ಮೈಕ್ರೋಸ್ಕೋಪು | ಜೂಜುಕೋರ ವಿಜ್ಞಾನಿಗಳ ಸ್ವಾರಸ್ಯಕರ ಬಾಜಿಗಳು

Date:

ವಿಜ್ಞಾನಿಗಳಿಗೆ ಹಣವೇ ಮುಖ್ಯವಲ್ಲ. ಅದಕ್ಕಿಂತಲೂ ಮುಖ್ಯವಾದುದು ಪ್ರತಿಷ್ಠೆ. ತಮ್ಮ ಶೋಧ ಅಥವಾ ತರ್ಕ ಸರಿಯಾದದ್ದು ಎನ್ನುವ ಪ್ರತಿಷ್ಠೆ. ಇದರಿಂದಾಗಿಯೇ ಹಲವಾರು ಗೊಂದಲಮಯ ಶೋಧಗಳು ವಿವಾದಾಸ್ಪದವಾಗುತ್ತವೆ. ಕೊನೆಯಿಲ್ಲದೆ ಮುಂದುವರಿಯುತ್ತವೆ

ವಿಜ್ಞಾನಿಗಳು ಬಹಳ ಜೂಜುಕೋರರು ಅಂದರೆ ಬಹುಶಃ ನೀವು ನಂಬಲಿಕ್ಕಿಲ್ಲ. ಆದರೆ, ನನಗಂತೂ ಅದು ಖಂಡಿತ. ಬೇಕಿದ್ದರೆ ನೂರೋ, ಸಾವಿರ ರೂಪಾಯಿಯೋ ಬಾಜಿ ಕಟ್ಟೋದಿಕ್ಕೂ ನಾನು ತಯಾರು. ನೀವು ತಯಾರಿದ್ದೀರಾ? ಗೆದ್ದರೆ ನಾನು ನಿಮಗೆ ಸಾವಿರ ರೂಪಾಯಿ ಕೊಡುತ್ತೇನೆ, ಸೋತರೆ ನೀವು ನನಗೆ ಅಷ್ಟೇ ಹಣ ಕೊಡಬೇಕು.

ಇದೇನು ಹೀಗೆ ಹೇಳ್ತಿದ್ದೀನಿ ಅಂದಿರಾ? ಈ ಬಾಜಿ ಕಟ್ಟುವ ಪರಿಪಾಠ ವಿಜ್ಞಾನದಲ್ಲಿ ಬಲು ಸಾಮಾನ್ಯವಂತೆ. ಹಾಗಂತ ಇತ್ತೀಚೆಗೆ ಒಂದು ಸುದ್ದಿ ಬಂದಿತ್ತು. ಅಮೆರಿಕದ ಇಬ್ಬರು ವಿಜ್ಞಾನಿಗಳು ಹದಿನಾರು ವರ್ಷಗಳ ಹಿಂದೆ ಹೀಗೇ ಒಂದು ಬಾಜಿ ಕಟ್ಟಿದ್ದರು. ಕಳೆದ ಶತಮಾನದಲ್ಲಿ ಅಂದರೆ, ಇಪ್ಪತ್ತನೆಯ ಶತಮಾನದಲ್ಲಿ ಹುಟ್ಟಿದವರಲ್ಲಿ ಕೆಲವರಾದರೂ ನೂರೈವತ್ತು ವರ್ಷಗಳ ಕಾಲ ಬದುಕಿಯೇ ಬದುಕುತ್ತಾರೆ ಅನ್ನುವುದು ಇವರ ನಡುವಿನ ಸವಾಲಿನ ವಿಷಯ.

ಇಪ್ಪತ್ತೊಂದನೆಯ ಶತಮಾನ ಆರಂಭವಾದ ಸಮಯ. ಸ್ಟೀವನ್‌ ಔಸ್ತಾದ್‌ ಅಲಬಾಮಾ ವಿಶ್ವವಿದ್ಯಾನಿಲಯದಲ್ಲಿ ಮುಪ್ಪು ಹೇಗೆ ಬರುತ್ತದೆ ಎನ್ನುವುದನ್ನು ಕುರಿತು ಸಂಶೋಧನೆ ಮಾಡುತ್ತಿದ್ದಾನೆ. ಈತ 2000ನೇ ಇಸವಿಯಲ್ಲಿ ಬರೆದ ಲೇಖನವೊಂದರಲ್ಲಿ, ಅದಾಗ ನಡೆಯುತ್ತಿದ್ದ ಸಂಶೋಧನೆಗಳ ಫಲವಾಗಿ ಮನಷ್ಯರ ಆಯುಸ್ಸು ನೂರೈವತ್ತು ವರ್ಷಗಳವರೆಗೂ ಹೆಚ್ಚಬಹುದು ಎಂದು ವಾದಿಸಿದ್ದ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದು ಅಸಾಧ್ಯ. ಶರೀರದಲ್ಲಿ ಸಹಜವಾಗಿಯೇ ಇರುವಂತಹ ಮಿತಿಗಳ ಕಾರಣವಾಗಿ ವಿಜ್ಞಾನ ಎಷ್ಟೇ ಸುಧಾರಿಸಿದರೂ ಮನುಷ್ಯರ ಆಯುಸ್ಸು 150 ವರ್ಷ ಆಗಲಿಕ್ಕಿಲ್ಲ ಎಂದು ಇಲಿನಾಯ್‌ ವಿಶ್ವವಿದ್ಯಾನಿಲಯದ ಜೇ ಓಲ್‌ಶಾಸ್ಕಿ ಎಂಬ ಇನ್ನೊಬ್ಬ ವಿಜ್ಞಾನಿ ಪ್ರತಿವಾದಿಸಿದ. ವಿಜ್ಞಾನದಲ್ಲಿ ಹೀಗೆ ಒಂದು ವಿಷಯದ ಬಗ್ಗೆ ಚರ್ಚೆಗಳು ಆಗುವುದು ಸಾಮಾನ್ಯ. ಆದರೆ, ಇವರಿಬ್ಬರೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಬಾಜಿಯನ್ನೂ ಕಟ್ಟಿಬಿಟ್ಟರು. ಇಬ್ಬರೂ 150-150 ಡಾಲರುಗಳನ್ನು ಡೆಪಾಸಿಟ್ಟು ಇಟ್ಟು, ಅದು ಮತ್ತು ಅದರ ಬಡ್ಡಿಯನ್ನು ಬಾಜಿ ಗೆದ್ದವರಿಗೆ ಸಲ್ಲುತ್ತದೆ ಎಂದು ಕರಾರು ಪತ್ರವನ್ನೂ ಬರೆದಿಟ್ಟಿದ್ದಾರೆ.

ಇವರ ಬಾಜಿಯ ನಿಯಮಗಳು ಹೀಗಿವೆ… 2001ನೇ ಇಸವಿಗೂ ಮೊದಲು ಹುಟ್ಟಿದವರಲ್ಲಿ ಯಾರಾದರೂ ಒಬ್ಬರು 2150ನೇ ಇಸವಿಯ ವೇಳೆಗೆ 150 ವರ್ಷಗಳು ಬದುಕಿಯೇ ಬದುಕಿರುತ್ತಾರೆ ಎನ್ನುವುದು ಔಸ್ತಾದರ ಬಾಜಿ. ಇದು ಸಾಧ್ಯವೇ ಇಲ್ಲ ಎನ್ನುವುದು ಓಲ್‌ಶಾಸ್ಕಿಯ ಸವಾಲು. ಹೀಗಾಗಿ, 2150ನೇ ಇಸವಿಯಲ್ಲಿ ಇದರ ತೀರ್ಮಾನ. ಆಗ ಈ ಡೆಪಾಸಿಟ್ಟಿನಲ್ಲಿ ಎಷ್ಟು ಹಣ ಇರುತ್ತದೆಯೋ ಅದು ಗೆದ್ದವರ ಪಾಲಿಗೆ. ಐದು ವರ್ಷಗಳ ಹಿಂದೆ ಇವರು ಡೆಪಾಸಿಟ್ಟು ಇಟ್ಟಿದ್ದ ಮೊತ್ತ ಆರು ಪಟ್ಟು ಹೆಚ್ಚಾಗಿತ್ತು. ಇದೇ ರೀತಿ ಬಡ್ಡಿ ಬಂದರೆ 2150ನೇ ಇಸವಿಯ ವೇಳೆಗೆ ಅದು 15 ಲಕ್ಷ ಡಾಲಿರಿನಷ್ಟು ದೊಡ್ಡ ಮೊತ್ತ ಆಗಬಹುದು. ಗೆದ್ದವರ ಪಾಲಿಗೆ ಅದು ಸಲ್ಲುತ್ತದೆ.

ಮುಪ್ಪನ್ನು ನಿಧಾನಿಸುವ ಮತ್ತು ವೃದ್ಧಾಪ್ಯದ ತೊಂದರೆಗಳನ್ನು ತಡೆಯುವ ಹಲವು ಸಂಶೋಧನೆಗಳು ಇಲಿಗಳಲ್ಲಿ ಯಶಸ್ವಿಯಾಗಿವೆಯಾದ್ದರಿಂದ ತಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ನಂಬಿಕೆ ಔಸ್ತಾದರಿಗೆ ಇದೆ. ಇದೇ ರೀತಿ, ಮುಪ್ಪಿನ ಕುರಿತಾದ ಸಂಶೋಧನೆಗಳು ಎಲ್ಲವೂ ಸಫಲವಾದರೂ ಕೂಡ ಮನುಷ್ಯರು ಅತಿ ಹೆಚ್ಚು ಅಂದರೆ, 115 ವರ್ಷಗಳಷ್ಟೆ ಬದುಕಬಹುದು. ಅದಕ್ಕಿಂತಲೂ ಹೆಚ್ಚಿನ ಆಯುಸ್ಸು ಸಾಧ್ಯವಾಗಲಿಕ್ಕಿಲ್ಲವಾದ್ದರಿಂದ ತಾನೇ ಗೆಲ್ಲುತ್ತೇನೆ ಎನ್ನುವುದು ಓಲ್‌ಶಾಸ್ಕಿಯ ವಿಶ್ವಾಸ. ಯಾರೇ ಗೆಲ್ಲಲಿ, ಹಣವನ್ನು ಪಡೆಯಲು ಅವರು ಬದುಕಿರಬೇಕಲ್ಲ? ಇಬ್ಬರೂ 150 ವರ್ಷ ಬದುಕಿದರೂ 2150ನೇ ಇಸವಿಯನ್ನು ಬಹುಶಃ ಕಾಣಲಿಕ್ಕಿಲ್ಲ!

ವಿಜ್ಞಾನದಲ್ಲಿ ಇದೂ ಇದೆಯೇ ಎಂದು ನೀವು ಹುಬ್ಬೇರಿಸಬೇಡಿ. ಹೀಗೆ ವಿಜ್ಞಾನದಲ್ಲಿಯೂ ಜೂಜಾಡುವುದು ಹೊಸತೇನಲ್ಲ. 17ನೆಯ ಶತಮಾನದಲ್ಲಿಯೇ ಹೀಗೊಂದು ಬಾಜಿ ಸ್ಪರ್ಧೆ ನಡೆದಿತ್ತು. ಆಗ ಇಂಗ್ಲೆಂಡಿನಲ್ಲಿ ಪಾರಂಪರಿಕ ವೈದ್ಯಕೀಯವನ್ನು ಅಭ್ಯಾಸ ಮಾಡುತ್ತಿದ್ದವರ ಸಂಘವೊಂದಿತ್ತು. ಇದಕ್ಕೆ ಅಂದಿನ ರಾಜರ ಮನ್ನಣೆ ದೊರೆತಿತ್ತು. ಆದರೆ, ಅದೇ ಸಂದರ್ಭದಲ್ಲಿ ಹೊಸ ವೈದ್ಯವೂ ಆರಂಭವಾಗಿತ್ತು. ರೋಗಚಿಕಿತ್ಸೆಗೆ ವಿಶೇಷವಾಗಿ ಅಧ್ಯಯನ ಮಾಡಿದಂತಹ ವಿಜ್ಞಾನವನ್ನು ಬಳಸಬೇಕು ಎನ್ನುವುದು ಈ ತಂಡದ ತರ್ಕವಾಗಿತ್ತು. ಕೆಮಿಕಲ್‌ ಫಿಸಿಶಿಯನ್ಸ್‌ ಎನ್ನುವ ಹೆಸರಿನಲ್ಲಿ ಇವರೂ ಒಂದು ಸಂಘವನ್ನು ಮಾಡಿಕೊಂಡಿದ್ದರು. ಈ ಸಂಘವು ರಾಯಲ್‌ ಫಿಸಿಶಿಯನ್ಸ್‌ ಸಂಘದ ವೈದ್ಯರಿಗೆ ಒಂದು ಸವಾಲು ಎಸೆದಿತ್ತು.

“ಆಸ್ಪತ್ರೆಯಲ್ಲಿಯೋ, ಶಿಬಿರಗಳಲ್ಲಿಯೋ ಇರುವ ಬಡ ರೋಗಿಗಳಲ್ಲಿ ನೂರನ್ನೋ, 500 ಜನರನ್ನೋ ಆಯ್ದುಕೊಳ್ಳೋಣ. ಇವರನ್ನು ಸರಿಸಮವಾಗಿ ಎರಡು ತಂಡಗಳಾಗಿ ವಿಂಗಡಿಸಿ, ಒಂದು ತಂಡ ನಮಗಿರಲಿ. ಇನ್ನೊಂದು ನಿಮಗಿರಲಿ. ಯಾವ ತಂಡದಲ್ಲಿ ಸಾವು ಹೆಚ್ಚಾಗುತ್ತದೆ ಎನ್ನುವುದನ್ನು ನೋಡೋಣ. ಆಗಬಹುದೇ? ಗೆದ್ದವರಿಗೆ ಮುನ್ನೂರು ಫ್ಲಾರೆನ್ಸ್‌ ಬಹುಮಾನ,” ಎಂದು ಸವಾಲೆಸೆದಿತ್ತು. ನಾನೂರು ವರ್ಷಗಳ ಹಿಂದೆ ಮುನ್ನೂರು ಫ್ಲಾರೆನ್ಸುಗಳ ಮೌಲ್ಯ ಎಷ್ಟು ಇದ್ದಿರಬಹುದು ಊಹಿಸಿಕೊಳ್ಳಿ. ಹಾಗೆಯೇ, ಬಡವರನ್ನೇ ಈ ಪ್ರಯೋಗಕ್ಕೆ ಬಳಸೋಣ ಎಂದಿದ್ದೂ ಗಮನಾರ್ಹ.

19ನೆಯ ಶತಮಾನದಲ್ಲಿಯೂ ಇಂತಹ ಬಾಜಿಗಳು ನಡೆಯುತ್ತಿದ್ದವು. ಮತ್ತೊಂದು ಸುಪ್ರಸಿದ್ಧ ವೈಜ್ಞಾನಿಕ ಸವಾಲು ಎಂದರೆ ಭೂಮಿ ಚಪ್ಪಟೆಯಾಗಿದೆಯೋ, ದುಂಡಾಗಿದೆಯೋ ಎನ್ನುವುದು. 19ನೆಯ ಶತಮಾನದಲ್ಲಿಯೂ ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದವರು ಬಹಳಷ್ಟು ಜನರಿದ್ದರು. ಇಂಗ್ಲೆಂಡಿನ ಮತ್ತೊಬ್ಬ ಸುಪ್ರಸಿದ್ಧ ವಿಜ್ಞಾನಿ ಆಲ್ಫ್ರೆಡ್‌ ರಸೆಲ್‌ ವ್ಯಾಲೇಸ್‌ ಇದಕ್ಕೆ ಬಾಜಿ ಕಟ್ಟಿದ್ದ. ಜಾನ್‌ ಹೆಂಪ್ಡೆನ್‌ ಎಂಬಾತನ ಬಳಿ ತಾನು ಇದನ್ನು ನಿರೂಪಿಸುವೆ ಎಂದು ಹೇಳಿದ ರಸೆಲ್‌, ಕಾಲುವೆಯೊಂದರ ಮೇಲೆ ನೀರಿನಲ್ಲಿ, ಸಮಾನ ಆಳಕ್ಕೆ ಎರಡು ಕೋಲುಗಳನ್ನು ಇಳಿಸಿದ್ದ. ಆದರೆ, ಇವೆರಡೂ ಕೋಲುಗಳಿಗೂ ಐದು ಕಿಲೋಮೀಟರು ಅಂತರವಿತ್ತು. ಮೊದಲನೆಯ ಕೋಲಿನಿಂದ ಐದು ಮೈಲು ದೂರದಿಂದ ದೂರದರ್ಶಕದಲ್ಲಿ ಗಮನಿಸಿದಾಗ ಹತ್ತಿರವಿದ್ದ ಕೋಲು ಕಡಿಮೆ ಮುಳುಗಿದ್ದಂತೆಯೂ, ದೂರದಲ್ಲಿದ್ದ ಕೋಲು ಹೆಚ್ಚು ಮುಳುಗಿದ್ದಂತೆಯೂ ಕಂಡಿತ್ತು. ಮೂರನೆಯವರೊಬ್ಬರು ಇದನ್ನು ಅಳೆದು ವ್ಯಾಲೇಸನ ವಾದವೇ ಸರಿ. ಭೂಮಿಯ ಮೇಲ್ಮೈ ಸಪಾಟಾಗಿಲ್ಲ, ವಕ್ರವಾಗಿದೆ ಎಂದು ಹೇಳಿದ್ದರು. ವ್ಯಾಲೇಸ್‌ 500 ಪೌಂಡು ಬಾಜಿಯನ್ನು ಗೆದ್ದಿದ್ದ. ಬಾಜಿ ಕಳೆದುಕೊಂಡ ಹೆಂಪ್ಡೆನ್‌ ವ್ಯಾಲೇಸನ ಹೆಂಡತಿಗೆ, “ನಿನ್ನ ಗಂಡನ ತಲೆ ಒಡೆದು, ಹೋಳು, ಹೋಳಾದರೆ ಕಾರಣ ಏನು ಎಂಬುದು ಗೊತ್ತಿರಲಿ,” ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದನಂತೆ.

ಬಾಜಿ ಕಟ್ಟುವುದರಲ್ಲಿ ಸುಪ್ರಸಿದ್ಧ ಭೌತ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಎತ್ತಿದ ಕೈ. ಈತ ತನ್ನ ಜೀವಮಾನದಲ್ಲಿ ಹಲವಾರು ಬಾಜಿಗಳನ್ನು ಗೆದ್ದು, ಹಲವನ್ನು ಸೋತಿದ್ದ. ತನ್ನ 33ನೆಯ ವಯಸ್ಸಿನಲ್ಲಿಯೇ ಮೊದಲನೆಯ ಬಾಜಿ ಕಟ್ಟಿದ್ದ. ಸಾಯುವುದಕ್ಕೆ ಎರಡು ದಶಕಗಳ ಮುನ್ನ, ಅಂದರೆ, 2000ದ ಇಸವಿಯಲ್ಲಿ ಕೂಡ ಹಾಕಿಂಗ್‌ ಒಂದು ಸವಾಲು ಎಸೆದಿದ್ದ. ಇದು ಹಿಗ್ಸ್‌ ಬೋಸಾನ್‌ ಎನ್ನುವ ಮೂಲಕಣಗಳ ಪತ್ತೆಯ ಬಗ್ಗೆ ಕಟ್ಟಿದ ಬಾಜಿ. ಅಮೆರಿಕೆಯ ಮಿಶಿಗನ್‌ ವಿಶ್ವವಿದ್ಯಾನಿಲಯದ ಗಾರ್ಡನ್‌ ಕೇನ್‌ ಎಂಬಾತ ಅಲ್ಲಿದ್ದ ಟ್ರೆವಾಟ್ರಾನ್‌ ಆಕ್ಸಿಲರೇಟರ್‌ ಎನ್ನುವ ಸಾಧನ ಪತ್ತೆಮಾಡಲು ಕಷ್ಟವೆನ್ನಿಸಿದ ಹಿಗ್ಸ್‌ ಬೋಸಾನನ್ನು ಖಂಡಿತ ಪತ್ತೆ ಮಾಡಬಲ್ಲದು ಎಂದಿದ್ದ. ಹಾಕಿಂಗ್‌ ಅದು ಆಗುವುದಿಲ್ಲ ಎಂದು ನೂರು ಡಾಲರು ಬಾಜಿ ಕಟ್ಟಿದ್ದ.

ಕ್ರಿಕೆಟ್ಟಿನಲ್ಲಿ ಮತ್ತು ಫುಟ್‌ಬಾಲಿನ ಸ್ಪರ್ಧೆಗಳಲ್ಲಿ ಕೋಟ್ಯಾಂತರ ರೂಪಾಯಿಗಳಷ್ಟು ಬಾಜಿ ಕಟ್ಟುವ ಜೂಜುಕೋರರಿಗೆ ಈ ವಿಜ್ಞಾನಿಗಳೆಷ್ಟು ಜುಗ್ಗರು ಎನ್ನಿಸಬಹುದು. ಆದರೆ, ವಿಜ್ಞಾನಿಗಳ ಈ ಜೂಜಾಟ ಹಣ ಮಾಡುವ ದಂಧೆಯಲ್ಲ. ವಿಜ್ಞಾನವನ್ನು ಸರಿಯಾದ ಹಾದಿಯಲ್ಲಿ ಕೊಂಡೊಯ್ಯುವ ಒಂದು ವಿಧಾನ ಎನ್ನುವುದು ಕೆಲವರ ಅಂಬೋಣ. ಉದಾಹರಣೆಗೆ, ಟಿಲ್ಮನ್‌ ಸ್ಲೆಂಬೆಕ್‌ ಎನ್ನುವ ಅರ್ಥಶಾಸ್ತ್ರಜ್ಞ ವಿಜ್ಞಾನಿಗಳು ಹೀಗೆ ಜೂಜಾಡಬೇಕು ಎಂಬ ವಾದವನ್ನು ‘ಕೈಕ್ಲೋಸ್‌’ ಎನ್ನುವ ಪತ್ರಿಕೆಯಲ್ಲಿ ಮುಂದಿಟ್ಟಿದ್ದ. ಹಾಕಿಂಗ್‌ ಕೇನ್‌ ಜೊತೆಗೆ ಬಾಜಿ ಕಟ್ಟುವ ಸಮಯದಲ್ಲಿಯೇ ಈ ವಾದ ಪ್ರಕಟವಾಗಿದ್ದು ಕೇವಲ ಕಾಕತಾಳೀಯ. ಜೂಜಿನಲ್ಲಿ ಗೆಲ್ಲುವ ಸಾಧ್ಯತೆಗಳು ಇರುವಷ್ಟೇ ಕಾಕತಾಳೀಯ ಎನ್ನಿ. ಟಿಲ್ಮನ್ನನ ವಾದ ಹೀಗಿತ್ತು; ವಿಜ್ಞಾನ ಎನ್ನುವುದು ಒಂದು ಗುಂಪುಗಾರಿಕೆಯಾದ್ದರಿಂದ, ಅದು ನಡೆಸುವ ಶೋಧಗಳು, ಪರಿಗಣಿಸುವ ಸಮಸ್ಯೆಗಳು ವಾಸ್ತವವಾಗಿ ಸತ್ಯವಲ್ಲದೆ ಇರಬಹುದು. ಹೀಗಾಗಿ, ನಿಜವಾದ ಶೋಧ ಆಗಬೇಕಾದರೆ ಅದು ಸವಾಲುಗಳ ಮೂಲಕ ಆಗಬೇಕು ಎಂದಿದ್ದ.

ನಿಜ… ವಿಜ್ಞಾನ ವಾಸ್ತವಾಂಶಗಳಿಂದ ಕಟ್ಟಿದ ಮನೆಯೆನ್ನಿಸಿದರೂ, ಅದು ನಿಜವಲ್ಲ. ಪ್ರತಿಯೊಂದು ಪ್ರಯೋಗಕ್ಕೂ ಕನಿಷ್ಠ ಒಂದೋ, ಎರಡೋ ಬೇರೆ-ಬೇರೆ ತೀರ್ಮಾನಗಳ ಸಾಧ್ಯತೆ ಇರುತ್ತದೆ. ಇದನ್ನು ವಿಜ್ಞಾನಿಗಳು ಚರ್ಚಿಸಿ ಒಮ್ಮತಕ್ಕೆ ಬರಬೇಕು. ಆದರೆ, ಈ ಒಮ್ಮತಕ್ಕೆ ಬರುವ ಹಾದಿಯಲ್ಲಿ, ಅಧಿಕಾರ, ಹಣದ ಬೆಂಬಲ ಹಾಗೂ ಪ್ರತಿಷ್ಠವೆನ್ನಿಸುವ ಪರಿಕಲ್ಪನೆಗಳ ಕೈ ಮೇಲಾಗುವುದು ಸಹಜ. ಆದರೆ, ಆ ಪರಿಕಲ್ಪನೆಯೇ ಸತ್ಯವಲ್ಲದಿದ್ದರೆ ವಿಜ್ಞಾನ ಸೋತಂತೆ. ಹೀಗಾಗಿ, ಸತ್ಯವಾದ ವಿಜ್ಞಾನ ನಡೆಯಬೇಕೆಂದರೆ ಜೂಜು ಆಗಲೇಬೇಕು. ಬಾಜಿ ಕಟ್ಟಲೇಬೇಕು ಎನ್ನುವುದು ಆತನ ವಾದ.

ನಿಜ… ವಿಜ್ಞಾನದಲ್ಲಿಯೂ ಇಂತಹ ಬಾಜಿಗಳು ನಡೆಯುತ್ತವೆ. ಹತ್ತು ವರ್ಷಗಳ ಹಿಂದೆ ಜೀನ್‌ ಸ್ವೀಪ್‌ ಎನ್ನುವ ಸ್ಪರ್ಧೆ ನಡೆದಿತ್ತು. ಮನುಷ್ಯರಲ್ಲಿ ಎಷ್ಟು ಜೀನ್‌ಗಳು ಇರಬಹುದು ಎನ್ನುವ ಸ್ಪರ್ಧೆ ಇದು. ಆಗ ಹ್ಯೂಮನ್‌ ಜೀನೋಮ್‌ ಯೋಜನೆ ಉಚ್ಚಸ್ಥಾಯಿಯಲ್ಲಿ ಇದ್ದ ಸಮಯ. ಇಂಗ್ಲೆಂಡಿನ ಕೆಲವು ವಿಜ್ಞಾನಿಗಳು ಈ ಯೋಜನೆಯ ಫಲವಾಗಿ ಮನುಷ್ಯನಲ್ಲಿ ಎಷ್ಟು ಜೀನ್‌ಗಳಿವೆ ಎಂಬುದು ಪತ್ತೆಯಾಗುತ್ತದೆ. ಅದು ಎಷ್ಟಿರಬಹುದು ಎಂದು ಜೂಜು ಆರಂಭಿಸಿದ್ದರು. ಪತ್ತೆಯಾದ ಜೀನ್‌ಗಳಿಗೆ ನಿಕಟವಾಗಿದ್ದ ಸಂಖ್ಯೆಯನ್ನು ಊಹಿಸಿದವರಿಗೆ ಬಹುಮಾನ ಎಂದಿತ್ತು. 25,947 ಜೀನ್‌ಗಳಿರಬಹುದು ಎಂದು ಊಹಿಸಿದ ಲೀ ರೋವೆನ್‌ ಎನ್ನುವ ತಂತ್ರಜ್ಞೆ ಸಾವಿರದ 200 ಡಾಲರು ಬಾಜಿ ಗೆದ್ದಿದ್ದಳು.

“ಇದು ಬಾಜಿಯಲ್ಲ, ಸ್ಪರ್ಧೆ. ಏಕೆಂದರೆ, ಸ್ಪರ್ಧಿಸುವವರು ಹಣ ಕಳೆದುಕೊಳ್ಳುವುದಿಲ್ಲ,” ಎಂದಿರಾ? ಇರಬಹುದು. ಆದರೆ. ವಿಜ್ಞಾನಿಗಳಿಗೆ ಹಣವೇ ಮುಖ್ಯವಲ್ಲ. ಅದಕ್ಕಿಂತಲೂ ಮುಖ್ಯವಾದುದು ಪ್ರತಿಷ್ಠೆ. ತಮ್ಮ ಶೋಧ ಅಥವಾ ತರ್ಕ ಸರಿಯಾದದ್ದು ಎನ್ನುವ ಪ್ರತಿಷ್ಠೆ. ಇದರಿಂದಾಗಿಯೇ ಹಲವಾರು ಗೊಂದಲಮಯ ಶೋಧಗಳು ವಿವಾದಾಸ್ಪದವಾಗುತ್ತವೆ. ಕೊನೆಯಿಲ್ಲದೆ ಮುಂದುವರಿಯುತ್ತವೆ.

ಉದಾಹರಣೆಗೆ, ಹವಾಗುಣ ಬದಲಾವಣೆಯ ವಿಷಯವನ್ನೇ ತೆಗೆದುಕೊಳ್ಳಿ. ಇದು ಸತ್ಯ ಎನ್ನುವ ಗುಂಪು ಒಂದಾದರೆ, ಇನ್ನೊಂದು ಗುಂಪು – ಇಲ್ಲ, ಹವಾಗುಣ ಬದಲಾವಣೆ ಅಷ್ಟು ತೀವ್ರವಾಗಿಲ್ಲ ಎನ್ನುತ್ತದೆ. ಇಂತಹ ಸಂದಿಗ್ಧ ಪ್ರಶ್ನೆಗಳಿಗೆ ಉತ್ತರ ಸರಳವಲ್ಲ. ಆದರೆ, ಬಾಜಿಗಳಿದ್ದರೆ, ಆಗ ಕನಿಷ್ಠ ಎಲ್ಲರೂ ಒಂದು ತೀರ್ಮಾನವನ್ನು ಒಪ್ಪಿಕೊಳ್ಳಬಹುದು ಎನ್ನುವುದು ಟಿಲ್ಮನ್ನನ ತರ್ಕ. ಇದಕ್ಕೊಂದು ಉದಾಹರಣೆ, ಐದು ಮೂಲವಸ್ತುಗಳ ವ್ಯಾಪಾರ.

1980ರ ಸಮಯದಲ್ಲಿ ಹೀಗೊಂದು ಚರ್ಚೆ ನಡೆದಿತ್ತು. ಜೂಲಿಯನ್‌ ಸೈಮನ್‌ ಎಂಬ ಅರ್ಥಶಾಸ್ತ್ರಜ್ಞ ಆಗ ಬಹಳ ಬೆಲೆಬಾಳುತ್ತವೆಂದು ಹೇಳಲಾದ ಐದು ಮೂಲವಸ್ತುಗಳ ಬೆಲೆ ಕೆಲವು ಕಾಲದ ನಂತರ ಇಳಿಯಲೇಬೇಕು ಎಂದು ತರ್ಕಿಸಿದ. ಅರ್ಥಶಾಸ್ತ್ರಜ್ಞರ ನಿಯಮಗಳ ಪ್ರಕಾರ ಹೀಗಾಗಬೇಕು. ಆದರೆ, ಇಂತಹ ಸಂಪನ್ಮೂಲಗಳು ಇರುವುದು ಕಡಿಮೆ. ಅವನ್ನು ಹೆಚ್ಚೆಚ್ಚು ಬಳಸಿದರೆ, ಬೇಡಿಕೆ ಹೆಚ್ಚಾಗಿ ಬೆಲೆ ಹೆಚ್ಚುತ್ತದೆ. ಹೀಗಾಗಿ, ಅವನ್ನು ಬಳಸಬಾರದು ಎಂದು ಪೌಲ್‌ ಎರ್ಲಿಚ್‌ ಎನ್ನುವ ಜೀವಿವಿಜ್ಞಾನಿ, ಪರಿಸರಪ್ರೇಮಿ ತಕರಾರು ಎತ್ತಿದ. ಕೊನೆಗೆ ಇಬ್ಬರೂ ಒಂದು ಬಾಜಿ ಕಟ್ಟಿದರು. ಐದೂ ವಸ್ತುಗಳ ಬೆಲೆಯನ್ನು ಅಂದಾಜು ಇನ್ನೂರು ಡಾಲರೆಂದು ಇಟ್ಟುಕೊಂಡು, ಕೆಲವು ವರ್ಷಗಳ ನಂತರ ಈ ಬೆಲೆ ಎಷ್ಟಾಗಬಹುದು ಎಂದು ಬಾಜಿ ಕಟ್ಟಿದರು. ಎರ್ಲಿಷ್‌ ಇದು ಹೆಚ್ಚಾಗುತ್ತದೆ ಎಂದಿದ್ದ. ಇನ್ನೂರು ಡಾಲರುಗಳಿಗಿಂತ ಎಷ್ಟು ಹೆಚ್ಚುತ್ತದೆಯೋ ಆ ವ್ಯತ್ಯಾಸವನ್ನು ಸೈಮನ್‌ ಕೊಡಬೇಕು. ಒಂದು ವೇಳೆ ಹಾಗಾಗದೆ ಕಡಿಮೆ ಆದರೆ, ಎಷ್ಟು ಕಡಿಮೆ ಆಗುತ್ತದೆಯೋ ಆ ವ್ಯತ್ಯಾಸವನ್ನು ಎರ್ಲಿಷ್‌ ಕೊಡಬೇಕು ಎಂಬುದು ಬಾಜಿ. ಕೊನೆಗೆ ಎರ್ಲಿಷ್‌ 576 ಡಾಲರು ಕೊಡಬೇಕಾಯಿತು. ಆ ವಸ್ತುಗಳ ಬೆಲೆ ಅಷ್ಟೊಂದು ಇಳಿದಿತ್ತು. ಅರ್ಥಶಾಸ್ತ್ರ ಗೆದ್ದಿತ್ತು.

ಇಂತಹ ಬಾಜೀದಾರ ಸಮಸ್ಯೆಗಳು ಬಹಳಷ್ಟಿವೆ. ಇದೀಗ ವಿವಾದದಲ್ಲಿರುವ ಕುಲಾಂತರಿ ಸಾಸಿವೆಯ ವಿಷಯವನ್ನೇ ತೆಗೆದುಕೊಳ್ಳಿ. ಇದರಿಂದ ಬೆಳೆಯ ಇಳುವರಿ ಹೆಚ್ಚಾಗುತ್ತದೆ ಎನ್ನುವವರ ಗುಂಪು ಇದೆ. ಇನ್ನೊಂದು ಗುಂಪು ಇಲ್ಲ ಎನ್ನುತ್ತದೆ. ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಪರಿಸರ ಮಂತ್ರಿಯಾಗಿದ್ದ ಜೈರಾಮ್‌ ರಮೇಶ್‌, “ವಿಜ್ಞಾನಿಗಳಲ್ಲಿಯೇ ಒಮ್ಮತ ಇಲ್ಲದಿದ್ದಾಗ ಸರ್ಕಾರಕ್ಕೆ ಆ ಬಗ್ಗೆ ತೀರ್ಮಾನಿಸುವುದು ಕಷ್ಟವಾಗುತ್ತದೆ,” ಎನ್ನುತ್ತಾರೆ. ಹೀಗಾಗಿಯೇ, ಕುಲಾಂತರಿ ಸಾಸಿವೆಯ ಬಳಕೆಯ ಬಗ್ಗೆ ಸರ್ಕಾರ ಖಚಿತವಾದ ತೀರ್ಮಾನ ತೆಗೆದುಕೊಳ್ಳಲು ಆಗಿಲ್ಲ. ಎಷ್ಟೇ ಪರೀಕ್ಷೆಗೊಡ್ಡಿದರೂ, ಎರಡೂ ತಂಡಗಳು ಒಮ್ಮತಕ್ಕೆ ಬರುವುದು ಕಷ್ಟ. ಅದೇ ಬಾಜಿ ಕಟ್ಟಿದರೆ? ಬಾಜಿಯಲ್ಲಿ ಸೋತಾಗ ಅದನ್ನು ಒಪ್ಪಿಕೊಳ್ಳಲೇಬೇಕಲ್ಲ! ಆಗ ಸಹಮತದಿಂದಾಗಿ ಯಾವ ವಿಜ್ಞಾನವನ್ನು ಬಳಸುವುದು ಎನ್ನುವ ಗೊಂದಲ ಪರಿಹಾರವಾಗುತ್ತದೆ ಎನ್ನುವುದು ಟಿಲ್ಮನ್‌ ವಾದ.

ಐನ್‌ಸ್ಟೈನರ ಒಂದು ಮಾತನ್ನು ಬಹಳಷ್ಟು ಬಾರಿ ಕೇಳಿದ್ದೇವೆ: God does not play dice. “ದೇವರು ಜೂಜಾಡುವುದಿಲ್ಲ,” ಎನ್ನುವ ಈ ಮಾತನ್ನು, ದೇವರಿದ್ದಾನೆ ಎಂದು ಐನ್‌ಸ್ಟೈನ್‌ ನಂಬಿದ್ದರು ಎಂದು ಹೇಳಲು ಹಲವರು ಬಳಸುವುದುಂಟು. ವಾಸ್ತವವಾಗಿ ಆತ ವಿಜ್ಞಾನದಲ್ಲಿ ಖಚಿತತೆ ಇರಬೇಕು ಎನ್ನಲು ಹೇಳಿದ ಮಾತು ಇದೆ. ಅಂತಹ ಖಚಿತತೆ ಇಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಬಾಜಿ ವಿಜ್ಞಾನ ನೆರವಾಗಬಹುದೇ? ನಾನಂತೂ ಇಲ್ಲ ಅಂತ ಬಾಜಿ ಕಟ್ಟಲು ಸಿದ್ಧ. ನೀವು?

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಕೊಳ್ಳೇಗಾಲ ಶರ್ಮ
ಕೊಳ್ಳೇಗಾಲ ಶರ್ಮ
ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 'ಸೈನ್ಸ್‌ ರಿಪೋರ್ಟರ್‌' ಪತ್ರಿಕೆಗೆ ವರದಿಗಾರರಾಗಿದ್ದರು. ಮೂರು ದಶಕಗಳಿಂದ ವಿಜ್ಞಾನ ಬರವಣಿಗೆಯಲ್ಲಿ ಸಕ್ರಿಯರು. ವಿಜ್ಞಾನ ಸಂವಹನದ ಹೊಸ ಸಾಧ್ಯತೆಗಳನ್ನು ಹುಡುಕುವ ಉತ್ಸಾಹಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹೊಸಿಲ ಒಳಗೆ-ಹೊರಗೆ | ಬ್ರಾ… ಪ್ರತಿಭಟನೆ ಮತ್ತು ಬಿಡುಗಡೆಯ ಭಾವ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಮೈಕ್ರೋಸ್ಕೋಪು | ಅಯೋಧ್ಯೆ ರಾಮ ಮಂದಿರದಲ್ಲಿ ‘ವಿಜ್ಞಾನ’ ಬಳಕೆ; ನಿಜಕ್ಕೂ ದೇಶದಲ್ಲಿ ಇದೇ ಮೊದಲಾ?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸಿಲ ಒಳಗೆ-ಹೊರಗೆ | ನೀವು ಕೊಕ್ಕರೆಯಾದರೂ ಸರಿಯಲ್ಲ, ನರಿಯಾದರೂ ಸರಿಯಲ್ಲ; ಯಾಕೆಂದರೆ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...