ಭವನ ಪ್ರಜಾಪ್ರಭುತ್ವದ್ದು, ಭಾವನೆ ರಾಜಪ್ರಭುತ್ವದ್ದು!

Date:

ದುರಹಂಕಾರಿ ಸರ್ವಾಧಿಕಾರಿಗಳು ವಿರಾಟವಾದ ಸ್ಮಾರಕ ಮತ್ತು ಭವ್ಯ ಭವನಗಳನ್ನು ನಿರ್ಮಿಸುವ ಶೋಕಿ ಹೊಂದಿರುತ್ತಾರೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಯಾವ ಸಂಸದರು ಕೇವಲ ರಬರ್ ಸ್ಟ್ಯಾಂಪ್ ಆಗಿರುತ್ತಾರೋ, ಸಾಮಾನ್ಯವಾಗಿ ಅವರ ಭವನಗಳೂ ತುಂಬಾ ಭವ್ಯವಾಗಿರುತ್ತವೆ

“ಪ್ರಶ್ನೆ ಭವನದ್ದಲ್ಲ, ಭಾವನೆಯದ್ದು…” ನನಗೆ ಸಂಸತ್ತಿನ ಹೊಸ ಭವನದ ಬಗ್ಗೆ ಪ್ರತಿಕ್ರಿಯೆ ನೀಡಬೇಕೆಂದು ಕೇಳಿದಾಗ, ನನ್ನ ಬಾಯಿಯಿಂದ ಹೊರಬಂದ ಮಾತಿದು.

ಭಾರತೀಯ ಸಂಸತ್ತಿಗೆ ಹೊಸದೊಂದು ಕಟ್ಟಡ ಬೇಕಿತ್ತೋ ಇಲ್ಲವೋ ಎಂಬುದು ಪ್ರಶ್ನೆ ಅಲ್ಲ. ಹಲವಾರು ಸಂಸದರು ಹೇಳಿದ್ದೇನೆಂದರೆ, ಹಳೆಯ ಕಟ್ಟಡವು ಈಗ ಕಾರ್ಯ ನಿರ್ವಹಿಸಲು ಸೂಕ್ತವಿಲ್ಲ ಹಾಗೂ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿಲ್ಲ ಎಂದು. ನಾನು ಈಗಲೂ ಮಿತವ್ಯಯಿ ಮನೋಭಾವದವನು, ಯಾವಾಗಲೂ ದುಂದುಗಾರಿಕೆ ತಪ್ಪಿಸಲು ಪ್ರಯತ್ನಿಸುತ್ತಿರುತ್ತೇನೆ. ಹಳೆಯ ಕಟ್ಟಡ ರಿಪೇರಿ ಮಾಡಿ ನವೀಕರಿಸಬಹುದಿತ್ತು ಎಂದು ನನಗೆ ಅನಿಸುತ್ತಿತ್ತು.

ಹೇಗೂ ಬಡ ಜನರ ಈ ಪ್ರಜಾಪ್ರಭುತ್ವದ ಪ್ರತೀಕವಾಗಿ ಯಾವುದೇ ಒಂದು ಅತ್ಯಂತ ಭವ್ಯವಾದ ಕಟ್ಟಡ ಇರುವ ವಿಷಯ ಅರಗಿಸಿಕೊಳ್ಳುವುದು ಕಷ್ಟವೇ. ಆದರೆ ನಾನು ಎಂದೂ ಈ ಕಟ್ಟಡವನ್ನು ಬಳಸಿದವನಲ್ಲ, ಅಲ್ಲಿ ಪ್ರತಿದಿನ ಹೋಗುವ ಸಂಸದರ ಮಾತು ಸರಿ ಇರಬಹುದು. ಹೊಸದೊಂದು ಭವನವೊಂದೇ ಪರ್ಯಾಯವಾಗಿರಬಹುದು. ಮೊದಲಿನ ಭವನಕ್ಕಿಂತ ಈ ಹೊಸ ಭವನವೇ ಚೆನ್ನಾಗಿರಬಹುದು. ಇದು ನಿಸ್ಸಂಶಯವಾಗಿಯೂ ಸೌಲಭ್ಯಗಳು ಮತ್ತು ತಂತ್ರಜ್ಞಾನದೊಂದಿಗೆ ಸಜ್ಜಾಗಿರುತ್ತದೆ. ಆದರೆ ಇದು ಅಸಲಿ ಪ್ರಶ್ನೆಯಲ್ಲ. ಪ್ರಶ್ನೆ ಇರುವುದು, ಈ ಹೊಸ ಭವನ ಯಾವ ಭಾವನೆಯನ್ನು ಪ್ರತಿನಿಧಿಸುತ್ತಿದೆ ಎಂಬುದು.

ಸರಕಾರಿ ಮತ್ತು ಭಟ್ಟಂಗಿ ಜನರ ಮಾತು ಕೇಳಿದರೆ, ಸಂಸತ್ತಿನ ಈ ಹೊಸ ಭವನವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಶಕ್ತಿಯ ಭವ್ಯ ಪ್ರತೀಕವಾಗಿದೆ. ಸ್ವಾಭಾವಿಕವಾಗಿಯೇ ವಿರೋಧ ಪಕ್ಷಗಳು ಈ ಹೇಳಿಕೆಗಳನ್ನು ಒಪ್ಪುತ್ತಿಲ್ಲ. ಕಳೆದ 9 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಾಧನೆಗಳು ಏನೇ ಇರಲಿ, ಆದರೆ ಅವರ ಸಮರ್ಥಕರೂ ಮೋದಿಯವರು ಪ್ರಜಾಸತ್ತಾತ್ಮಕ ಪ್ರತಿಷ್ಟೆ ಮತ್ತು ಸಂಸದೀಯ ಪರಂಪರೆಗಳಿಗೆ ಗೌರವ ನೀಡಿದ್ದಾರೆ ಎಂದು ಹೇಳಲು ಸಂಕೋಚ ಪಟ್ಟುಕೊಳ್ಳುತ್ತಾರೆ.

ಅವರ ಕಾರ್ಯಾವಧಿಯಲ್ಲಿ ಸಂಸತ್ತಿನ ಕಲಾಪಗಳ ಅವಧಿ ಕಿರಿದಾದವು. ಯಾವುದೇ ಚರ್ಚೆಯಿಲ್ಲದೇ ಜಾರಿಗೊಳಿಸಲಾದ ಕಾನೂನುಗಳ ಸಂಖ್ಯೆ ಹೆಚ್ಚಿತು. ಮೊದಲ ಬಾರಿ ರಾಜ್ಯ ಸಭೆಯಲ್ಲಿ ಮತದಾನ ಮಾಡದೇ ಕಾನೂನುಗಳನ್ನು ಜಾರಿಗೊಳಿಸಲಾಯಿತು. ಮೊದಲ ಬಾರಿ ಬಜೆಟ್ ಮತ್ತು ವಿತ್ತೀಯ ಮಸೂದೆಗಳ ನೆಪದಲ್ಲಿ ಸಾಮಾನ್ಯ ಕಾನೂನುಗಳನ್ನು ಮೇಲ್ಮನೆಯಿಂದ ಬೈಪಾಸ್ ಮಾಡಲಾಯಿತು. ಮೊದಲ ಬಾರಿ ವಿರೋಧ ಪಕ್ಷದ ನಾಯಕರು ಮಾತನಾಡುವ ಸಮಯದಲ್ಲಿ ಕ್ಯಾಮೆರಾಗಳನ್ನು ಬಂದ್ ಮಾಡಿಸಲಾಯಿತು, ಅವರ ಮೈಕ್‍ಗಳೂ ಬಂದ್ ಆದವು. ಮೊದಲ ಬಾರಿ ಆಡಳಿತಾರೂಢ ಪಕ್ಷವೇ ಹುಯಿಲೆಬ್ಬಿಸಿ ಸಂಸತ್ತಿನ ಕಾರ್ಯಕಲಾಪವನ್ನು ಬಂದ್ ಮಾಡಿಸಿತು. ಮೊದಲ ಬಾರಿ ವಿರೋಧ ಪಕ್ಷದ ದೊಡ್ಡ ಸಂಸದನ ಸದಸ್ಯತ್ವ ರದ್ದುಪಡಿಸುವ ಆಟ ಆಡಲಾಯಿತು. ಹಾಗಾಗಿ, ಯಾವ ಸಂಸತ್ತಿನ ಹಿರಿಮೆ ಕುಸಿಯುತ್ತಿದೆಯೋ, ಅದಕ್ಕಾಗಿ ಭವ್ಯ ಭವನದ ನಿರ್ಮಾಣವು ಪ್ರಶ್ನೆಗಳನ್ನು ಹುಟ್ಟುಹಾಕುವುದು ಸ್ವಾಭಾವಿಕವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಭವನದ ಉದ್ಘಾಟನೆಯೊಂದಿಗೆ ಸಂಬಂಧಿಸಿದ ವಿವಾದವನ್ನು ಇದೇ ಬೆಳಕಿನಲ್ಲಿ ನೋಡಬೇಕಿದೆ. ಹಾಗೆ ನೋಡಿದರೆ, ಉದ್ಘಾಟನೆಯು ರಾಷ್ಟ್ರಪತಿಯ ಕೈಯಿಂದಲೇ ಆಗಬೇಕು ಎಂಬ ಕಡ್ಡಾಯವೇನಿಲ್ಲ. ಹಾಗೆಯೇ, 26ನೆಯ ಜನವರಿಯಂದು ನಡೆಯುವ ಪರೇಡ್‍ನ ಸಲಾಮಿ/ಗೌರವ ವಂದನೆ ರಾಷ್ಟ್ರಪತಿಗಳೇ ಸ್ವೀಕರಿಸಬೇಕು ಎಂತಲೂ ಎಲ್ಲಿಯೂ ಬರೆದಿಲ್ಲ. ಇವೆಲ್ಲ ಪ್ರಜಾಪ್ರಭುತ್ವದ ಸಂಪ್ರದಾಯಗಳು ಹಾಗೂ ನಿಸ್ಸಂದೇಹವಾಗಿ ಈ ಬಾರಿ ಆ ಗೌರವದ ಉಲ್ಲಂಘನೆಯಾಗಿದೆ. ವಿರೋಧ ಪಕ್ಷಗಳು ಈ ಉದ್ಘಾಟನಾ ಸಮಾರಂಭವನ್ನು ಬಾಯ್ಕಾಟ್ ಮಾಡುವ ನಿರ್ಧಾರ ಮುಂಚೆಯೇ ತೆಗೆದುಕೊಂಡಿರುವ ಸಾಧ್ಯತೆ ಇದೆ ಹಾಗೂ ಈ ತಾಂತ್ರಿಕ ಆಕ್ಷೇಪಣೆ ಮಾಡಿರಬಹುದು ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಆಯೋಜನೆಯ ಬಳಕೆಯನ್ನು ತಮ್ಮ ವ್ಯಕ್ತಿಗತ ಇಮೇಜ್ ಕಟ್ಟಿಕೊಳ್ಳಲು ಬಯಸಿದ್ದರು ಹಾಗೂ ಆ ಫೋಟೊದಲ್ಲಿ ಅಥವಾ ಚಿತ್ರಣದಲ್ಲಿ ಬೇರೆ ಯಾರೂ, ಅವರು ಮಹಾಮಹಿಮ ರಾಷ್ಟ್ರಪತಿಯೇ ಆಗಿರಲಿ, ಯಾರೂ ಅಡ್ಡಬರುವುದು ಅವರಿಗೆ ಇಷ್ಟವಿರಲಿಲ್ಲ ಎಂಬುದೂ ನಿಚ್ಚಳ ಸತ್ಯ ನಿನ್ನೆಯ ತನಕ ಯಾವ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿಯನ್ನು ಇಡೀ ದೇಶದ ಹೆಮ್ಮೆಯ ಪ್ರತೀಕ ಎಂದು ಬಿಂಬಿಸಲಾಗುತ್ತಿತ್ತೋ, ಅವರನ್ನು ಈ ಐತಿಹಾಸಿಕ ಸಂದರ್ಭದಲ್ಲಿ ಮೂಲೆಗುಂಪು ಮಾಡುವ ಈ ಕೆಲಸವು ಒಂದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ; ಈ ಸರಕಾರಕ್ಕೆ ಭಾರತದ ಪ್ರಜಾಸತ್ತಾತ್ಮಕ ಇತಿಹಾಸದಿಂದ ಏನಾದರೂ ತೊಂದರೆ ಇದೆಯೇ?

ಈ ಸಮಾರಂಭಕ್ಕೆ ಸಂಬಂಧಿಸಿದ ಅನೇಕ ಪ್ರತೀಕಗಳು ಸರಕಾರದ ನಿಯತ್ತಿನ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಇದನ್ನು ವಿನಾಯಕ ದಾಮೋದರ ಸಾವರ್ಕರ್‌ ಜನ್ಮದಿನ 28ನೆಯ ಮೇರಂದು ಆಯೋಜಿಸಿರುವುದು ಒಂದು ಆಳವಾದ ಸೂಚಕವಾಗಿದೆ. ನೆನಪಿಡಿ ಸಾವರ್ಕರ್ ಪ್ರಜಾಪ್ರಭುತ್ವದ ಬೆಂಬಲಿಗರಾಗಿದ್ದಿಲ್ಲ, ಅವರು ಹಿಟ್ಲರ್ ಮತ್ತು ಮುಸೋಲನಿಯ ಪ್ರಶಂಸಕರಾಗಿದ್ದರು. ಈ ಸಂದರ್ಭದಲ್ಲಿ ಧರ್ಮಗುರುಗಳ ಉಪಸ್ಥಿತಿ ಹಾಗೂ ಸ್ವಯಂ ಒಂದು ಧಾರ್ಮಿಕ ಸಮುದಾಯದ ಆಚರಣೆಯನ್ನು ಬಳಸಿರುವುದು ಭಾರತದ ಜಾತ್ಯತೀತ ಸ್ವರೂಪಕ್ಕೆ ಹೊಂದಿಕೆಯಾಗುವುದಿಲ್ಲ. ಸಂಗೋಲ್ ರೂಪದಲ್ಲಿರುವ ರಾಜದಂಡವನ್ನು ವಸ್ತುಸಂಗ್ರಹಾಲಯದಿಂದ ಹೊರತಂದು ಅದಕ್ಕೆ ಪೌರಾಣಿಕ ಮಹತ್ವ ನೀಡಿ, ಅದನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯ ಕೈಗೆ ಅರ್ಪಿಸುವುದು, ಇವೆಲ್ಲ ಈ ಸಮಾರಂಭಕ್ಕೆ ರಾಜ್ಯಾಭಿಷೇಕದ ಸ್ವರೂಪ ನೀಡುತ್ತವೆ, ಪ್ರಜಾಪ್ರಭುತ್ವದ ಬದಲಿಗೆ ರಾಜತಂತ್ರದ ಇಮೇಜ್ ಸೃಷ್ಟಿಸುತ್ತವೆ.

ಒಂದು ವೇಳೆ ಮೇ 28ರಂದು ಆದ ಅಪೂರ್ವ ಘಟನೆಯ ಭಾವನೆ ತಿಳಿದುಕೊಳ್ಳುವಲ್ಲಿ ಯಾವುದೇ ಸಂದೇಹ ಬಾಕಿ ಇದ್ದರೆ, ಅದನ್ನು ಮಹಿಳಾ ಕುಸ್ತಿಪಟುಗಳೊಂದಿಗೆ ಆದ ಅನುಚಿತ ವರ್ತನೆಯು ಪೂರ್ಣಗೊಳಿಸಿತು. ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವದ ಜೀವವಿದ್ದಂತೆ. ಪ್ರಜಾಪ್ರಭುತ್ವದ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಆ ಮಂದಿರವನ್ನು ಮೈಲಿಗೆಗೊಳಿಸಿದಂತೆ. ಇಂತಹ ಅನುಚಿತ ವರ್ತನೆ ಯಾವ ಪ್ರಜೆಯೊಂದಿಗೂ ಆಗಬಾರದಿತ್ತು, ಆದರೆ ಇಂತಹ ರಾಷ್ಟ್ರೀಯ ಹೆಮ್ಮೆಯ ಪ್ರತೀಕವಾದ ಒಲಿಂಪಿಕ್ ಆಟಗಾರರೊಂದಿಗೆ ಹೀಗೆ ಮಾಡುವುದು ಅಧಿಕಾರದ ನಿರಂಕುಶತೆಯನ್ನು ಪರಿಚಯಿಸುತ್ತದೆ. ಅದೂ ಕೂಡ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಒಬ್ಬ ನಾಯಕನನ್ನು ಉಳಿಸಲು. ಮಹಿಳಾ ಕುಸ್ತಿಪಟುಗಳನ್ನು ಪೊಲೀಸರು ಎಳೆದುಕೊಂಡು ಹೋಗುತ್ತಿರುವ ಚಿತ್ರಣಗಳು ವಿಶ್ವಾದ್ಯಂತ ಭಾರತೀಯ ಪ್ರಜಾಪ್ರಭುತ್ವದ ಹೆಸರನ್ನು ಕಳಂಕಿತಗೊಳಿಸಿವೆ.

ಇದನ್ನು ಓದಿ ಭಾರತದ ರಾಜಕಾರಣ ಹದಗೆಟ್ಟಿದೆ : ರಾಹುಲ್‌ ಗಾಂಧಿ

ದುರಹಂಕಾರಿ ಸರ್ವಾಧಿಕಾರಿಗಳು ವಿರಾಟವಾದ ಸ್ಮಾರಕ ಮತ್ತು ಭವ್ಯ ಭವನಗಳನ್ನು ನಿರ್ಮಿಸುವ ಶೋಕಿ ಹೊಂದಿರುತ್ತಾರೆ ಎಂಬುದು ಇತಿಹಾಸ ಸಾಕ್ಷಿಯಾಗಿದೆ. ಯಾವ ಸಂಸದರು ಕೇವಲ ರಬ್ಬರ್ ಸ್ಟ್ಯಾಂಪ್ ಆಗಿರುತ್ತಾರೋ, ಸಾಮಾನ್ಯವಾಗಿ ಅವರ ಭವನಗಳೂ ತುಂಬಾ ಭವ್ಯವಾಗಿರುತ್ತವೆ. ಆದರೆ ಇತಿಹಾಸ ಇನ್ನೊಂದು ಹೇಳುತ್ತದೆ, ಕೊನೆಯಲ್ಲಿ ಜನರ ಭಾವನೆಗಳು ಆಡಳಿತದಲ್ಲಿರುವವರ ಭಾವನೆಗಳಿಂದ ಪ್ರಬಲವೆಂದು ಸಾಬೀತಾಗುತ್ತದೆ. ಒಂದು ವೇಳೆ ಭಾರತೀಯ ಪ್ರಜಾಪ್ರಭುತ್ವವು ಬ್ರಿಟಿಷರಿಂದ ನಿರ್ಮಿಸಲಾದ ಸಂಸತ್ತಿನ ಭವನವನ್ನು ಪ್ರಜಾಸತ್ತಾತ್ಮಕ ಭಾವನೆಗಳಿಂದ ತುಂಬಿಸಲು ಸಾಧ್ಯವಾಗಿದೆಯೆಂದರೆ, ಸಂಸತ್ತಿನ ಹೊಸ ಭವನದ ಮೇಲೆ ಇಂದಿನ ಆಡಳಿತಗಾರರ ಭಾವನೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬುದರ ಮೇಲೆಯೂ ಭರವಸೆ ಇರಿಸಬೇಕಾಗುತ್ತದೆ. ನಿರಂಕುಶ ಆಡಳಿತದ ಉದ್ದೇಶಗಳನ್ನು ಸೋಲಿಸಿ ಪ್ರಜಾಪ್ರಭುತ್ವ ಗೆಲ್ಲಲಿದೆ.

ಯೋಗೇಂದ್ರ ಯಾದವ್‌
ಯೋಗೇಂದ್ರ ಯಾದವ್

ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್
ಸ್ವರಾಜ್‌ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರು, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇನ್ಸೈಡ್ ಔಟ್ ಸಿನಿಮಾ ನೋಡಿ- ಒಳಗಿನ ಹೊರಗೊಂದು ವಿಸ್ಮಯ ಅರಿಯಿರಿ

ಪಿಕ್ಸರ್ ಅವರ 'ಇನ್ಸೈಡ್ ಔಟ್' (inside out) ಬಂದು ಒಂಬತ್ತು ವರ್ಷಗಳೇ...

2025ಕ್ಕೆ ವಿನಾಶಕಾರಿ ಪ್ರಳಯವಾಗುತ್ತಾ?; ಬಾಬಾಗಳು ಮತ್ತು ವದಂತಿಗಳು

ಸದ್ಯ, ಮನುಷ್ಯ ತನ್ನದೇ ಸ್ವತ್ತು ಎಂದು ಭಾವಿಸಿರುವ, ತನಗಿಷ್ಟ ಬಂದಂತೆ ಬಳಿಸಿಕೊಳ್ಳುತ್ತಿರುವ...

ಪ್ರಾಂಶುಪಾಲರ ನೇರ ನೇಮಕಾತಿ ರದ್ದತಿ ಅನಿವಾರ್ಯ

ಸರ್ಕಾರವು ಕೂಡಲೇ ಅಂತರ ಇಲಾಖಾ ʼಉನ್ನತ ಶಿಕ್ಷಣಾಡಳಿತ ಸೇವೆʼ ಎಂಬ ಎ...