರೆ ಟಿಕೆಟ್ ಕೊಡಿಸುವ ಮಟ್ಟಕ್ಕೆ ಸ್ವಾಮೀಜಿ ಬೆಳೆದಿದ್ದರೆ, ಪ್ರಭಾವಿಯಾಗಿದ್ದರೂ ಗೋವಿಂದ ಪೂಜಾರಿ ವಿಚಾರದಲ್ಲಿ ಯಡವಟ್ಟಾಗಿದ್ದಾದರೂ ಹೇಗೆ?” ಎಂಬುದೆಲ್ಲ ಬಯಲಾಗಬೇಕಿದೆ.
ಹಿಂದುತ್ವದ ಬೆನ್ನೇರಿ ಹೋಗುತ್ತಿದ್ದ ಸ್ವಾಮೀಜಿಗೆ ಅವರ ಚಿಕ್ಕಪ್ಪಂದಿರುವ ಬುದ್ಧಿ ಹೇಳಿದ್ದರು. “ನಮ್ಮದು ಬಹುತ್ವದ ಮಠ, ಜಾತ್ಯತೀತ ಸಂಸ್ಕೃತಿ. ಇಲ್ಲಿ ಕೋಮುದ್ವೇಷ ಸಲ್ಲದು” ಎಂದೂ ತಿಳಿ ಹೇಳಿದ್ದರು. ಆದರೆ ಅಭಿನವರು ಈ ಮಾತುಗಳಿಗೆ ಕಿವುಡರಾಗಿ ವರ್ತಿಸತೊಡಗಿದರು. ತನ್ನನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಎಂದು ಭಾವಿಸಿದ್ದರು. ದೊಡ್ಡದೊಡ್ಡ ಬಿಜೆಪಿ ನಾಯಕರು ಕೂಡ ತಮ್ಮನ್ನು ಭೇಟಿಯಾಗಲು ಬರುತ್ತಿದ್ದರಿಂದ ಅಭಿನವ ಸ್ವಾಮೀಜಿಗೆ ಕೆಲವೊಂದು ರಾಜಕೀಯ ಕಥೆಗಳು ತಿಳಿಯುತ್ತಿದ್ದವು. ರಾಜಕೀಯ ಮೂಲಗಳಿಂದ ತಿಳಿದ ಗುಟ್ಟುಗಳನ್ನು ಹೇಳಿಕೊಂಡು ತನಗೆ ದೊಡ್ಡ ಸಂಪರ್ಕ ಜಾಲವೇ ಇದೆ ಎಂದು ಬಿಂಬಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಅಭಿನವರ ಬಲೆಗೆ ಗೋವಿಂದ ಪೂಜಾರಿ ಬಿದ್ದರು. ಆ ಬಳಿಕ ಟಿಕೆಟ್ ಕೊಡಿಸಲು ಶಿಫಾರಸ್ಸು ಮಾಡುವುದಕ್ಕಾಗಿ ಒಂದೂವರೆ ಕೋಟಿ ರೂ.ಗಳನ್ನು ಪಡೆದರು. ಆನಂತರ ಸ್ವಾಮೀಜಿ ಭೂಮಿ ಖರೀದಿ ಮಾಡಿದರು, ಪೆಟ್ರೋಲ್ ಪಂಪ್ ಸ್ಥಾಪಿಸಿದರು. ಐಷಾರಾಮಿ ಕಾರು ಖರೀದಿ ಮಾಡಿದರು. ತನಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಗೋವಿಂದ ಪೂಜಾರಿಗೆ ತಿಳಿಯುವ ವೇಳೆಗೆ ಕಾಲ ಮಿಂಚಿ ಹೋಗಿತ್ತು. ಕೋಟ್ಯಂತರ ಹಣವನ್ನು ಕಳೆದುಕೊಂಡು ಹತಾಷರಾದ ಪೂಜಾರಿ, ಅನಿವಾರ್ಯವಾಗಿ ಕಾನೂನಿನ ಹಾದಿ ಹಿಡಿದರು. ಪ್ರಕರಣ ದಾಖಲಾಗುತ್ತಿದ್ದಂತೆ ಕಾವಿ ಕಳಚಿಟ್ಟು ಪರಾರಿಯಾಗಿದ್ದ ಸ್ವಾಮೀಜಿ ಟೀಶರ್ಟ್ ಧರಿಸಿ ತಲೆಮರೆಸಿಕೊಂಡಿದ್ದರು. ಈಗ ಅನೇಕ ಆರೋಪಗಳು ಸ್ವಾಮೀಜಿ ಮೇಲೆ ಕೇಳಿಬರತೊಡಗಿವೆ. ಬಂಧನ ಬಳಿಕ ಮತ್ತೊಂದು ದೂರು ದಾಖಲಾಗಿದ್ದು, ಸ್ವಾಮೀಜಿ ಮತ್ತೊಬ್ಬರಿಗೆ ವಂಚಿಸಿರುವ ಆರೋಪ ಬಂದಿದೆ.
ವಚನ ಪರಂಪರೆಯ ಹಾದಿಯಲ್ಲಿ ನಡೆದು, ಸೌಹಾರ್ದತೆಯನ್ನು ಕಟ್ಟಬೇಕಿದ್ದ ಅಭಿನವ ಹಾಲಶ್ರೀ ಈಗ ಕಾನೂನಿಕ ಕಟಕಟೆಯಲ್ಲಿ ನಿಂತಿದ್ದಾರೆ. ದ್ವೇಷವನ್ನು ಬಿತ್ತಿ, ರಾಜಕೀಯ ಫಸಲು ಪಡೆಯುವವರ ಜೊತೆ ಕುಳಿತುಕೊಳ್ಳಲು ಹೋಗಿ ಮಠದ ಪರಂಪರೆಗೆ ಕಳಂಕ ತಂದೊಡ್ಡಿದ್ದಾರೆ ಎಂಬುದು ಇಲ್ಲಿನ ಸ್ಥಳೀಯರ ಅಭಿಪ್ರಾಯ.
ಯತಿರಾಜ್ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ