ಲಿಂಗಾಯತ ಪಂಚಮಸಾಲಿ ಉಪವರ್ಗಕ್ಕೆ ಮೀಸಲಾತಿ ಸಿಕ್ಕಿತೇ?

Date:

ಎಲ್‌ ಜಿ ಹಾವನೂರ್ ಅವರು ತಮ್ಮ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಲಿಂಗಾಯತ ಧರ್ಮದ ಎಲ್ಲಾ ಉಪವರ್ಗಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮೀಸಲಾತಿಯನ್ನು ನೀಡಲು ಶಿಫಾರಸ್ಸು ಮಾಡಿದ್ದರು

ರಾಜ್ಯದಲ್ಲಿ ಲಿಂಗಾಯತ ಸಮುದಾಯ ಶ್ರೀಮಂತˌಭೂಹಿಡುವಳಿದಾರˌಮತ್ತು ಶೋಷಕ ಸಮುದಾಯವೆಂದು ಮೊದಲಿನಿಂದ ವ್ಯವಸ್ಥಿತವಾಗಿ ಬಿಂಬಿಸಿಕೊಂಡು ಬರಲಾಗುತ್ತಿದೆ. ಈ ನೆಲದಲ್ಲಿ ಶೋಷಕ ವ್ಯವಸ್ಥೆಯನ್ನು ಹುಟ್ಟಿಸಿದವರು ಮಾತ್ರ ಈ ಆರೋಪದಿಂದ ಮುಕ್ತರಾಗಿ ಲಿಂಗಾಯತರನ್ನು ಬಲಿಪಶು ಮಾಡಿ ಹಾಯಾಗಿದ್ದಾರೆ. ಅಸಲಿಗೆ ಲಿಂಗಾಯತರು ಉತ್ಪಾದಕ ವರ್ಗದ ಶೂದ್ರರು. ಕೃಷಿ ˌ ಕೂಲಿ ವ್ಯಾಪಾರ ಶ್ರಮಾಧಾರಿತ ಕಾಯಕದವರು. ರಾಜ್ಯದಲ್ಲಿ ದೊಡ್ಡ ಸಮುದಾಯವಾಗಿರುವುದರಿಂದ ಸಹಜವಾಗಿ ಭೂಹಿಡುವಳಿ ಹಾಗು ರಾಜಕೀಯ ಪ್ರಾಬಲ್ಯ ಹೊಂದಿದ್ದಾರೆ. ಹಳೆ ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರಿದ್ದಂತೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತರು. ಲಿಂಗಾಯತವು ಒಂದು ಅವೈದಿಕ ಧರ್ಮವಾಗಿದ್ದು ಅದರಲ್ಲಿ ಅನೇಕ ಕಾಯಕ ವರ್ಗಗಳಿವೆ. ಅಂದಾಜು ಶೇಕಡ 60% ರಷ್ಟು ಲಿಂಗಾಯತರು ಇಂದಿಗೂ ಬಡತನದಲ್ಲಿ ಬದುಕುತ್ತಿದ್ದಾರೆ. ಪಂಚಮಸಾಲಿಯೂ ಸೇರಿದಂತೆ ಎಲ್ಲಾ ಉಪವರ್ಗದಲ್ಲಿ ಬಡವರಿದ್ದಾರೆ.

ಲಿಂಗಾಯತರ ಸಾಮಾಜಿಕˌ ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಮೊದಲು ಗುರುತಿಸಿದವರು ಎಚ್ ಜಿ ಹಾವನೂರು ಅವರು. ಹಾವನೂರ್ ಅವರು ತಮ್ಮ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿ ಲಿಂಗಾಯತ ಧರ್ಮದ ಎಲ್ಲಾ ಉಪವರ್ಗಗಳನ್ನು ಇತರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿ ಮೀಸಲಾತಿಯನ್ನು ನೀಡಲು ಶಿಫಾರಸ್ಸು ಮಾಡಿದ್ದರು. ಕೃಷಿ ಅವಲಂಬಿತ ಪಂಚಮಸಾಲಿ ವರ್ಗವು ಲಿಂಗಾಯತ ಉಪವರ್ಗದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಮೊದಲು ಅದು 3ಬಿ ಪ್ರವರ್ಗದ ಅಡಿದಲ್ಲಿ ಉಳಿದ ಲಿಂಗಾಯತ ಉಪವರ್ಗಗಳೊಂದಿಗೆ ಮೀಸಲಾತಿ ಪಡೆಯುತ್ತಿದ್ದರು. ಕಳೆದ ಹತ್ತೆಂಟು ವರ್ಷಗಳಿಂದ ತನಗೆ 2ಎ ಪ್ರವರ್ಗದಲ್ಲಿ ಸೇರಿಸಬೇಕೆನ್ನುವುದು ಅವರ ಬೇಡಿಕೆ. ಈ ಬೇಡಿಕೆಯ ಹಿಂದಿನ ಕಾರಣವೇನೆಂದರೆ ತನಗಿಂತಲೂ ಸ್ಥಿತಿವಂತರಾಗಿರುವ ಲಿಂಗಾಯತ ಬಣಜಿಗರು ಮತ್ತು ಲಿಂಗಾಯತ ಗಾಣಿಗರು ಹಿಂದೂ ಬಣಜಿಗರೆಂದು 2ಎ ಪ್ರವರ್ಗ ಸೇರಿರುವಾಗ ತಮಗೂ 2ಎ ಕೊಡಿ ಎನ್ನುವುದು ಅವರ ವಾದ.

ಈ ಲಿಂಗಾಯತ ಬಣಜಿಗˌ ಲಿಂಗಾಯತ ಗಾಣಿಗ ಮತ್ತು ಪಂಚಮಸಾಲಿಗಳ ಮೀಸಲಾತಿ ಪೈಪೋಟಿಯ ನಡುವೆ 3ಬಿ ಮೀಸಲಾತಿಯಲ್ಲಿ ತೃಪ್ತವಾಗಿರುವ ಇನ್ನೂ ಅನೇಕ ಚಿಕ್ಕಪುಟ್ಟ ಬಡ ಲಿಂಗಾಯತ ಉಪವರ್ಗಗಳಿವೆ. ಅವುಗಳೆಂದರೆ ಲಿಂಗಾಯತ ಆದಿ ಬಣಜಿಗರುˌ ಲಿಂಗಾಯತ ಲಾಳಗೊಂಡರುˌಲಿಂಗಾಯತ ಕೂಡುವಕ್ಕಲಿಗರುˌ ಗೌಡ ಲಿಂಗಾಯತರು ಇತ್ಯಾದಿ. ಮೇಲ್ಕಾಣಿಸಿದ ಈ ಉಪವರ್ಗಗಳು ರಾಜಕೀಯˌ ಆರ್ಥಿಕˌ ಅಥವಾ ಶೈಕ್ಷಣಿಕ ಪ್ರಾಬಲ್ಯವನ್ನು ಹೊಂದಿಲ್ಲವಾಗಿ ಮತ್ತು ಸಂಖ್ಯೆಯಲ್ಲೂ ಕಡಿಮೆ ಇರುವುದರಿಂದ ಈ ಉಪವರ್ಗಗಳು ರಾಜಕೀಯ ಒತ್ತಡ ಹೇರಿ 2ಎ ಮೀಸಲಾತಿಗೆ ಹೋರಾಡುವಂತಿಲ್ಲ. ಇದರ ನಡುವೆ ಲಿಂಗಾಯತ ಧರ್ಮದಲ್ಲಿ ಅತ್ಯಂತ ಅಲ್ಪಸಂಖ್ಯೆಯ ವೀರಶೈವ ಆರಾಧ್ಯ ಜಂಗಮರು ಇಡೀ ಲಿಂಗಾಯತ ಸಮುದಾಯದ ಗುರುಗಳೆಂದು ಹೇಳಿಕೊಳ್ಳುತ್ತ ಈಗ ಪರಿಶಿಷ್ಟರ ಬೇಡ ಜಂಗಮ ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಬಹುತೇಕ ಮಠ-ಮಾನ್ಯಗಳ ಯಜಮಾನಿಕೆಯಿಂದ ಅತ್ಯಂತ ಸ್ಥಿತಿವಂತರಾಗಿರುವ ವೀರಶೈವ ಜಂಗಮರು ಲಿಂಗಾಯತರ ಅಲ್ಪಸಂಖ್ಯಾತ ಸೌಲಭ್ಯ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸುತ್ತ ತಮ್ಮನ್ನು ಮಾತ್ರ ಪರಿಶಿಷ್ಟ ವರ್ಗದ ಬೇಡ ಜಂಗಮ ಕೋಟಾದಲ್ಲಿ ಸೇರಿಸಬೇಕೆಂದು ಹೋರಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಪಂಚಮಸಾಲಿಗಳಿಗೆ 2ಎ ಮೀಸಲಾತಿಗಾಗಿ ಹೋರಾಡಲು ಪ್ರಚೋದನೆ ನೀಡಿವೆ. ಪಂಚಮಸಾಲಿಗಳ 2ಎ ಮೀಸಲಾತಿ ಹೋರಾಟ 2018ರ ನಂತರ ತೀವ್ರವಾಗಲು ಬೇರೆಯದೆ ಕಾರಣಗಳಿವೆ. ಲಿಂಗಾಯತರ ಅಲ್ಪಸಂಖ್ಯಾತ ಸೌಲಭ್ಯದ ಬೇಡಿಕೆಯನ್ನು ಹತ್ತಿಕ್ಕಲೆಂದೇ ಪಂಚಮಸಾಲಿ ಮೀಸಲಾತಿಯ ಬೇಡಿಕೆಯನ್ನು ಮುನ್ನೆಲೆಗೆ ತಂದಿದ್ದು ವೈದಿಕ ಪಟ್ಟಭದ್ರರು ಎನ್ನುವ ಸಂಗತಿ ಅಲ್ಲಗಳೆಯಲಾಗದು.

ಇದನ್ನೂ ಓದಿ 2ಬಿ ಮೀಸಲಾತಿ ರದ್ದು | ಕ್ಷುಲ್ಲಕವಾಗಿ ಕಾಣುತ್ತಿರುವುದು ಸರಕಾರದ ತೀರ್ಮಾನ ಮಾತ್ರ!

ವೀರಶೈವ ಜಂಗಮರ ಬೇಡಜಂಗಮ ಮೀಸಲಾತಿ ಬೇಡಿಕೆಯ ಹೊರತಾಗಿ ಲಿಂಗಾಯತ ಉಪವರ್ಗಗಳ ಮೀಸಲಾತಿ ಬೇಡಿಕೆ ನ್ಯಾಯಸಮ್ಮತವೆ. ಆದರೆˌ ಪಂಚಮಸಾಲಿಗಳ ಮೀಸಲಾತಿ ಹೊರಾಟದ ಹಿಂದೆ ಯಾರಿದ್ದಾರೆನ್ನುವ ಹಾಗು ಅದರಿಂದ ಇಡೀ ಲಿಂಗಾಯತ ಸಮುದಾಯಕ್ಕೆ ಆಗಬಹುದಾದ ಅಪಾಯವನ್ನು ನಾವು ತಿಳಿದುಕೊಳ್ಳುವುದೊಳಿತು. ಮೋದಿ ಆಡಳಿತದ ಏಳೆಂಟು ವರ್ಷಗಳಲ್ಲಿ ದೇಶದಲ್ಲಿ ಮೀಸಲಾತಿ ತನ್ನ ಮೂಲ ಅರ್ಥವನ್ನು ಕಳೆದುಕೊಂಡಿದೆ. ಸರಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮಗಳು ಮತ್ತು ಸರಕಾರಿ ಸಂಸ್ಥೆಗಳೆಲ್ಲವೂ ಸಗಟಾಗಿ ಬಿಜೆಪಿ ಬೆಂಬಲಿಗ ಉದ್ಯಮಿಗಳಿಗೆ ಮಾರಲಾಗುತ್ತಿದೆ. ಭವಿಷ್ಯದಲ್ಲಿ ಸರಕಾರಿ ಕ್ಷೇತ್ರಗಳಲ್ಲಿ ಖಾಯಂ ಉದ್ಯೋಗಳೇ ಇಲ್ಲದಿರುವಾಗ ಮೀಸಲಾತಿಗಾಗಿ ಹೋರಾಟವೇ ವ್ಯರ್ಥ.

ಇಂತಹ ಸಂದಿಗ್ಧ ಕಾಲದಲ್ಲಿ ಮೀಸಲಾತಿಯನ್ನು ಸದಾ ವಿರೋಧಿಸುತ್ತ ಬಂದಿರುವ ಬ್ರಾಹ್ಮಣರು ದೇಶದಲ್ಲಿ ಅತ್ಯಂತ ಕನಿಷ್ಟ ಸಂಖ್ಯೆಯಲ್ಲಿದ್ದು ಅತ್ಯಂತ ಗರಿಷ್ಟ ಪ್ರಮಾಣದ ಅಂದರೆ ಶೇ10%ರಷ್ಟು ಮೀಸಲಾತಿಯನ್ನು ಆರ್ಥಿಕ ದುರ್ಬಲ ವರ್ಗ ಕೋಟಾ ಸೃಷ್ಟಿಸಿಕೊಂಡು ಪಡೆದುಕೊಂಡಿದ್ದಾರೆ. ಅದಕ್ಕಾಗಿ ಬ್ರಾಹ್ಮಣರು ಯಾವುದೇ ಹೋರಾಟˌ ಪಾದಯಾತ್ರೆˌಸತ್ಯಾಗ್ರಹ ಮಾಡಲಿಲ್ಲ. ಸರ್ವೋಚ್ಛ ನ್ಯಾಯಾಲಯ ಕೂಡ ಅದಕ್ಕೆ ಅನುಮೋದನೆ ನೀಡಿದೆ. ಬ್ರಾಹ್ಮಣರು ಯಾವುದೇ ಬೇಡಿಕೆಯನ್ನಿಡದೆˌ ಹೋರಾಡದೆˌ ಎಲ್ಲೂ ಚರ್ಚಿಸದೆˌ ಗರಿಷ್ಠ ಪ್ರಮಾಣದ ಮೀಸಲಾತಿ ತಗೊಂಡು ಕುಳಿತಿದ್ದಾರೆ. ಇದನ್ನು ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿ ರಾಜಕೀಯ ಪುಢಾರಿಗಳು ಬ್ರಾಹ್ಮಣರಿಗೆ ಹೋರಾಡದೆ ಮೀಸಲಾತಿ ಸಿಕ್ಕಿದ್ದು ಹೇಗೆಂದು ಪ್ರಶ್ನಿಸುವ ಧೈರ್ಯ ಮಾಡಿಲ್ಲದಿರುವುದು ಸಂಶಯವನ್ನು ಹುಟ್ಟಿಸಿದೆ.

ಹೋರಾಟದ ಹಿಂದಿನ ಹುನ್ನಾರಗಳು

ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಮುಂಚೂಣಿ ಪುಡಾರಿಯೊಬ್ಬ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡಬೇಕೆಂಬ ಅಸಂಬದ್ಧ ಹೇಳಿಕೆ ನೀಡಿದ್ದರು. 2018ರ ನಂತರ ತೀವ್ರಗೊಂಡ ಪಂಚಮಸಾಲಿ ಮೀಸಲಾತಿ ಹೋರಾಟದ ಮುಂದಾಳತ್ವ ವಹಿಸಿದ್ದು ಬಿಜೆಪಿ ಪಕ್ಷದ ಶಾಸಕ. ಅಪವಾದವೆನ್ನುವಂತೆ ಬೇರೆ ಪಕ್ಷದ ಕೆಲವರು ಆ ಹೋರಾಟದಲ್ಲಿದ್ದರು. 2017ರಲ್ಲಿ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆಯ ಚಳವಳಿ ಆರಂಭಗೊಂಡಾಗ ಅತ್ಯಂತ ಹೆಚ್ಚು ಗಲಿಬಿಲಿಗೊಂಡದ್ದು ಸಂಘದ ಸಾಂಪ್ರದಾಯವಾದಿಗಳು. ಲಿಂಗಾಯತ ಧರ್ಮದ ಹೋರಾಟ ವಿಫಲಗೊಳಿಸಲು ಇನ್ನಿಲ್ಲದ ಪ್ರಯತ್ನ ಮಾಡಿದವರು ಕೂಡ ಅವರೆ.

ಯಡಿಯೂರಪ್ಪ ನಾಯಕತ್ವವನ್ನು ಕೊನೆಗೊಳಿಸಲು ಮತ್ತು ಲಿಂಗಾಯತ ಸಮುದಾಯದ ಮೇಲಿನ ಯಡಿಯೂರಪ್ಪ ಹಿಡಿತವನ್ನು ಹುಡಿಗೊಳಿಸಲು ಹಾಗು ಲಿಂಗಾಯತ ಧರ್ಮ ಸಂವಿಧಾನ ಮಾನ್ಯತೆಯ ಬೇಡಿಕೆಯನ್ನು ಮುಗಿಸಿಹಾಕಲು ಸಂಘಿಗಳು ಪಂಚಮಸಾಲಿ ಹೋರಾಟವನ್ನು ಪ್ರಾಯೋಜಿಸಿದರು ಎನ್ನುತ್ತವೆ ನಂಬಲರ್ಹ ಸುದ್ದಿಗಳು. ಅದಕ್ಕಾಗಿ ಪಂಚಮಸಾಲಿ ಉಪವರ್ಗದ ವಾಚಾಳಿ ಪುಢಾರಿಯೊಬ್ಬನನ್ನು ಬಳಸಿ ಸಂಘಿಗಳು ಈ ಪಂಚಮಸಾಲಿ ಮೀಸಲಾತಿ ಹೋರಾಟದ ಸೂತ್ರವನ್ನು ಹೆಣೆದರು ಎನ್ನುವುದಕ್ಕೆ ಅನೇಕ ಸಾಂದರ್ಭಿಕ ಘಟನೆಗಳು ಪುಷ್ಟಿಯನ್ನೊದಗಿಸುತ್ತವೆ. ಆಗ ಲಿಂಗಾಯತ ಧರ್ಮದ ಬೇಡಿಕೆ ಹೋರಾಟ ಬೆಂಬಲಿಸದಂತೆ ಬಿಜೆಪಿ ಲಿಂಗಾಯತ ನಾಯಕರಿಗೆ ಫರ್ಮಾನು ಹೊರಡಿಸಿದ್ದವರು ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಭಾಗವಹಿಸುವಂತೆ ತೆರೆಮರೆಯಲ್ಲಿ ಒತ್ತಡ ಹೇರಿದವರು ಯಾರು ಎನ್ನುವ ಸಂಗತಿ ಗುಟ್ಟಾಗಿ ಉಳಿದಿಲ್ಲ.

ಪಂಚಮಸಾಲಿ ಮೀಸಲಾತಿ ಬೇಡಿಕೆ ನ್ಯಾಯ ಸಮ್ಮತವೆ ಆದರೂ ಅದರ ಹಿಂದಿನ ಹುನ್ನಾರಗಳು ಹೋರಾಟದ ದಿಕ್ಕನ್ನು ತಪ್ಪಿಸಿದವು. ಪಂಚಮಸಾಲಿ ನಾಯಕರಲ್ಲೆ ಭಿನ್ನಮತ ತಲೆದೋರಿತು. ಮೀಸಲಾತಿ ಹೋರಾಟದ ನಾಯಕರ ನಂಜಿನ ನಾಲಿಗೆ ಹೋರಾಟವನ್ನು ಹದಗೆಡಿಸಿತು. ಪಂಚಮಸಾಲಿ ಹರಿಹರ ಪೀಠ ಹೋರಾಟದಿಂದ ದೂರ ಉಳಿಯಿತು. ಮಂತ್ರಿ ಮುರುಗೇಶ್ ನಿರಾಣಿˌ ಸಿ ಸಿ ಪಾಟೀಲ ಮುಂತಾದ ಪಂಚಮಸಾಲಿ ನಾಯಕರು ಹೋರಾಟದಲ್ಲಿ ಕಾಣಿಸಿಕೊಳ್ಳಲಿಲ್ಲ. ಒಟ್ಟಾರೆ ಇಡೀ ಹೋರಾಟವು ಅನೇಕ ಬಗೆಯ ಗೊಂದಲ ಮತ್ತು ಸಂಶಯಗಳಿಂದ ಕೂಡಿತ್ತು ಎನ್ನಬಹುದಾದ ಅನೇಕ ಘಟನೆಗಳು ಹೋರಾಟದ ಉದ್ದಕ್ಕೂ ಘಟಿಸಿದವು.

ಇದನ್ನೂ ಓದಿ ಮೀಸಲಾತಿ | ಬಿಜೆಪಿಯ ತಂತ್ರಗಾರಿಕೆಯ ವೈಫಲ್ಯಕ್ಕೆ ಕಾರಣಗಳೇನು?

ಕೊನೆಗೆ ಪಂಚಮಸಾಲಿಗಳಿಗೆ ಮೀಸಲಾತಿ ಸಿಕ್ಕಿತೆ ಎಂದು ಕೇಳಿದರೆ ಅಘಾತವಾಗುತ್ತದೆ. ಕೇಳಿದ್ದು ಪಂಚಮಸಾಲಿಗಳಿಗೆ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿˌ ಆದರೆ ಸರಕಾರ ಚುನಾವಣೆಯ ಉದ್ದೇಶವನ್ನಿಟ್ಟುಕೊಂಡು ಕಾನೂನಾತ್ಮಕವಾಗಿ ಕಾರ್ಯಸಾಧುವಲ್ಲದ ಹೊಸ 2ಡಿ ಎಂಬ ಅಸ್ಪಷ್ಟ ಪ್ರವರ್ಗವನ್ನು ಸೃಷ್ಟಿಸಿ ಇಡೀ ಲಿಂಗಾಯತರಿಗೆ 3ಬಿ ನಲ್ಲಿ ಮೊದಲಿದ್ದ 5% ಬದಲಿಗೆ 7% ಮೀಸಲಾತಿಯನ್ನು ಏರಿಸಿ ಪಂಚಮಸಾಲಿಗಳನ್ನು ಒಂದುಕಡೆ ವಂಚಿಸಿದರೆˌ ಮತ್ತೊಂದುಕಡೆ ಪ್ರವರ್ಗ 2ಬಿಯನ್ನು ರದ್ದುಗೊಳಿಸಿ ಮುಸ್ಲಿಮರನ್ನು ಇಡಬ್ಲ್ಯೂಎಸ್ ಕೋಟಾಕ್ಕೆ ಮುಸ್ಲಿಮರನ್ನು ವರ್ಗಾಯಿಸಿ ಬ್ರಾಹ್ಮಣರನ್ನು ಒಟ್ಟಿಗೆ ವಂಚಿಸಿದೆ. ಇದರ ಜೊತೆಗೆ ಮೀಸಲಾತಿ ಬೇಡಿಕೆಯೆ ಇಡದ ಒಕ್ಕಲಿಗರಿಗೂ 2% ಮೀಸಲಾತಿ ಹೆಚ್ಚಿಸುವ ನಾಟಕವಾಡಿತು.

ಒಟ್ಟಾರೆ ಪಂಚಮಸಾಲಿಗರನ್ನು ಇನ್ನುಳಿದ ಲಿಂಗಾಯತ ಉಪವರ್ಗಗಳು ಮತ್ತು ಇತರ ಹಿಂದುಳಿದ ವರ್ಗದ ಜನರ ವಿರುದ್ಧ ಎತ್ತಿಕಟ್ಟಿ ಒಬ್ಬಂಟಿ ಮಾಡುವಲ್ಲಿ ವೈದಿಕ ಶಕ್ತಿಗಳು ಜಯ ಹೊಂದಿದ್ದಂತು ಸತ್ಯ. ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದ ಬಿಜೆಪಿ ಶಾಸಕರು ಈಗ ಪಂಚಮಸಾಲಿಗಳಿಗೆ ಮೀಸಲಾತಿ ಸಿಗದಿದ್ದರ ಕುರಿತು ಬಾಯಿ ತೆಗೆಯುತ್ತಿಲ್ಲ. ಬದಲಾಗಿ ಲಿಂಗಾಯತ ಮೀಸಲಾತಿ ಕೋಟಾ ಹೆಚ್ಚಿಸಿದ್ದನ್ನೆ ಒಪ್ಪಿಕೊಳ್ಳುವಂತೆ ಪರೋಕ್ಷವಾಗಿ ಪಂಚಮಸಾಲಿ ಸ್ವಾಮಿಗಳ ಮೇಲೆ ಒತ್ತಡ ಹೇರುವ ಮೂಲಕ ಇಡೀ ಹೋರಾಟದ ಹಿಂದೆ ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಪುರೋಹಿತಶಾಹಿಗಳ ಕೈವಾಡವಿರುವುದು ಎದ್ದುಕಂಡಿದೆ. ಇದನ್ನು ಪಂಚಮಸಾಲಿ ಉಪವರ್ಗದ ಸಾಮಾನ್ಯ ಜನರು ಅರಿತುಕೊಳ್ಳಬೇಕು. ಲಿಂಗಾಯತರು ಮೀಸಲಾತಿ ಮತ್ತು ಅದರ ಜೊತೆಗೆ ಅಲ್ಪಸಂಖ್ಯಾತರ ಸೌಲಭ್ಯ ಎರಡನ್ನು ಪಡೆಯಲು ಒಂದಾಗಿ ಹೊರಾಡಬೇಕಿದೆ. ಈ ಕುರಿತು ಅರಿವು ಮೂಡಿಸುವ ಕಾರ್ಯ ಜಾಗತಿಕ ಲಿಂಗಾಯತ ಮಹಾಸಭಾ ಸಂಸ್ಥೆಯು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಪಂಚಮಸಾಲಿಗರು ಲಿಂಗಾಯತರಿಗೆ ಅಲ್ಪಸಂಖ್ಯಾತ ಸೌಲಭ್ಯದ ಹೋರಾಟದಲ್ಲಿ ಗುರುತಿಸಿಕೊಂಡು ಲಿಂಗಾಯತರ ಹಿತಶತ್ರುಗಳ ಹುನ್ನಾರವನ್ನು ಹುಡಿಗೊಳಿಸಬೇಕಾದ ಅಗತ್ಯವಿದೆ.

ಡಾ ಜೆ ಎಸ್‌ ಪಾಟೀಲ್‌
+ posts

ಪೋಸ್ಟ್ ಹಂಚಿಕೊಳ್ಳಿ:

3 COMMENTS

 1. ಕಣ್ತೆರೆಸುವ ಲೇಖನ ಅಲ್ಲದೆ ಕೆಲವರಿಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲು ಎಚ್ಚರಿಸುವ ಲೇಖನ,,,

 2. K ಯಾವ ಆಧಾರದಲ್ಲಿ ನೀವು ಜಂಗಮರನ್ನು ಸ್ಥಿತಿವಂತರೆಂದು ಕರೆದಿದ್ದೀರಿ, ಎಸಿ ರೂ ಮಗಳ ಮಧ್ಯದಲ್ಲಿ ಕುಳಿತು ನೋಡುವವರಿಗೆ ಮಾತ್ರ ಒಂದು ಸಮುದಾಯವನ್ನು ಸ್ಥಿತಿವಂತರೆಂದು ಕರೆಯಲು ಸಾಧ್ಯ , ವಾಸ್ತವವಾಗಿ ಸಮಾಜದ ಮಧ್ಯ ಬೆರೆತು ಆಳವಾದ ಅಧ್ಯಯನ ಮಾಡಿ ನೋಡಿದಾಗ ಮಾತ್ರ ಒಂದು ಜಾತಿಯ ಸಮಾಜದ ಸ್ಥಿತಿಗತಿಗಳು ಅರ್ಥವಾಗುತ್ತದೆ. ಎಲ್ಲೋ ಕುಳಿತು ಬರೆದು ಒಂದು ಜಾತಿ ಸಮುದಾಯದ ಬಗ್ಗೆ ಇಡೀ ಸಮಾಜ ಬೇರೆ ರೀತಿ ಭಾವಿಸುವಂತಾಗಬಾರದು.

 3. ಶರಣು ಶರಣಾರ್ಥಿ ಜೆ ಎಸ್ ಪಾಟೀಲ್ರಗೆ 🙏

  ತಮ್ಮ ಲೇಖನ ಓದಿ ಸಂತೋಷವಾಯಿತು.. ಲಿಂಗಾಯತ ಉಪಪಂಗಡ ದವರು ಆತ್ಮವಿಮರ್ಶೆ ಮಾಡಿಕೊಂಡು ಮುಂದಿನ ಪೀಳಿಗೆಗೆ ಆದರ್ಶವಾಗಲು ಈಗ ಸಕಾಲವಾಗಿದೆ,
  ಜಾಗತಿಕ ಲಿಂಗಾಯತ ಮಹಾಸಭಾ ದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಅಲ್ಪಸಂಖ್ಯಾತ, ಹಾಗು ಸ್ವತಂತ್ರಧರ್ಮ ನಮ್ಮದಾಗಿಸಿಕೊಳ್ಳೊಣ ಹಾಗೂ ಈ ಜಗತ್ತಿಗೆ ಮಾದರಿಯಾಗೋಣ.🙏

  ಶಿವಪ್ಪ ಸಕ್ರಿ, ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯ
  ರಾಯಚೂರು ಜಿಲ್ಲೆ.೯೪೪೮೩೩೪೯೫೭.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ಗಣತಿಗೆ ವಿರೋಧ; ನಿರ್ದಯಿ ಸಾಮಾಜಿಕ ದ್ರೋಹ

ಹಿಂದುತ್ವ ಪ್ರೇರಿತ ರಾಜಕಾರಣವನ್ನು ಜೀವಂತವಾಗಿಟ್ಟುಕೊಳ್ಳಲು ದಲಿತ ಹಿಂದುಳಿದ ವರ್ಗಗಳ ಹಿತರಕ್ಷಣೆಯ ಮಾತಾಡುತ್ತಿರುವ...

ಬೆಂಗಳೂರು ಕಂಬಳ | ಪಾತಕಿ ಶ್ಯಾಮ್ ಕಿಶೋರ್ ಗರಿಕಪಟ್ಟಿಗೆ ಆಹ್ವಾನ: ಮುಂಬಯಿ ತುಳುವರಿಗೆ ಅಚ್ಚರಿ!

80-90ರ ದಶಕದಲ್ಲಿ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ 'ಅಂಡರ್ ವರ್ಲ್ಡ್‌' ಪಾತಕಿಗಳ ನೆತ್ತರ...

ಜಾತಿ ಸಮೀಕ್ಷೆಯ ಪರ-ವಿರೋಧಗಳ ಸುತ್ತಮುತ್ತ…

ಜಾತಿಯನ್ನು ಗುರುತಿಸಲು ಬಳಸಿದ ಗುಣಲಕ್ಷಣಗಳಲ್ಲಿ ಆರ್ಥಿಕ ಹಾಗು ರಾಜಕೀಯ ಅಂಶಗಳು ಸೇರದಿರುವುದು...

ದೇಶ ವಿಭಜನೆ ಕಾಲಘಟ್ಟದ ಒಂದು ಉಪಕತೆ : ಹಸನ್ ನಯೀಂ ಸುರಕೋಡ ಬರೆಹ

ಭಾರತ ವಿಭಜನೆ ಎನ್ನುವ ಕಾಲಘಟ್ಟದ ಅಧ್ಯಯನವನ್ನು ಮಾಡಬಯಸುವವರು ಸಾದತ್ ಹಸನ್ ಮಂಟೊರಂಥ...